Ajit Pawar: 2019ರಿಂದ ಮೂರು ಬಾರಿ ಡಿಸಿಎಂ ಆದ ಅಜಿತ್ ಪವಾರ್; ಅಷ್ಟಕ್ಕೂ ಎನ್ಸಿಪಿಗೆ ಏನಾಯ್ತು, ಇಲ್ಲಿದೆ ಡಿಟೇಲ್ಸ್
Jul 02, 2023 03:58 PM IST
ಮತ್ತೊಮ್ಮೆ ಮಹಾರಾಷ್ಟ್ರ ಡಿಸಿಎಂ ಆದ ಅಜಿತ್ ಪವಾರ್
- Maharashtra Politics: ಎನ್ಸಿಪಿಯ ಶಾಸಕರ ಬಲದೊಂದಿಗೆ ಶಿಂಧೆ ಸರ್ಕಾರ ಸೇರಿದ ಅಜಿತ್ ಪವಾರ್ ಮೂರನೇ ಬಾರಿ ಡಿಸಿಎಂ ಆಗಿದ್ದಾರೆ. ಆದರೆ ಈ ಬಾರಿ ಅವರು ದೇವೇಂದ್ರ ಫಡ್ನವಿಸ್ ಜೊತೆ ಡಿಸಿಎಂ ಹುದ್ದೆ ಹಂಚಿಕೊಂಡಿದ್ದಾರೆ. ಅಜಿತ್ ಪವಾರ್ ಜೊತೆ ಇತರ 8 ಮಂದಿ ಎನ್‌ಸಿಪಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್ಸಿಪಿಗೆ ಏನಾಯ್ತು? ಇಲ್ಲಿದೆ ಮಾಹಿತಿ.
ಮಹಾರಾಷ್ಟ್ರ ರಾಜಭವನದಲ್ಲಿ ಇಂದು (ಜುಲೈ 2, ಭಾನುವಾರ) “ಅಜಿತ್ ದಾದಾ, ಹಮ್ ತುಮ್ಹಾರೆ ಸಾಥ್ ಹೈ” (ನಾವು ನಿಮ್ಮೊಂದಿಗಿದ್ದೇವೆ) ಎಂಬ ಘೋಷಣೆಗಳು ಮೊಳಗಿದವು. ಹಠಾತ್ ಬೆಳವಣಿಗೆಯಲ್ಲಿ ಇಂದು ಎನ್‌ಸಿಪಿ ಹಿರಿಯ ನಾಯಕ, ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ (Ajit Pawar) ಅವರು ಮತ್ತೊಮ್ಮೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
2019ರಿಂದ ಅಜಿತ್ ಪವಾರ್ ಅವರು ಮೂರು ಬಾರಿ ಮಹಾರಾಷ್ಟ್ರ ಡಿಸಿಎಂ ಆಗಿದ್ದಾರೆ. 2019 ರಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಬಂದು ಫಡ್ನವಿಸ್ ಸರ್ಕಾರ ಬದಲಾಯಿತು. ಉದ್ಧವ್ ಠಾಕ್ರೆ ಸಿಎಂ ಆಗುತ್ತಿದ್ದಂತೆಯೇ ಅಜಿತ್ ಪವಾರ್ ಮತ್ತೆ ಡಿಸಿಎಂ ಆದರು.
ಬಳಿಕ ಶಿವಸೇನೆಯ ಏಕನಾಥ್ ಶಿಂಧೆ ಬಣ ಬಂಡಾಯವೆದ್ದು, ಉದ್ಧವ್ ಠಾಕ್ರೆ ಸರ್ಕಾರ ಉರುಳಿತು. ಆಗ ಏಕನಾಥ್ ಶಿಂಧೆ ಮಹಾರಾಷ್ಟ್ರ ಸಿಎಂ ಆದರು ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾದರು.
ಇದೀಗ ಎನ್ಸಿಪಿಯ ಶಾಸಕರ ಬಲದೊಂದಿಗೆ ಶಿಂಧೆ ಸರ್ಕಾರ ಸೇರಿದ ಅಜಿತ್ ಪವಾರ್ ಮೂರನೇ ಬಾರಿ ಡಿಸಿಎಂ ಆಗಿದ್ದಾರೆ. ಆದರೆ ಈ ಬಾರಿ ಅವರು ದೇವೇಂದ್ರ ಫಡ್ನವಿಸ್ ಜೊತೆ ಡಿಸಿಎಂ ಹುದ್ದೆ ಹಂಚಿಕೊಂಡಿದ್ದಾರೆ. ಅಜಿತ್ ಪವಾರ್ ಜೊತೆ ಇತರ 8 ಮಂದಿ ಎನ್‌ಸಿಪಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಎನ್ಸಿಪಿಗೆ ಏನಾಯ್ತು?
ಅಜಿತ್ ಪವಾರ್ ಬಿಜೆಪಿ ಸೇರಿಲ್ಲ. ಅವರು ಹೇಳಿಕೊಂಡಂತೆ 40 ಶಾಸಕರ ಬೆಂಬಲದೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಅವರು ಪಕ್ಷವನ್ನು ಒಡೆದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಹಾದಿಯಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಇವರಿಗೆ ಪಕ್ಷದ 6 ಎಂಎಲ್ಸಿಗಳ ಬೆಂಬಲವೂ ಇದೆ. ಈ ವರ್ಷ ಮೇ ತಿಂಗಳಲ್ಲಿ ಶರದ್ ಪವಾರ್ ಅವರು ಎನ್‌ಸಿಪಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಹಿಂಪಡೆದುಕೊಂಡಿದ್ದರು. ಆನಂತರ ತಮ್ಮ ಮಗಳಾದ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಲೆ ಮತ್ತು ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಮಾಡಿದ್ದರು.
ಈ ಬೆಳವಣಿಗೆ ಬಳಿಕ ಅಜಿತ್ ಪವಾರ್ ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯಲು ಉತ್ಸುಕರಾಗಿಲ್ಲ ಮತ್ತು ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದರು. ಇಂದು ದಿಢೀರ್ ಎಂದು ಪಕ್ಷದ ನಾಯಕರು ಮತ್ತು ಶಾಸಕರ ಜೊತೆ ಮುಂಬೈನ ತಮ್ಮ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿ, ಬಳಿಕ ರಾಜಭವನ ತೆರೆಳಿದರು. ಕೆಲವೇ ಕ್ಷಣಗಳಲ್ಲಿ ಶಿಂಧೆ ಸರ್ಕಾರ ಸೇರ್ಪಡೆಯಾಗಿ ಮಹಾರಾಷ್ಟ್ರ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ಗೆ ತಿಳಿಯದೆ ಸಭೆ ನಡೆದಿತ್ತು.
ಈಗಾಗಲೇ ಶಿವಸೇನೆ (ಉದ್ಧವ್ ಠಾಕ್ರೆ ಬಣ) ವಕ್ತಾರ ಸಂಜಯ್ ರಾವತ್ ಅವರು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಇವರು ಒಗ್ಗೂಡುವ ಸಾಧ್ಯತೆಯಿದೆ. ನಾವು ಉದ್ಧವ್ ಠಾಕ್ರೆ ಅವರೊಂದಿಗೆ ಮತ್ತೆ ಎಲ್ಲವನ್ನೂ ಮರುನಿರ್ಮಾಣ ಮಾಡುತ್ತೇವೆ, ಜನರು ಈ ಆಟವನ್ನು ಹೆಚ್ಚು ಕಾಲ ಸಹಿಸುವುದಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ವಿಭಾಗ