logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

Umesh Kumar S HT Kannada

May 03, 2024 12:47 PM IST

google News

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣಗೊಂಡಿದ್ದು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ ನಡೆಯುವ ನಿರೀಕ್ಷೆ ಇದೆ.

  • ಭಾರತೀಯ ರೈಲ್ವೆ ಹೊಸ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದು, ಇತ್ತೀಚಿನದ್ದು ವಂದೇ ಮೆಟ್ರೋ ರೈಲು ಅನಾವರಣ. ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣಗೊಂಡಿದ್ದು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ ನಡೆಸುವ ಸಾಧ್ಯತೆ ಇದೆ ಎಂಬ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣಗೊಂಡಿದ್ದು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ ನಡೆಯುವ ನಿರೀಕ್ಷೆ ಇದೆ.
ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣಗೊಂಡಿದ್ದು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ ನಡೆಯುವ ನಿರೀಕ್ಷೆ ಇದೆ. (VaibhavBopche1)

ಚೆನ್ನೈ: ಭಾರತದ ಮೊದಲ ವಂದೇ ಮೆಟ್ರೋ ರೈಲು (Vande Metro Train) ಏಪ್ರಿಲ್ 30ರಂದು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಅನಾವರಣಗೊಂಡಿದೆ. ಭಾರತದ ರೈಲ್ವೆ (Indian Railways) ವಲಯವು ಇದನ್ನು ಮಹತ್ವದ ಮೈಲಿಗಲ್ಲು ಎಂದು ಗುರುತಿಸಿದೆ. ವಂದೇ ಭಾರತ್ ಮೆಟ್ರೋವನ್ನು ನಗರ ಪ್ರಯಾಣಿಕರ ಅನುಕೂಲವನ್ನು ಪರಿಗಣನೆಯಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ನಗರ ಪ್ರಯಾಣಿಕರ ಅಂದರೆ ಯಾವುದೇ ನಗರದಿಂದ 250 ಕಿ.ಮೀ. ಅಂತರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಈ ವಂದೇ ಭಾರತ್ ಮೆಟ್ರೋ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಮುದಗೊಳಿಸುವ ವಿನ್ಯಾಸವನ್ನೂ ಒಳಗೊಂಡಿದೆ. ವಂದೇ ಮೆಟ್ರೋ ರೈಲುಗಳು 100 ಕಿಮೀ ಮತ್ತು 250 ಕಿಮೀ ನಡುವಿನ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವುದಕ್ಕೆ ಅನುಕೂಲಕರವಾಗಿ ಹೊಂದಿಸಲಾಗಿದೆ.

ಈ ನಡುವೆ, ತಮಿಳುನಾಡಿನಾದ್ಯಂತ ಮೆಟ್ರೋ ಸಂಪರ್ಕವನ್ನು ವಿಸ್ತರಿಸುವ ವಿಚಾರ ಸಹ ಚರ್ಚೆಯಲ್ಲಿದೆ. ಚೆನ್ನೈ ಅರಕ್ಕೋಣಂ ಮೆಟ್ರೋ ಸಂಪರ್ಕ ಮೊದಲು ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ. ಏತನ್ಮಧ್ಯೆ, ಮತ್ತೊಂದು ರೂಪಾಂತರ, ವಂದೇ ಭಾರತ್ ಸ್ಲೀಪರ್ ರೈಲು, ಪ್ರಸ್ತುತ 1,000 ಕಿಮೀಗಿಂತ ಹೆಚ್ಚಿನ ಮಾರ್ಗಗಳ ಸಂಚಾರಕ್ಕಾಗಿ ಅಭಿವೃದ್ಧಿಯ ಹಂತದಲ್ಲಿದೆ.

ಜುಲೈನಲ್ಲಿ ವಂದೇ ಮೆಟ್ರೋ ಪ್ರಾಯೋಗಿಕ ಸಂಚಾರ

ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿರುವ ವಂದೇ ಮೆಟ್ರೋ ರೈಲುಗಳ ಪ್ರಾಯೋಗಿಕ ಹಂತವು ಜುಲೈನಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಇದಾದ ಬಳಿಕ ವಂದೇ ಭಾರತ್‌ ಸ್ಲೀಪರ್ ಬೋಗಿಗಳನ್ನು ಒಳಗೊಂಡ ರೈಲಿನ ಪರೀಕ್ಷೆ ನಡೆಯಲಿದೆ. ಈ ಬೆಳವಣಿಗೆಗಳು ಭಾರತದ ರೈಲು ಮೂಲಸೌಕರ್ಯವನ್ನು ಆಧುನೀಕರಿಸುವ ಮತ್ತು ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ದಾಪುಗಾಲು ಹಾಕುತ್ತಿರುವುದನ್ನು ತೋರಿಸುತ್ತದೆ.

ರೈಲ್ವೆ ಸಚಿವಾಲಯದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಅನುಗುಣವಾಗಿ, ವಂದೇ ಮೆಟ್ರೋ ರೈಲುಗಳು ದೇಶಾದ್ಯಂತ 124 ನಗರಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿವೆ. ಆರಂಭಿಕವಾಗಿ ಚೆನ್ನೈ-ತಿರುಪತಿ, ಭುವನೇಶ್ವರ-ಬಾಲಾಸೋರ್, ಆಗ್ರಾ-ಮಥುರಾ, ದೆಹಲಿ-ರೇವಾರಿ ಮತ್ತು ಲಕ್ನೋ-ಕಾನ್ಪುರ್ ಮಾರ್ಗಗಳಲ್ಲಿ ವಂದೇ ಮೆಟ್ರೋ ರೈಲು ಸಂಚಾರ ಶುರುವಾಗಲಿದೆ.

ವಂದೇ ಮೆಟ್ರೋ ವಿಶೇಷವೇನು?

ಈಗಾಗಲೇ ನಗರಗಳಲ್ಲಿ ಸಂಚಾರದಲ್ಲಿರುವ ಮೆಟ್ರೋ ರೈಲುಗಳಿಗಿಂತ ಈ ವಂದೇ ಮೆಟ್ರೋ ಸ್ವಲ್ಪ ಭಿನ್ನವಾಗಿದೆ. ಈ ರೈಲುಗಳು ಅಸ್ತಿತ್ವದಲ್ಲಿರುವ ರೈಲ್ವೆ ಹಳಿಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಪ್ರಮುಖ ನಗರ ಕೇಂದ್ರಗಳು ಮತ್ತು ಪಕ್ಕದ ಉಪನಗರ ಪಟ್ಟಣಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರ ಸಾರಿಗೆ ಸೌಕರ್ಯ ಹೆಚ್ಚಿಸುವುದಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಕಾಯ್ದಿರಿಸದ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಒತ್ತು ನೀಡಲಾಗಿದೆ.

ಕ್ಷಿಪ್ರ ವೇಗವರ್ಧಕ ಸಾಮರ್ಥ್ಯ ಈ ರೈಲುಗಳ ವಿಶೇಷ ಗುಣಗಳಲ್ಲಿ ಒಂದು. ಇನ್ನು ವಂದೇ ಮೆಟ್ರೋ ರೈಲುಗಳ ಅಲ್ಲಲ್ಲಿ ನಿಲುಗಡೆಗಳನ್ನು ಹೊಂದಿ, ಜನರಿಗೆ ಅನುಕೂಲಕರವಾದ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸುತ್ತವೆ. ಪ್ರತಿ ರೈಲು 12 ಕೋಚ್‌ಗಳನ್ನು ಹೊಂದಿದ್ದು, ವಿಶಾಲವಾದ ಸ್ವಯಂಚಾಲಿತ ಬಾಗಿಲುಗಳು ಮತ್ತು ಪಕ್ಕದ ಸೀಟುಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಅನುಭವವನ್ನು ಖಾತರಿಗೊಳಿಸುತ್ತದೆ. ಅಷ್ಟೇ ಅಲ್ಲ, ಈಗಾಗಲೇ ಕಾರ್ಯನಿರತ ಮಾರ್ಗಗಳಲ್ಲಿ ಹೆಚ್ಚಿನ ಬೇಡಿಕೆಯ ನಿರೀಕ್ಷೆಯಲ್ಲಿರುವ ಅಧಿಕಾರಿಗಳು ಈ ರೈಲುಗಳನ್ನು 16 ಕೋಚ್‌ಗಳವರೆಗೆ ವಿಸ್ತರಿಸಬಹುದು ಎಂದು ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ