logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Odisha Road Accident: ರೈಲು ದುರಂತದ ಬಳಿಕ ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ; ಎರಡು ಬಸ್​​ಗಳು ಡಿಕ್ಕಿಯಾಗಿ 10 ಮಂದಿ ಸಾವು

Odisha Road Accident: ರೈಲು ದುರಂತದ ಬಳಿಕ ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ; ಎರಡು ಬಸ್​​ಗಳು ಡಿಕ್ಕಿಯಾಗಿ 10 ಮಂದಿ ಸಾವು

Meghana B HT Kannada

Jun 26, 2023 08:04 AM IST

google News

ಒಡಿಶಾ ರಸ್ತೆ ಅಪಘಾತ

    • Ganjam road accident: ಒಡಿಶಾದ ಗಂಜಾಂ ಜಿಲ್ಲೆಯ ದಿಗಪಹಂಡಿಯ ಖೇಮುಂಡಿ ಕಾಲೇಜು ಬಳಿ ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ (OSRTC) ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿ 10 ಮಂದಿ ಮೃತಪಟ್ಟಿದ್ದಾರೆ.
ಒಡಿಶಾ ರಸ್ತೆ ಅಪಘಾತ
ಒಡಿಶಾ ರಸ್ತೆ ಅಪಘಾತ

ಗಂಜಾಂ (ಒಡಿಶಾ): ಜೂನ್​ 2 ರಂದು ಒಡಿಶಾದಲ್ಲಿ ಸಂಭವಿಸಿದ್ದ ಭೀಕರ ರೈಲು ದುರಂತದ (Odisha train tragedy) ಕಹಿ ನೆನಪಿನಿಂದಲೇ ಇನ್ನೂ ಹೊರಬರಲಾಗಲಿಲ್ಲ. ಹೀಗಿರುವಾಗ ಅದೇ ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿ 10 ಮಂದಿ ಮೃತಪಟ್ಟಿದ್ದು, 8 ಜನರು ಗಾಯಗೊಂಡಿದ್ದಾರೆ.

ಒಡಿಶಾದ ಗಂಜಾಂ ಜಿಲ್ಲೆಯ (Ganjam,Odisha) ದಿಗಪಹಂಡಿಯ ಖೇಮುಂಡಿ ಕಾಲೇಜು ಬಳಿ ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ (OSRTC) ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಗಾಯಾಳು ಪ್ರಯಾಣಿಕರನ್ನು ಬರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಎಸ್‌ಆರ್‌ಟಿಸಿ ಬಸ್ ರಾಯಗಡದಿಂದ ಭುವನೇಶ್ವರಕ್ಕೆ ತೆರಳುತ್ತಿದ್ದು, ಖಾಸಗಿ ಬಸ್ ಬೆರ್ಹಾಂಪುರದಿಂದ ಜಿಲ್ಲೆಯ ಖಂಡದೇಲಿ ಗ್ರಾಮದಿಂದ ಮದುವೆ ಸಮಾರಂಭ ಮುಗಿಸಿ ಬರುತ್ತಿದ್ದವರನ್ನು ಹೊತ್ತು ಹಿಂದಿರುಗುತ್ತಿತ್ತು.

ಎರಡು ಬಸ್​ಗಳು ಡಿಕ್ಕಿಯಾಗಿ 10 ಮಂದಿ ಪ್ರಾಣಬಿಟ್ಟಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಿಗೆ ಎಲ್ಲ ರೀತಿಯ ನೆರವು ನೀಡಲು ಪ್ರಯತ್ನಿಸುತ್ತಿದ್ದೇವೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಗಂಜಾಂ ಜಿಲ್ಲಾಧಿಕಾರಿ ದಿವ್ಯಜ್ಯೋತಿ ಪರಿದಾ ಮಾಹಿತಿ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಬೆರ್ಹಾಂಪುರ ಎಸ್ಪಿ ಶರವಣ ವಿವೇಕ್, ಪ್ರಾಥಮಿಕ ಮಾಹಿತಿ ಪ್ರಕಾರ, ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಖಾಸಗಿ ಬಸ್‌ನ ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ಸರ್ಕಾರಿ ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ದಿಗಪಹಂಡಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಲವಾರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಅಪಘಾತದ ಹಿಂದಿನ ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಬರ್ಹಾಂಪುರ ಎಸ್ಪಿ ತಿಳಿಸಿದ್ದಾರೆ.

ಪರಿಹಾರ ಘೋಷಣೆ

ಇನ್ನು ಘಟನೆಗೆ ಸಂತಾಪ ಸೂಚಿಸಿರುವ ಒಡಿಶಾ ಸರ್ಕಾರವು ಪ್ರತಿ ಗಾಯಾಳುಗಳ ಚಿಕಿತ್ಸೆಗೆ 30,000 ರೂಪಾಯಿ ನೀಡುವುದಾಗಿ ಘೋಷಿಸಿದೆ. ಮೃತರ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ ನೀಡುವುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್​ ಘೋಷಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ