Rajasthan assembly elections 2023: ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಹಿನ್ನಡೆ, ಚೇತರಿಸಿಕೊಂಡ ಬಿಜೆಪಿ
Dec 03, 2023 12:59 PM IST
ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
- Rajasthan elections ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡ ಕಾಯ್ದುಕೊಂಡಿದ್ದು ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಕಚ್ಚಾಟದಲ್ಲಿ ಸೋಲು ಕಾಣುವ ಹಂತಕ್ಕೆ ಬಂದಿದೆ.
ಜೈಪುರ: ರಾಜಸ್ಥಾನದಲ್ಲಿ ಹಿಂದಿನ ಸಂಪ್ರದಾಯದಂತೆಯೇ ಕಾಂಗ್ರೆಸ್ ಬದಲು ಬಿಜೆಪಿ ಪರವಾಗಿ ಮತದಾರರು ಒಲವು ತೋರಿದ್ದಾರೆ. ಮಧ್ಯಾಹ್ನ 12ರ ವರೆಗಿನ ಫಲಿತಾಂಶದ ಪ್ರಕಾರ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತರಾರೂಢ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.
ಒಟ್ಟು 200 ಸ್ಥಾನದ ವಿಧಾನಸಭೆಯಲ್ಲಿ 199 ಸ್ಥಾನಗಳಿಗೆ ಮತದಾನ ನಡೆದಿದ್ದು, ಈವರೆಗಿನ ಫಲಿತಾಂಶದ ಪ್ರಕಾರ ಬಿಜೆಪಿ 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 71 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಪಡೆದುಕೊಂಡಿದೆ. ಬಿಎಸ್ಪಿ 3 ಹಾಗೂ ಇತರರು 14 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಎರಡು ದಿನದ ಹಿಂದೆ ಪ್ರಕಟವಾಗಿದ್ದ ಮತಗಟ್ಟೆ ಸಮೀಕ್ಷೆ ಫಲಿತಾಂಶದಲ್ಲೂ ಬಿಜೆಪಿಯೇ ಮುನ್ನಡೆ ಕಾಯ್ದುಕೊಳ್ಳುವ ಸೂಚನೆಗಳು ದೊರೆತಿದ್ದವು. ಹೆಚ್ಚಿನ ಸಮೀಕ್ಷೆಗಳು ಬಿಜೆಪಿ ಪರವಾಗಿಯೇ ಇದ್ದವು. ಕಡಿಮೆ ಅಂತರದಲ್ಲಾದರೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿತ್ತು. ಅದರಂತೆ ಫಲಿತಾಂಶಗಳು ಈಗಾಗಲೇ ಪ್ರಕಟಗೊಳ್ಳುತ್ತದ್ದು. ಬಿಜೆಪಿ ಬೆಳಿಗ್ಗೆಯಿಂದಲೂ ಮುನ್ನಡೆ ಕಾಯ್ದುಕೊಂಡಿದೆ.
ರಾಜಸ್ಥಾನದಲ್ಲಿ ಹಾಲಿ ಸಿಎಂ ಅಶೋಕ್ ಗೆಹ್ಲೋಟ್ ಪಕ್ಷವನ್ನು ದಡ ಮುಟ್ಟಿಸಲು ವಿಫಲರಾಗುತ್ತಿದ್ದರೆ, ತಾವು ಸರ್ದಾರಪುರ್‌ದಲ್ಲಿ ಮುನ್ನಡೆ ಕಾಯ್ದುಕೊಂಡಿದ್ಧಾರೆ. ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಟೋಂಕ್ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಗೋವಿಂದದ ಸಿಂಗ್ ದೋಸ್ತಾರ ಕೂಡ ಮುನ್ನಡೆಯಲ್ಲಿದ್ದಾರೆ. ಆದರೆ ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿ.ಪಿ. ಜೋಶಿ, ಮುಖಂಡ ಗೌರವ್ ವಲ್ಲಭ್, ಹಿನ್ನಡೆ ಕಂಡಿದ್ಧಾರೆ.
ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ವಸುಂಧರಾ ರಾಜೇ ಅವರು ಜೈರ್‌ಪಟಾನ್ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಪ್ರತಿಪಕ್ಷ ನಾಯಕ ರಾಜೇಂದ್ರ ಸಿಂಗ್ ರಾಥೋರ್ ಹಿನ್ನಡೆ ಅನುಭವಿಸಿದ್ಧಾರೆ. ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಕೂಡ ಹಿನ್ನಡೆ ಅನುಭವಿಸಿದ್ದಾರೆ. ರಾಷ್ಟ್ರೀಯ ಲೋಕ ತಾಂತ್ರಿಕ ಪಾರ್ಟಿಯ ಹನುಮಾನ್ ಬೇನಿವಾಲ್ ಖಿಂಸ್ವಾರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮ್ಯಾಜಿಕ್ ಮುಗಿದಿದೆ: ಬಿಜೆಪಿ ಟೀಕೆ
ಮತ ಎಣಿಕೆ ವೇಳೆಯೇ ಸುದ್ದಿಗಾರ ಜತೆ ಮಾತನಾಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್,. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಮ್ಯಾಜಿಕ್ ಮುಗಿದಿದೆ ಎಂದು ಟೀಕಿಸಿದ್ದಾರೆ.
ಮ್ಯಾಜಿಷಿಯನ್ ಅವಧಿ ಮುಕ್ತಾಯಕ್ಕೆ ಬಂದಿದೆ. ರಾಜಸ್ಥಾನದ ಜನರು ರಾಜ್ಯದ ಹಿತ ಬಯಸಿ ಮತ ನೀಡಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಸೂಕ್ತ ಸಮಯದಲ್ಲಿ ಸಿಎಂ ಆಯ್ಕೆ
ಬೆಳಗ್ಗೆ ಎನ್ ಡಿ ಟಿವಿ ಜತೆಗೆ ಮಾತನಾಡಿದ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋರ್, ಬಿಜೆಪಿ ರಾಜಸ್ಥಾನದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಸ್ಥಾನದಲ್ಲಿ ನಡೆದದ್ದು ಕಾಂಗ್ರೆಸ್‌ನ ದುರಾಡಳಿತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ನೀಡುತ್ತಿರುವ ಸುಭಿಕ್ಷ ಆಡಳಿತ ಸ್ಪರ್ಧೆ. ಇದರಲ್ಲಿ ಮೋದಿ ಅವರ ಆಡಳಿತಕ್ಕೆ ಜನ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಅದನ್ನು ಮತದಾರನ ಭಾವನೆಯಲ್ಲೂ ವ್ಯಕ್ತವಾಗಿರುವುದಕ್ಕೆ ಫಲಿತಾಂಶವೇ ಸಾಕ್ಷಿ. ರಾಜ್ಯದಲ್ಲಿ ಬದಲಾವಣೆ ತರಬೇಕು ಎನ್ನುವ ಏಕೈಕ ಉದ್ದೇಶದಿಂದಲೂ ಜನ ಮತ ಹಾಕಿದ್ದಾರೆ. ಅಲ್ಲದೇ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳೆಲ್ಲವೂ ಬಿಜೆಪಿ ಪರವಾಗಿಯೇ ಇದ್ದವು ಎಂದರು.
ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ವರಿಷ್ಠರು ಚರ್ಚಿಸಿ ಯಾರು ಸಿಎಂ ಅಭ್ಯರ್ಥಿ ಎನ್ನುವುದನ್ನು ಪ್ರಕಟಿಸುವರು. ಎಲ್ಲ ನಿರ್ಧಾರಗಳು ಸೂಕ್ತ ಸಮಯದಲ್ಲಿಯೇ ಆಗಲಿವೆ. ಪಕ್ಷ ಸಮಗ್ರ ಅಭಿಪ್ರಾಯದೊಂದಿಗೆ ಸಿಎಂ ಆಯ್ಕೆಮಾಡಲಿದೆ ಎಂದಷ್ಟೇ ರಾಥೋರ್ ಹೇಳಿದರು.