Jio TRUE 5G: ಬೆಂಗಳೂರು, ಹೈದರಾಬಾದ್‌ಗಳಲ್ಲಿ ರಿಲಯನ್ಸ್‌ನ ಜಿಯೋ ಟ್ರೂ 5G ಸೇವೆ ಈಗ ಲಭ್ಯ
Nov 11, 2022 10:23 AM IST
ನವದೆಹಲಿಯಲ್ಲಿನ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಪ್ರದರ್ಶನದಲ್ಲಿ ರಿಲಯನ್ಸ್ ಜಿಯೋ ಕಂಪನಿಯ ಬೂತ್‌ಗೆ ಭೇಟಿ ನೀಡಿದ ವೀಕ್ಷಕರು. (ಸಾಂದರ್ಭಿಕ ಚಿತ್ರ)
Jio TRUE 5G: ಭಾರತದ ಟೆಲಿಕಾಂ ದಿಗ್ಗಜ ಕಂಪನಿಯ 5G ಸೇವೆ ಅಕ್ಟೋಬರ್ ತಿಂಗಳು ಲಭ್ಯವಾಗಿದೆ. ಬೆಂಗಳೂರು, ಹೈದರಾಬಾದ್‌ಗಳಲ್ಲಿ ಈ ಸೇವೆ ಲಭ್ಯವಾಗುವುದರೊಂದಿಗೆ ಒಟ್ಟು 8 ನಗರಗಳಲ್ಲಿ ಈಗ ಜಿಯೋ ಟ್ರೂ 5G ಸೇವೆ ಸಿಗಲಾರಂಭಿಸಿದೆ.
ಜಿಯೂ ಟ್ರೂ 5G ಸೇವೆಗಳನ್ನು ಬೆಂಗಳೂರು ಮತ್ತು ಹೈದರಾಬಾದ್‌ನ ಐಟಿ ಹಬ್‌ಗಳಿಗೆ ವಿಸ್ತರಿಸಿರುವುದಾಗಿ ರಿಲಯನ್ಸ್ ಜಿಯೋ ಹೇಳಿದೆ.
"ಜಿಯೋ ಟ್ರೂ 5G, ಈ ಎರಡು ತಂತ್ರಜ್ಞಾನ ಕೇಂದ್ರಿತ ನಗರಗಳಲ್ಲಿ, ಮಾನವೀಯತೆಗೆ ಸೇವೆ ಸಲ್ಲಿಸುವ ಮತ್ತು ಭಾರತೀಯರ ಜೀವನದ ಗುಣಮಟ್ಟವನ್ನು ಸುಧಾರಿಸುವ ಕೆಲವು ಇತ್ತೀಚಿನ ತಂತ್ರಜ್ಞಾನಗಳ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ" ಎಂದು ರಿಲಯನ್ಸ್ ಜಿಯೋ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ಎರಡು IT ಹಬ್‌ಗಳಲ್ಲಿನ ಬಳಕೆದಾರರಿಗೆ 1Gbps ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸುವಂತಹ ಆರಂಭಿಕ ಕೊಡುಗೆಯನ್ನು ಕಂಪನಿಯು ನೀಡಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಇದರೊಂದಿಗೆ, ಜಿಯೋ ಟ್ರೂ 5ಜಿ ನೆಟ್‌ವರ್ಕ್‌ನ ಸೇವೆಗಳನ್ನು ಪಡೆಯುತ್ತಿರುವ ನಗರಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈಗಾಗಲೇ ಚೆನ್ನೈ, ದೆಹಲಿ, ಕೋಲ್ಕತ್ತಾ, ಮುಂಬೈ, ವಾರಣಾಸಿ ಮತ್ತು ನಾಥದ್ವಾರದಲ್ಲಿ (ರಾಜಸ್ಥಾನ) ಜಿಯೋ ಟ್ರೂ 5G ಲಭ್ಯವಿವೆ.
ಜಿಯೋ ಟ್ರೂ 5G ಈಗಾಗಲೇ ಆರು ನಗರಗಳ ಲಕ್ಷಗಟ್ಟಲೆ ಬಳಕೆದಾರರು ಬಳಸುತ್ತಿದ್ದಾರೆ. ಇದಕ್ಕೆ ಅತ್ಯಂತ ಧನಾತ್ಮಕ ಪ್ರತಿಕ್ರಿಯೆ ಮತ್ತು ಭರವಸೆ ಸಿಕ್ಕಿದೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ಸೇರಿಸಿದೆ.
ರಿಲಯನ್ಸ್ ಜಿಯೋ ಟ್ರೂ 5ಜಿ
ಮುಂಬೈ ಮೂಲದ ಟೆಲಿಕಾಂ ದಿಗ್ಗಜ ಕಂಪನಿ ಕಳೆದ ತಿಂಗಳು ಜಿಯೋ ಟ್ರೂ 5ಜಿ ಸೇವೆಯನ್ನು ಒದಗಿಸಲಾರಂಭಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 1ರಂದು ಮುಂದಿನ ತಲೆಮಾರಿನ ಟೆಕ್ನಾಲಜಿ 5ಜಿಯನ್ನು ಲೋಕಾರ್ಪಣೆ ಮಾಡಿದ ಬೆನ್ನಿಗೆ ಈ ಸೇವೆಯನ್ನು ಜಿಯೋ ಒದಗಿಸಲಾರಂಭಿಸಿದೆ.
ಆರಂಭದಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆಯು ದೆಹಲಿ, ಕೋಲ್ಕತ, ಮುಂಬೈ ಮತ್ತು ವಾರಾಣಸಿಗಳಲ್ಲಿ ಮಾತ್ರ ಲಭ್ಯವಿತ್ತು. ಬಳಿಕ ಚೆನ್ನೆ, ನಂತರ ನಾಥದ್ವಾರ ಸೇರ್ಪಡೆಯಾಗಿತ್ತು. ಈಗ ನಿನ್ನೆಯಿಂದ ಬೆಂಗಳೂರು ಮತ್ತು ಹೈದರಾಬಾದ್ ಕೂಡ ಈ ಪಟ್ಟಿಗೆ ಸೇರಿಕೊಂಡಿವೆ.
ಈ ನೆಟ್‌ವರ್ಕ್‌ಗೆ ಸೇರ್ಪಡೆಯಾಗುವ ಬಳಕೆದಾರರಿಗೆ 500 ಎಂಬಿಪಿಎಸ್‌ನಿಂದ 1 ಜಿಬಿಪಿಎಸ್ ವೇಗದ ಡೇಟಾ ಅವರ ಫೋನ್‌ಗಳಿಗೆ ಮತ್ತು ಇತರೆ ಉಪಕರಣಗಳಿಗೆ ಲಭ್ಯವಾಗಲಿದೆ ಎಂದು ರಿಲಯನ್ಸ್ ಜಿಯೋ ಹೇಳಿದೆ. 2024ರ ಹೊತ್ತಿಗೆ ದೇಶದ ಬಹುತೇಕ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.