India-China Clash: ಮತ್ತೆ ಖ್ಯಾತೆ ತೆಗೆದ ಚೀನಾ: ಅರುಣಾಚಲ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಯೋಧರಿಗೆ ಗಾಯ
Dec 12, 2022 09:04 PM IST
ಅರುಣಾಚಲ ಗಡಿಯಲ್ಲಿ ಚೀನಾ-ಭಾರತ ಸೈನಿಕರ ನಡುವೆ ಘರ್ಷಣೆ
- ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಬಳಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಉಭಯ ರಾಷ್ಟ್ರಗಳ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಕೆಲವು ಭಾರತೀಯ ಯೋಧರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಬಳಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಉಭಯ ರಾಷ್ಟ್ರಗಳ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಕೆಲವು ಭಾರತೀಯ ಯೋಧರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಚೀನಾದ‘ಪೀಪಲ್ಸ್ ಲಿಬರೇಷನ್ ಆರ್ಮಿ’ (ಪಿಎಲ್ಎ)ಯ ಸೈನಿಕರು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಕಾಲಿಟ್ಟಿದ್ದು, ಈ ವೇಳೆ ಎರಡೂ ರಾಷ್ಟ್ರಗಳ ಸೈನಿಕರ ನಡುವೆ ಘರ್ಷಣೆಯಾಗಿದೆ. ಎರಡೂ ಕಡೆಯ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗುತ್ತಿದ್ದಂತೆಯೇ ಎರಡೂ ಕಡೆಯವರು ತಕ್ಷಣವೇ ಆ ಪ್ರದೇಶದಿಂದ ನಿರ್ಗಮಿಸಿದರು ಎಂದು ಮೂಲಗಳು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
300 ಕ್ಕೂ ಹೆಚ್ಚು ಚೀನೀ ಸೈನಿಕರು 17,000 ಅಡಿ ಎತ್ತರದ ಶಿಖರವನ್ನು ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಅದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ.
ಘರ್ಷಣೆ ಬೆನ್ನಲ್ಲೇ ಶಾಂತಿಯನ್ನು ಪುನಃಸ್ಥಾಪಿಸಲು, ರಚನಾತ್ಮಕ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಮಸ್ಯೆಯನ್ನು ಚರ್ಚಿಸಲು ಚೀನಾ ಕಮಾಂಡರ್ ಜೊರೆ ಭಾರತದ ಕಮಾಂಡರ್ ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಎಲ್‌ಎಸಿ ಉದ್ದಕ್ಕೂ ಇರುವ ಕೆಲವು ಪ್ರದೇಶಗಳಲ್ಲಿ ಎರಡೂ ಕಡೆಯವರು ಗಸ್ತು ತಿರುಗುತ್ತಾರೆ. ಇದು 2006 ರಿಂದ ಟ್ರೆಂಡ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಚೀನಾ ಅರುಣಾಚಲ ಪ್ರದೇಶದಲ್ಲಿ ತನ್ನ ಮೂಲ ಸೌಕರ್ಯಗಳನ್ನು ಹೆಚ್ಚಿಸುತ್ತಿದೆ, ತನ್ನ ರಸ್ತೆ, ರೈಲು ಹಾಗೂ ವಾಯು ಮಾರ್ಗವನ್ನು ಮೇಲ್ದರ್ಜೆಗೆ ಏರಿಸುತ್ತಿದೆ ಎಂಬ ಮಾಹಿತಿ ದೊರೆತಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸೇನಾಧಿಕಾರಿಯೊಬ್ಬರು ಭಾರತೀಯ ಸೇನೆ ಕೂಡ ನಿರಂತರವಾಗಿ ತನ್ನ ಮೂಲಸೌಕರ್ಯ ಹೆಚ್ಚಿಸಿಕೊಳ್ಳುತ್ತಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ಈಗಾಗಲೇ ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರನ್ನು ಚೀನಾ ಬದಲಾಯಿಸಿತ್ತು. ಈ ಮೂಲಕ ಅರುಣಾಚಲ ಪ್ರದೇಶ ತನ್ನದು ಎಂದು ಪ್ರತಿಪಾದಿಸಿತ್ತು.
ಕೇಂದ್ರದ ವಿರುದ್ಧ ಕಾಂಗ್ರೆಸ್, ಎಐಎಂಐಎಂ ವಾಗ್ದಾಳಿ
ವಿಚಾರ ತಿಳಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರದ ಮೌನದ ಕುರಿತು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. "ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ ಎಂಬ ಸುದ್ದಿ ಇದೆ. ಸರ್ಕಾರ ತನ್ನ ಅಚಲ ಧೋರಣೆಯನ್ನು ಬಿಟ್ಟು ಚೀನಾಕ್ಕೆ ಈ ಕೃತ್ಯವನ್ನು ಸಹಿಸುವುದಿಲ್ಲ ಎಂದು ಕಟುವಾದ ಧ್ವನಿಯಲ್ಲಿ ವಿವರಿಸುವ ಸಮಯ ಬಂದಿದೆ" ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಅರುಣಾಚಲ ಪ್ರದೇಶದ ಘರ್ಷಣೆಯ ಬಗ್ಗೆ ಸರ್ಕಾರವು ಸಂಸತ್ತಿಗೆ ಏಕೆ ತಿಳಿಸಲಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ಅರುಣಾಚಲ ಪ್ರದೇಶದಿಂದ ಬರುತ್ತಿರುವ ವರದಿಗಳು ಆಘಾತಕಾರಿ ಮತ್ತು ಆತಂಕಕಾರಿಯಾಗಿವೆ. ಭಾರತ ಮತ್ತು ಚೀನಾ ಸೈನಿಕರ ನಡುವೆ ಭಾರಿ ಘರ್ಷಣೆ ನಡೆದಿದ್ದು, ಸರ್ಕಾರ ಈ ವಿಚಾರವನ್ನು ಇಷ್ಟು ಬಹಿರಂಗಪಡಿಸಿಲ್ಲ. ಸಂಸತ್ತು ಅಧಿವೇಶನ ನಡೆಯುತ್ತಿರುವಾಗ ಏಕೆ ತಿಳಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಘಟನೆಯ ವಿವರಗಳು ಸ್ಪಷ್ಟವಾಗಿಲ್ಲ. ಘರ್ಷಣೆಗೆ ಕಾರಣವೇನು? ಗುಂಡು ಹಾರಿಸಲಾಗಿದೆಯೇ ಅಥವಾ ಗಾಲ್ವಾನ್‌ನಂತೆ ನಡೆದಿದೆಯೇ? ಎಷ್ಟು ಸೈನಿಕರು ಗಾಯಗೊಂಡಿದ್ದಾರೆ? ಅವರ ಸ್ಥಿತಿ ಏನು? ಚೀನಾಕ್ಕೆ ಬಲವಾದ ಸಂದೇಶವನ್ನು ಕಳುಹಿಸಲು ಸಂಸತ್ತು ಸೈನಿಕರಿಗೆ ತನ್ನ ಬೆಂಬಲವನ್ನು ಏಕೆ ನೀಡಲು ಸಾಧ್ಯವಿಲ್ಲ? ಎಂದಿದ್ದಾರೆ.
"ಚೀನಿಯರಿಗೆ ಯಾವುದೇ ಸಮಯದಲ್ಲಿ ತಕ್ಕ ಪ್ರತ್ಯುತ್ತರ ನೀಡಲು ಸೇನೆ ಸಮರ್ಥವಾಗಿದೆ. ಮೋದಿ ನೇತೃತ್ವದ ದುರ್ಬಲ ರಾಜಕೀಯ ನಾಯಕತ್ವವೇ ಚೀನಾದ ಮುಂದೆ ಈ ಅವಮಾನಕ್ಕೆ ಕಾರಣವಾಗಿದೆ. ಈ ಕುರಿತು ಸಂಸತ್ತಿನಲ್ಲಿ ತುರ್ತು ಚರ್ಚೆಯ ಅಗತ್ಯವಿದೆ. ನಾಳೆಯೇ ಈ ವಿಚಾರವಾಗಿ ಸದನದ ಗಮನಕ್ಕೆ ತರುತ್ತೇನೆ" ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.