Costly Mango: ವಿಶ್ವದಲ್ಲೇ ದುಬಾರಿ ಮಿಯಾಝಕಿ ಮಾವಿನಹಣ್ಣು; ನೇರಳೆಬಣ್ಣದ ಈ ಹಣ್ಣು ಕೆಜಿಗೆ 2.70 ಲಕ್ಷ ಅಂದ್ರೆ ನಂಬಲೇಬೇಕು
May 24, 2023 12:08 PM IST
ವಿಶ್ವದಲ್ಲೇ ದುಬಾರಿ ಮಿಯಾಝಕಿ ಮಾವಿನಹಣ್ಣು
- Miyazaki Mango: ಕೆಂಪು, ಹಳದಿ ಬಣ್ಣದ ಮಾವಿನಹಣ್ಣಗಳನ್ನು ನಾವು ತಿಂದಿರುತ್ತೇವೆ. ಆದರೆ ನೇರಳೆ ಬಣ್ಣದ ಮಾವಿನಹಣ್ಣಿನ ಬಗ್ಗೆ ನಿಮಗೆ ಗೊತ್ತಾ? ವಿಶ್ವದಲ್ಲೇ ಅತ್ಯಂತ ದುಬಾರಿ ಎನ್ನಿಸಿರುವ ಈ ಮಾವಿನಹಣ್ಣಿನ ಹೆಸರು ಮಿಯಾಝಕಿ. ಇದರ ಕೆಜಿಗೆ 2.70 ಲಕ್ಷ. ಈ ಹಣ್ಣಿನ ಕುರಿತು ಇನ್ನಷ್ಟು ಕುತೂಹಲಕಾರಿ ಅಂಶಗಳು ತಿಳಿಯಬೇಕು ಎಂದರೆ ಈ ಸ್ಟೋರಿ ನೋಡಿ
ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಹಣ್ಣುಗಳ ರಾಜ ಮಾವಿನಹಣ್ಣು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇದರ ರಸಭರಿತ ಸ್ವಾದವನ್ನು ಸವಿಯದವರೇ ಇಲ್ಲ ಎನ್ನಬಹುದು. ನಾವೆಲ್ಲರೂ ಹಲವು ಬಗೆಯ, ವಿವಿಧ ರುಚಿಯ ಮಾವಿನಹಣ್ಣುಗಳನ್ನು ಸವಿದಿರುತ್ತೇವೆ. ಮಾವಿನ ಹಣ್ಣಿನ ದರದ ವಿಷಯಕ್ಕೆ ಬಂದಾಗ ಕೆಜಿ 200, 300, 400 ಅಬ್ಬಾಬ್ಬ ಅಂದ್ರೆ 600 ರೂಪಾಯಿ ಮಾವಿನಹಣ್ಣನ್ನು ನಾವು ತಿಂದಿರಬಹುದು. ಅಲ್ಲದೆ ಅದನ್ನೇ ಅತ್ಯಂತ ದುಬಾರಿ ಹಣ್ಣು ಅಂದುಕೊಂಡಿರಬಹುದು. ಆದರೆ ಸತ್ಯ ಅದಲ್ಲ, ಇಲ್ಲಿದೆ ನೋಡಿ ನಿಜವಾದ ಸತ್ಯ.
ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು ಎಂದರೆ ʼಮಿಯಾಝಕಿʼ. ಇದರ ಬೆಲೆ ಕೇಳಿದ್ರೆ ನಿಮಗೆ ತಲೆ ತಿರುಗೋದು ಗ್ಯಾರೆಂಟಿ. ಅದರ ಬೆಲೆ ಕೆಜಿಗೆ 2.70 ಲಕ್ಷ ಅಂದರೆ ನಂಬಲೇಬೇಕು.
ಜಪಾನ್ ಮಿಯಾಝಕಿ ನಗರದಲ್ಲಿ ಈ ಹಣ್ಣು ಬೆಳೆಯುವ ಕಾರಣದಿಂದ ಇದನ್ನು ʼಮಿಯಾಝಕಿ ಮಾವಿನಹಣ್ಣುʼ ಎಂದು ಕರೆಯಲಾಗುತ್ತದೆ. ಈ ಹಣ್ಣಿನ ವಿಶೇಷವೆಂದರೆ ಇದರ ಬಣ್ಣ ನೇರಳೆ. ಸಾಮಾನ್ಯವಾಗಿ ನಾವೆಲ್ಲರೂ ಕೆಂಪು ಅಥವಾ ಹಳದಿ ಬಣ್ಣದ ಮಾವಿನಹಣ್ಣನ್ನು ನೋಡಿರುತ್ತೇವೆ, ಆದರೆ ಮಿಯಾಝಕಿ ನಗರವು ಹಣ್ಣುಗಳ ರಾಜನ ಬಣ್ಣವನ್ನೇ ಬದಲಿಸಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಭಾರತ ಹಣ್ಣುಗಳ ನಾಡು ಎಂದು ಹೆಸರುವಾಸಿಯಾಗಿದೆ. ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಮಾವನ್ನು ಬೆಳೆಯಲಾಗುತ್ತದೆ. ಅಲ್ಲಿ ವರ್ಷಕ್ಕೆ ಶೇ 23.47ರಷ್ಟು ಮಾವಿನಹಣ್ಣನ್ನು ಬೆಳೆಯಲಾಗುತ್ತದೆ. ಆದರೆ ಇದೆಲ್ಲವನ್ನೂ ಮೀರಿ ನೇರಳೆ ಮಾವು ಮಾರುಕಟ್ಟೆಯಲ್ಲಿ ದುಬಾರಿ ಏನಿಸಿಕೊಂಡಿದೆ.
ಮಿಯಾಝಕಿ ಮಾವಿನ ಕುರಿತ ಕುತೂಹಲಕಾರಿ ಅಂಶಗಳು
ಮಿಯಾಝಕಿ ಮಾವನ್ನು ಮೂಲತಃ ಜಪಾನ್‌ನ ಕ್ಯುಶು ಪ್ರಾಂತ್ಯದ ಮಿಯಾಝಕಿ ನಗರದಲ್ಲಿ ಮೊದಲ ಬಾರಿ ಬೆಳೆಯಲಾಗಿತ್ತು. ಆ ಕಾರಣದಿಂದ ಆ ಮಾವಿನಹಣ್ಣಿಗೆ ಈ ಹೆಸರು ಬಂದಿದೆ.
ಸಾಮಾನ್ಯವಾಗಿ ಒಂದು ಮಾವಿನಹಣ್ಣು 350 ಗ್ರಾಂ ತೂಕವನ್ನು ಹೊಂದಿರುತ್ತದೆ ಮತ್ತು ಶೇ 15ರಷ್ಟು ಹೆಚ್ಚು ಸಕ್ಕರೆ ಅಂಶವನ್ನು ಇದು ಹೊಂದಿರುತ್ತದೆ.
ಭಾರತ ಹಾಗೂ ಆಗ್ನೇಯ ಏಷ್ಯಾದಲ್ಲಿ ಜನಪ್ರಿಯವಾಗಿರುವ ಸಾಮಾನ್ಯ ಮಾವಿನ ತಳಿಗಿಂತ ಇದು ಭಿನ್ನ ರುಚಿ, ತೂಕ ಹಾಗೂ ಬಣ್ಣ ಹೊಂದಿರುವ ಕಾರಣ ಜನಪ್ರಿಯವಾಗಿದೆ. ಈ ಮಾವಿನಹಣ್ಣನ್ನು ʼಸೂರ್ಯನ ಮೊಟ್ಟೆʼ (ಜಪಾನ್‌ನಲ್ಲಿ ತೈಯೊ-ನೋ-ತಮಾಗೊ) ಎಂದೂ ಕರೆಯಲಾಗುತ್ತದೆ.
ಜಪಾನ್ ಮಿಯಾಝಕಿ ಸ್ಥಳೀಯ ಉತ್ಪನ್ನಗಳು ಮತ್ತು ವ್ಯಾಪಾರ ಪ್ರಚಾರ ಕೇಂದ್ರದ ಪ್ರಕಾರ ಈ ಮಾವುಗಳನ್ನು ಏಪ್ರಿಲ್ ಹಾಗೂ ಆಗಸ್ಟ್ ತಿಂಗಳ ನಡುವೆ ಹೆಚ್ಚು ಬೆಳೆಯಲಾಗುತ್ತದಂತೆ.
ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಈ ಮಾವು ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿದೆ ಮತ್ತು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 2.70 ಲಕ್ಷಕ್ಕೆ ಮಾರಾಟವಾಗಿದೆ.
ಮಿಯಾಝಕಿ ಮಾವು ಜಪಾನ್ ಟ್ರೇಡ್ ಪ್ರಮೋಷನ್ ಸೆಂಟರ್‌ನ ಪ್ರಕಾರ ಆಗ್ನೇಯ ಏಷ್ಯಾದಲ್ಲಿ ವ್ಯಾಪಕವಾಗಿ ಬೆಳೆಯುವ ಹಳದಿ ʼಪೆಲಿಕನ್ ಮಾವಿಗಿಂತ ಭಿನ್ನವಾಗಿರುವ ಇರ್ವಿನ್ ಮಾವಿನ ವಿಧವಾಗಿದೆ.
ಮಿಯಾಝಕಿಯ ನಂತರ ಓಕಿನಾವಾ ಪ್ರದೇಶದಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ಆರೋಗ್ಯ ಗುಣಗಳು ಹೀಗಿವೆ
ಈ ಮಾವಿನಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಕಣ್ಣಿನ ಆಯಾಸ ಪರಿಹಾರಕ್ಕೂ ನೆರವಾಗುತ್ತದೆ ಎಂದು ಜಪಾನ್ ಟ್ರೇಡ್ ಪ್ರಮೋಷನ್ ಸೆಂಟರ್ ತಿಳಿಸಿದೆ.
70 ಕೊನೆ ಹಾಗೂ 80ರ ದಶಕದ ಆರಂಭದಲ್ಲಿ ಈ ಮಾವಿನಹಣ್ಣನ್ನು ಬೆಳೆಯಲು ಪ್ರಾರಂಭಿಸಲಾಯಿತು ಎಂದು ಜಪಾನ್‌ನ ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಬೆಚ್ಚನೆಯ ವಾತಾವರಣ, ದೀರ್ಘಾವಧಿಯ ಸೂರ್ಯನ ಬೆಳಕು ಹಾಗೂ ಹೇರಳ ಮಳೆಯು ಈ ಮಾವಿನ ಕೃಷಿಗೆ ಅನುಕೂಲ ಒದಗಿಸಿದೆ ಎಂದು ವರದಿಗಳು ತಿಳಿಸಿವೆ.
ಕೊಪ್ಪಳದ ಮಾವು ಮೇಳದಲ್ಲಿ ಮಿಯಾಝಕಿ
ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಮಾವು ಮೇಳದಲ್ಲಿ ಎಲ್ಲರ ಗಮನ ಸೆಳೆದಿತ್ತು ಮಿಯಾಝಕಿ ಮಾವು. ನೂರಾರು ಮಾವುಗಳ ನಡುವೆಯೂ ಮಿಯಾಝಕಿ ನೆನೆದವರ ಕಣ್ಣು ಕಕ್ಕುವಂತಿತ್ತು.
ಕೊಪ್ಪಳದಲ್ಲಿ ತೋಟಗಾರಿಕೆ ಇಲಾಖೆ ಏರ್ಪಡಿಸಿದ್ದ ಮಾವು ಮೇಳದಲ್ಲಿ ಜಿಲ್ಲೆಯ ರೈತರಿಗೆ ಈ ತಳಿಯನ್ನು ಪರಿಚಯಿಸುವ ಸಲುವಾಗಿ ಜಪಾನ್‌ನಿಂದ ಇದನ್ನು ತರಿಸಲಾಗಿತ್ತು.
ಇಲ್ಲಿನ ಮಾವು ಮೇಳದಲ್ಲಿ ಈ ಹಣ್ಣಿನೊಂದಿಗೆ ಎಲ್ಲರೂ ಫೋಟೊ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟಿದ್ದರು.