Neonatal diabetes mellitus: ನವಜಾತ ಶಿಶುವಿಗೆ ಮಧುಮೇಹ ಬಂದರೆ ತಿಳಿಯೋದು ಹೇಗೆ?
Jul 14, 2022 02:29 PM IST
ನವಜಾತ ಶಿಶುಗಳ ಮಧುಮೇಹದಲ್ಲಿ, ಮಧುಮೇಹದ ಇತರ ಲಕ್ಷಣಗಳಂತೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಅಧಿಕವಾದಾಗ, ಕೆಲವು ಗ್ಲೂಕೋಸ್ ಮೂತ್ರದ ಮೂಲಕ ಹೊರ ಹೋಗುತ್ತವೆ. (ಸಾಂದರ್ಭಿಕ ಚಿತ್ರ)
- ನವಜಾತ ಶಿಶುಗಳ ಮಧುಮೇಹ ಅಥವಾ Neonatal diabetes mellitus (NDM) ಮಗುವಿನ ಜನನದ 6 ತಿಂಗಳ ಒಳಗೆ ಕಂಡುಬರುವ ಬೆಳವಣಿಗೆ. ಇದು ತಾತ್ಕಾಲಿಕ ಅಥವಾ ಶಾಶ್ವತವೂ ಆಗಿರಬಹುದು. ಇಷ್ಟಕ್ಕೂ ನವಜಾತ ಶಿಶುವಿಗೆ ಮಧುಮೇಹ ಬಂದಿದೆಯಾ ಎಂದು ತಿಳಿಯೋದು ಹೇಗೆ? ಅದರ ಗುಣಲಕ್ಷಣಗಳೇನು? ಇಲ್ಲಿದೆ ಮಾಹಿತಿ.
ಮಕ್ಕಳು ಮತ್ತು ಹದಿಹರೆಯದವರ ಮೇಲೆ ಪರಿಣಾಮ ಬೀರುವ ಬಾಲ್ಯದ ಮಧುಮೇಹದ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ, ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ರೀತಿಯ ಮಧುಮೇಹವಿದೆ. ನವಜಾತ ಶಿಶುಗಳ ಮಧುಮೇಹ ಅಥವಾ Neonatal diabetes mellitus (NDM) ಎಂದು ಕರೆಯಲ್ಪಡುವ ಇದು ಮಗುವಿನ ಜನನದ 6 ತಿಂಗಳ ಒಳಗೆ ಕಂಡುಬರುತ್ತದೆ. ಇದು ತಾತ್ಕಾಲಿಕ ಅಥವಾ ಶಾಶ್ವತವೂ ಆಗಿರಬಹುದು.
ಜೀನ್ ರೂಪಾಂತರದಿಂದ ಈ ಅಸೌಖ್ಯ ಉಂಟಾಗುತ್ತದೆ. ಈ ಜೀನ್ ಅಸಹಜತೆಗಳನ್ನು ಹೊಂದಿರುವ ಮಕ್ಕಳು ಮೌಖಿಕ ಸಲ್ಫೋನಿಲ್ ಯೂರಿಯಾ (SU) ಟ್ಯಾಬ್ಲೆಟ್ ಮೂಲಕ ಗುಣಹೊಂದಬಹುದು. ಇವರಿಗೆ ಇನ್ಸುಲಿನ್ ಚುಚ್ಚುಮದ್ದಿನ ಅಗತ್ಯವಿರುವುದಿಲ್ಲ.
ಆದಾಗ್ಯೂ, ಬಾಲ್ಯದ ಮಧುಮೇಹದಲ್ಲಿ, ಮೂಲಭೂತವಾಗಿ ಟೈಪ್ 1 ಡಯಾಬಿಟಿಸ್ ಆದರೆ, ಮೇದೋಜೀರಕ ಗ್ರಂಥಿಯ ಇನ್ಸುಲಿನ್ ಮೀಸಲು ಕಡಿಮೆಯಾದ ನಂತರ ಜೀವನ ಮತ್ತು ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಬಾಧಿತರಿಗೆ ಜೀವಮಾನದ ಇನ್ಸುಲಿನ್ ಚುಚ್ಚುಮದ್ದು ಅಗತ್ಯವಿರುತ್ತದೆ.
ನವಜಾತ ಶಿಶುಗಳ ಮಧುಮೇಹ ಎಂದರೇನು
ನಿಯೋನಾಟಲ್ ಡಯಾಬಿಟಿಸ್ ಮೆಲ್ಲಿಟಸ್, ಕೆಲವೊಮ್ಮೆ NDM ಎಂದು ಕರೆಯಲ್ಪಡುತ್ತದೆ. ಇದು ಸಾಮಾನ್ಯವಾಗಿ ಆರು ತಿಂಗಳ ವಯಸ್ಸಿನ ಮೊದಲು ಕಂಡು ಬರುವ ಬೆಳವಣಿಗೆ. ಆದರೂ ಇದು ಜನನದ ನಂತರ ಒಂದು ವರ್ಷದವರೆಗೆ ವಿರಳವಾಗಿ ಗೋಚರಿಸಬಹುದು. ನವಜಾತ ಶಿಶುಗಳ ಮಧುಮೇಹವನ್ನು ರೋಗದ "ಮೊನೊಜೆನಿಕ್" ವಿಧಗಳಲ್ಲಿ ಒಂದಾಗಿ ವರ್ಗೀಕರಿಸಲಾಗಿದೆ. ಇದರರ್ಥ ಇದು ಒಂದೇ ಜೀನ್‌ನಲ್ಲಿನ ರೂಪಾಂತರ (ದೋಷ) ದಿಂದ ಉಂಟಾಗುತ್ತದೆ. ಹಲವಾರು ಜೀನ್ ರೂಪಾಂತರಗಳು ಕಂಡುಬಂದರೆ ಅಂತಹ ಸನ್ನಿವೇಶ ನವಜಾತ ಶಿಶುಗಳ ಮಧುಮೇಹದ ಬೆಳವಣಿಗೆಗೆ ಕೊಡುಗೆ ನೀಡಬಹುದು ಎಂದು ಡಾ.ಮೋಹನ್ ಡಯಾಬಿಟಿಸ್ ಸ್ಪೆಷಾಲಿಟೀಸ್ ಸೆಂಟರ್‌ನ ಉಪಾಧ್ಯಕ್ಷ, ಸಲಹೆಗಾರ ಡಾ. ರಜಿತ್ ಉನ್ನಿಕೃಷ್ಣನ್ ಐ ಹೇಳುತ್ತಾರೆ.
ನವಜಾತ ಶಿಶುಗಳ ಮಧುಮೇಹದಲ್ಲಿ ಎರಡು ವಿಧ
1. TNDM (transient neonatal diabetes) ಅಥವಾ ನವಜಾತ ಶಿಶುಗಳ ಅಸ್ಥಿರ ಮಧುಮೇಹ
2. ನವಜಾತ ಶಿಶುಗಳ ಶಾಶ್ವತ ಮಧುಮೇಹ (PNDM - Permanent new-born diabetes)
ಟ್ರಾನ್ಸಿಯೆಂಟ್ ನವಜಾತ ಶಿಶುಗಳ ಮಧುಮೇಹ (TNDM) ಆರು ತಿಂಗಳ ವಯಸ್ಸಿಗೆ ಮೊದಲು ಕಾಣಿಸಿಕೊಳ್ಳುತ್ತದೆ. ಆದರೆ ಸಾಮಾನ್ಯವಾಗಿ ಮಗುವಿಗೆ ಒಂದು ವರ್ಷ ಆಗುವ ಮೊದಲು ಕಣ್ಮರೆಯಾಗುತ್ತದೆ. ಆದಾಗ್ಯೂ, ಮಧುಮೇಹವು ಪ್ರೌಢಾವಸ್ಥೆಯಲ್ಲಿ ಅಥವಾ ಬಾಲ್ಯದ ಆರಂಭಿಕ ವರ್ಷಗಳಲ್ಲಿ ಆಗಾಗ್ಗೆ ಮರಳಬಹುದು. TNDM ವಿಭಿನ್ನ ಜೀನ್ ರೂಪಾಂತರಗಳಿಂದ ಉಂಟಾಗುತ್ತದೆ. ಮಗುವಿಗೆ ಯಾವ ರೂಪಾಂತರವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುನ್ನರಿವು ಮತ್ತು ಚಿಕಿತ್ಸಾ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತದೆ.
ಇದರಂತೆಯೇ, ನವಜಾತ ಶಿಶುಗಳ ಶಾಶ್ವತ ಮಧುಮೇಹ (PNDM) ಸಾಮಾನ್ಯವಾಗಿ ಆರು ತಿಂಗಳ ವಯಸ್ಸಿನ ಮೊದಲು ಪ್ರಕಟವಾಗುತ್ತದೆ. ಆದಾಗ್ಯೂ, ಇದು ಮಗುವಿಗೆ ಒಂದು ವರ್ಷ ಆದನಂತರವೂ ಮುಂದುವರಿದು ಜೀವಿತಾವಧಿಗೆ ನಿಂತುಬಿಡುತ್ತದೆ.
ನವಜಾತ ಶಿಶುವಿನ ಮಧುಮೇಹದ ಲಕ್ಷಣಗಳು
ನವಜಾತ ಶಿಶುವಿನ ಮಧುಮೇಹದಲ್ಲಿ, ಇತರ ರೀತಿಯ ಮಧುಮೇಹದಲ್ಲಿ ಇರುವಂತೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಅಧಿಕವಾದಾಗ, ಕೆಲವು ಗ್ಲೂಕೋಸ್ ಮೂತ್ರದ ಮೂಲಕ ದೇಹವನ್ನು ಬಿಡುತ್ತದೆ. ಇದು ಅನೇಕ ಆರಂಭಿಕ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಅವುಗಳೆಂದರೆ,
- ಮೂತ್ರ ಮಾಡುವುದು ಹೆಚ್ಚಾಗಬಹುದು
- ಹೆಚ್ಚಿದ ಹಸಿವು
- ನಿರ್ಜಲೀಕರಣ
- ಬೆಳವಣಿಗೆ ಕೊರತೆ
ಕೆಲವೊಮ್ಮೆ ನವಜಾತ ಶಿಶುವಿನ ಮಧುಮೇಹವನ್ನು ಟೈಪ್ 1 ಡಯಾಬಿಟಿಸ್ ಎಂದು ತಪ್ಪಾಗಿ ರೋಗನಿರ್ಣಯ ಮಾಡುತ್ತಾರೆ. ನಿಖರ ಆನುವಂಶಿಕ ರೋಗನಿರ್ಣಯವು ರೋಗದೊಂದಿಗಿನ ಅನೇಕ ಮಕ್ಕಳಿಗೆ ಇನ್ಸುಲಿನ್ ಚುಚ್ಚುಮದ್ದನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಈ ಮಕ್ಕಳು ಇನ್ಸುಲಿನ್‌ಗಿಂತ ಮೌಖಿಕ ಸಲ್ಫೋನಿಲ್ರಿಯಾ ಔಷಧಗಳಿಂದ ಬೇಗ ಗುಣಮುಖರಾಗುತ್ತಾರೆ.
ಇತರೆ ಗುಣಲಕ್ಷಣಗಳು
ನವಜಾತ ಮಧುಮೇಹ ಹೊಂದಿರುವ ಮಕ್ಕಳು ಆಗಾಗ್ಗೆ ಬೆಳವಣಿಗೆಯಲ್ಲಿ ನಿಧಾನಗತಿ ಕಾಣುತ್ತಾರೆ. ನರವೈಜ್ಞಾನಿಕ ಕೊರತೆ ಮತ್ತು ಅಪಸ್ಮಾರ, ಫಿಟ್ಸ್ ಮುಂತಾದ ಸಂಬಂಧಿತ ಅಸೌಖ್ಯವನ್ನು ಹೊಂದಬಹುದು. ಇದರ ಚಿಹ್ನೆಗಳು ನರಮಂಡಲದಲ್ಲಿ ಕಂಡುಬರುತ್ತವೆ. ಮಗುವು ಸಲ್ಫೋನಿಲ್ ಯೂರಿಯಾ ಏಜೆಂಟ್ ಅನ್ನು ಪ್ರಾರಂಭಿಸಿದಾಗ, ನರವೈಜ್ಞಾನಿಕ ಲಕ್ಷಣಗಳು ಕೂಡ ನಿವಾರಣೆ ಆಗಬಹುದು ಎಂದು ಡಾ ಉನ್ನಿಕೃಷ್ಣನ್ ಹೇಳುತ್ತಾರೆ.
ಈ ಕುರಿತು ಹೆಚ್ಚಿನ ಮಾಹಿತಿಗೆ ನಿಮ್ಮ ಕುಟುಂಬ ವೈದ್ಯರು ಅಥವಾ ಪರಿಣತ ಡಾಕ್ಟರನ್ನು ಸಂಪರ್ಕಿಸಬಹುದು.