Uddhav Thackeray: ಭಾಳ್ ಠಾಕ್ರೆ ಅವರು ಮೋದಿ ಅವರನ್ನು ರಕ್ಷಿಸಿದ್ದು ಮರೆತು ಹೋಯಿತೆ?: 2002ರ ನೆನಪಿನ ಅಂಗಳಕ್ಕೆ ಜಾರಿದ ಉದ್ಧವ್
Feb 13, 2023 09:08 AM IST
ಉದ್ಧವ್ ಠಾಕ್ರೆ
- ಗುಜರಾತ್ ಗಲಭೆಯ ಬಳಿಕ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು, ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜಧಾರ್ಮ ಪಾಲನೆ ಮಾಡುವಂತೆ ಸೂಚನೆ ನೀಡಿದ್ದರು. ಆಗ ಮೋದಿ ಅವರ ರಕ್ಷಣೆಗೆ ಮುಂದೆ ಬಂದ ಭಾಳ್ ಸಾಹೇಬ್ ಠಾಕ್ರೆ, ಮೋದಿ ಅವರೊಂದಿಗೆ ಗಟ್ಟಿಯಾಗಿ ನಿಂತರು. ಇದೆಲ್ಲಾ ಪ್ರಧಾನಿ ಮೋದಿ ಅವರಿಗೆ ಮರೆತು ಹೋಗಿದೆ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.
ಮುಂಬೈ: ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧದ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಉದ್ಧವ್ ಠಾಕ್ರೆ, 2002ರ ಗುಜರಾತ್ ಗಲಭೆಯ ಬಳಿಕ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು, ಶಿವಸೇನೆ ಸಂಸ್ಥಾಪಕ ಭಾಳ್ ಸಾಹೇಬ್ ಠಾಕ್ರೆ ರಕ್ಷಿಸಿದ್ದರು ಎಂದು ಹೇಳಿದ್ದಾರೆ.
ಗುಜರಾತ್ ಗಲಭೆಯ ಬಳಿಕ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು, ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜಧಾರ್ಮ ಪಾಲನೆ ಮಾಡುವಂತೆ ಸೂಚನೆ ನೀಡಿದ್ದರು. ಆಗ ಮೋದಿ ಅವರ ರಕ್ಷಣೆಗೆ ಮುಂದೆ ಬಂದ ಭಾಳ್ ಸಾಹೇಬ್ ಠಾಕ್ರೆ, ಮೋದಿ ಅವರೊಂದಿಗೆ ಗಟ್ಟಿಯಾಗಿ ನಿಂತರು. ಇದೆಲ್ಲಾ ಪ್ರಧಾನಿ ಮೋದಿ ಅವರಿಗೆ ಮರೆತು ಹೋಗಿದೆ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದರು.
ಅಂದು ಭಾಳ್ ಠಾಕ್ರೆ ಅವರು ಮೋದಿ ಅವರನ್ನು ರಕ್ಷಣೆ ಮಾಡದೇ ಹೋಗಿದ್ದರೆ, ಅವರು ಇಲ್ಲಿಯವರೆಗೆ ರಾಜಕೀಯ ಪಯಣ ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಶಿವಸೇನೆಯು 25-30 ವರ್ಷಗಳ ಕಾಲ ಬಿಜೆಪಿಯ ರಾಜಕೀಯ ನಾಯಕತ್ವವನ್ನು ರಕ್ಷಿಸಿದೆ ಎಂದು ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಬಿಜೆಪಿಉಗೆ ಈಗ ಶಿವಸೇನೆಯಾಗಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಹಿಂದಿನ ಸದಸ್ಯರಾದ ಅಕಾಲಿ ದಳವಾಗಲಿ ಬೇಕಾಗಿಲ್ಲ. ಅವರಿಗೆ ಈಗ ಏನಿದ್ದರೂ ತಮ್ಮೊಂದಿಗೆ ಅಧಿಕಾರ ಹಂಚಿಕೊಳ್ಳುವ ಮತ್ತು ಅವರ ಅಡಿಯಾಳಾಗಿ ಇರುವ ರಾಜಕೀಯ ಪಕ್ಷಗಳು ಬೇಕು ಎಂದು ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದರು.
"ನಾನು ಬಿಜೆಪಿಯೊಂದಿಗೆ ಹೊರಗುಳಿದಿದ್ದೇನೆ ಆದರೆ ನಾನು ಎಂದಿಗೂ ಹಿಂದುತ್ವವನ್ನು ತ್ಯಜಿಸಿಲ್ಲ. ಬಿಜೆಪಿ ಹಿಂದುತ್ವವಲ್ಲ. ಉತ್ತರ ಭಾರತೀಯರು ಹಿಂದುತ್ವ ಎಂದರೇನು ಎಂಬುದಕ್ಕೆ ಉತ್ತರವನ್ನು ಬಯಸುತ್ತಾರೆ. ಪರಸ್ಪರ ದ್ವೇಷಿಸುವುದು ಹಿಂದುತ್ವವಲ್ಲ" ಎಂದು ಅವರು ಮುಂಬೈನಲ್ಲಿ ಉತ್ತರ ಭಾರತೀಯರ ಸಭೆಯಲ್ಲಿ ಹೇಳಿದರು.
ಬಿಜೆಪಿ ಹಿಂದೂಗಳ ನಡುವೆ ಬಿರುಕು ಮೂಡಿಸುತ್ತಿದೆ ಎಂದು ಆರೋಪಿಸಿದ ಉದ್ಧವ್ ಠಾಕ್ರೆ, ಹಿಂದುತ್ವವನ್ನು ತನ್ನ ರಾಜಕೀಯ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಗೆ ಈ ದೇಶದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಶಿವಸೇನೆ ಸಂಸ್ಥಾಪಕ ಭಾಳ್ ಸಾಹೇಬ್ ಎಂದಿಗೂ ದ್ವೇಷವನ್ನು ಪೋಷಿಸಲಿಲ್ಲ. "ಹಿಂದೂ ಆಗಿರುವುದು ಎಂದರೆ ಮರಾಠಿಗರು ಉತ್ತರ ಭಾರತೀಯರನ್ನು ದ್ವೇಷಿಸುವುದು ಎಂದರ್ಥವಲ್ಲ.." ಎಂದು ಅವರು ಹೇಳುತ್ತಿದ್ದರು ಎಂದು ಉದ್ಧವ್ ಠಾಕ್ರೆ ನುಡಿದರು.
2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಮಹಾ ವಿಕಾಸ್ ಅಘಾಡಿ (ಎಂವಿಎ) ರಚಿಸಲು ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ, ಶಿವಸೇನೆಯ ಘನತೆಯನ್ನು ಕಾಪಾಡಲು ನಾನು ಪ್ರಯತ್ನಿಸಿದ್ದೇನೆ. ಒಂದು ವೇಳೆ ನಾನು ಬಿಜೆಪಿಯ ಜೊತೆಗೆ ಇದ್ದಿದ್ದರೆ, ನಮ್ಮದೇ ಪಕ್ಷದ ಕೆಲವರು ಇಂದು ತೋರುತ್ತಿರುವ ಗುಲಾಮಗಿರಿಯನ್ನು ನಾನೂ ತೋರಬೇಕಾಗುತ್ತಿತ್ತು ಎಂದು ಉದ್ಧವ್ ಠಾಕ್ರೆ ಮಾರ್ಮಿಕವಾಗಿ ಹೇಳಿದ್ದಾರೆ.
ನಾನು ಮುಸ್ಲಿಮರನ್ನು ಭೇಟಿಯಾದರೆ ನಾನು ಹಿಂದುತ್ವವನ್ನು ತ್ಯಜಿಸಿರುವುದಾಗಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ಬಣ ಆರೋಪಿಸುತ್ತದೆ. ಆದರೆ ಅದೇ ಪ್ರಧಾನಿ ಮೋದಿ ಅವರು ಮುಂಬೈನಲ್ಲಿ ಬೋಹ್ರಾ ಮುಸ್ಲಿಂ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಯಾರೂ ಪ್ರಶ್ನೆ ಮಾಡುವುದಿಲ್ಲ. ಖುದ್ದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಧಾನಿ ಮೋದಿ ಜೊತೆಗೆ ಅರೇಬಿಕ್ ಅಕಾಡೆಮಿಗೆ ಹೋಗಿರಲಿಲ್ಲವೇ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದರು.
ಮುಂಬೈಗೆ ತಮ್ಮ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ, ಬೋಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಲ್ಜಮಿಯಾ-ತುಸ್-ಸೈಫಿಯಾ ಅರೇಬಿಕ್ ಅಕಾಡೆಮಿಯ ಹೊಸ ಮರೋಲ್ ಕ್ಯಾಂಪಸ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ವಿಭಾಗ