Ayodhya: ರಾಮಮಂದಿರ ಯಾತ್ರೆಗೆ ಅಡಿಪಾಯ ಹಾಕಿದ್ದ ಅಡ್ವಾಣಿ, ಎಂಎಂಜೋಶಿ ಅಯೋಧ್ಯೆ ಕಾರ್ಯಕ್ರಮಕ್ಕೆ ಬರೋಲ್ಲ: ಕಾರಣ ಏನಿರಬಹುದು
Jan 19, 2024 11:11 AM IST
ಭಾರತದಲ್ಲಿ ರಾಮಮಂದಿರ ನಿರ್ಮಾಣ ಬೇಡಿಕೆಗೆ ಬಲ ತುಂಬಿದ್ದ ಎಲ್‌ಕೆ ಅಡ್ವಾಣಿ ಹಾಗೂ ಎಂ.ಎಂ.ಜೋಶಿ ಅವರು ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗೋಲ್ಲ
- Ram mandir ಅಯೋಧ್ಯೆಯಲ್ಲಿ ರಾಮಮಂದಿರ ( Ayodhya Ram madir inauguration) ಉದ್ಘಾಟನೆ ಸಮಾರಂಭ ಜನವರಿ22ರಂದು ನಿಗದಿಯಾಗಿದೆ. ಆದರೆ ಆ ಕಾರ್ಯಕ್ರಮಕ್ಕೆ ಬಿಜೆಪಿ ಹಿರಿಯ ನಾಯಕರಾಗಿದ್ದ ಎಲ್.ಕೆ.ಅಡ್ವಾಣಿ( LK Advani) ಹಾಗೂ ಮುರಳಿ ಮನೋಹರ ಜೋಶಿ( MM Joshi) ಭಾಗಿಯಾಗುವುದಿಲ್ಲ.
ದೆಹಲಿ: ಮೂರೂವರೆ ದಶಕದ ಹಿಂದೆಯೇ ರಾಮಮಂದಿರ ನಿರ್ಮಾಣಕ್ಕೆ ಬಲ ತುಂಬಿ ಯಾತ್ರೆ ನಡೆಸಿದ್ದ ಹಿರಿಯ ಬಿಜೆಪಿ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ.
2024 ರ ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮಮಂದಿರವನ್ನು ಲೋಕಾರ್ಪಣೆ ಮಾಡಲಿದ್ಧಾರೆ.
ಈ ಕಾರ್ಯಕ್ರಮಕ್ಕೆ ಭಾರತದ ಪ್ರಮುಖ ಧಾರ್ಮಿಕ ಗುರುಗಳು, ರಾಜಕೀಯ ನೇತಾರರನ್ನು ಆಹ್ವಾನಿಸಲಾಗಿದೆ. ಆದರೆ ಭಾರತದಲ್ಲಿ ರಾಮಮಂದಿರ ಆಗಲೇಬೇಕು ಎನ್ನುವ ಕನಸಿನೊಂದಿಗೆ ಯಾತ್ರೆ ನಡೆಸಿ ಅದಕ್ಕೊಂದು ರೂಪು ನೀಡಿದ್ದ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರು ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವುದಿಲ್ಲ ಎನ್ನುವ ಮಾಹಿತಿ ರವಾನಿಸಿದ್ದಾರೆ,
ವಯೋಸಹಜ ಕಾರಣಗಳಿಂದ ನಾವು ಅಲ್ಲಿಗೆ ಬರಲು ಆಗುತ್ತಿಲ್ಲ. ಕಾರ್ಯಕ್ರಮ ಯಶಸ್ವಿಯಾಗಲಿ ಎನ್ನುವ ಆಶಯದ ಸಂದೇಶವನ್ನು ಅವರು ರವಾನಿಸಿದ್ಧಾರೆ
ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಈಗ 96 ವರ್ಷ ಹಾಗೂ ಎಂಎಂ ಜೋಶಿ ಅವರು ಬರುವ ಜನವರಿಗೆ 90 ವರ್ಷ ಪೂರ್ಣಗೊಳಿಸಲಿದ್ದಾರೆ. ಪ್ರವಾಸ ಮಾಡಲು ಆಗದ ಸ್ಥಿತಿ ಇರುವುದರಿಂದ ಕಾರ್ಯಕ್ರಮಕ್ಕೆ ಬರುವುದಿಲ್ಲ ಎನ್ನುವುದು ಅವರು ನೀಡಿರುವ ಕಾರಣ.
ಇದಲ್ಲದೇ ರಾಮಮಂದಿರ ದೇಗುಲ ಟ್ರಸ್ಟ್ ಕೂಡ ಅಡ್ವಾಣಿ ಹಾಗೂ ಜೋಶಿ ಅವರು ಕಾರ್ಯಕ್ರಮಕ್ಕೆ ವಯಸ್ಸಿನ ಕಾರಣಕ್ಕೆ ಆಗಮಿಸುವುದು ಬೇಡ ಎಂದು ಮನವಿ ಮಾಡಲಾಗಿತ್ತು. ಅದಕ್ಕೆ ಇಬ್ಬರೂ ಸ್ಪಂದಿಸಿದ್ದಾರೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಅಡ್ವಾಣಿ ಅವರು 90ರ ದಶಕದಲ್ಲಿ ಭಾರತ ಜನತಾಪಕ್ಷವನ್ನು ಬಲಗೊಳಿಸಲು ಹಮ್ಮಿಕೊಂಡ ಯಾತ್ರೆಯಲ್ಲಿ ರಾಮಮಂದಿರ ನಿರ್ಮಾಣವೂ ಪ್ರಮುಖವಾಗಿತ್ತು. ಆಗ ಅವರು ಗುಜರಾತ್‌ನ ಸೋಮನಾಥದಿಂದ ಅಯೋಧ್ಯವರೆಗೂ ಪಕ್ಷದಿಂದ ರಾಮಮಂದಿರ ಯಾತ್ರೆ ಮಾಡಿದ್ದರು. 1991ಲ್ಲಿ ನಡದಿದ್ದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನಂತರ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮುರಳಿ ಮನೋಹರ್ ಜೋಶಿ ಕೂಡ ಇದೇ ಯಾತ್ರೆಯ ಭಾಗವಾಗಿದ್ದವರು. ಅವರೂ ಕೂಡ ಬಿಜೆಪಿ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು.
ಅಂದು ನಡೆಯುವ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹಿತ ಹಲವರನ್ನು ಆಹ್ವಾನಿಸಲಾಗಿದೆ. ಶಂಕರಾಚಾರ್ಯ ಪೀಠದ ಧರ್ಮಗುರುಗಳು, 150 ಕ್ಕೂ ಅಧಿಕ ಸಾಧು ಸನ್ಯಾಸಿಗಳು ಅಂದು ಪಾಲ್ಗೊಳ್ಳುವರು. ಧಾರ್ಮಿಕ ನಾಯಕ ದಲೈಲಾಮ, ಮಾತಾ ಅಮೃತಾನಂದ ಮಯೀ, ಬಾಬಾ ರಾಮದೇವ್, ನಟರಾದ ಅಮಿತಾಬ್ ಬಚ್ಚನ್, ರಜನಿಕಾಂತ್, ಮಾಧುರಿ ದೀಕ್ಷಿತ್, ರಾಮಾಯಣ ಧಾರಾವಾಹಿ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಸಹಿತ ಹಲವರನ್ನು ಆಹ್ವಾನಿಸಲಾಗಿದ್ದು, ಅವರು ಆಗಮಿಸಲು ಒಪ್ಪಿದ್ದಾರೆ ಎನ್ನುವುದು ರೈ ವಿವರಣೆ.