Nandini vs Milma: ನಂದಿನಿ ವರ್ಸಸ್ ಮಿಲ್ಮಾ; ಕರ್ನಾಟಕದ ಹಾಲು ಕಳಪೆ ಗುಣಮಟ್ಟದ್ದು ಎಂದ ಕೇರಳ ಸಚಿವೆ ಚಿಂಚು ರಾಣಿ, ಏನಿದು ವಿವಾದ?
Jun 16, 2023 03:51 PM IST
ನಂದಿನಿ - ಮಿಲ್ಮಾ ಹಾಲು
- Nandini in Kerala: ಕೆಎಂಎಫ್ನ ನಂದಿನಿ ಬ್ರ್ಯಾಂಡ್ ಈ ವರ್ಷ ಕೊಚ್ಚಿಯ ಮಾಮಲ್ಲಪುರಂನಲ್ಲಿ ತನ್ನ ಪಾರ್ಲರ್ಗಳನ್ನು ತೆರೆದಿದೆ ಮತ್ತು ಮುಂದಿನ ದಿನಗಳಲ್ಲಿ ಇತರ ಪ್ರದೇಶಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ ಇದನ್ನು ಅನೈತಿಕ ಎಂದು ಕರೆದಿದೆ.
ಕೇರಳ: ಎರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ನಂದಿನಿ ವರ್ಸಸ್ ಅಮುಲ್ (Nandini vs Amul) ವಿವಾದ ಭುಗಿಲೆದ್ದಿತ್ತು. ಕರ್ನಾಟಕಕ್ಕೆ ಗುಜರಾತ್ನ ಅಮುಲ್ ಡೈರಿ ಬ್ರ್ಯಾಂಡ್ನ ಉತ್ಪನ್ನಗಳು ಲಗ್ಗೆ ಇಡುತ್ತಿರುವುದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಕೇರಳದಲ್ಲಿ ನಂದಿನಿ ಪ್ರವೇಶಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಕರ್ನಾಟಕದ ನಂದಿನಿ ಮತ್ತು ಕೇರಳದ ಮಿಲ್ಮಾ ವಿವಾದ (Nandini vs Milma) ಮತ್ತೆ ಮುನ್ನೆಲೆಗೆ ಬಂದಿದೆ. ಏನಿದು ವಿಚಾರ ಅಂತೀರಾ? ಈ ಸುದ್ದಿ ಓದಿ..
ಕರ್ನಾಟಕದ ಹಾಲು ಸಹಕಾರಿ ಸಂಸ್ಥೆಯಾದ ಕೆಎಂಎಫ್ನ (KMF- Karnataka Milk Federation) ನಂದಿನಿ ಬ್ರ್ಯಾಂಡ್ ಈ ವರ್ಷ ಕೊಚ್ಚಿಯ ಮಾಮಲ್ಲಪುರಂನಲ್ಲಿ ತನ್ನ ಪಾರ್ಲರ್ಗಳನ್ನು ತೆರೆದಿದೆ ಮತ್ತು ಮುಂದಿನ ದಿನಗಳಲ್ಲಿ ಇತರ ಪ್ರದೇಶಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (KCMMF- Kerala Co-operative Milk Marketing Federation) ಇದನ್ನು ಅನೈತಿಕ ಎಂದು ಕರೆದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳದ ಪಶುಸಂಗೋಪನಾ ಸಚಿವೆ ಜೆ ಚಿಂಚು ರಾಣಿ, ಕೇರಳ ಪ್ರವೇಶಿಸುವ ಮುನ್ನ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು. ಈ ಬಗ್ಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ದೂರು ನೀಡುತ್ತೇವೆ. ನಮ್ಮ ಮನೆಗಳಲ್ಲಿ ಹೆಚ್ಚಾಗಿ ಮಕ್ಕಳು ಹಾಲು ಸೇವಿಸುತ್ತಾರೆ, ಆದರೆ ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ. ಹೀಗಾಗಿ ಕೇರಳದ ಜನರು ಕೆಸಿಎಂಎಂಎಫ್ನ ಮಿಲ್ಮಾ (Milma) ಹಾಲನ್ನು ಮಾತ್ರ ಸೇವಿಸುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಕೆಸಿಎಂಎಂಎಫ್ ಕೇರಳದಲ್ಲಿ ನಂದಿನಿಯ ಉಪಸ್ಥಿತಿಯನ್ನು ವಿರೋಧಿಸಿತ್ತು ಮತ್ತು ಅದನ್ನು 'ಅನೈತಿಕ' ಎಂದು ಕರೆದಿತ್ತು.ಈ ಬಗ್ಗೆ ಮಾತನಾಡಿದ ಮಿಲ್ಮಾ ಬ್ರ್ಯಾಂಡ್ನ ಅಧ್ಯಕ್ಷ ಕೆ.ಎಸ್.ಮಣಿ, ನಂದಿನಿಯು ಕೇರಳಕ್ಕೆ ತನ್ನ ಮಾರಾಟವನ್ನು ವಿಸ್ತರಿಸುವ ಕ್ರಮವು ಅನೈತಿಕವಾಗಿದೆ ಮತ್ತು ಭಾರತದ ಡೈರಿ ಸಹಕಾರ ಚಳವಳಿಯ ಉದ್ದೇಶವನ್ನು ನಾಶಪಡಿಸುತ್ತದೆ. ಮೊದಲು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದ ಅವರು ಈಗ ಹಾಲು ಕೂಡ ಮಾರಾಟ ಮಾಡುತ್ತಿದ್ದಾರೆ. ಅವರು ಕೇರಳದಲ್ಲಿ ಹಾಲನ್ನು ಅಂಗಡಿಯಿಂದ ಅಂಗಡಿಗೆ ವಿತರಿಸಲು ಪ್ರಾರಂಭಿಸಿದರು. ಈ ಬಗ್ಗೆ ನಾವು ಕೆಎಂಎಫ್ಗೆ ಪತ್ರ ಬರೆದಿದ್ದೇವೆ , ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.
ಇತ್ತ ಕೆಸಿಎಂಎಂಎಫ್ನ ಆಕ್ಷೇಪಗಳಿಗೆ ಕರ್ನಾಟಕದ ಸಹಕಾರ ಸಚಿವ ಕ್ಯಾತಸಂದ್ರ ರಾಜಣ್ಣ ಪ್ರತಿಕ್ರಿಯಿಸಿದ್ದು, ಕೇರಳದಲ್ಲಿ ನಂದಿನಿಯ ವ್ಯವಹಾರದಲ್ಲಿ ಅನೈತಿಕ ಏನೂ ಇಲ್ಲ ಎಂದು ಹೇಳಿದ್ದಾರೆ. ಎನ್ಡಿಟಿವಿಯೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಬೇಕಾದರೂ ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಲ್ಲಿ ಅನೈತಿಕವಾದುದೇನೂ ಇಲ್ಲ. ಇದೊಂದು ಸ್ಪರ್ಧೆ ಗ್ರಾಹಕರು ಉತ್ತಮ ಗುಣಮಟ್ಟವನ್ನು ನೀಡುವ ಉತ್ಪನ್ನವನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.
ಕರ್ನಾಟಕದ ನಂದಿನಿ - ಅಮುಲ್ ವಿವಾದ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅಮುಲ್ ವಿವಾದ ಸೃಷ್ಟಿಸಿತ್ತು. ಕರ್ನಾಟಕದ ಹಾಲು ಸಹಕಾರಿ ಸಂಸ್ಥೆಯಾದ ಕೆಎಂಎಫ್ನ ನಂದಿನಿ ಬ್ರ್ಯಾಂಡ್ಗೆ ಸಡ್ಡು ಹೊಡೆಯಲು ಬೆಂಗಳೂರಿನ ಮಾರುಕಟ್ಟೆಗೆ ಗುಜರಾತ್ನ ಅಮುಲ್ ಡೈರಿ ಬ್ರ್ಯಾಂಡ್ನ ಉತ್ಪನ್ನ ಲಗ್ಗೆ ಇಡುತ್ತಿರುವುದಕ್ಕೆ ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಲಕ್ಷಾಂತರ ರೈತರು ನಂದಿನಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ನಂದಿನಿ ಉಳಿಸಿ (#SaveNandini) ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಕನ್ನಡಿಗರು ಟ್ವೀಟ್ ಮಾಡುತ್ತಾ "ನಂದಿನಿ ಉಳಿಸಿ - ಅಮುಲ್ ಓಡಿಸಿ" ಎಂದು ಅಭಿಯಾನ ನಡೆಸಿದ್ದರು. ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ.