Ananthapura Temple Crocodile Babiya is no more: ಅನಂತ ಸಾನ್ನಿಧ್ಯ ಸೇರಿದ ಬಬಿಯಾ; ಸರೋವರ ದೇಗುಲ ಅನಂತಪುರದ ʻದೇವರ ಮೊಸಳೆʼ ಇನ್ನಿಲ್ಲ
Nov 11, 2023 05:30 PM IST
ಅನಂತ ಸಾನ್ನಿಧ್ಯ ಸೇರಿದ ಬಬಿಯಾ; ದೇವರ ಮೊಸಳೆ ಇನ್ನಿಲ್ಲ
- Keralaʼs Vegetarian Crocodile No more: ಈ ದೇವರ ಮೊಸಳೆ ವೆಜಿಟೇರಿಯನ್ ಮೊಸಳೆ ಎಂದೇ ಪ್ರಸಿದ್ಧಿ ಪಡೆದಿದೆ. ದೇವರ ನೈವೇದ್ಯ ಸ್ವೀಕರಿಸಿ ಸರೋವರದ ಗುಹೆ ಪ್ರವೇಶಿಸುತ್ತಿತ್ತು. ನೈವೇದ್ಯ ಸ್ವೀಕರಿಸಲು ಬಂದಾಗ ಮಾತ್ರವೇ ಭಕ್ತರಿಗೆ ಈ ಮೊಸಳೆಯ ದರ್ಶನ ಸಿಕ್ಕುತ್ತಿತ್ತು.
ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಗೆ ಸಮೀಪದಲ್ಲಿರುವ ಪ್ರಸಿದ್ಧ ಸರೋವರ ಕ್ಷೇತ್ರ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರಪಾಲಕನಂತಿದ್ದ ದೇವರ ಮೊಸಳೆ ಬಬಿಯಾ ಇನ್ನಿಲ್ಲ.
ಸರೋವರ ದೇವಸ್ಥಾನದಲ್ಲಿ 75 ವರ್ಷಗಳಷ್ಟು ಸುದೀರ್ಘ ಬದುಕು ಸಾಗಿಸಿದ್ದ ಬಬಿಯಾ ನಿನ್ನೆ ತಡರಾತ್ರಿ ಅನಂತ ಸಾನ್ನಿಧ್ಯ ಸೇರಿದೆ. ಮೊಸಳೆಯ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನಡೆಸಲು ದೇವಸ್ಥಾನದ ಆಡಳಿತ ಮತ್ತು ಸ್ಥಳೀಯ ನಿವಾಸಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಮೂರು ವರ್ಷಗಳ ಹಿಂದೆ ಬಬಿಯಾ ನಿಧನವಾಗಿದೆ ಎಂಬ ವದಂತಿ ಹರಡಿತ್ತು. ಕೆಲವು ನ್ಯೂಸ್ ಪೇಪರ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳುಸುದ್ದಿ ಹರಡಿತ್ತು. ಈ ಕುರಿತ ವರದಿ ಕೇರಳ ಕೌಮುದಿಯಲ್ಲಿ ಪ್ರಕಟವಾಗಿದೆ.
ಈ ದೇವರ ಮೊಸಳೆ ವೆಜಿಟೇರಿಯನ್ ಮೊಸಳೆ ಎಂದೇ ಪ್ರಸಿದ್ಧಿ ಪಡೆದಿದೆ. ದೇವರ ನೈವೇದ್ಯ ಸ್ವೀಕರಿಸಿ ಸರೋವರದ ಗುಹೆ ಪ್ರವೇಶಿಸುತ್ತಿತ್ತು. ನೈವೇದ್ಯ ಸ್ವೀಕರಿಸಲು ಬಂದಾಗ ಮಾತ್ರವೇ ಭಕ್ತರಿಗೆ ಈ ಮೊಸಳೆಯ ದರ್ಶನ ಸಿಕ್ಕುತ್ತಿತ್ತು. ಅನಂತಪದ್ಮಾನಾಭನಿಗೆ ಮೊಸಳೆ-ಬಬಿಯಾ ಕಾವಲು ಕಾಯುವ ಕೆಲಸ ಮಾಡುತ್ತಿತ್ತು. ಇದು ದೇವರ ಮೊಸಳೆ. ಈ ಮೊಸಳೆ ಎರಡು ವರ್ಷ ಹಿಂದೆ ದೇವಸ್ಥಾನದ ಪ್ರಾಂಗಣಕ್ಕೆ ಬಂದಿತ್ತು. ಅದರ ಫೋಟೋಗಳು ವೈರಲ್ ಆಗಿದ್ದವು.
ಇತ್ತೀಚೆಗೆ ಈ ಮೊಸಳೆಯನ್ನು ಸರೋವರದಿಂದ ದೇವಸ್ಥಾನದ ಆವರಣದಲ್ಲಿರುವ ಇನ್ನೊಂದು ಸಣ್ಣ ಕೆರೆಗೆ ವರ್ಗಾಯಿಸಲಾಗಿತ್ತು. ಈ ಮೊಸಳೆ ಕೆಲವು ವರ್ಷಗಳ ಹಿಂದೆ ಸ್ವಚ್ಛಂದವಾಗಿ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿ ವಿಹರಿಸುತ್ತಿತ್ತು. ಈ ಮೊಸಳೆಯಿಂದ ಸುತ್ತಮುತ್ತಲಿನವರಿಗೆ ಯಾರಿಗೂ ಏನೂ ತೊಂದರೆ ಆಗಿಲ್ಲ.
ಕ್ಷೇತ್ರದ ಐತಿಹ್ಯದ ಪ್ರಕಾರ, ಬ್ರಿಟಷ್ ಸೈನಿಕನೊಬ್ಬ ಇಲ್ಲಿದ್ದ ಮೊಸಳೆಯನ್ನು ಹತ್ಯೆ ಮಾಡಿದ ಬಳಿಕ ಕಾಣಿಸಿಕೊಂಡ ಮೊಸಳೆ ಇದು. ಹಿರಿಯರು ಕೂಡ ಹೀಗೊಂದು ಘಟನೆ ಆಗಿತ್ತೆಂಬುದನ್ನು ಹೇಳಿದ್ದರು ಎಂದು ಸ್ಥಳೀಯರು ಕೆಲವರು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಅನಂತಪುರ ದೇವಸ್ಥಾನ ಎಲ್ಲಿದೆ?
ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರದ ಕುಂಬ್ಳೆಗೆ ಸಮೀಪ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ಸಾಗಿದಾಗ ಅನಂತಪುರ ದೇವಸ್ಥಾನವನ್ನು ಕಾಣಬಹುದು. ಶ್ರೀ ಅನಂತಪದ್ಮನಾಭ ದೇವರು ಇಲ್ಲಿ ನೆಲೆಸಿದ್ದಾನೆ.
ಪುರಾಣ ಐತಿಹ್ಯಗಳ ಪ್ರಕಾರ, ತಿರುವಂತಪುರದ ಅನಂತಪದ್ಮನಾಭ ದೇವಳಕ್ಕೆ ಇದು ಮೂಲ ಸ್ಥಾನ. ಇದು ಸರೋವರದ ನಡುವಿನ ದೇವಸ್ಥಾನ. ಸರೋವರದ ಬದಿಯಲ್ಲಿ ಒಂದು ಸುರಂಗ ಮಾರ್ಗವೂ ಇದ್ದು, ಈ ಸುರಂಗದ ಮೂಲಕ ತಿರುವನಂತಪುರದ ದೇವಸ್ಥಾನ ತಲುಪಬಹುದು. ಇದೇ ಸುರಂಗದಲ್ಲಿ ಈ ಮೊಸಳೆ ಇರುತ್ತಿತ್ತು.