logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rajnath Singh: ಭಾರತ ಹಡಗು ನಿರ್ಮಾಣ ಕ್ಷೇತ್ರದ ನಾಯಕನಾಗುವ ದಿನ ದೂರವಿಲ್ಲ: ರಾಜನಾಥ್‌ ಸಿಂಗ್

Rajnath Singh: ಭಾರತ ಹಡಗು ನಿರ್ಮಾಣ ಕ್ಷೇತ್ರದ ನಾಯಕನಾಗುವ ದಿನ ದೂರವಿಲ್ಲ: ರಾಜನಾಥ್‌ ಸಿಂಗ್

HT Kannada Desk HT Kannada

Dec 18, 2022 04:46 PM IST

google News

ಐಎನ್‌ಎಸ್‌ ಮರ್ಮಗೋವಾ ಲೋಕಾರ್ಪಣೆ

    • ಭವಿಷ್ಯದಲ್ಲಿ ಭಾರತವು ಹಡಗು ನಿರ್ಮಾಣ ಕ್ಷೇತ್ರದ ಜಾಗತಿಕ ಆಟಗಾರನಾಗಿ ಹೊರಹೊಮ್ಮಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂಬೈನ ನೇವಲ್ ಡಾಕ್‌ಯಾರ್ಡ್‌ನಲ್ಲಿ P15B ಸ್ಟೆಲ್ತ್-ಗೈಡೆಡ್ ಕ್ಷಿಪಣಿ ವಿಧ್ವಂಸಕ INS ‘ಮರ್ಮಗೋವಾ’ ಯುದ್ಧ ನೌಕೆಯನ್ನು, ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಐಎನ್‌ಎಸ್‌ ಮರ್ಮಗೋವಾ ಲೋಕಾರ್ಪಣೆ
ಐಎನ್‌ಎಸ್‌ ಮರ್ಮಗೋವಾ ಲೋಕಾರ್ಪಣೆ (ANI)

ಮುಂಬೈ: ಭವಿಷ್ಯದಲ್ಲಿ ಭಾರತವು ಹಡಗು ನಿರ್ಮಾಣ ಕ್ಷೇತ್ರದ ಜಾಗತಿಕ ಆಟಗಾರನಾಗಿ ಹೊರಹೊಮ್ಮಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂಬೈನ ನೇವಲ್ ಡಾಕ್‌ಯಾರ್ಡ್‌ನಲ್ಲಿ P15B ಸ್ಟೆಲ್ತ್-ಗೈಡೆಡ್ ಕ್ಷಿಪಣಿ ವಿಧ್ವಂಸಕ INS ‘ಮರ್ಮಗೋವಾ’ ಯುದ್ಧ ನೌಕೆಯನ್ನು, ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿ ಅವರು ಮಾತನಾಡಿದರು.

"ಐಎನ್‌ಎಸ್ ಮರ್ಮಗೋವಾ ಭಾರತದಲ್ಲಿ ತಯಾರಾದ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಗಳಲ್ಲಿ ಒಂದಾಗಿದೆ. ಇದು ಭಾರತೀಯ ಕಡಲ ಸಾಮರ್ಥ್ಯವನ್ನು ಗಮನಾರ್ಹವಾಗಿ ವೃದ್ಧಿಸುತ್ತದೆ. ಐಎನ್‌ಎಸ್ ಮರ್ಮಗೋವಾ ವಿಶ್ವದ ಅತ್ಯಂತ ತಾಂತ್ರಿಕವಾಗಿ ಸುಧಾರಿತ ಕ್ಷಿಪಣಿ ವಾಹಕಗಳಲ್ಲಿ ಒಂದಾಗಿದೆ.." ಎಂದು ರಾಜನಾಥ್ ಸಿಂಗ್ ಹೇಳಿದರು.

"ಐಎನ್‌ಎಸ್ ಮರ್ಮಗೋವಾದಲ್ಲಿನ ವ್ಯವಸ್ಥೆಗಳು ಪ್ರಸ್ತುತ ಮಾತ್ರವಲ್ಲದೆ, ಭವಿಷ್ಯದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಇದು ನಮ್ಮ ಸ್ಥಳೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯದ ಉದಾಹರಣೆಯಾಗಿದೆ..”ಎಂದು ರಾಜನಾಥ್‌ ಸಿಂಗ್‌ ಸಂತಸ ವ್ಯಕ್ತಪಡಿಸಿದರು, ಅಲ್ಲದೇ ಭವಿಷ್ಯದಲ್ಲಿ ನಾವು ಜಗತ್ತಿಗಾಗಿ ಹಡಗು ನಿರ್ಮಾಣವನ್ನು ಮಾಡುತ್ತೇವೆ ಎಂದು ರಾಜನಾಥ್‌ ಸಿಂಗ್‌ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆಯಾದ ವಾರ್‌ಶಿಪ್ ಡಿಸೈನ್ ಬ್ಯೂರೋದಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ಮುಂಬೈನ ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ನಿಂದ ನಿರ್ಮಿಸಲಾದ, ನಾಲ್ಕು ‘ವಿಶಾಖಪಟ್ಟಣಂ’ ವರ್ಗ ವಿಧ್ವಂಸಕ ನೌಕೆಗಳ ಪೈಕಿ ಐಎನ್‌ಎಸ್‌ ಮರ್ಮಗೋವಾ ಎರಡನೇಯದ್ದು. ಈ ಯುದ್ಧನೌಕೆ ಭಾರತೀಯ ನೌಕಾಪಡೆಗೆ ಔಪಚಾರಿಕವಾಗಿ ಇಂದು(ಡಿ.18-ಭಾನುವಾರ) ಸೇರ್ಪಡೆಗೊಂಡಿತು.

ಪಶ್ಚಿಮ ಕರಾವಳಿಯಲ್ಲಿರುವ ಐತಿಹಾಸಿಕ ಬಂದರು ನಗರವಾದ ಗೋವಾದ ಹೆಸರನ್ನು ಈ ನೌಕೆಗೆ ಇಡಲಾಗಿದೆ. ಐಎನ್‌ಎಸ್ ಮರ್ಮಗೋವಾ ಕಾಕತಾಳೀಯವಾಗಿ 19 ಡಿಸೆಂಬರ್ 2021 ರಂದು, ಪೋರ್ಚುಗೀಸ್ ಆಳ್ವಿಕೆಯಿಂದ ಗೋವಾ ವಿಮೋಚನೆ 60ನೇ ವರ್ಷಾಚರಣೆಯಂದು ತನ್ನ ಮೊದಲ ಸಮುದ್ರ ವಿಹಾರವನ್ನು ಕೈಗೊಂಡಿತ್ತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್, “ನಾವು ವಿಧ್ವಂಸಕ ಮರ್ಮಗೋವಾವನ್ನು ನಿಯೋಜಿಸುವ ಮೂಲಕ ದೇಶೀಯ ಯುದ್ಧನೌಕೆ ನಿರ್ಮಾಣದ ಇತಿಹಾಸದಲ್ಲಿ ಇಂದು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದ್ದೇವೆ ಎಂದು ಹೇಳಿದರು.

ಐಎನ್‌ಎಸ್‌ ಮರ್ಮಗೋವಾ 63 ಮೀ ಉದ್ದ ಮತ್ತು 17 ಮೀ ಅಗಲವಾಗಿದ್ದು, 7,400 ಟನ್‌ ಭಾರವನ್ನು ಹೊಂದಿದೆ. ನಾಲ್ಕು ಶಕ್ತಿಶಾಲಿ ಗ್ಯಾಸ್ ಟರ್ಬೈನ್‌ಗಳು ಈ ಯುದ್ಧನೌಕೆಯನ್ನು ಮುನ್ನಡೆಸುತ್ತವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ರಕ್ಷಣಾ ಪಡೆಗಳನ್ನು ಆತ್ಮನಿರ್ಭರವನ್ನಾಗಿಸುವ ಗುರಿ ಹೊಂದಿದ್ದು, ಅದರಂತೆ ಮೂರೂ ರಕ್ಷಣಾ ಪಡೆಗಳಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಯುದ್ಧೋಪಕರಗಳ ಬಳಕೆಯನ್ನು ಹೆಚ್ಚಿಸುವತ್ತ ಮುಂದಡಿ ಇಟ್ಟಿರುವುದನ್ನು ಇಲ್ಲಿ ಗಮನಿಸಬಹುದು.

ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್, ಗೋವಾ ಗವರ್ನರ್ ಪಿಎಸ್ ಶ್ರೀಧರನ್ ಪಿಳ್ಳೈ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಇತರ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇಂದಿನ ಪ್ರಮುಖ ಸುದ್ದಿ

PM Modi in Shillong: ಮೇಘಾಲಯದ ಉಡುಗೆಯಲ್ಲಿ ಮಿಂಚಿದ ಮೋದಿ, ಹಲವು ಸಾವಿರ ಕೋಟಿ ಮೌಲ್ಯದ ಪ್ರಾಜೆಕ್ಟ್‌ಗಳಿಗೆ ಚಾಲನೆ | ಚಿತ್ರಗಳು

ನಾರ್ತ್‌ ಈಸ್ಟರ್ನ್‌ ಕೌನ್ಸಿಲ್‌(ಎನ್‌ಇಸಿ)ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2450 ಕೋಟಿ ಮೌಲ್ಯದ ವಿವಿಧ ಪ್ರಾಜೆಕ್ಟ್‌ಗಳಿಗೆ ಭಾನುವಾರ ಚಾಲನೆ ನೀಡಿದ್ದಾರೆ. ಶಿಲ್ಲಾಂಗ್‌ನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ