ಜ್ಞಾನವಾಪಿ ಕೇಸ್: ವಿಡಿಯೋ ಸರ್ವೆಗೆ ಆದೇಶಿಸಿದ್ದ ಜಡ್ಜ್ಗೆ ಬೆದರಿಕೆ ಪತ್ರ...ಬಿಗಿ ಭದ್ರತೆ
Jun 08, 2022 11:22 AM IST
ವಿಡಿಯೋ ಸರ್ವೆಗೆ ಆದೇಶಿಸಿದ್ದ ಜಡ್ಜ್ಗೆ ಬೆದರಿಕೆ ಪತ್ರ
- ಬೆದರಿಕೆ ಪತ್ರವನ್ನು ರಿಜಿಸ್ಟರ್ ಮೂಲಕ ಜಡ್ಜ್ಗೆ ಕಳಿಸಿದ್ದು ರವಿಕುಮಾರ್ ದಿವಾಕರ್ ಅವರು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ವಾರಣಾಸಿಯ ಕಮಿಷನರೇಟ್ಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.
ವಾರಣಾಸಿ: ಜ್ಞಾನವಾಪಿ ಮಸೀದಿ ವಿವಾದ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಇಷ್ಟು ದಿನಗಳ ಕಾಲ ಪ್ರಕರಣದ ವಿಚಾರಣೆ ನಡೆಸಿತ್ತು. ಇದೀಗ ಕೇಸನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಈ ನಡುವೆ ವಿಡಿಯೋ ಸರ್ವೆಗೆ ಅನುಮತಿ ನೀಡಿದ ಜಡ್ಜ್ಗೆ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ.
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾದ ನಂತರ ಐವರು ಮಹಿಳೆಯರು ಮಸೀದಿ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿವಾದಿತ ಪ್ರದೇಶದಲ್ಲಿ ಮುಸ್ಲಿಮರಿಗೆ ಅವಕಾಶ ನೀಡದಂತೆ ಹಾಗೂ ಮಸೀದಿಯಲ್ಲಿ ವಿಡಿಯೋ ಸರ್ವೆ ಮಾಡುವಂತೆ ಮನವಿ ಮಾಡಿದ್ದರು. ಈ ಸಂಬಂಧ ಸಿವಿಲ್ ನ್ಯಾಯಾಲಯವು ಮಸೀದಿಯಲ್ಲಿ ಸರ್ವೆ ಮಾಡುವಂತೆ ಏಪ್ರಿಲ್ 26 ರಂದು ಆದೇಶಿಸಿತ್ತು. ಇದೀಗ ವಿಡಿಯೋಗ್ರಫಿಗೆ ಸರ್ವೆ ಮಾಡುವಂತೆ ಆದೇಶ ನೀಡಿದ್ದ ಜಡ್ಜ್ ರವಿಕುಮಾರ್ ದಿವಾಕರ್ ಅವರಿಗೆ ಮಂಗಳವಾರ ಬೆದರಿಕೆ ಪತ್ರವೊಂದು ಬಂದಿದ್ದು, ಕೈ ಬರಹದ ಪತ್ರವನ್ನು ಸ್ವೀಕರಿಸಿರುವುದಾಗಿ ಉತ್ತರ ಪ್ರದೇಶದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆಗಜ್ ಮೂವ್ಮೆಂಟ್ ಸಂಘಟನೆ ಪರವಾಗಿ ಖಾಸಿಫ್ ಅಹ್ಮದ್ ಸಿದ್ದಿಕಿ ಎಂಬಾತ ಈ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿದೆ. ಪತ್ರವನ್ನು ರಿಜಿಸ್ಟರ್ ಮೂಲಕ ಜಡ್ಜ್ಗೆ ಕಳಿಸಿದ್ದು ರವಿಕುಮಾರ್ ದಿವಾಕರ್ ಅವರು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ವಾರಣಾಸಿಯ ಕಮಿಷನರೇಟ್ಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಜಡ್ಜ್ ರವಿ ಕುಮಾರ್ ಅವರ ಭದ್ರತೆಗೆ 9 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಸೋರಿಕೆಯಾಗಿದ್ದ ವಿಡಿಯೋ
ಸಿವಿಲ್ ಕೋರ್ಟ್ ಆದೇಶದಂತೆ ಮೇ 14,15,16 ಮೂರು ದಿನಗಳ ಕಾಲ ಮಸೀದಿ ಆವರಣದಲ್ಲಿ ವಿಡಿಯೋ ಸಮೀಕ್ಷೆ ನಡೆಸಲಾಗಿತ್ತು. ವರದಿಯನ್ನು ನ್ಯಾಯಾಲಕ್ಕೆ ಸಲ್ಲಿಸಲು ಹೆಚ್ಚುವರಿ 2 ದಿನಗಳ ಗಡುವು ಬೇಕೆಂದು ಸರ್ವೆ ಸಮಿತಿ ಮನವಿ ಮಾಡಿತ್ತು. ವರದಿಯನ್ನು ಕೋರ್ಟ್ಗೆ ಸಲ್ಲಿಸುವ ಮುನ್ನವೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕೆ ವಿಡಿಯೋ ಸಮೀಕ್ಷೆ ಆಯೋಗದ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರನ್ನು ನ್ಯಾಯಾಲಯ ವಜಾಗೊಳಿಸಿತ್ತು.
ಮೇ 30 ರಂದು ವಿಚಾರಣೆ ಸಮಯದಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯವು ವಿಡಿಯೋ ಫೂಟೇಜ್ ಇರುವ ಸೀಲ್ ಪ್ಯಾಕೆಟ್ಗಳನ್ನು ನಾಲ್ವರು ಹಿಂದೂ ಮಹಿಳೆಯರಿಗೆ ನೀಡಿತ್ತು. ಇದರಲ್ಲಿರುವ ವಿಡಿಯೋಗಳನ್ನು ಬಹಿರಂಗಗೊಳಿಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಕೆಲವೊಂದು ವಾಹಿನಿಗಳಲ್ಲಿ ವಿಡಿಯೋ ತುಣುಕುಗಳು ಪ್ರಸಾರವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೂಡಾ ವೈರಲ್ ಆಗಿತ್ತು. ನಂತರ ಸರ್ವೆ ವಿಡಿಯೋ ಕ್ಲಿಪಿಂಗ್ಗಳನ್ನು ನ್ಯಾಯಾಲಯ ತನಗೆ ಒಪ್ಪಿಸುವಂತೆ ಸೂಚಿಸಿತ್ತು.
ಮಹಿಳೆಯರ ಪರ ವಕೀಲ ಶಿವಂಗೌರ್ , ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದು ಸೀಲ್ ಮಾಡಿದ ದಾಖಲೆಗಳ ಸೋರಿಕೆ ಕುರಿತು ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. 'ಜ್ಞಾನವಾಪಿ ಸರ್ವೆ ವೀಡಿಯೋ ಕ್ಲಿಪ್ಪಿಂಗ್ ಸೋರಿಕೆ ಸಂಬಂಧ ಸಿಬಿಐ ತನಿಖೆಗೆ ಕೋರಿ ನಾನು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇನೆ. ನ್ಯಾಯಾಲಯವು ಜುಲೈ 4 ರಂದು ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ' ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ವಿಭಾಗ