logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ganesha Festival; ಗಣೇಶ ಹಬ್ಬ ಅಲ್ವಾ, ಖಚಿತವಾಗಿ ಮುಂಬಯಿನ ಈ 5 ಗಣಪತಿ ಪಂಡಾಲ್‌ಗೊಮ್ಮೆ ಭೇಟಿ ನೀಡಿ

Ganesha Festival; ಗಣೇಶ ಹಬ್ಬ ಅಲ್ವಾ, ಖಚಿತವಾಗಿ ಮುಂಬಯಿನ ಈ 5 ಗಣಪತಿ ಪಂಡಾಲ್‌ಗೊಮ್ಮೆ ಭೇಟಿ ನೀಡಿ

Umesh Kumar S HT Kannada

Aug 29, 2024 03:10 PM IST

google News

ಮುಂಬಯಿಯ ಜಿಎಸ್‌ಬಿ ಸೇವಾ ಮಂಡಲದ ಗಣಪತಿ (ಎಡ ಚಿತ್ರ), ಲಾಲ್‌ಭಾಗ್ಚ ಗಣಪತಿ (ಬಲ ಚಿತ್ರ). ಎರಡೂ ಕಡತ ಚಿತ್ರಗಳು.

  • Ganesha Festival; ಗಣೇಶ ಚತುರ್ಥಿ ಹತ್ತಿರದಲ್ಲೇ ಇದೆ. ನೀವೇನಾದರೂ ಮುಂಬಯಿನಲ್ಲಿದ್ರೆ ಅದರ ಖುಷಿಯೇ ಬೇರೆ. ಯಾಕೆ ಅಂತೀರಾ, ಗಣೇಶನ ಹಬ್ಬ ಅಲ್ವಾ, ಖಚಿತವಾಗಿ ಮುಂಬಯಿನ ಈ 5 ಗಣಪತಿ ಪಂಡಾಲ್‌ಗೊಮ್ಮೆ ಭೇಟಿ ನೀಡಿ, ಆ ಸಂಭ್ರಮ ಸಡಗರದಲ್ಲಿ ಪಾಲ್ಗೊಳ್ಳುವ ಮೊದಲು ಅಲ್ಲಿನ ವಿವರವನ್ನೂ ತಿಳ್ಕೊಳ್ಳಿ. ಅದು ಇಲ್ಲಿದೆ.

ಮುಂಬಯಿಯ ಜಿಎಸ್‌ಬಿ ಸೇವಾ ಮಂಡಲದ ಗಣಪತಿ (ಎಡ ಚಿತ್ರ), ಲಾಲ್‌ಭಾಗ್ಚ ಗಣಪತಿ (ಬಲ ಚಿತ್ರ). ಎರಡೂ ಕಡತ ಚಿತ್ರಗಳು.
ಮುಂಬಯಿಯ ಜಿಎಸ್‌ಬಿ ಸೇವಾ ಮಂಡಲದ ಗಣಪತಿ (ಎಡ ಚಿತ್ರ), ಲಾಲ್‌ಭಾಗ್ಚ ಗಣಪತಿ (ಬಲ ಚಿತ್ರ). ಎರಡೂ ಕಡತ ಚಿತ್ರಗಳು.

ಮುಂಬಯಿ: ಗಣೇಶ ಹಬ್ಬಕ್ಕೆ ಇನ್ನು ಬೆರಳೆಣಿಕೆ ದಿನಗಳಷ್ಟೆ ಬಾಕಿ. ಗಣೇಶ ಚತುರ್ಥಿ ಎಂಬುದು ಭಾರತದ ಹಿಂದೂಗಳು ಹೆಚ್ಚು ಸಂಭ್ರಮ, ಸಡಗರಗಳೊಂದಿಗೆ ಆಚರಿಸುವ ಪ್ರಮುಖ ಹಬ್ಬ. ಭಾರತದಲ್ಲಿ ಈ ವರ್ಷ ಗಣೇಶ ಚತುರ್ಥಿ ಸೆಪ್ಟೆಂಬರ್ 7 ರಂದು ನಡೆಯಲಿದ್ದು, ಆಚರಣೆ ಸೆಪ್ಟೆಂಬರ್ 16ರ ತನಕ ನಡೆಯಲಿದೆ.ಯಾವುದೇ ಕಾರ್ಯಕ್ಕೂ ಮೊದಲು ವಿಘ್ನರಾಜನನ್ನು ಅಂದರೆ ಗಣಪತಿಯನ್ನು ಪೂಜಿಸುವುದು ವಾಡಿಕೆ.

ಇನ್ನು ಗಣೇಶನ ಜನ್ಮದಿನದ ಹಬ್ಬಕ್ಕೆ ಸಂಭ್ರಮ, ಸಡಗರವಿಲ್ಲದಿರುವುದೇ, ಖಂಡಿತವಾಗಿಯೂ ಇದ್ದೇ ಇದೆ. ಅಂದ ಹಾಗೆ, ಮುಂಬಯಿಯಲ್ಲಿ ಗಣೇಶೋತ್ಸವ ಬಹಳ ಅದ್ದೂರಿ. ಗಣೇಶ ಹಬ್ಬ ಎಂದರೆ ಸಾಮಾನ್ಯವಾಗಿ 10 ದಿನಗಳ ಹಬ್ಬ. ಮನೆಗಳಲ್ಲಿ ಮತ್ತು ಸಾರ್ವಜನಿಕ ಪಂಡಾಲ್‌ಗಳಲ್ಲಿ ಮಣ್ಣಿನಿಂದ ತಯಾರಿಸಿದ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ, ಪೂಜಿಸಿ ಬಳಿಕ ಜಲಮೂಲದಲ್ಲಿ ನಿಮಜ್ಜನ (ವಿಸರ್ಜನ) ಮಾಡುವುದು ಪಾರಂಪರಿಕವಾಗಿ ನಡೆದು ಬಂದ ರೂಢಿ.

ಮುಂಬಯಿ ಮಹಾನಗರದಲ್ಲಿ ನೂರಾರು ಪಂಡಾಲ್‌ಗಳಲ್ಲಿ ಗಣಪತಿಯನ್ನು ಕೂರಿಸಿ ಪೂಜಿಸುವ ಸಂಪ್ರದಾಯ ದಶಕಗಳದ್ದು. ಮುಂಬೈನ ಗಣಪತಿ ಪಂಡಾಲ್‌ಗಳು ಕೇವಲ ತಾತ್ಕಾಲಿಕ ರಚನೆಗಳಲ್ಲ. ಅವುಗಳಿಗೆ ದಶಕಗಳ ಇತಿಹಾಸವಿದೆ. ಒಂದೊಂದು ಪಂಡಾಲ್‌ಗೂ ಅದರದ್ದೇ ಆದ ಕಥೆಗಳಿವೆ. ಹಾಗಾಗಿ, ಈ ಬಾರಿ ನೀವೇನಾದರೂ ಮುಂಬಯಿ ಪ್ರವಾಸ ಮಾಡುವುದಾದರೆ, ಅಲ್ಲಿ ನೀವು ಭೇಟಿ ನೀಡಬಹುದಾದ 8 ಪುರಾತನ ಪ್ರಸಿದ್ಧ ಪಂಡಾಲ್‌ಗಳ ವಿವರ ಇಲ್ಲಿದೆ.

ಮುಂಬಯಿ ಲಾಲ್‌ಬಾಗ್‌ನ ಗಣಪತಿ - ಲಾಲ್‌ಬಾಗ್ಚ ರಾಜಾ

ಮುಂಬಯಿ ಲಾಲ್‌ಬಾಗ್‌ನ ಗಣಪತಿ - ಲಾಲ್‌ಬಾಗ್ಚ ರಾಜಾ (ಕಡತ ಚಿತ್ರ)

ಮುಂಬಯಿಯ ಗಣಪತಿ ಪಂಡಾಲ್‌ಗಳ ವಿವರ ನೀಡುತ್ತ ಹೋಗುವಾಗ ಲಾಲ್‌ಬಾಗ್ಚ ರಾಜಾನನ್ನು ಮರೆಯುವುದುಂಟೇ. ಲಾಲ್‌ಬಾಗ್ಚ ರಾಜಾ ಎಂದರೆ ಲಾಲ್‌ಬಾಗ್‌ನ ರಾಜಾ ಎಂದರ್ಥ. ಹೌದು ಈ ಗಣಪ ಇತಿಹಾಸ ಪ್ರಸಿದ್ಧ. 1934ರಲ್ಲಿ ಲಾಲ್‌ಬಾಗ್ಚ ರಾಜಾ ಗಣೇಶೋತ್ಸವ ಶುರುವಾಯಿತು. ಅಲ್ಲಿಂದೀಚೆಗೆ ಪ್ರತಿ ವರ್ಷ ನಡೆಯುತ್ತ ಬಂದಿದೆ. ನೌಸಾಚ ಗಣಪತಿ ಅಂದರೆ ಇಷ್ಟಾರ್ಥ ಸಿದ್ಧಿ ಮಾಡಿಕೊಡುವ ಗಣಪತಿ ಎಂದೂ ಜನಪ್ರಿಯನಾಗಿರುವ ಲಾಲ್‌ಬಾಗ್ಚ ರಾಜಾ ಬಹುದೊಡ್ಡ ಗಾತ್ರದ ಮೂಲಕ ಗಮನಸೆಳೆಯುವವನು. ಈ ಪಂಡಾಲ್‌ನಲ್ಲಿ ಭಕ್ತರು ತುಂಬಿ ತುಳುಕುತ್ತಿರುತ್ತಾರೆ. ಗಂಟೆಗಟ್ಟಲೆ ಕೆಲವೊಮ್ಮೆ ದಿನಗಟ್ಟಲೆ ಸರದಿ ನಿಂತುದ ದರ್ಶನ ಪಡೆದ ಉದಾಹರಣೆಗಳೂ ಇವೆ. ಇಲ್ಲಿ ಪ್ರತಿ ವರ್ಷದ ಗಣೇಶೋತ್ಸವ ಥೀಮ್ ಆಧರಿಸಿ ನಡೆಯುತ್ತದೆ. ಪೌರಾಣಿಕ ಅಥವಾ ಸಮಾಜಕ್ಕೆ ಸಂದೇಶ ನೀಡುವ ಥೀಮ್‌ ಅನ್ನು ಅಳವಡಿಸಿಕೊಳ್ಳುತ್ತಾರೆ.

ಕಿಂಗ್ಸ್‌ ಸರ್ಕಲ್‌ನ ಜಿಎಸ್‌ಬಿ ಸೇವಾ ಮಂಡಲ ಗಣಪತಿ

ಕಿಂಗ್ಸ್‌ ಸರ್ಕಲ್‌ನ ಜಿಎಸ್‌ಬಿ ಸೇವಾ ಮಂಡಲ ಗಣಪತಿ

ಮುಂಬೈನ ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಸೇವಾಮಂಡಲ ಗಣೇಶ. ಮುಂಬಯಿಗೆ ಸಂಬಂಧಿಸಿದ ಅತ್ಯಂತ ಶ್ರೀಮಂತ ಗಣಪತಿ ಪಂಡಾಲ್‌ ಇದು. ಅದ್ದೂರಿ ಅಲಂಕಾರ ಮತ್ತು ನಿಜವಾದ ಚಿನ್ನಾಭರಣ, ಬೆಳ್ಳಿ ಆಭರಣವನ್ನು ಅಲಂಕಾರಕ್ಕೆ ಬಳಸಲಾಗುತ್ತದೆ. ಗೌಡ್ ಸಾರಸ್ವತ ಬ್ರಾಹ್ಮಣ ಸಮುದಾಯದ ಈ ಪಂಡಾಲ್ ಸಾಂಪ್ರದಾಯಿಕ ವಿಧಾನದ ಮೂಲಕ ಗಮನಸೆಳೆಯುತ್ತದೆ. ಸಂಪೂರ್ಣ ಮಣ್ಣಿನ ವಿಗ್ರಹವನ್ನು ಇಲ್ಲಿ ಪೂಜಿಸಲಾಗುತ್ತದೆ. ಅಲ್ಲದೆ, ಪರಿಸರ ಸ್ನೇಹಿ ಕ್ರಮಗಳ ಮೂಲಕ ಈ ಪಂಡಾಲ್‌ ಗಮನಸೆಳೆಯುತ್ತದೆ. 1951ರಲ್ಲಿ ಸ್ಥಾಪಿತವಾದ ಜಿಎಸ್‌ಬಿ ಸೇವಾ ಮಂಡಲವು ಆಚರಣೆಗಳು ಮತ್ತು ಸಂಪ್ರದಾಯಗಳ ಅನುಸರಣೆಗೆ ಹೆಸರುವಾಸಿ. ನಗರದ ಗದ್ದಲದ ನಡುವೆ ಆಧ್ಯಾತ್ಮಿಕ ಅನುಭವವನ್ನು ನೀಡುವ ಕಾರಣಕ್ಕೆ ಜನಪ್ರಿಯವಾಗಿದೆ.

ಅಂಧೇರಿಯಲ್ಲಿರುವ ಗಣಪತಿ- ಅಂಧೇರಿಚಾ ರಾಜಾ

 

ಅಂಧೇರಿಯಲ್ಲಿರುವ ಗಣಪತಿ- ಅಂಧೇರಿಚಾ ರಾಜಾ

ಅಂಧೇರಿಚಾ ರಾಜಾ ಮತ್ತೊಂದು ಜನಪ್ರಿಯ ಪಾಂಡಲ್. ಮುಂಬೈನಲ್ಲಿ ಹೆಚ್ಚಿನ ಭಕ್ತರನ್ನು ಹೊಂದಿರುವ ಅಂಧೇರಿಚಾ ರಾಜಾನನ್ನು ಗೋಲ್ಡನ್ ಟೊಬ್ಯಾಕೊ ಕಂಪನಿಯ ಕೆಲಸಗಾರರು 1966 ರಲ್ಲಿ ಮೊದಲ ಬಾರಿಗೆ ಸ್ಥಾಪಿಸಿದರು. ಅಲ್ಲಿಂದೀಚೆಗೆ ಪ್ರತಿ ವರ್ಷ ಅಂಧೇರಿಚಾ ಗಣಪನ ಆರಾಧನೆ ನಡೆಯುತ್ತಿದೆ. ಈ ಪಂಡಾಲ್‌ ಕೂಡ ತನ್ನ ವಿಶಿಷ್ಟ ಥೀಮ್‌ ಮತ್ತು ವಿಸ್ತಾರ ಅಲಂಕಾರ ಮತ್ತು ಸೆಟಪ್‌ಗಳಿಗೆ ಹೆಸರುವಾಸಿ. ಇಲ್ಲಿ ಕೂರಿಸುವ ಗಣಪತಿಯನ್ನು 5ನೇ ದಿನವೇ ನಿಮಜ್ಜನಗೊಳಿಸಲಾಗುತ್ತದೆ. ಇಲ್ಲಿ ಈ ಸಂಪ್ರದಾಯವನ್ನು ಮೊದಲ ವರ್ಷದಿಂದಲೇ ರೂಢಿಮಾಡಿಕೊಂಡು ಬರಲಾಗಿದೆ. ಸಾಮಾನ್ಯವಾಗಿ ಪ್ರಸಿದ್ಧ ದೇವಾಲಯಗಳು ಅಥವಾ ಘಟನೆಗಳ ಮಾದರಿಯಲ್ಲಿ ಗಣಪತಿಯನ್ನು ಅಲಂಕರಿಸಿ ಪೂಜಿಸಲಾಗುತ್ತದೆ.

ಖೇತ್ವಾಡಿಚ ಗಣರಾಜ

ಖೇತ್ವಾಡಿಯ ಗಣರಾಜ

ಮುಂಬಯಿ ಸಮೀಪದ ಗಿರ್ಗಾಂವ್‌ನ ಖೇತ್ವಾಡಿ ಪ್ರದೇಶದಲ್ಲಿರುವ ಖೇತ್ವಾಡಿ ಗಣರಾಜ್ ಬಹಳ ಪ್ರಸಿದ್ಧ ಗಣಪತಿ ಪಂಡಾಲ್‌ಗಳ ಪೈಕಿ ಒಂದು. ಇಲ್ಲಿನ ಗಣೇಶನ ವಿಗ್ರಹ ಮತ್ತು ಹೊಸ ಹೊಸ ಥೀಮ್‌ಗಳ ಮೂಲಕ ಜನಪ್ರಿಯ. 1959 ರಲ್ಲಿ ಸ್ಥಾಪಿತವಾದ ಈ ಪಂಡಾಲ್‌ ಸೃಜನಶೀಲ ಅಭಿವ್ಯಕ್ತಿಗೆ ಮತ್ತು ವಿಗ್ರಹಗಳ ಸೌಂದರ್ಯಕ್ಕೆ ಹೆಸರುವಾಸಿ. ವಿಗ್ರಹವನ್ನು ನಿಜವಾದ ಚಿನ್ನ, ಬೆಳ್ಳಿ ಆಭರಣದಿಂದಲೇ ಅಲಂಕರಿಸುವುದು ವಿಶೇಷ. ಗಣಪತಿ ವಿಗ್ರಹ 40 ಅಡಿ ಎತ್ತರ ಹೊಂದಿರುವುದು ಸಾಮಾನ್ಯ. ಗಣೇಶ ಚತುರ್ಥಿ ಇಲ್ಲಿ ನೆರೆಹೊರೆಗೆಲ್ಲ ದೊಡ್ಡ ಹಬ್ಬ, ಉತ್ಸವವೇ ಆಗಿಬಿಡುತ್ತದೆ

ಚಿಂಚಪೋಕ್ಲಿ ಗಣಪತಿ - ಚಿಂಚಪೋಕ್ಲಿ ಚ ಚಿಂತಾಮಣಿ

ಚಿಂಚಪೋಕ್ಲಿ ಗಣಪತಿ - ಚಿಂಚಪೋಕ್ಲಿ ಚ ಚಿಂತಾಮಣಿ

ಮುಂಬಯಿಯ ಪುರಾತನ ಪ್ರಸಿದ್ಧ ಅಂದರೆ ಶತಮಾನ ಹಳೆಯ ಗಣಪತಿ ಪಂಡಾಲ್‌ ಇದು ಚಿಂಚಪೋಕ್ಲಿ ಚಾ ಚಿಂತಾಮಣಿ ಎಂದೇ ಈ ಗಣಪತಿಗೆ ಹೆಸರು. 1920ರಲ್ಲಿ ಶುರುವಾದ ಗಣೇಶೋತ್ಸವ ಇದು. ಅದ್ದೂರಿ ಆಚರಣೆಗೆ ಹೆಸರುವಾಸಿ ಈ ಪಂಡಾಲ್‌. ಇಲ್ಲಿ ಸಾಂಪ್ರದಾಯಿಕ ಆಚರಣೆಗೆ ಹೆಚ್ಚು ಮಹತ್ವ. ಸುಂದರ, ಭವ್ಯ ಮತ್ತು ಬೃಹತ್ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಿಶೇಷ. ಇಲ್ಲಿ ಆಧ್ಯಾತ್ಮಿಕ ವಾತಾವರಣ, ವಿಗ್ರಹದ ದೈವೀ ಭಾವ ಗಮನಸೆಳೆಯುವಂಥದ್ದು ಎನ್ನುತ್ತಾರೆ ಸ್ಥಳೀಯರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ