Congress VS TMC: ರಾಹುಲ್ ವಿರುದ್ಧದ ಮಮತಾ ಟೀಕೆಗೆ ಕಾಂಗ್ರೆಸ್ ಗರಂ: 'ಡೀಲ್ ದೀದಿ' ಮೋದಿ ಹೇಳಿದಂತೆ ಕೇಳ್ತಾರಂತೆ!
Mar 20, 2023 03:44 PM IST
ಸಂಗ್ರಹ ಚಿತ್ರ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಪ್ರತಿಷ್ಠೆಗೆ ಧಕ್ಕೆ ತರಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಗಂಭೀರ ಆರೋಪ ಮಾಡಿದ್ದಾರೆ. ಮಮತಾ ಅವರು ಇಡಿ-ಸಿಬಿಐ ದಾಳಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ ಎಂದೂ ಚೌಧರಿ ಆರೋಪಿಸಿದ್ದಾರೆ.
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಪ್ರತಿಷ್ಠೆಗೆ ಧಕ್ಕೆ ತರಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಗಂಭೀರ ಆರೋಪ ಮಾಡಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅಧೀರ್ ರಂಜನ್ ಚೌಧರಿ, "ಮಮತಾ ಬ್ಯಾನರ್ಜಿ ಅವರು ಪ್ರಧಾನಿಯವರ ನಿರ್ದೇಶನದ ಮೇರೆಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮತ್ತು 'ದೀದಿ' ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಪ್ರತಿಷ್ಠೆಯನ್ನು ದೂಷಿಸಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆ.." ಎಂದು ಆರೋಪಿಸಿದರು.
"ಮಮತಾ ಅವರು ಇಡಿ-ಸಿಬಿಐ ದಾಳಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿಯೇ ಅವರು ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ.." ಎಂದು ಅಧೀರ್ ರಂಜನ್ ಚೌಧರಿ ಹರಿಹಾಯ್ದರು. ಈ ಒಳ ಒಪ್ಪಂದ ದೇಶಕ್ಕೆ ಮಾರಕವಾಗಿದ್ದು, ಕಾಂಗ್ರೆಸ್ ಈ ದುಷ್ಟ ರಾಜಕಾರಣದ ವಿರುದ್ಧ ಹೋರಾಡಲಿದೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ನಿನ್ನೆ(ಮಾ.೧೯-ಭಾನುವಾರ) ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಟಿಎಂಸಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಬಿಜೆಪಿಯು ರಾಹುಲ್ ಗಾಂಧಿ ಅವರನ್ನು "ಹೀರೋ" ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಗುಡುಗಿದ್ದರು. ದೇಶ ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು, ಬಿಜೆಪಿಯು ರಾಹುಲ್ ಗಾಂಧಿ ಅವರನ್ನು ನಾಯಕನನ್ನಾಗಿ ಬಿಂಬಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದರು.
ಪ್ರಧಾನಿ ಮೋದಿ ಅವರನ್ನು ಯಾರೂ ಪ್ರಶ್ನಿಸದಂತೆ, ರಾಹುಲ್ ಗಾಂಧಿಯನ್ನು ಹೀರೋ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಲಂಡನ್‌ನಲ್ಲಿ ರಾಹುಲ್ ಮಾಡಿರುವ ಭಾಷಣವನ್ನು ಬೇರೆ ಯಾರೂ ಕೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ವಿಚಾರವಾಗಿ ಸಂಸತ್ತಿನ ಕಲಾಪವನ್ನು ಮೊಟಕುಗೊಳಿಸುವ ಮೂಲಕ, ಬಿಜೆಪಿ ರಾಹುಲ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೊಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದರು.
ರಾಹುಲ್ ಗಾಂಧಿ ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣವನ್ನೇ ನೆಪ ಮಾಡಿಕೊಂಡು, ಸಂಸತ್ತಿನ ಕಲಾಪವನ್ನು ಸ್ಥಗಿತಗೊಳಿಸುವ ಮೂಲಕ ಜ್ವಲಂತ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದರು.
ದೇಶದಲ್ಲಿ ಕಾಂಗ್ರೆಸ್ ಮಾತ್ರ ವಿರೋಧ ಪಕ್ಷವಲ್ಲ. ಅದೇ ರೀತಿ ರಾಹುಲ್ ಗಾಂಧಿ ಮಾತ್ರ ವಿಪಕ್ಷ ನಾಯಕರಲ್ಲ. ಹಲವು ವಿರೋಧ ಪಕ್ಷಗಳು ದೇಶದಲ್ಲಿ ಅಸ್ತಿತ್ವದಲ್ಲಿದ್ದು, ಅನೇಕ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಏತನ್ಮಧ್ಯೆ, ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ ಮುನ್ನ, ಮುರ್ಷಿದಾಬಾದ್ ಮತ್ತು ಮಾಲ್ದಾ ಜಿಲ್ಲೆಗಳ ವಿವಿಧ ಭಾಗಗಳಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿಯ 2,000 ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಅಧಿಕರ್ ರಂಜನ್ ಚೌಧರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಮೇ ಮತ್ತು ಜೂನ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಧ್ವಜವನ್ನು ಕೈಯಲ್ಲಿ ಹಿಡಿದು, ಸುಮಾರು 2,000 ಟಿಎಂಸಿ, ಬಿಜೆಪಿ ಕಾರ್ಯಕರ್ತರು ಇಲ್ಲಿನ ಬಹರಂಪುರ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು ಎಂದು ಚೌಧರಿ ಮಾಹಿತಿ ನೀಡಿದರು.
ಇದಕ್ಕೂ ಮೊದಲು, 2018 ರಲ್ಲಿ, ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ, ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಭಾರಿ ಪ್ರಮಾಣದ ಘರ್ಷಣೆಗಳು ನಡೆದಿದ್ದವು. ಇದರ ಪರಿಣಾಮವಾಗಿ ಕನಿಷ್ಠ 12 ಜನರು ಸಾವನ್ನಪ್ಪಿದರು.
ವಿಭಾಗ