Sharad Pawar: ಅಜಿತ್ ಪವಾರ್ ನಡೆಯಲ್ಲಿ ಮೋದಿ ಹಸ್ತಕ್ಷೇಪ; ಇದಕ್ಕೆಲ್ಲ ಮುಂದಿನ ಚುನಾವಣೆಯಲ್ಲಿ ಜನರು ಉತ್ತರಿಸುತ್ತಾರೆ ಎಂದ ಶರದ್ ಪವಾರ್
Jul 02, 2023 05:14 PM IST
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್
- Sharad Pawar: ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರ ಸರ್ಕಾರ ಸೇರ್ಪಡೆಯಾದ ಬಗ್ಗೆ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ.
ಪುಣೆ: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಗಳ ಕುರಿತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar) ಪುಣೆಯಲ್ಲಿ ಭಾನುವಾರ ಸಂಜೆ ಮಾಧ್ಯಮಗೋಷ್ಠಿ ನಡೆಸಿದರು. ತಮ್ಮ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರ್ಪಡೆಯಾದ ಕುರಿತು ಶರದ್ ಪವಾರ್ ಪ್ರತಿಕ್ರಿಯಿಸಿದರು. ಪವಾರ್ ಪತ್ರಿಕೋಷ್ಠಿಯನ್ನು ಇಡೀ ದೇಶ ಕಾತರದಿಂದ ನಿರೀಕ್ಷಿಸುತ್ತಿತ್ತು.
'ನಾನು ಎರಡು ವಿಚಾರಗಳನ್ನು ಮುಖ್ಯವಾಗಿ ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ನಮ್ಮ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ಅವರು ಪಕ್ಷದ ನಿರ್ಧಾರಕ್ಕೆ ವ್ಯತಿರಿಕ್ತವಾದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ನಾನು ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದೆ. ಅಲ್ಲಿ ಕೆಲವು ಪ್ರಶ್ನೆಗಳ ಬಗ್ಗೆ ಚರ್ಚೆಯಾಯಿತು. ಪಕ್ಷದ ನಾಯಕರ ಭ್ರಷ್ಟಾಚಾರದ ಬಗ್ಗೆ ಮಾಡಿರುವ ಆರೋಪಗಳಿಗೆ ಆಧಾರವಿಲ್ಲ. ಈ ಬೆಳವಣಿಗೆಯನ್ನು ಜನರ ಬಳಿಗೆ ಕೊಂಡೊಯ್ಯುತ್ತೇನೆ' ಎಂದು ಶರದ್ ಪವಾರ್ ಹೇಳಿದರು.
'ಶೀಘ್ರದಲ್ಲೇ ಎನ್‌ಸಿಪಿ ನಾಯಕರ ಸಭೆಯನ್ನು ಕರೆದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಕ್ಷೇಪ ಇದರಲ್ಲಿದೆ. ಅವರು ಅಜಿತ್ ಪವಾರ್ ಅವರ ನಡೆಯನ್ನು ಆಶೀರ್ವದಿಸಿದ್ದಾರೆ. ಇದು ನನಗೆ ಹೊಸದಲ್ಲ. ಹಿಂದೆಯೂ ಇಂಥ ಬೆಳವಣಿಗೆಗಳು ನಡೆದಿದ್ದವು' ಎಂದು ಆರೋಪಿಸಿದರು.
'ಕೆಲವರು ತಮ್ಮದೇ ನಿಜವಾದ ಎನ್‌ಸಿಪಿ ಎಂದು ಹೇಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರು ಇಂಥ ಪ್ರತಿಪಾದನೆಗಳಿಗೆ ಉತ್ತರಿಸಲಿದ್ದಾರೆ. ನನಗೆ ಮಹಾರಾಷ್ಟ್ರ ಮತದಾರರ ಸಂಪೂರ್ಣ ಆಶೀರ್ವಾದವಿದೆ. ಮುಖ್ಯವಾಗಿ ಯುವಜನರು ನಮ್ಮೊಂದಿಗೆ ಇದ್ದಾರೆ. ಎನ್‌ಸಿಪಿ ಆಯಸ್ಸು ತೀರಿದ ಪಕ್ಷ ಎಂದು ಅಜಿತ್ ಪವಾರ್ ಹೇಳಿದ್ದಾರೆ. ನೀರಾವರಿ ಆರೋಪ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇವೆಲ್ಲಕ್ಕೂ ನಾನು ಉತ್ತರ ಕೊಡುತ್ತೇನೆ' ಎಂದರು.
'ನನ್ನ ಕೆಲ ಸಹವರ್ತಿಗಳು ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಆ ಬಗ್ಗೆ ನನಗೆ ಸಂತೋಷವಾಗಿದೆ. ಈ ಬೆಳವಣಿಗೆಯಿಂದ (ಎನ್‌ಡಿಎ ಸರ್ಕಾರದ ಭಾಗವಾಗುವುದರೊಂದಿಗೆ) ಒಂದಿಷ್ಟು ಅಂಶಗಳು ಎಲ್ಲರಿಗೂ ಮನವರಿಕೆಯಾಗಿವೆ. ಆರೋಪಗಳ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಇದಕ್ಕಾಗಿ ಅವರಿಗೆ ನಾನು ಅಭಾರಿಯಾಗಿದ್ದೇನೆ' ಎಂದು ತಿಳಿಸಿದರು.
'ಜನರು ನಮ್ಮ ಶಕ್ತಿ. ಕಾರ್ಯಕರ್ತರು ನಮ್ಮೊಂದಿಗೆ ಇದ್ದಾರೆ. ನನಗೆ ಇಂಥ ವಿಷಯಗಳು ಹೊಸದೇನೂ ಅಲ್ಲ. ನಾನು 1980ರಲ್ಲಿ ಮುನ್ನಡೆಸುತ್ತಿದ್ದ ಪಕ್ಷದಿಂದ 58 ಮಂದಿ ಹೊರಗೆ ಹೋಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರಲ್ಲಿ ಬಹುತೇಕರು ತಮ್ಮ ಸ್ವಂತ ಕ್ಷೇತ್ರಗಳಲ್ಲಿಯೇ ಸೋತರು. ಜನರು ಇಂಥವರಿಗೆ ಸರಿಯಾದ ಉತ್ತರ ಕೊಡುತ್ತಾರೆ' ಎಂದು ಪವಾರ್ ನುಡಿದರು.
'ನನಗೆ ದೇಶದ ಹಲವು ಪ್ರಮುಖ ನಾಯಕರಿಂದ ಫೋನ್ ಕರೆಗಳು ಬರುತ್ತಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರರು ಕರೆ ಮಾಡಿದ್ದರು. ಇವತ್ತು ಏನಾಯಿತು ಎನ್ನುವ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾಳೆ ನಾನು ವೈ.ಬಿ.ಚವಾಣ್ (ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ) ಅವರ ಆಶೀರ್ವಾದ ಪಡೆದುಕೊಳ್ಳುತ್ತೇನೆ. ನಂತರ ಸಾರ್ವಜನಿಕ ಸಭೆ ನಡೆಸುತ್ತೇನೆ' ಎಂದು ಶರದ್ ಪವಾರ್ ಘೋಷಿಸಿದರು.
'ಪ್ರತಿಪಕ್ಷ ನಾಯಕ ಯಾರಾಗಬೇಕು ಎನ್ನುವುದನ್ನು ಸ್ಪೀಕರ್ ನಿರ್ಧರಿಸುತ್ತಾರೆ. ಎರಡು-ಮೂರು ದಿನಗಳಲ್ಲಿ ಕಾಂಗ್ರೆಸ್ ನಾಯಕರು ಮತ್ತು ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸುತ್ತೇವೆ. ನಮ್ಮ ಮುಖ್ಯ ಶಕ್ತಿ ಸಾಮಾನ್ಯ ಜನರು. ಅವರು ನಮ್ಮ ಕೈಹಿಡಿಯುತ್ತಾರೆ' ಎಂದು ಶರದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದರು.
ಇವರು ಮಾಡಿದ್ದು ದರೋಡೆ: ಶರದ್ ಪವಾರ್ ಗರಂ
ಅಜಿತ್ ಪವಾರ್ ತಮ್ಮನ್ನು ತೊರೆದು ಬಿಜೆಪಿ ಸಖ್ಯ ಬೆಳೆಸಿದ ಬಗ್ಗೆ ಕೇಳಿದ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಶರದ್ ಪವಾರ್, 'ಇದು ಗೂಗ್ಲಿ ಅಲ್ಲ, ದರೋಡೆ. ಇದು ಚಿಕ್ಕ ವಿಚಾರಲ್ಲ' ಎಂದು ಸಿಟ್ಟಾದರು.
'ನನ್ನ ಮನೆ (ಪಕ್ಷ) ವಿಭಜನೆಯಾಗಿದೆ ಎಂದು ನಾನು ಎಂದಿಗೂ ಹೇಳುವುದಿಲ್ಲ, ಇದು ನನ್ನ ಮನೆಗೆ ಸಂಬಂಧಿಸಿದ ವಿಷಯವಲ್ಲ, ಇದು ಜನರ ಸಮಸ್ಯೆ. ಬಿಟ್ಟು ಹೋದವರ ಭವಿಷ್ಯದ ಬಗ್ಗೆ ನನಗೆ ಚಿಂತೆಯಾಗಿದೆ. ಇದರ ಕ್ರೆಡಿಟ್ ಅನ್ನು ಪ್ರಧಾನಿ ಮೋದಿಯವರಿಗೆ ನೀಡಲು ಬಯಸುತ್ತೇನೆ' ಎಂದರು.
ಅಜಿತ್ ಪವಾರ್ ಒಳ್ಳೇ ಕೆಲಸ ಮಾಡಿದ್ದಾರೆ: ಮಹಾರಾಷ್ಟ್ರ ವಿದ್ಯಮಾನಗಳಿಗೆ ಯಡಿಯೂರಪ್ಪ ಪ್ರತಿಕ್ರಿಯೆ
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, 'ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಯನ್ನು ಗಮನಿಸಿದ್ದೇನೆ. ಇದು ಉತ್ತಮ ಮತ್ತು ಸ್ವಾಗತಾರ್ಹ ಬೆಳವಣಿಗೆ. ಈ ನಿರ್ಧಾರದಿಂದ ಮಹಾರಾಷ್ಟ್ರದ ಜನರಿಗೆ ಸಂತೋಷವಾಗಿದೆ' ಎಂದು ಹೇಳಿದರು.