logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uk Media On Rishi Sunak: ರಿಷಿ ಸುನಕ್‌ ಬಗ್ಗೆ ಯುಕೆ ಮಾಧ್ಯಮಗಳ ವಿಶ್ಲೇಷಣೆ ಏನು?: ಸ್ವಾಗತಿಸಿದವರೆಷ್ಟು? ವಿರೋಧಿಸಿದವರೆಷ್ಟು?

UK Media on Rishi Sunak: ರಿಷಿ ಸುನಕ್‌ ಬಗ್ಗೆ ಯುಕೆ ಮಾಧ್ಯಮಗಳ ವಿಶ್ಲೇಷಣೆ ಏನು?: ಸ್ವಾಗತಿಸಿದವರೆಷ್ಟು? ವಿರೋಧಿಸಿದವರೆಷ್ಟು?

HT Kannada Desk HT Kannada

Oct 25, 2022 10:28 PM IST

google News

ರಿಷಿ ಸುನಕ್

    • ಬ್ರಿಟನ್‌ ನೂತನ ಪ್ರಧಾನಮಂತ್ರಿಯಾಗಿ ಭಾರತೀಯ ಮೂಲದ ರಿಷಿ ಸುನಕ್‌ ಅವರು ನೇಮಕಗೊಂಡಿದ್ದಾರೆ. ರಿಷಿ ಸುನಕ್‌ ಅವರ ಈ ನೇಮಕ ಐತಿಹಾಸಿಕ ಎಂದು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಮಧ್ಯೆ ಬ್ರಿಟನ್‌ನ ಬಹುತೇಕ ಮಾಧ್ಯಮಗಳು ಕೂಡ ರಿಷಿ ಸುನಕ್‌ ಅವರ ಆಯ್ಕೆಯನ್ನು ಮುಕ್ತಕಂಠದಿಂದ ಶ್ಲಾಘಿಸಿವೆ. ಆದರೆ ಕೆಲವು ಮಾಧ್ಯಮಗಳು ಸುನಕ್‌ ಅವರ ಆಯ್ಕೆಯನ್ನು ಅತ್ಯಂತ ಕಟು ಶಬ್ಧಗಳಲ್ಲಿ ಟೀಕಿಸಿವೆ.
ರಿಷಿ ಸುನಕ್
ರಿಷಿ ಸುನಕ್ (AP)

ಲಂಡನ್:‌ ಬ್ರಿಟನ್‌ ನೂತನ ಪ್ರಧಾನಮಂತ್ರಿಯಾಗಿ ಭಾರತೀಯ ಮೂಲದ ರಿಷಿ ಸುನಕ್‌ ಅವರು ನೇಮಕಗೊಂಡಿದ್ದಾರೆ. ರಿಷಿ ಸುನಕ್‌ ಅವರ ಈ ನೇಮಕ ಐತಿಹಾಸಿಕ ಎಂದು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಮಧ್ಯೆ ಬ್ರಿಟನ್‌ನ ಬಹುತೇಕ ಮಾಧ್ಯಮಗಳು ಕೂಡ ರಿಷಿ ಸುನಕ್‌ ಅವರ ಆಯ್ಕೆಯನ್ನು ಮುಕ್ತಕಂಠದಿಂದ ಶ್ಲಾಘಿಸಿವೆ.

ರಿಷಿ ಸುನಕ್‌ ಅವರು ಈ ಹಿಂದೆ ಭಾರತವೂ ಸೇರಿದಂತೆ ವಿಶ್ವದ ಹೆಚ್ಚಿನ ಭಾಗವನ್ನು ವಸಾಹತುವನ್ನಾಗಿ ಮಾಡಿಕೊಂಡಿದ್ದ ಬ್ರಿಟನ್‌ನ ಪ್ರಧಾನಿಯಾಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಅವರ ನಾಯಕತ್ವವನ್ನು ದೇಶಕ್ಕೆ "ಹೊಸ ಉದಯ" ಎಂದು ವಿಶ್ಲೇಷಿಸುವುದರಲ್ಲಿ. ಯಾವುದೇ ಅತಿಶೋಕಕ್ತಿಯಿಲ್ಲ ಎಂದು ಬ್ರಿಟನ್‌ನ ಮಾಧ್ಯಮಗಳು ಹೇಳಿವೆ. ಆದರೆ ಕೆಲವೇ ಕೆಲವು ಮಾಧ್ಯಮಗಳು ರಿಷಿ ಸುನಕ್‌ ಅವರ ವಿಜಯದ ಸಿಂಧುತ್ವವನ್ನು ಪ್ರಶ್ನಿಸಿವೆ.

ಬ್ರಿಟನ್‌ನ ಪ್ರಮುಖ ಪತ್ರಿಕೆಯಾದ 'ದಿ ಗಾರ್ಡಿಯನ್'‌, ರಿಷಿ ಸುನಕ್‌ ಅವರು ಟೋರಿ ಸಂಸದರನ್ನು ಉದ್ಧೇಶಿಸಿ ನೀಡಿದ್ದ "ಒಗ್ಗೂಡಿ ಅಥವಾ ನಶಿಸಿರಿ" ಎಂಬ ಹೇಳಿಕೆಯನ್ನು ಶೀರ್ಷಿಕೆಯನ್ನಾಗಿ ನೀಡಿದೆ. ರಿಷಿ ಸುನಕ್‌ ದೇಶವನ್ನು ಮುನ್ನಡೆಸುತ್ತಿರುವ ಮೊದಲ ಹಿಂದೂ ಎಂದೂ 'ದಿ ಗಾರ್ಡಿಯನ್'‌ ಹೇಳಿದೆ.

ಅದೇ ರೀತಿ 'ದಿ ಮೇಲ್' ಕೂಡ ರಿಷಿ ಸುನಕ್‌ ಆಯ್ಕೆಯನ್ನು ಸ್ವಾಗತಿಸಿದ್ದು, "ಬ್ರಿಟನ್‌ಗೆ ಹೊಸ ಉದಯ" ಎಂಬ ಶೀರ್ಷಿಕೆಯಡಿ ಸುದೀರ್ಘ ಲೇಖನ ಪ್ರಕಟಿಸಿದೆ. ರಿಷಿ ಸುನಕ್‌ ಬ್ರಿಟನ್‌ನ ಪ್ರಧಾನಿ ಹುದ್ದೆಗೇರಿದ ಅತ್ಯಂತ ಕಿರಿಯ ನಾಯಕ ಎಂದು 'ದಿ ಮೇಲ್‌' ಮೆಚ್ಚುಗೆ ಸೂಚಿಸಿದೆ.

ಹಾಗೆಯೇ ಮತ್ತೊಂದು ಪ್ರಮುಖ ಸುದ್ದಿಪತ್ರಿಕೆಯಾದ 'ದಿ ಸನ್' ‌ಕೂಡ "ಬಲವು ನಿಮ್ಮೊಂದಿಗಿದೆ, ರಿಷಿ" ಎಂದಬ ಶೀರ್ಷಿಕೆಯಡಿ ಸುದೀರ್ಘ ಲೇಖನ ಪ್ರಕಟಿಸಿದೆ.

ಆದಾಗ್ಯೂ, ಸುನಕ್ ಯುಕೆಯ ಹೊಸ ಪ್ರಧಾನ ಮಂತ್ರಿಯಾಗಿರುವುದು ಕೆಲವು ಮಾಧ್ಯಮಗಳಿಗೆ ಅಪಥ್ಯವಾಗಿದೆ. ಸುನಕ್‌ ವಿರುದ್ಧ ಕಟುಶಬ್ಧಗಳಲ್ಲಿ ದಾಳಿ ಮಾಡಿಎರುವ 'ದಿ ಮಿರರ್'‌, ಸುನಕ್‌ ಅವರನ್ನು ಜನರಿಂದ ಚುನಾಯಿಸದ ವ್ಯಕ್ತಿ ಎಂದು ಜರೆದಿದೆ. ರಿಷಿ ಸುನಕ್‌ ಅವರಿಗೆ ಯಾರತು ಮತ ಹಾಕಿದ್ದಾರೆ ಎಂಬುದೇ ಗೊತ್ತಿಲ್ಲ ಎಂದಿರುವ 'ದಿ ಮಿರರ್'‌, ನಮ್ಮ ರಾಜನಿಗಿಂತ ಎರಡು ಪಟ್ಟು ಹೆಚ್ಚು ಶ್ರೀಮಂತ ವ್ಯಕ್ತಿ ಇನ್ನು ಮುಂದೆ ಕ್ರೂರ ಸಾರ್ವಜನಿಕ ವೆಚ್ಚ ಕಡಿತಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂದು ಟೀಕಿಸಿದೆ.

'ಸ್ಕಾಟ್ಲೆಂಡ್‌ನ ಡೈಲಿ ರೆಕಾರ್ಡ್ ' ಕೂಡ ಸುನಕ್‌ ಆಯ್ಕೆಯನ್ನು ವಿರೋಧಿಸಿದ್ದು, "ಡೆತ್ ಆಫ್ ಡೆಮಾಕ್ರಸಿ" ಎಂಬ ಶೀರ್ಷಿಕೆಯಡಿ ಸುನಕ್‌ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಏತನ್ಮಧ್ಯೆ, 'ದಿ ಫೈನಾನ್ಷಿಯಲ್ ಟೈಮ್ಸ್ ' ತಟಸ್ಥ ವರದಿಯನ್ನು ಪ್ರಕಟಿಸಿದ್ದು, ಸುನಕ್ ಅವರ ಮುಂದಿರುವ ಆರ್ಥಿಕ ಸವಾಲುಗಳ ಮೇಲೆ ತನ್ನ ವರದಿಯನ್ನು ಕೇಂದ್ರೀಕರಿಸಿದೆ. ಸುನಕ್ ಅವರ ಆಯ್ಕೆ ಮಾರುಕಟ್ಟೆಗಳಿಗೆ ಜೊಸ ಭರವಸೆ ನೀಡುತ್ತದೆ ಎಂದು 'ದಿ ಫೈನಾನ್ಷಿಯಲ್ ಟೈಮ್ಸ್ ' ಅಂದಾಜಿಸಿದೆ.

ಒಟ್ಟಿನಲ್ಲಿ ಬ್ರಿಟನ್‌ ಪ್ರಧಾನಿ ಹುದ್ದೆಗೆ ಭಾರತೀಯ ಮೂಲದ ರಿಷಿ ಸುನಕ್‌ ಆಯ್ಕೆಯಾಗಿರುವುದಕ್ಕೆ, ಅಲ್ಲಿನ ಮಾಧ್ಯಮಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ. ಆದರೆ ಉತ್ತಮ ಆಡಳಿತ ನೀಡುವ ಮೂಲಕ ರಿಷಿ ಸುನಕ್‌ ಎಲ್ಲರ ವಿಶ್ವಾಸ ಗಳಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ದೇಶವನ್ನು ಆರ್ಥಿಕ ಹಿಂಜರಿತದ ಹೊಡೆತದಿಂದ ಮೇಲೆತ್ತುವ ಸವಾಲು ರಿಷಿ ಸುನಕ್‌ ಮುಂದಿದೆ. ಆದರೆ ಇದಕ್ಕೆ ತಮ್ಮ ಬಳಿ ಪರಿಹಾರವಿದೆ ಎಂದು ಹೇಳುತ್ತಿರುವ ರಿಷಿ ಸುನಕ್‌, ಆರ್ಥಿಕ ಸ್ಥಿರತೆ ಸಾಧಿಸಲು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ಒತ್ತಿ ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ