World hottest day: ಮಂಡೆ ಸಖತ್ ಹಾಟ್ ಮಗಾ; ಜೂನ್ 3 ರಂದು ವಿಶ್ವದಲ್ಲಿ ದಾಖಲಾಯ್ತು ಹಿಂದೆಂದೂ ಕಂಡಿರದ ಗರಿಷ್ಠ ತಾಪಮಾನ
Jul 05, 2023 10:47 AM IST
ವಿಶ್ವದಲ್ಲಿ ದಾಖಲಾಯ್ತು ಹಿಂದೆಂದೂ ಕಂಡಿರದ ಗರಿಷ್ಠ ತಾಪಮಾನ (ಪ್ರಾತಿನಿಧಿಕ ಚಿತ್ರ)
- Average Global Temperature: 2016 ರ ಆಗಸ್ಟ್‌ನಲ್ಲಿ ಸರಾಸರಿ ಜಾಗತಿಕ ತಾಪಮಾನವು 16.92 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಆದರೆ 2023ರ ಜುಲೈ 3 ರಂದು ಸರಾಸರಿ ಜಾಗತಿಕ ತಾಪಮಾನವು 17.01 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ಮೂಲಕ ವಿಶ್ವದಲ್ಲಿ ಹಿಂದೆಂದೂ ಕಂಡಿರದ ಗರಿಷ್ಠ ತಾಪಮಾನ ದಾಖಲಾದಂತೆ ಆಗಿದೆ.
ಭಾತರದಲ್ಲಿ ಮಳೆಗಾಲ ಆರಂಭವಾಗಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕರ್ನಾಟಕದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಮ್ಮಲ್ಲಿ ತಂಪು ವಾತಾವರಣ ಇರುವ ಈ ಸಂದರ್ಭದಲ್ಲಿ ಜುಲೈ 3 (ಸೋಮವಾರ) ರಂದು ಹಿಂದೆಂದೂ ಕಂಡಿರದ ಗರಿಷ್ಠ ತಾಪಮಾನ ವಿಶ್ವದಲ್ಲಿ ದಾಖಲಾಗಿದೆ.
ಯುಎಸ್ ನ್ಯಾಷನಲ್ ಸೆಂಟರ್ಸ್ ಫಾರ್ ಎನ್ವಿರಾನ್ಮೆಂಟಲ್ ಪ್ರಿಡಿಕ್ಷನ್‌ನ ಮಾಹಿತಿಯ ಪ್ರಕಾರ ಸೋಮವಾರ ಜಾಗತಿಕವಾಗಿ ದಾಖಲಾದ ಅತ್ಯಂತ ಬಿಸಿಯಾದ ದಿನವಾಗಿದೆ (World hottest day).
2016 ರ ಆಗಸ್ಟ್‌ನಲ್ಲಿ ಸರಾಸರಿ ಜಾಗತಿಕ ತಾಪಮಾನವು 16.92 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಆದರೆ 2023ರ ಜುಲೈ 3 ರಂದು ಸರಾಸರಿ ಜಾಗತಿಕ ತಾಪಮಾನವು 17.01 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ಮೂಲಕ ವಿಶ್ವದಲ್ಲಿ ಹಿಂದೆಂದೂ ಕಂಡಿರದ ಗರಿಷ್ಠ ತಾಪಮಾನ ದಾಖಲಾದಂತೆ ಆಗಿದೆ.
ದಕ್ಷಿಣ ಅಮೆರಿಕವು ಇತ್ತೀಚಿನ ವಾರಗಳಲ್ಲಿ ತೀವ್ರವಾದ ತಾಪಮಾನ ಏರಿಕೆಯಿಂದ ಬಳಲುತ್ತಿದೆ. ಚೀನಾದಲ್ಲಿ ಹಲವು ದಿನಗಳಿಂದ 35 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಉತ್ತರ ಆಫ್ರಿಕಾವು 50 ಡಿಗ್ರಿ ಸೆಲ್ಸಿಯಸ್ ಸಮೀಪ ತಾಪಮಾನವನ್ನು ಕಂಡಿದೆ.
ಅಂಟಾರ್ಕ್ಟಿಕಾ ಸಹ, ಪ್ರಸ್ತುತ ಚಳಿಗಾಲದಲ್ಲಿಯೂ ಹೆಚ್ಚಿನ ತಾಪಮಾನವನ್ನು ದಾಖಲಿಸಿದೆ. ಶ್ವೇತ ಖಂಡದ ಅರ್ಜೆಂಟೀನಾ ದ್ವೀಪಗಳಲ್ಲಿನ ಉಕ್ರೇನ್‌ನ ವೆರ್ನಾಡ್ಸ್ಕಿ ಸಂಶೋಧನಾ ನೆಲೆಯು ಇತ್ತೀಚೆಗೆ ತನ್ನ ಜುಲೈ ತಾಪಮಾನದ ದಾಖಲೆಯನ್ನು 8.7C ಡಿಗ್ರಿ ಸೆಲ್ಸಿಯಸ್ನೊಂದಿಗೆ ಮುರಿದಿದೆ.
ಗರಿಷ್ಠ ತಾಪಮಾನ ದಾಖಲೆಯು ನಾವು ಆಚರಿಸಬೇಕಾದ ಮೈಲಿಗಲ್ಲು ಅಲ್ಲ, ಇದು ಜನರು ಮತ್ತು ಪರಿಸರ ವ್ಯವಸ್ಥೆಗಳಿಗೆ ಮರಣದಂಡನೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ್ ಗ್ರಾಂಥಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಚೇಂಜ್ ಮತ್ತು ಎನ್ವಿರಾನ್‌ಮೆಂಟ್ ವಿಭಾಗದ ಹವಾಮಾನ ವಿಜ್ಞಾನಿ ಫ್ರೆಡೆರಿಕ್ ಒಟ್ಟೊ ಎಚ್ಚರಿಕೆ ನೀಡಿದ್ದಾರೆ.