North Korea: ವಿನಾಶಕಾರಿ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಮಾಡಿದ ಉತ್ತರ ಕೊರಿಯಾ, ಅಮೆರಿಕಕ್ಕೆ ಬೆದರಿಕೆ
Mar 27, 2023 06:43 AM IST
North Korea: ವಿನಾಶಕಾರಿ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಮಾಡಿದ ಉತ್ತರ ಕೊರಿಯಾ
ಉತ್ತರ ಕೊರಿಯಾವು ಮಾರ್ಚ್ 27 ರಂದು ಕೊರಿಯನ್ ಪರ್ಯಾಯ ದ್ವೀಪದ ಪೂರ್ವಕ್ಕೆ ಕ್ಷಿಪಣಿ ಉಡಾವಣೆ ಮಾಡಿದೆ.
ಉತ್ತರ ಕೊರಿಯಾ: ಅಮೆರಿಕವು ದಕ್ಷಿಣ ಕೊರಿಯಾದ ಜತೆ ಸೇರಿ ಜಂಟಿ ಸಮರಾಭ್ಯಾಸ ಮಾಡುವುದನ್ನು ವಿರೋಧಿಸುತ್ತಿರುವ ಉತ್ತರ ಕೊರಿಯಾವು ದೊಡ್ಡಣ್ಣನ ವಿರುದ್ಧ ಈಗಾಗಲೇ ಹಲವು ಬಾರಿ ಬಹಿರಂಗ ಅಣುಯುದ್ಧದ ಸವಾಲು ಹಾಕಿದೆ. ಇದೀಗ ಬಂದ ವರದಿಗಳ ಪ್ರಕಾರ, ಉತ್ತರ ಕೊರಿಯಾವು ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ. ಮಾರ್ಚ್ 27 ರಂದು ಕೊರಿಯನ್ ಪರ್ಯಾಯ ದ್ವೀಪದ ಪೂರ್ವಕ್ಕೆ ಕ್ಷಿಪಣಿಯನ್ನು ಉಡಾಯಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಪಡೆ ತಿಳಿಸಿದೆ. ಜಪಾನ್‌ನ ಕರಾವಳಿ ಪಡೆಯೂ ಕ್ಷಿಪಣಿ ಉಡಾವಣೆಯನ್ನು ಖಚಿತಪಡಿಸಿದೆ. ಆದರೆ, ಹೆಚ್ಚಿನ ವಿವರ ಲಭ್ಯವಿಲ್ಲ.
ಉತ್ತರ ಕೊರಿಯಾದ ಮಿಲಿಟರಿ ಸಾಮರ್ಥ್ಯಗಳು ಕಳವಳಕ್ಕೆ ಕಾರಣವಾಗಿವೆ ಎಂದು ಚೀನಾದ ರಕ್ಷಣಾ ವಿಜ್ಞಾನಿಗಳು ಹೇಳಿದ್ದಾರೆ. ಉತ್ತರ ಕೊರಿಯಾವು ವಿನಾಶಕಾರಿ ಬ್ಯಾಲಿಸ್ಟಿಕ್ ಕ್ಷಿಪಣಿ ಹೊಂದಿದ್ದು, ಅದು ಕೇವಲ 33 ನಿಮಿಷಗಳಲ್ಲಿ ಅಮೆರಿಕದ ನೆಲಕ್ಕೆ ಅಪ್ಪಳಿಸುವ ಸಾಮರ್ಥ್ಯ ಹೊಂದಿವೆ.
ಅಮೆರಿಕಕ್ಕೆ ಬೆದರಿಕೆ ಉಂಟು ಮಾಡುವ ಈ ಕ್ಷಿಪಣಿಯ ಹೆಸರು ಹ್ವಾಸಾಂಗ್ - 15 ಎನ್ನಲಾಗಿದೆ. ಇದನ್ನು ಇತ್ತೀಚೆಗೆ ಪರೀಕ್ಷಾರ್ಥವಾಗಿ ಜಪಾನ್ ಗಡಿಯ ಬಳಿ ಉತ್ತರ ಕೊರಿಯಾ ಉಡಾವಣೆ ಮಾಡಿತ್ತು. ಅಮೆರಿಕದ ಕ್ಷಿಪಣಿ ರಕ್ಷಣಾ ಜಾಲವು ಕ್ಷಿಪಣಿಯನ್ನು ಪ್ರತಿಬಂಧಿಸಲು ವಿಫಲವಾದರೆ, ಅದು ಕೇವಲ 33 ನಿಮಿಷಗಳಲ್ಲಿ ಮಧ್ಯ ಅಮೆರಿಕವನ್ನು ತಲುಪಬಹುದು ಎಂದು ತಜ್ಞರು ಹೇಳಿದ್ದಾರೆ.
ನಿನ್ನೆ ಮಾತ್ರವಲ್ಲದೆ ಉತ್ತರ ಕೊರಿಯಾವು ಇದೇ ಮಾರ್ಚ್ 19ರಂದೂ ಕ್ಷಿಪಣಿ ಉಡಾವಣೆ ಮಾಡಿತ್ತು. ಉತ್ತರ ಕೊರಿಯಾವು ತನ್ನ ಪೂರ್ವ ಕರಾವಳಿಯಲ್ಲಿ ಜಲಾಂತರ್ಗಾಮಿ ನೌಕೆಯಿಂದ ಎರಡು ಸ್ಟಾರ್ಟಜಿಕ್ ಕ್ರೂಸ್ ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ನ್ಯೂಕ್ಲಿಯರ್ ಸಾಮರ್ಥ್ಯವಿರುವ ಶಸ್ತ್ರಾಸ್ತ್ರಗಳನ್ನು ವಿವರಿಸುವಾಗ "ಸ್ಟಾರ್ಟಜಿಕ್" ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ನೀರಿನೊಳಗಿನಿಂದ ಕ್ಷಿಪಣೆ ಉಡಾವಣೆ ಮಾಡುವ ಡ್ರಿಲ್‌ನಲ್ಲಿ ಉತ್ತರ ಕೊರಿಯಾವು ಪೂರ್ವ ಸಮುದ್ರದ ಕ್ಯೊಂಗ್‌ಫೋ ಕೊಲ್ಲಿಯ ಸಮುದ್ರದ 8.24 ಯೊಂಗಂಗ್‌ನಿಂದ ಕ್ಷಿಪಣಿಗಳನ್ನು ಲಾಂಚ್ ಮಾಡಿದೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್‌ಎ) ಮಾರ್ಚ್ 19ರಂದು ವರದಿ ಮಾಡಿತ್ತು.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಯುನ್‌ನ ಪ್ರಭಾವಶಾಲಿ, ಶಕ್ತಿಶಾಲಿ, ಧೈರ್ಯಶಾಲಿ ಸಹೋದರಿ ಕಿಮ್ ಯೊ ಜಾಂಗ್ ಇದೀಗ ಅಮೆರಿಕಕ್ಕೆ "ನಾವು ಯುದ್ಧಕ್ಕೆ ಹಿಂಜರಿಯುವುದಿಲ್ಲ" ಎಂದು ಕೆಲವು ದಿನದ ಹಿಂದೆ ಹೇಳಿದ್ದರು.
ಪೆಸಿಫಿಕ್ ಸಮುದ್ರದತ್ತ ಎಲ್ಲಾದರೂ ಉತ್ತರ ಕೊರಿಯಾವು ಪ್ಯೊಂಗ್ಯಾಂಗ್‌ನ ಖಂಡಾಂತರ ಕ್ಷಿಪಣಿಗಳನ್ನು ಉಡಾವಣೆ ಮಾಡಿದರೆ ಅದನ್ನು ಅಮೆರಿಕವು ಹೊಡೆದು ಉರುಳಿಸಲಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮ ವರದಿಗಳು ತಿಳಿಸಿದ್ದವು. ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾದ ಕಿಮ್ ಯೊ ಜಾಂಗ್ "ನಮ್ಮ ಕ್ಷಿಪಣಿಗಳ ತಂಟೆಗೆ ಬಂದ್ರೆ ಯುದ್ಧಕ್ಕೆ ಆಹ್ವಾನ ನೀಡಿದಂತೆ" ಎಂದು ಹೇಳಿದ್ದರು.
ಕಳೆದ ವರ್ಷ ಪ್ಯೊಂಗ್ಯಾಂಗ್‌ನಿಂದ ಹಲವು ಕ್ಷಿಪಣಿಗಳನ್ನು ಉತ್ತರ ಕೊರಿಯಾ ಲಾಂಚ್ ಮಾಡಿತ್ತು. ಬಳಿಕ ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜಂಟಿ ಮಿಲಿಟರಿ ಅಭ್ಯಾಸಗಳನ್ನು ಮಾಡಿತ್ತು.