Anti Drug day 2022: ಈ ದಿನದ ಮಹತ್ವ ಹಾಗೂ ಈ ವರ್ಷದ ಥೀಮ್ ಏನು..?
Jun 26, 2022 12:26 PM IST
ಮಾದಕ ದ್ರವ್ಯ ವಿರೋಧಿ ದಿನ 2022
- ಪ್ರತಿವರ್ಷ UNODC ವಿಶ್ವ ಡ್ರಗ್ ವರದಿ ಬಿಡುಗಡೆ ಮಾಡುತ್ತದೆ. ವೈಜ್ಞಾನಿಕ ಮತ್ತು ಸಂಶೋಧನಾ ತಳಹದಿಯ ಈ ವರದಿಯು ಜಗತ್ತಿನ ಮಾದಕ ದ್ರವ್ಯ ಬಳಕೆಯ ವರದಿಯ ಬಿಡುಗಡೆ ಮಾಡುವುದರ ಜತೆಗೆ ಪರಿಹಾರವನ್ನೂ ಸೂಚಿಸುತ್ತದೆ.
ಮಾದಕ ದ್ರವ್ಯ ಸೇವನೆ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆಯು ಜಗತ್ತಿನ ಪ್ರಮುಖ ಬಿಕ್ಕಟ್ಟು ಎಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಈ ಎರಡು ವಿಷಯಗಳ ನಿಯಂತ್ರಣಕ್ಕಾಗಿ ಜೂನ್ 26ನ್ನು ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನದ ಮಹತ್ವದ ಕುರಿತು ಹೆಚ್ಚಿನ ವಿವರವನ್ನು ತಿಳಿದುಕೊಳ್ಳೋಣ.
ಯಾವಾಗ ಆರಂಭವಾಯಿತು?
ಸಮಾಜವನ್ನು ಮಾದಕ ದ್ರವ್ಯ ಸೇವನೆಯಿಂದ ಮುಕ್ತಗೊಳಿಸುವ ಉದ್ದೇಶದೊಂದಿಗೆ 1986ರ ಜೂನ್ 26ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅನುಮತಿಯೊಂದಿಗೆ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ವನ್ನು ಆರಂಭಿಸಲಾಯಿತು. ಜಗತ್ತಿನಾದ್ಯಂತ ಡ್ರಗ್ಸ್ ಬಳಕೆ ಮತ್ತು ಸಾಗಾಟದ ನಿಷೇಧವೇ ಈ ದಿನಾಚರಣೆಯ ಪ್ರಮುಖ ಗುರಿ. ವಿಶ್ವಸಂಸ್ಥೆಯು 1997ರಲ್ಲಿ ‘ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗ'ವನ್ನುಆರಂಭಿಸಿದೆ.
ಆಚರಣೆ ಹೇಗೆ?
ಪ್ರತಿವರ್ಷ UNODC ವಿಶ್ವ ಡ್ರಗ್ ವರದಿ ಬಿಡುಗಡೆ ಮಾಡುತ್ತದೆ. ವೈಜ್ಞಾನಿಕ ಮತ್ತು ಸಂಶೋಧನಾ ತಳಹದಿಯ ಈ ವರದಿಯು ಜಗತ್ತಿನ ಮಾದಕ ದ್ರವ್ಯ ಬಳಕೆಯ ವರದಿಯ ಬಿಡುಗಡೆ ಮಾಡುವುದರ ಜತೆಗೆ ಪರಿಹಾರವನ್ನೂ ಸೂಚಿಸುತ್ತದೆ. ಈ ದಿನ ಎಲ್ಲರೂ ಮಾದಕ ದ್ರವ್ಯದ ವಿರುದ್ಧ ಜಾಗೃತಿ ಮೂಡಿಸಿಕೊಳ್ಳಬೇಕು. ಸಮುದಾಯ ಸಂಸ್ಥೆಗಳು, ನಾಗರೀಕರು ಮಾದಕ ದ್ರವ್ಯದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಲ್ಲಿ ಜಾಗೃತಿ ಮೂಡಿಸಬೇಕು. ಸಂಘಸಂಸ್ಥೆಗಳು, ಆಸ್ಪತ್ರೆಗಳು, ಪೋಷಕರ ಸಭೆಗಳಲ್ಲಿ ತಿಳುವಳಿಕೆ ನೀಡಬೇಕು. ಪಂಚಾಯತ್ ಮಟ್ಟದಲ್ಲೂ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಔಷಧಗಳ ದುರ್ಬಳಕೆ ಮಾಡಬಾರದು. ವೈದ್ಯರ ಶಿಫಾರಸು ಇಲ್ಲದೆ ಯಾವುದೇ ಮತ್ತು ತರಿಸುವಂತಹ ಔಷಧಿಗಳನ್ನು ಮೆಡಿಕಲ್ ಅಂಗಡಿಗಳಲ್ಲಿ ಕೊಡಲೇಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಮಾದಕ ವ್ಯಸನದ ಪರಿಣಾಮಗಳು
ಡ್ರಗ್ ಸೇವನೆಯು ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಹಲವು ಪರಿಣಾಮಗಳನ್ನು ಉಂಟು ಮಾಡುತ್ತದೆ. ಡ್ರಗ್ಸ್ ನಮ್ಮ ಸಂಪೂರ್ಣವಾಗಿ ದೇಹವನ್ನು ಆವರಿಸಿ, ನಿತ್ರಾಣ, ನರದೌರ್ಬಲ್ಯ, ಮಿದುಳಿಗೆ ಹಾನಿ, ಶ್ವಾಸಕೋಶ, ಯಕೃತ್ತು ಸೇರಿದಂತೆ ಎಲ್ಲದಕ್ಕೂ ಹಾನಿ ಮಾಡುತ್ತದೆ. ಶೋಕಿಗಾಗಿ ಆರಂಭವಾಗುವ ಡ್ರಗ್ಸ್ ಸೇವನೆ ಕ್ರಮೇಣ ಚಟವಾಗಿ, ಬಿಡಲಾಗದ ದೌರ್ಬಲ್ಯವನ್ನು ಉಂಟು ಮಾಡುತ್ತದೆ.
2022ರ ಥೀಮ್
ಪ್ರತಿವರ್ಷ ಅಂತಾರಾಷ್ಟ್ರೀಯ ಮಾದಕ ದೃವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನವನ್ನು ಒಂದು ಥೀಮ್ ಅಥವಾ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಈ ವರ್ಷ "ಆರೋಗ್ಯ ಮತ್ತು ಮಾನವೀಯ ಬಿಕ್ಕಟ್ಟುಗಳಲ್ಲಿ ಡ್ರಗ್ ಸವಾಲುಗಳನ್ನು ಪರಿಹರಿಸುವುದು" ಎಂಬ ಘೋಷವಾಕ್ಯದಡಿ ಈ ದಿನವನ್ನು ಆಚರಿಸಲಾಗುತ್ತದೆ. ಅಂದರೆ, “Addressing drug challenges in health and humanitarian crises” ಎನ್ನುವುದು ಈ ವರ್ಷದ ಥೀಮ್. ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ ಅಂಡ್ ಕ್ರೈಮ್ (ಯುಎನ್‌ಒಡಿಸಿ) ಪ್ರತಿವರ್ಷ ಒಂದೊಂದು ಥೀಮ್‌ನಡಿ ಮಾದಕ ವ್ಯಸನ ಮುಕ್ತ ಜಗತ್ತಿಗಾಗಿ ಶ್ರಮಿಸುತ್ತದೆ.
ಮಾದಕ ವ್ಯಸನ ಎಂದರೇನು?
ಅಂತಾರಾಷ್ಟ್ರೀಯ ಮಾದಕ ದೃವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನವಾದ ಇಂದು ಎಲ್ಲರೂ ಮಾದಕ ವ್ಯಸನ ಎಂದರೇನು ಎಂದು ತಿಳಿದುಕೊಳ್ಳುವುದು ಅಗತ್ಯ. ವ್ಯಕ್ತಿಯೊಬ್ಬರು ಡ್ರಗ್ಸ್ ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಡ್ರಗ್ ಅಡಿಕ್ಷನ್ ಎನ್ನಬಹುದು. ಡ್ರಗ್ಸ್ ಇದ್ದರೆ ಮಾತ್ರ ನನ್ನಿಂದ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ವ್ಯಸನಿಗಳು ಭಾವಿಸುತ್ತಾರೆ. ಇದಕ್ಕಾಗಿ ಸದಾ ಹಾತೊರೆಯುತ್ತಾರೆ. ಡ್ರಗ್ಸ್ ದೊರಕದೆ ಇದ್ದರೆ ವಿಲವಿಲ ಒದ್ದಾಡುತ್ತಾರೆ. ಡ್ರಗ್ಸ್ ಸೇವಿಸಿದ ಸಮಯದಲ್ಲಿ ಮನಸ್ಸಿನ ಹತೋಟಿ ಮೀರಿ ಕೆಟ್ಟ ಕೆಲಸಗಳನ್ನು, ಸಮಾಜಘಾತುಕ ಕೆಲಸಗಳನ್ನು ಮಾಡಬಹುದು. ಉಲ್ಲಾಸ ನೀಡುವಂತೆ ಕಾಣುವ ಇಂತಹ ಚಟಗಳ ಅಮಲಿನಿಂದ ಮಾಡಿದ ತಪ್ಪುಗಳಿಂದ ಜೀವನಪೂರ್ತಿ ಜೈಲಿನಲ್ಲಿರಬೇಕಾಗಬಹುದು ಅಥವಾ ಮರಣದಂಡನೆಗೂ ಗುರಿಯಾಗಬೇಕಾಗಬಹುದು. ಮಾದಕ ದ್ರವ್ಯ ಸೇವನೆಯಿಂದ ನಡುಗುವಿಕೆ, ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು, ಮೂರ್ಛೆ ಹೋಗುವುದು, ತೂಕದಲ್ಲಿ ಏರಿಳಿತ, ಸಾಮಾಜಿಕವಾಗಿ ಕಡೆಗಣಿಸಲ್ಪಡುವುದು, ಅತಿಯಾದ ಅಥವಾ ಅತಿರೇಕದ ಚಟುವಟಿಕೆಗಳು, ಹೆದರಿಕೆ ಅಥವಾ ತಳಮಳ, ಆತಂಕ ಮತ್ತು ಮತಿವಿಕಲ್ಪ ಇತ್ಯಾದಿ ಹಲವು ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಹೀಗಾಗಿ ಮಾದಕ ದ್ರವ್ಯ ಸೇವನೆ ಅಭ್ಯಾಸವಿರುವವರು ಇದರಿಂದ ದೂರವಿರುವ ಸಂಕಲ್ಪವನ್ನು ಇಂದೇ ಮಾಡಿ.