logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra Politics: ಮಹಾರಾಷ್ಟ್ರ ರಾಜಕೀಯ; ಅಜಿತ್ ಪವಾರ್ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ

Maharashtra Politics: ಮಹಾರಾಷ್ಟ್ರ ರಾಜಕೀಯ; ಅಜಿತ್ ಪವಾರ್ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ

Meghana B HT Kannada

Jul 03, 2023 10:06 AM IST

google News

ಶಿಂಧೆ ಸರ್ಕಾರ ಸೇರಿದ ಅಜಿತ್​ ಪವಾರ್​

    • NCP moves disqualification petitions: "ಅವರ ಕೃತ್ಯ ಕಾನೂನುಬಾಹಿರವಾಗಿದೆ. ಅವರು ಶರದ್ ಪವಾರ್ ಮತ್ತು ಪಕ್ಷವನ್ನು ಕತ್ತಲೆಯಲ್ಲಿಟ್ಟಿದ್ದರಿಂದ ಎನ್​ಸಿಪಿ ಶಿಸ್ತು ಸಮಿತಿಗೆ ದೂರು ಸಲ್ಲಿಸಲಾಯಿತು. ಶಿಸ್ತು ಸಮಿತಿಯ ಶಿಫಾರಸಿನ ಮೇರೆಗೆ ಎನ್‌ಸಿಪಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿಯನ್ನು  ಶಾಸಕಾಂಗಕ್ಕೆ ಮೇಲ್ ಮೂಲಕ ಸಲ್ಲಿಸಿದೆ" ಎಂದು ಪಾಟೀಲ್  ತಿಳಿಸಿದರು.
ಶಿಂಧೆ ಸರ್ಕಾರ ಸೇರಿದ ಅಜಿತ್​ ಪವಾರ್​
ಶಿಂಧೆ ಸರ್ಕಾರ ಸೇರಿದ ಅಜಿತ್​ ಪವಾರ್​

ಮಹಾರಾಷ್ಟ್ರ: ಮಹಾ ವಿಕಾಸ್ ಅಘಾಡಿ (MVI) ಯನ್ನು ತೊರೆದು ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA) ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಮತ್ತು ಇತರ ಎಂಟು ಜನರ ವಿರುದ್ಧ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ( NCP) ಅನರ್ಹತೆ ಅರ್ಜಿಯನ್ನು ಸಲ್ಲಿಸಿದೆ.

ಎನ್​ಸಿಪಿ ಪಕ್ಷದ ಅಧ್ಯಕ್ಷ ಜಯಂತ್ ಪಾಟೀಲ್ ಅವರು ಅನರ್ಹತೆ ಅರ್ಜಿಯನ್ನು ಸಲ್ಲಿಸಿರುವುದಾಗಿ ಪ್ರಕಟಿಸಿದ್ದಾರೆ. "ಅವರ ಕೃತ್ಯ ಕಾನೂನುಬಾಹಿರವಾಗಿದೆ ಮತ್ತು ಅವರು ಶರದ್ ಪವಾರ್ ಮತ್ತು ಪಕ್ಷವನ್ನು ಕತ್ತಲೆಯಲ್ಲಿಟ್ಟಿದ್ದರಿಂದ ಎನ್​ಸಿಪಿ ಶಿಸ್ತು ಸಮಿತಿಗೆ ದೂರು ಸಲ್ಲಿಸಲಾಯಿತು. ಶಿಸ್ತು ಸಮಿತಿಯ ಶಿಫಾರಸಿನ ಮೇರೆಗೆ ಎನ್‌ಸಿಪಿ ಒಂಬತ್ತು ಶಾಸಕರ ವಿರುದ್ಧ ಅನರ್ಹತೆ ಅರ್ಜಿಯನ್ನು ರಾಜ್ಯ ಶಾಸಕಾಂಗಕ್ಕೆ ಮೇಲ್ ಮೂಲಕ ಸಲ್ಲಿಸಿದೆ" ಎಂದು ಪಾಟೀಲ್ ಭಾನುವಾರ ತಡರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

"ಭೌತಿಕ ಪ್ರತಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. ನಾವು ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಶೀಘ್ರವಾಗಿ ಅನರ್ಹತೆ ಅರ್ಜಿಯ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದೇವೆ. ಅಲ್ಲದೇ ಇದೇ ವಿಚಾರವಾಗಿ ಪಕ್ಷವು ಭಾರತೀಯ ಚುನಾವಣಾ ಆಯೋಗವನ್ನು (ECI) ಸಂಪರ್ಕಿಸಿದೆ. ಪಕ್ಷದ ನೀತಿಗೆ ವಿರುದ್ಧವಾಗಿ ಹೋದ ಕ್ಷಣ, ತಾಂತ್ರಿಕವಾಗಿ ಅವರನ್ನು ಅನರ್ಹಗೊಳಿಸಲಾಗುತ್ತದೆ" ಎಂದು ಪಾಟೀಲ್ ಹೇಳಿದ್ದಾರೆ.

"ಪಕ್ಷವು ನೇಮಿಸಿದ ವಿಪ್ ಅನ್ನು ಅಧಿಕೃತವೆಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಸ್ಪಷ್ಟವಾಗಿ ಹೇಳುತ್ತದೆ. ಶಾಸಕರ ಸಂಖ್ಯೆ ಮುಖ್ಯವಲ್ಲ. ಹೀಗಾಗಿ, ಜಿತೇಂದ್ರ ಅವ್ಹಾದ್​ ಅವರನ್ನು ಪಕ್ಷದ ಅಧಿಕೃತ ವಿಪ್ ಎಂದು ಪರಿಗಣಿಸಲಾಗುವುದು ಮತ್ತು ಇದು ಎಲ್ಲಾ ಶಾಸಕರಿಗೂ ಅನ್ವಯಿಸುತ್ತದೆ" ಎಂದು ರಾಜ್ಯ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ತಿಳಿಸಿದ್ದಾರೆ.

"ನಾವು ಈ ವಿಚಾರವಾಗಿ ಕಾನೂನು ಹೋರಾಟ ನಡೆಸುತ್ತಿಲ್ಲ. ಯಾರಾದರೂ ಎನ್‌ಸಿಪಿಯ ಮಾಲೀಕತ್ವವನ್ನು ಹೊಂದಿದರೂ ನನಗೆ ಯಾವುದೇ ಸಮಸ್ಯೆಗಳಿಲ್ಲ. ನಾವು ಜನರ ಬಳಿಗೆ ಹೋಗಿ ಬೆಂಬಲ ಕೇಳುತ್ತೇವೆ. ಅವರು ನಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ" ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

"ಅಜಿತ್ ಪವಾರ್ ಅವರು ಶಿಂಧೆ-ಫಡ್ನವೀಸ್ ಸರ್ಕಾರಕ್ಕೆ ಸೇರ್ಪಡೆಯಾಗುತ್ತಿರುವುದು ನೋವಿನ ಸಂಗತಿ. ಆದರೆ ಅವರೊಂದಿಗಿನ ನನ್ನ ಸಂಬಂಧ ಹಾಗೆಯೇ ಇರುತ್ತದೆ. ಅವರು ಯಾವಾಗಲೂ ನನ್ನ ಅಣ್ಣನಾಗಿಯೇ ಇರುತ್ತಾರೆ. ನಾವು ಪಕ್ಷವನ್ನು ಮರುನಿರ್ಮಾಣ ಮಾಡುತ್ತೇವೆ" ಎಂದು ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಲೆ ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ