logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sushil Modi: "ಮಣಿಪುರ ಜೆಡಿಯು ಮುಕ್ತವಾಯಿತು; ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಮೈತ್ರಿಯನ್ನು ಬಿಜೆಪಿ ಶೀಘ್ರದಲ್ಲೇ ಮುರಿಯಲಿದೆ"

Sushil Modi: "ಮಣಿಪುರ ಜೆಡಿಯು ಮುಕ್ತವಾಯಿತು; ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಮೈತ್ರಿಯನ್ನು ಬಿಜೆಪಿ ಶೀಘ್ರದಲ್ಲೇ ಮುರಿಯಲಿದೆ"

Meghana B HT Kannada

Oct 06, 2022 02:37 PM IST

google News

ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್​​ ಮೋದಿ

    • ಮಣಿಪುರದ ಐವರು ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್​​ ಮೋದಿ, ಮಣಿಪುರವು 'ಜೆಡಿಯು ಮುಕ್ತ'ವಾಯಿತು ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್​​ ಮೋದಿ
ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್​​ ಮೋದಿ

ಪಾಟ್ನಾ (ಬಿಹಾರ) : ಮಣಿಪುರದ ಐವರು ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್​​ ಮೋದಿ, ಮಣಿಪುರವು 'ಜೆಡಿಯು ಮುಕ್ತ'ವಾಯಿತು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಬಿಹಾರದಲ್ಲಿ ಜೆಡಿಯು, ಆರ್​ಜೆಡಿ ಮತ್ತು ಕಾಂಗ್ರೆಸ್​ನ ಮಹಾಘಟಬಂಧನ್​ ಮೈತ್ರಿಯನ್ನು ಬಿಜೆಪಿ ಶೀಘ್ರದಲ್ಲೇ ಮುರಿಯಲಿದೆ. ಬಿಹಾರವನ್ನೂ ಜೆಡಿಯು ಮುಕ್ತಗೊಳಿಸಲಿದ್ದೇವೆ. ಹೋರ್ಡಿಂಗ್‌ಗಳು ಮತ್ತು ಪೋಸ್ಟರ್‌ಗಳನ್ನು ಅಳವಡಿಸಿ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಸುಶೀಲ್​ ಮೋದಿ ಹೇಳಿದರು.

ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ರಾಜೀನಾಮೆ ಕುರಿತು ಈ ಹಿಂದೆ ಮಾತನಾಡಿದ್ದ ಸುಶೀಲ್​ ಮೋದಿ "ಕಾಂಗ್ರೆಸ್‌ ಮುಳುಗುವ ಹಡಗು, ಅದರೊಂದಿಗೆ (ಕಾಂಗ್ರೆಸ್​ನೊಂದಿಗೆ) ಮೈತ್ರಿ ಮಾಡಿಕೊಂಡ ನಂತರ ಆ ಹಡಗಿನಲ್ಲಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕೂಡ ಮುಳುಗುತ್ತಾರೆ" ಎಂದು ಹೇಳಿಕೆ ನೀಡಿದ್ದರು.

ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ ಜೊತೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಹೊಸ ಸರ್ಕಾರ ರಚಿಸಿದ್ದ ಮುಖ್ಯಮಂತ್ರಿ ನಿತೀಶ್​ ಕುಮಾರ್​​ಗೆ ಈಶಾನ್ಯದಲ್ಲಿ ಇಂದು ( ಸೆ.3) ದೊಡ್ಡ ಆಘಾತವಾಗಿದೆ. ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಯುನೈಟೆಡ್ (ಜೆಡಿಯು) ಪಕ್ಷದ ಮಣಿಪುರದ ಐವರು ಶಾಸಕರು ಆಡಳಿತಾರೂಢ ಬಿಜೆಪಿ ಜೊತೆ ವಿಲೀನರಾಗಿದ್ದಾರೆ.

ಈ ಹಿಂದೆ 2020ರಲ್ಲಿ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ 7 ಜೆಡಿಯು ಶಾಸಕರ ಪೈಕಿ 6 ಮಂದಿ ಬಿಜೆಪಿಗೆ ಸೇರಿದ್ದರು. ಇದು ನಿತೀಶ್ ಕುಮಾರ್ ಅವರ ಪಕ್ಷಕ್ಕೆ ದುಃಸ್ವಪ್ನವಾಗಿತ್ತು. 25 ಆಗಸ್ಟ್ 2022 ರಂದು, ಅರುಣಾಚಲ ಪ್ರದೇಶದ ಏಕೈಕ ಜೆಡಿಯು ಶಾಸಕ ಕೂಡ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅರುಣಾಚಲ ಸಿಎಂ ಪೆಮಾ ಖಂಡು ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದರು. ಇದೀಗ ಮಣಿಪುರದಲ್ಲಿದ್ದ ಏಳು ಮಂದಿ ಜೆಡಿಯು ಶಾಸಕರ ಪೈಕಿ ಐವರು ಬಿಜೆಪಿಗೆ ಸೇರ್ಪಡೆಯಾಗಿರುವುದು ನಿತೀಶ್​​ ಕುಮಾರ್​ಗೆ ದೊಡ್ಡ ಶಾಕ್​ ಆಗಿದೆ.

ಐವರು ಜೆಡಿಯು ಶಾಸಕರು ಆಡಳಿತ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ ಎಂದು ಮಣಿಪುರ ವಿಧಾನಸಭೆಯ ಸಚಿವಾಲಯದ ಹೇಳಿಕೆ ತಿಳಿಸಿದೆ. ಮಣಿಪುರ ವಿಧಾನಸಭೆಯ ಸೆಕ್ರೆಟರಿಯೇಟ್ ಹೊರಡಿಸಿದ ಹೇಳಿಕೆಯಲ್ಲಿ, "ಸಂವಿಧಾನದ ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಬಿಜೆಪಿಯೊಂದಿಗೆ ಐವರು ಜೆಡಿಯು ಶಾಸಕರ ವಿಲೀನವನ್ನು ಒಪ್ಪಿಕೊಳ್ಳಲು ಮಣಿಪುರ ವಿಧಾನಸಭೆಯ ಸ್ಪೀಕರ್ ಸಂತೋಷಪಡುತ್ತಾರೆ" ಎಂದು ಉಲ್ಲೇಖಿಸಲಾಗಿದೆ.

ಜೋಯ್ಕಿಶನ್ ಸಿಂಗ್, ಎನ್​​ ಸನೇತ್​​, ಎಂ.ಡಿ. ಅಚಾಬ್ ಉದ್ದೀನ್, ತಂಗ್ಜಮ್ ಅರುಣ್​ ಕುಮಾರ್ ಮತ್ತು ಎಲ್.ಎಂ. ಖೌಟೆ - ಬಿಜೆಪಿ ಸೇರಿದ ಐವರು ಜೆಡಿಯು ಶಾಸಕರು. ಮಣಿಪುರಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 60 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ 32 ಸ್ಥಾನಗಳ ಬಹುಮತ ಗಳಿಸಿತ್ತು.

ಈ ಐವರು ಶಾಸಕರ ಸೇರ್ಪಡೆಯೊಂದಿಗೆ ಮಣಿಪುರ ವಿಧಾನಸಭೆಯ 60 ಸೀಟ್​ಗಳ ಪೈಕಿ ಬಿಜೆಪಿ 49 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಶಾಸಕರು ಮಾತ್ರವಲ್ಲದೇ ಜೆಡಿಯುನ 9 ಕಾರ್ಪೊರೇಟರ್‌ಗಳಲ್ಲಿ 8 ಮಂದಿ ಬಿಜೆಪಿ ಸೇರಿದ್ದಾರೆ. ಹೀಗಾಗಿ ಇದೀಗ ಒಟ್ಟು ಬಿಜೆಪಿ ಕಾರ್ಪೊರೇಟರ್‌ಗಳ ಸಂಖ್ಯೆ 20 ರಲ್ಲಿ 18 ಆಗಿದೆ.

ಇದಲ್ಲದೆ, ಜೆಡಿಯುನ 18 ಜಿಲ್ಲಾ ಪರಿಷತ್ ಸದಸ್ಯರ ಪೈಕಿ 17 ಮಂದಿ ಬಿಜೆಪಿ ಸೇರಿದ್ದಾರೆ. ಈಗ 241 ಸದಸ್ಯರ ಪೈಕಿ ಬಿಜೆಪಿ 206 ಜಿಲ್ಲಾ ಪರಿಷತ್ ಸದಸ್ಯರನ್ನು ಹೊಂದಿದೆ. ಜತೆಗೆ ಜೆಡಿಯುನ 119 ಗ್ರಾಮ ಪಂಚಾಯಿತಿ ಸದಸ್ಯರ (ಜಿಪಿಎಂ) ಪೈಕಿ 100ಕ್ಕೂ ಹೆಚ್ಚು ಮಂದಿ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಬಿಜೆಪಿ ಈಗ 8332 ರಲ್ಲಿ 6530 ಸದಸ್ಯರನ್ನು ಹೊಂದಿದೆ. ಬಿಹಾರದಲ್ಲಿ ಇತ್ತೀಚಿನ ಬೆಳವಣಿಗೆಯ ನಂತರ ಡಿಯುಗೆ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಬಿಹಾರದಲ್ಲಿ 2020 ರಲ್ಲಿ ಬಿಜೆಪಿ ಮತ್ತು ಜೆಡಿ-ಯು ಒಟ್ಟಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಆದರೆ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ಆಗಸ್ಟ್ 9 ರಂದು ನಿತೀಶ್​ ಕುಮಾರ್​ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆರ್​ಜೆಡಿ ಜೊತೆ ಕೈ ಜೋಡಿಸುವ ಮೂಲಕ ಬಿಹಾರದ ರಾಜಕೀಯ ಹೈಡ್ರಾಮಾಕ್ಕೆ ತೆರೆ ಎಳೆದಿದ್ದರು. ಆಗಸ್ಟ್ 10 ರಂದು 8ನೇ ಬಾರಿ ಮುಖ್ಯಮಂತ್ರಿಯಾಗಿ ನಿತೀಶ್​ ಕುಮಾರ್​ ಪ್ರಮಾಣ ವಚನ ಸ್ವೀಕರಿಸಿದ್ದರು. ಅದೇ ದಿನ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ