ಲೋಕಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ; ಪಿಎಂ ಮೋದಿ 3ನೇ ಬಾರಿ ವಾರಣಾಸಿಯಲ್ಲಿ ಸ್ಪರ್ಧೆ ಸೇರಿ ಅಗ್ರ 10 ಅಂಶಗಳಿವು
Mar 02, 2024 09:26 PM IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ 34 ಕೇಂದ್ರ ಸಚಿವರು ಸೇರಿದಂತೆ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರು 3ನೇ ಬಾರಿ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರಮುಖ ಅಂಶಗಳು ಇಲ್ಲಿವೆ.
ದೆಹಲಿ: ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ 34 ಸಚಿವರು ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಇದ್ದಾರೆ.
2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯ ಅಗ್ರ ಅಂಶಗಳು
1. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರು 2014 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ನಡೆದ ಮೊದಲ ಚುನಾವಣೆಯಲ್ಲಿ ಮೋದಿ ಅವರು ಕಾಂಗ್ರೆಸ್‌ನ ಅಜಯ್ ರಾಯ್ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದರು.
2. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಾಜಸ್ಥಾನದ ಕೋಟಾದಿಂದ ಸ್ಪರ್ಧಿಸುತ್ತಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕ್ರಮವಾಗಿ ಉತ್ತರ ಪ್ರದೇಶದ ಲಕ್ನೋ ಮತ್ತು ಗುಜರಾತ್‌ನ ಗಾಂಧಿನಗರದಿಂದ ಸ್ಪರ್ಧಿಸುತ್ತಿದ್ದಾರೆ.
3. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೇರಳದ ತಿರುವನಂತಪುರಂನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಮುಖಂಡ ಮತ್ತು ಹಾಲಿ ಸಂಸದ ಶಶಿ ತರೂರ್ ಅವರನ್ನು ಎದುರಿಸಲಿದ್ದಾರೆ.
4. ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯ ಪ್ರಚಂಡ ವಿಜಯದ ಹೊರತಾಗಿಯೂ ಮೋಹನ್ ಯಾದವ್ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೇಮಿಸಿದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಈಗ ಅವರ ಭದ್ರಕೋಟೆಯಾದ ವಿದಿಶಾದಿಂದ ಕಣಕ್ಕಿಳಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರನ್ನು ತ್ರಿಪುರಾದಿಂದ ಕಣಕ್ಕಿಳಿಸಲಾಗಿದೆ.
5. ರವಿ ಕಿಶನ್, ದಿನೇಶ್ ಲಾಲ್ ಯಾದವ್ ಮತ್ತು ಮನೋಜ್ ತಿವಾರಿ ನಂತರ ಮತ್ತೊಬ್ಬ ಭೋಜ್‌ಪುರಿ ನಟ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಪವನ್ ಸಿಂಗ್ ಅವರು ಅಸನ್ಸೋಲ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
6. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ತಾನು ಘೋಷಿಸಿದ ಐದು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳನ್ನು ಬದಲಾಯಿಸಿದೆ. ಹರ್ಷವರ್ಧನ್ ಮತ್ತು ಮೀನಾಕ್ಷಿ ಲೇಖಿ ಅವರನ್ನು ಕೈಬಿಡಲಾಗಿದ್ದು, ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ದೆಹಲಿಯಿಂದ ಕಣಕ್ಕಿಳಿಸಲಾಗಿದೆ.
7. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೂರನೇ ಬಾರಿಗೆ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿದ್ದ ರಾಹುಲ್ ಗಾಂಧಿ ಅವರನ್ನು ಇಲ್ಲಿ ಕಾಂಗ್ರೆಸ್ ಮತ್ತೆ ಕಣಕ್ಕಿಳಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
8. ಹೇಮಾ ಮಾಲಿನಿ (ಮಥುರಾ), ಅಜಯ್ ಮಿಶ್ರಾ ತೆನಿ (ಲಖಿಂಪುರ್ ಖೇರಿ), ಮಹೇಶ್ ಶರ್ಮಾ (ಗೌತಮ್ ಬುದ್ಧನಗರ), ಎಸ್‌ಪಿಎಸ್ ಬಘೇಲ್ (ಆಗ್ರಾ) ಮತ್ತು ಸಾಕ್ಷಿ ಮಹಾರಾಜ್ (ಉನ್ನಾವೊ) ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಿಂದ ಮತ್ತೊಮ್ಮೆ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.
9. ಬಿಜೆಪಿ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಅಲ್ವಾರ್‌ನಿಂದ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಗುನಾದಿಂದ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಪೋರ್‌ಬಂದರ್‌ನಿಂದ ಕಣಕ್ಕಿಳಿಸಿದೆ. ದಿಬ್ರುಗಢದಿಂದ ಸರ್ಬಾನಂದ ಸೋನೊವಾಲ್ ಮತ್ತು ಅರುಣಾಚಲ ಪ್ರದೇಶದ ಕಿರಣ್ ರಿಜಿಜು ಕಣಕ್ಕಿಳಿಯುತ್ತಿದ್ದಾರೆ.
10. ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಬ್ದುಲ್ ಸಲಾಂ ಕೇರಳದ ಮಲಪ್ಪುರಂನಿಂದ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಅನಿಲ್ ಆಂಟನಿ ಅವರು ಪಥನಂತಿಟ್ಟದಿಂದ ಸ್ಪರ್ಧಿಸಲಿದ್ದಾರೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ರಾಜ್ಯದಿಂದ ಎಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ?
ಉತ್ತರ ಪ್ರದೇಶದ 51, ಪಶ್ಚಿಮ ಬಂಗಾಳದ 20, ಮಧ್ಯಪ್ರದೇಶದ 24, ಗುಜರಾತ್ ಮತ್ತು ರಾಜಸ್ಥಾನದ ತಲಾ 15, ಕೇರಳದ 12, ತೆಲಂಗಾಣದ 9, ಅಸ್ಸಾಂನ 11, ಜಾರ್ಖಂಡ್ ಮತ್ತು ಛತ್ತೀಸ್ ಗಢದ ತಲಾ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದೆ. ದೆಹಲಿಯಿಂದ 5, ಜಮ್ಮು ಮತ್ತು ಕಾಶ್ಮೀರದಿಂದ 2, ಉತ್ತರಾಖಂಡದಿಂದ 3, ಅರುಣಾಚಲ ಪ್ರದೇಶದಿಂದ 2, ಗೋವಾ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ದಮನ್ ಮತ್ತು ದಿಯುನಿಂದ ತಲಾ 1 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.