logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು 'ಸಂಸ್ಕಾರಿ' ಎಂದು ಕರೆದ ಶಾಸಕನಿಗೆ ಬಿಜೆಪಿ ಟಿಕೆಟ್​: ಇದೇ 'ಗುಜರಾತ್​ ಮಾದರಿ​' ಎಂದ ಮಹುವಾ ಮೊಯಿತ್ರಾ

ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು 'ಸಂಸ್ಕಾರಿ' ಎಂದು ಕರೆದ ಶಾಸಕನಿಗೆ ಬಿಜೆಪಿ ಟಿಕೆಟ್​: ಇದೇ 'ಗುಜರಾತ್​ ಮಾದರಿ​' ಎಂದ ಮಹುವಾ ಮೊಯಿತ್ರಾ

HT Kannada Desk HT Kannada

Nov 13, 2022 03:01 PM IST

google News

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ

    • Mahua Moitra on Godhra MLA: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಕಳೆದ ಆಗಸ್ಟ್​ 15 ರಂದು ಬಿಡುಗಡೆ ಮಾಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ಅಪರಾಧಿಗಳನ್ನು 'ಸಂಸ್ಕಾರಿ ಬ್ರಾಹ್ಮಣರು' ಎಂದು ಕರೆದಿದ್ದ ಗೋಧ್ರಾ ಶಾಸಕ ಚಂದ್ರಸಿನ್ಹ ರೌಲ್ಜಿಗೆ ಮುಂದಿನ ತಿಂಗಳು ನಡೆಯಲಿರುವ ಗುಜರಾತ್​ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್​ ನೀಡಿದೆ. ಇದನ್ನು ಖಂಡಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಇದೇ ಗುಜರಾತ್​ ಮಾದರಿ ಎಂದು ಕರೆದಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಕಳೆದ ಆಗಸ್ಟ್​ 15 ರಂದು ಬಿಡುಗಡೆ ಮಾಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ಅಪರಾಧಿಗಳನ್ನು 'ಸಂಸ್ಕಾರಿ ಬ್ರಾಹ್ಮಣರು' ಎಂದು ಕರೆದಿದ್ದ ಗೋಧ್ರಾ ಶಾಸಕ ಚಂದ್ರಸಿನ್ಹ ರೌಲ್ಜಿಗೆ ಮುಂದಿನ ತಿಂಗಳು ನಡೆಯಲಿರುವ ಗುಜರಾತ್​ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್​ ನೀಡಿದೆ. ಇದನ್ನು ಖಂಡಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಇದೇ ಗುಜರಾತ್​ ಮಾದರಿ ಎಂದು ಕರೆದಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮಹುವಾ ಮೊಯಿತ್ರಾ, "ಬಿಲ್ಕಿಸ್ ಪ್ರಕರಣದ ಅತ್ಯಾಚಾರಿಗಳು ಮತ್ತು ಹಂತಕರನ್ನು ಸಂಸ್ಕಾರಿ ಬ್ರಾಹ್ಮಣರು ಎಂದು ಕರೆದ ಗೋಧ್ರಾ ಶಾಸಕ ಬಿಜೆಪಿಯಿಂದ ಮರು ನಾಮನಿರ್ದೇಶನಗೊಂಡಿದ್ದಾರೆ. ದ್ವೇಷಿಸುವುದು ಮತ್ತು ಕೊಲ್ಲುವುದು, ನಂತರ ಹಬ್ಬ ಆಚರಿಸಿ ಕೊಂದವರಿಗೆ ಬಹುಮಾನ ಕೊಡುವುದು, ಇದೇ ಗುಜರಾತ್​ ಮಾದರಿ" ಎಂದು ಕಿಡಿಕಾರಿದ್ದಾರೆ.

ಬಿಲ್ಕಿಸ್ ಬಾನು ಪ್ರಕರಣದಲ್ಲಿ 11 ಅತ್ಯಾಚಾರಿಗಳ ಬಿಡುಗಡೆಯನ್ನು ಪ್ರಶ್ನಿಸಿ ಮತ್ತು ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದವರಲ್ಲಿ ಮಹುವಾ ಮೊಯಿತ್ರಾ ಕೂಡ ಒಬ್ಬರು. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 29ಕ್ಕೆ ನಿಗದಿಪಡಿಸಲಾಗಿದೆ.

ಬಿಜೆಪಿ ಶಾಸಕ ಚಂದ್ರಸಿನ್ಹ ರೌಲ್ಜಿ ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅತ್ಯಾಚಾರಿಗಳು ಒಳ್ಳೆಯ ಜನರು - ಬ್ರಾಹ್ಮಣರು. ಬ್ರಾಹ್ಮಣರು ಒಳ್ಳೆಯ 'ಸಂಸ್ಕಾರ' ಹೊಂದಿರುತ್ತಾರೆ. ಅವರನ್ನು ಮೂಲೆಗುಂಪು ಮಾಡುವುದು ಮತ್ತು ಶಿಕ್ಷಿಸುವುದು ಯಾರೊಬ್ಬರ ಕೆಟ್ಟ ಉದ್ದೇಶವಾಗಿರಬಹುದು ಎಂದು ಹೇಳಿ ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡಿದ್ದರು. ಚಂದ್ರಸಿನ್ಹ ರೌಲ್ಜಿ ಅವರು ಅಪರಾಧಿಗಳಿಗೆ ವಿನಾಯಿತಿ ನೀಡಿದ ಗುಜರಾತ್ ಸರ್ಕಾರದ ಸಮಿತಿಯ ಭಾಗವಾಗಿದ್ದರು. ಇವರ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕರು ಟೀಕಿಸಿದ್ದರು.

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ

2002ರ ಗೋಧ್ರಾ ಗಲಭೆಯ ನಂತರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಎಂಬವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಈ ವೇಳೆ ಬಿಲ್ಕಿಸ್​ ಬಾನು ಗರ್ಭಿಣಿಯಾಗಿದ್ದರು. ಅಷ್ಟೇ ಅಲ್ಲದೇ ಬಿಲ್ಕಿಸ್ ಬಾನು ಕುಟುಂಬದ 7 ಮಂದಿಯನ್ನು ಕೊಲ್ಲಲಾಗಿತ್ತು. ಸಾವೀಗೀಡಾದವರಲ್ಲಿ ಬಿಲ್ಕಿಸ್ ಬಾನು ಅವರ ಮೂರು ವರ್ಷದ ಮಗಳು ಸಹ ಇದ್ದಾಳೆ.

ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬಿಲ್ಕಿಸ್ ಬಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿದ್ದರು. ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್​ ನೀಡಿತ್ತು. ಪ್ರಕರಣ ಸಂಬಂಧ ಜನವರಿ 21, 2008 ರಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2017 ಮೇ ತಿಂಗಳಲ್ಲಿ ಬಾಂಬೈ ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು 14 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆಗೆ ಒಳಗಾದವರು 14 ವರ್ಷಗಳ ನಂತರ ಕ್ಷಮಾಪಣೆಗಾಗಿ ಅರ್ಜಿ ಸಲ್ಲಿಸಬಹುದು. ನಂತರ ಅರ್ಜಿಯನ್ನು ಪರಿಗಣಿಸುವುದು ಸರ್ಕಾರದ ನಿರ್ಧಾರವಾಗಿದೆ. ಇದರಂತೆ ಅಪರಾಧಿಗಳಲ್ಲಿ ಓರ್ವ ತನ್ನನ್ನು ಶೀಘ್ರ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಗುಜರಾತ್ ಸರ್ಕಾರ ಪಂಚಮಹಲ್ ನ ಜಿಲ್ಲಾಧಿಕಾರಿ ಸುಜಲ್ ಮೇತ್ರಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಈ ಎಲ್ಲ 11 ಆರೋಪಿಗಳಿಗೆ ಕ್ಷಮಾದಾನ ನೀಡಲು ಸರ್ವಾನುಮತದಿಂದ ನಿರ್ಧರಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಹೀಗಾಗಿ ಈ ವರ್ಷ (2022) ಸ್ವಾತಂತ್ರ್ಯ ದಿನದಂದು ಇವರನ್ನು ಬಿಡುಗಡೆಗೊಳಿಸಲಾಗಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ