India-China Border Clash: ಏನ್ಮಾಡೋದು ಮೋದಿ ಸರ್ಕಾರಕ್ಕೆ ಕಿವಿಯೇ ಇಲ್ಲ: ತವಾಂಗ್ ಗಡಿ ಘರ್ಷಣೆ ಬಗ್ಗೆ ಖರ್ಗೆ ಹೇಳಿದ್ದೇನು?
Dec 13, 2022 03:05 PM IST
ಮಲ್ಲಿಕಾರ್ಜುನ ಖರ್ಗೆ
- ಅರುಣಾಚಲ ಪ್ರದೇಶದ ತವಾಂಗ್ ಬಳಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆದ, ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಘಟನೆಯ ಕುರಿತು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ವಿಪಕ್ಷಗಳ ಮಾತು ಕೇಳಲು ಸಿದ್ಧವಿಲ್ಲ ಎಂದು ಕಿಡಿಕಾರಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಬಳಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆದ, ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಘಟನೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಪಕ್ಷಗಳು, ಸಭಾತ್ಯಾಗ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿವೆ.
ಘಟನೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿಗೆ ಹೇಳಿಕೆ ನೀಡಿದ್ದು, ಈ ಘರ್ಷಣೆಯಲ್ಲು ಯಾವುದೇ ಸಾವು-ನೋವು ಅಥವಾ ಭಾರತೀಯ ಸೈನಿಕರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಭಾರತೀಯ ಸೇನೆಯ ಉನ್ನತ ಕಮಾಂಡರ್‌ಗಳು, ಚೀನಾ ಸೇನೆಯ ಉನ್ನತ ಸೈನ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸರ್ಕಾರ ಕೂಡ ರಾಜತಾಂತ್ರಿಕ ಮಾತುಕತೆ ನಡೆಸಲಿದೆ ಎಂದು ರಾಜನಾಥ್ ಸಿಂಗ್ ಸದನಕ್ಕೆ ಭರವಸೆ ನೀಡಿದ್ದಾರೆ.
ಆದರೆ ರಾಜನಾಥ್ ಸಿಂಗ್ ಉತ್ತರದಿಂದ ತೃಪ್ತರಾಗದ ವಿಪಕ್ಷಗಳು ಸಭಾತ್ಯಾಗ ನಡೆಸಿದ್ದು, ಅರುಣಾಚಲ ಪ್ರದೇಶದ ಗಡಿ ಬಿಕ್ಕಟ್ಟಿನ ಕುರಿತು ಕೇಂದ್ರ ಸರ್ಕಾರ ದೇಶಕ್ಕೆ ಸತ್ಯವನ್ನು ತಿಳಿಸಬೇಕು ಎಂದು ಪಟ್ಟು ಹಿಡಿದಿವೆ.
ಸಭಾತ್ಯಾಗದ ಬಳಿಕ ಸಂಸತ್ತಿನ ಆವರಣದಲ್ಲಿ ಮಾತನಾಡಿದ ರಾಜ್ಯಸಭಾ ವಿಪಕ್ಷ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಾ-ಭಾರತ ಸೈನಿಕರ ನಡುವಿನ ಘರ್ಷಣೆ ಬಗ್ಗೆ ಕೇಂದ್ರ ಸರ್ಕಾರ ಸತ್ಯ ಮುಚ್ಚಿಡುತ್ತಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ವಿಪಕ್ಷಗಳು ಎತ್ತಿರುವ ಪ್ರಶ್ನೆಗೆ ಸರ್ಕಾರದಿಂದ ಸ್ಪಷ್ಟ ಉತ್ತರ ಕೊಡಿಸುವುದಾಗಿ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಸಭಾಪತಿ ನಮಗೆ ಭರವಸೆ ನೀಡಿದ್ದರು. ಆದರೆ ಸರ್ಕಾರದಿಂದ ಇದುವರೆಗೂ ತೃಪ್ತಿದಾಯಕ ಉತ್ತರ ದೊರೆತಿಲ್ಲ. ಮೋದಿ ಸರ್ಕಾರ ವಿಪಕ್ಷಗಳ ಮಾತು ಕೇಳುವುದನ್ನೇ ನಿಲ್ಲಿಸಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತವಾಂಗ್ ಘರ್ಷಣೆ ಕುರಿತು ರಕ್ಷಣಾ ಸಚಿವರು ತಮ್ಮ ಲಿಖಿತ ಹೇಳಿಕೆಯನ್ನು ಓದಿ ಹೊರಗೆ ಹೋದರು. ಅವರು ಯಾವುದೇ ಸ್ಪಷ್ಟನೆ ಅಥವಾ ಚರ್ಚೆಗೆ ಸಿದ್ಧರಿರಲಿಲ್ಲ. ಇದು ಪ್ರಜಾಸತ್ತಾತ್ಮಕ ನಡೆಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು. ಇನ್ನು ರಾಜೀವ್ ಗಾಂಧಿ ಫೌಂಡೇಶನ್ ಎಫ್‌ಸಿಆರ್‌ಎ ಪರವಾನಗಿ ರದ್ದತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಭಾತ್ಯಾಗ ನಡೆಸಿದೆ ಎಂಬ ಆರೋಪವನ್ನು ಅಲ್ಲಗಳೆದ ಮಲ್ಲಿಕಾರ್ಜುನ ಖರ್ಗೆ, ನಮ್ಮ ತಪ್ಪಿದ್ದರೆ ಗಲ್ಲಿಗೇರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಮೋದಿ ಸರ್ಕಾರದ ನಡೆಯಿಂದ ಖಂಡಿತ ದೇಶಕ್ಕೆ ಒಳ್ಳೆಯದಾಗುವುದಿಲ್ಲ. ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಏನಾಗುತ್ತಿದೆ ಎಂಬುದನ್ನು ತಿಳಿಯವುದು ದೇಶವಾಸಿಗಳ ಹಕ್ಕು. ನಾವು ಸದನದಲ್ಲಿ ದೇಶವಾಸಿಗಳ ಪರವಾಗಿ ಸರ್ಕಾರವನ್ನು ಈ ಕುರಿತು ಪ್ರಶ್ನೆ ಮಾಡುತ್ತೇವೆ ಎಂದು ಮಲ್ಲಿಖಾರ್ಜುನ ಖರ್ಗೆ ಇದೇ ವೇಳೆ ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ತವಾಂಗ್ ಘರ್ಷಣೆ ಕುರಿತು ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಉತ್ತರ ನೀಡುತ್ತಿದ್ದಂತೇ, ವಿಪಕ್ಷಗಳು ಘೋಷಣೆಗಳನ್ನು ಮೊಳಗಿಸುವ ಮೂಲಕ ಸಭಾತ್ಯಾಗ ನಡೆಸಿದವು.
ಇಂದಿನ ಪ್ರಮುಖ ಸುದ್ದಿ
India-China Border Clash: ಮತ್ತೆ ಹಿಮಾಲಯ ಇಣುಕಿದ ಚೀನಿ ಡ್ರ್ಯಾಗನ್: ಭಾರತೀಯ ಫೈಟರ್ ಜೆಟ್ ಶಬ್ಧಕ್ಕೆ ಬೆಚ್ಚಿದ ಚೀನಿ ಸೈನಿಕರು!
ಅರುಣಾಚಲ ಪ್ರದೇಶದ ತವಾಂಗ್ ಗಡಿ ಬಳಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ ನಡೆದ ಬಳಿಕ, ಗಡಿ ಪ್ರದೇಶಗಳಲ್ಲಿ ಚೀನಿ ವಾಯುಸೇನೆ ತನ್ನ ಚಟುವಟಿಕೆಯನ್ನು ಹೆಚ್ಚಿಸಿದೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ, ಭಾರತೀಯ ವಾಯುಸೇನೆ ಕೂಡ ಗಡಿ ಪ್ರದೇಶದಲ್ಲಿ ತನ್ನ ಗಸ್ತು ಚಟುವಟಿಕೆಯನ್ನು ದ್ಗಿಗುಣಗೊಳಿಸಿದೆ. ಭಾರತೀಯ ಫೈಟರ್ ಜೆಟ್‌ಗಳು ನಿರಂತರ ಗಸ್ತು ತಿರುಗುವ ಮೂಲಕ, ನಿಗಾ ಇರಿಸಿವೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ