logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi: ಆರ್ಥಿಕತೆ ಚಿಕ್ಕದು ಎಂದು ನಾವು ಬ್ರಿಟಿಷರ ವಿರುದ್ದದ ಹೋರಾಟ ನಿಲ್ಲಿಸಲಿಲ್ಲ: ಜೈಶಂಕರ್‌ಗೆ ರಾಹುಲ್‌ ತಿರುಗೇಟು!

Rahul Gandhi: ಆರ್ಥಿಕತೆ ಚಿಕ್ಕದು ಎಂದು ನಾವು ಬ್ರಿಟಿಷರ ವಿರುದ್ದದ ಹೋರಾಟ ನಿಲ್ಲಿಸಲಿಲ್ಲ: ಜೈಶಂಕರ್‌ಗೆ ರಾಹುಲ್‌ ತಿರುಗೇಟು!

HT Kannada Desk HT Kannada

Feb 26, 2023 02:53 PM IST

google News

ರಾಹುಲ್‌ ಗಾಂಧಿ

    • ಭಾರತವು ಚೀನಾಗಿಂತ ಚಿಕ್ಕ ಆರ್ಥಿಕತೆಯನ್ನು ಹೊಂದಿದೆ ಎಂಬ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್‌ ಹೇಳಿಕೆಯನ್ನು ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ (PTI)

ರಾಯ್‌ಪುರ್:‌ ಭಾರತವು ಚೀನಾಗಿಂತ ಚಿಕ್ಕ ಆರ್ಥಿಕತೆಯನ್ನು ಹೊಂದಿದೆ ಎಂಬ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್‌ ಹೇಳಿಕೆಯನ್ನು ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಭಾರತವು ಚೀನಾಕ್ಕಿಂತ ಚಿಕ್ಕ ಆರ್ಥಿಕತೆಯನ್ನು ಹೊಂದಿದೆ ಎಂಬ ಜೈಶಂಕರ್‌ ಹೇಳಿಕೆಯನ್ನು ಟೀಕಿಸಿದ ರಾಹುಲ್‌ ಗಾಂಧಿ, ಹಾಗಾದರೆ ನಾವು ಚೀನಾದೊಂದಿಗೆ ಏರಿಕೆ ಹೋರಾಟ ಮಾಡಬೇಕು ಎಂದು ಪ್ರಶ್ನಿಸಿದಾರೆ. ಅಲ್ಲದೇ ನಾವು ಬ್ರಿಟಿಷರ ಜೊತೆ ಹೋರಾಡುವ ಸಮಯದಲ್ಲಿ ನಮ್ಮ ಆರ್ಥಿಕತೆ ದೊಡ್ಡದಾಗಿತ್ತೇ ಎಂದೂ ರಾಹುಲ್‌ ಪ್ರಶ್ನಿಸಿದ್ದಾರೆ.

ದೈತ್ಯ ಶಕ್ತಿಯೊಂದಿಗೆ ಹೋರಾಡಲು ದೃಢ ಮನಸ್ಸು ಬೇಕು. ಗಡಿಯಲ್ಲಿ ಚೀನಾ ನಮ್ಮ ನೆಲವನ್ನು ಕಬಳಿಸುತ್ತಿರುವ ಸತ್ಯವನ್ನು ಮೋದಿ ಸರ್ಕಾರ ಜನರಿಂದ ಮುಚ್ಚಿಡುತ್ತಿದೆ. ಚೀನಾದ ಆಕ್ರಮಣವನ್ನು ತಡೆಗಟ್ಟುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಹುಲ್‌ ಗಾಂಧಿ ಇದೇ ವೇಳೆ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್‌ ಪಕ್ಷ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿತು. ಆಗ ಭಾರತದ ಆರ್ಥಿಕತೆ ದೊಡ್ಡದಾಗಿರಲಿಲ್ಲ. ಸಿಮೀತ ಸಂಪನ್ಮಲೂಗಳನ್ನು ಬಳಸಿಕೊಂಡೇ ನಾವು ಬ್ರಿಟಿಷರ ವಿರುದ್ಧ ವಿರೋಚಿತ ಹೋರಾಟವನ್ನು ಸಂಘಟಿಸಿದೆವು. ಇದರ ಪರಿಣಾಮವಾಗಿ ಭಾರತ ಸ್ವಾತಂತ್ರ್ಯ ಪಡೆಯಿತು. ಆದರೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನೂ ನಿರ್ವಹಿಸದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ, ಇದೀಗ ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದೆ ಎಂದು ರಾಹುಲ್‌ ಗಾಂಧಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೋಮು ಆಧಾರದಲದಲ್ಲಿ ಈ ದೇಶವನ್ನು ವಿಭಜಿಸುತ್ತಿದೆ. ಜನರ ಮನಸ್ಸಿನಲ್ಲಿ ದ್ವೇಷ ಬಿತ್ತಿರುವ ಕೋಮುವಾದಿಗಳು, ದೇಶವನ್ನು ಮತ್ತೆ ಇಬ್ಬಾಗ ಮಾಡುವತ್ತ ಹೆಜ್ಜೆ ಇರಿಸಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷ ಇದಕ್ಕೆ ಎಂದಿಗೂ ಆಸ್ಪದ ನೀಡುವುದಿಲ್ಲ ಎಂದು ರಾಹುಲ್‌ ಗಾಂಧಿ ಗುಡುಗಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ನಾನು ನನ್ನ ರಾಷ್ಟ್ರಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದೇನೆ. ಯಾತ್ರೆಯ ಸಮಯದಲ್ಲಿ ಸಾವಿರಾರು ಜನರು ಕಾಂಗ್ರೆಸ್‌ ಪಕ್ಷದ ಸಂಪರ್ಕಕ್ಕೆ ಬಂದಿದ್ದಾರೆ. ನಾನು ರೈತರ ಎಲ್ಲಾ ಸಮಸ್ಯೆಗಳನ್ನು ಆಲಿಸಿದ್ದೇನೆ ಮತ್ತು ಅವರ ನೋವನ್ನು ಅರಿತುಕೊಂಡಿದ್ದೇನೆ ಎಂದು ರಾಹುಲ್‌ ಗಾಂಧಿ ನುಡಿದರು.

ಸಂಸತ್ತಿನಲ್ಲಿ ಅದಾನಿ ಹಾಗೂ ತಮ್ಮ ನಡುವಿನ ಸ್ನೇಹ ಸಂಬಂಧದ ಕುರಿತು ಕೇಳಲಾದ ಪ್ರಶ್ನೆಗೆ, ಪ್ರಧಾನಿ ಮೋದಿ ಉತ್ತರಿಸಲಿಲ್ಲ. ಆದರೆ ನಾವು ಈ ಕುರಿತು ನಿರಂತರವಾಗಿ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ. ಉದ್ಯಮಿಗಳ ಲಾಭಕ್ಕಾಗಿ ದೇಶದ ಜನರನ್ನು ಬಲಿಕೊಡಲು ನಾವು ಪ್ರಧಾನಿ ಮೋದಿ ಅವರಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ರಾಹುಲ್‌ ಗಾಂಧಿ ಹರಿಹಾಯ್ದರು.

ಇನ್ನು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಂಬಂಧಿಸದ ವಿಷಯಗಳನ್ನು ಪ್ರಸ್ತಾಪಿಸಲಾಗುತ್ತಿದೆ. ರಾಜಕೀಯವು ನಿರುದ್ಯೋಗವನ್ನು ಹೇಗೆ ಎದುರಿಸುವುದು, ಜಿಡಿಪಿಯನ್ನು ಬಲಪಡಿಸುವುದು, ನಮ್ಮ ಆರ್ಥಿಕತೆಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು. ಆದರೆ ಬಿಜೆಪಿ ಹಿಂದೂ-ಮುಸ್ಲಿಂ ವಿವಾದವನ್ನು ಕೆಣಕುತ್ತಾ ಕಾಲಹರಣ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಈ ದೇಶದ ಜನರ ಮೇಲೆ ದಾಳಿ ನಡೆಸಿದೆ. ಆದರೆ ಕಾಂಗ್ರೆಸ್‌ ಪಕ್ಷ ದೇಶದ ಜನರೊಂದಿಗೆ ಗಟ್ಟಿಯಾಗಿ ನಿಂತಿದೆ. ನಾವು ಜನರನ್ನು ಸೋಲಲು ಬಿಡುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಗಟ್ಟಿ ಧ್ವನಿಯಲ್ಲಿ ಹೇಳಿದರು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ