Odisha Train Accident: ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ಗೆ ಅಪಘಾತ ನಂತರ ಪ್ರಜ್ಞೆ ಇತ್ತು; ಗೂಡ್ಸ್ ಟ್ರೈನ್ ಚಾಲಕನೂ ಬಚಾವ್
Jun 05, 2023 10:31 AM IST
ಒಡಿಶಾದ ಬಾಲಸೋರ್‌ನಲ್ಲಿ ಭೀಕರ ಅಪಘಾತದಲ್ಲಿ ಹಳಿ ತಪ್ಪಿ ಬಿದ್ದಿರುವ ರೈಲು ಬೋಗಿಗಳು (REUTERS)
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ಗೆ ಅಪಘಾತದ ನಂತರವೂ ಪ್ರಜ್ಞೆ ಇತ್ತು. ಗ್ರೀನ್ ಸಿಗ್ನಲ್ ಸಿಕ್ಕಿರುವುದನ್ನು ಖಚಿತಪಡಿಸಿಕೊಂಡೇ ಅವರು ಮುಂದೆ ಸಾಗಿದ್ದರು ಎಂದು ರೈಲ್ವೆ ಮಂಡಳಿ ಖಚಿತಪಡಿಸಿದೆ.
ಬಾಲಸೋರ್ (ಒಡಿಶಾ): ಭೀಕರ ರೈಲು ದುರಂತ ನಡೆದಿದ್ದ ಒಡಿಶಾದ ಬಾಲಸೋರ್‌ನಲ್ಲಿ (Odisha Train Accident) ಎನ್‌ಡಿಆರ್‌ಎಫ್‌ನಿಂದ ಅವಶೇಷಗಳ ತೆರವು ಹಾಗೂ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದ್ದು, ರೈಲು ಸಂಚಾರ ಇಂದಿನಿಂದ ಪುನಾರಂಭ ಆಗಲಿದೆ.
ಕಳೆದ ಶುಕ್ರವಾರ (ಜೂನ್ 2) ಹಳಿತಪ್ಪಿದ ಪರಿಣಾಮ 280 ಮಂದಿಯ ಸಾವಿಗೆ ಕಾರಣವಾಗಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ಗೆ ಅಪಘಾತದ ನಂತರವೂ ಪ್ರಜ್ಞೆ ಇತ್ತು. ಗ್ರೀನ್ ಸಿಗ್ನಲ್ ಸಿಕ್ಕಿರುವುದನ್ನು ಖಚಿತಪಡಿಸಿಕೊಂಡೇ ಅವರು ಮುಂದೆ ಸಾಗಿದ್ದರು ಎಂದು ರೈಲ್ವೆ ಮಂಡಳಿ ಖಚಿತಪಡಿಸಿದೆ.
ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯ ವರ್ಮಾ ಸಿನ್ಹಾ ಅವರು ನಿನ್ನೆ (ಜೂನ್ 4, ಭಾನುವಾರ) ಕೋರಮಂಡಲ್ ರೈಲಿನ ಚಾಲಕನೊಂದಿಗೆ ನಡೆಸಿದ ಸಂಭಾಷಣೆಯನ್ನು ವಿವರಿಸಿದ್ದಾರೆ.
ಅಪಘಾತದ ಸಮಯದಲ್ಲಿ ಚಾಲಕನಿಗೆ ಪ್ರಜ್ಞೆ ಇತ್ತು. ಗ್ರೀನ್ ಸಿಗ್ನಲ್ ಇದ್ದ ಕಾರಣ ಚಾಲನೆಗೆ ಮುಂದಾಗಿದ್ದರಂತೆ. ಸದ್ಯ ಅಪಘಾತದಲ್ಲಿ ಅವರು ಕೂಡ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಯವರ್ಮ ಸಿನ್ಹಾ ತಿಳಿಸಿದ್ದಾರೆ.
ಜಿಎನ್ ಮೊಹಂತಿ ಅವರು ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್ ಆಗಿದ್ದವರು. ಹಜಾರಿ ಬೆಹಾರ ಎಂಬುವರು ಸಹಾಯಕ ಲೋಕೋ ಪೈಲಟ್ ಆಗಿದ್ದರು. ಇಬ್ಬರು ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.
ಎ1 ಟ್ರೈನರ್ ಹಾಗೂ ಇಬ್ಬರು ಸಾಮಾನ್ಯ ಟ್ರೈನರ್‌ಗಳು ಹಾಗೂ ಗಾರ್ಡ್ ಕೋಚ್ ರೈಲಿನಲ್ಲಿ ಇದ್ದರು. ಕೊನೆಯ ಎರಡು ಕೋಚ್‌ಗಳು ಹಳಿತಪ್ಪಿದ್ದವು. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಸಮಯದಲ್ಲಿ ಲೋಕೋ ಪೈಲಟ್ ರೈಲಿನ ಒಳಗೆ ಇರಲಿಲ್ಲ. ಆತ ಜೀವ ಉಳಿಸಿಕೊಳ್ಳಲು ಹೊರಗಡೆ ಜಿಗಿದ್ದರು ಅಂತಲೂ ಜಯವರ್ಮ ಹೇಳಿದ್ದಾರೆ.
ರೈಲ್ವೆ ನಿಮಯಗಳ ಪ್ರಕಾರ ಗೂಡ್ಸ್ ರೈಲಿನ ಗಾರ್ಡ್ ಮತ್ತು ಲೋಕೋ ಪೈಲಟ್‌ಗಳು ಎಲ್ಲಾದರೂ ರೈಲನ್ನು ನಿಲ್ಲಿಸಿದಾಗ ಮೊದಲು ರೈಲಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಹೀಗಾಗಿ ಇವರೆಲ್ಲಾ ರೈಲಿನ ಹೊರಗಿದ್ದು, ತಪಾಸಣೆಯ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು ಎಂದು ವರ್ಮಾ ವಿವರಿಸಿದ್ದಾರೆ.
ಕೋರಮಂಡಲ್ ಎಕ್ಸ್‌ಪ್ರೆಸ್ ಲೋಕೋ ಪೈಲಟ್ ತಪ್ಪಿಲ್ಲ
ಗೂಡ್ಸ್ ರೈಲು ನಿಂತಿದ್ದ ಲೂಪ್ ಲೈನ್ ಅನ್ನು ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ತೆಗೆದುಕೊಳ್ಳುವಂತೆ ಮಾಡಿದ ಕೆಲವು ಸಿಗ್ನ್‌ಲಿಂಗ್ ಹಸ್ತಕ್ಷೇಪ ಕುರಿತು ಪ್ರಾಥಮಿಕ ತನಿಖೆಯಾಗಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ಗೆ ರೈಲ್ವೆ ಮಂಡಳಿ ಕ್ಲೀನ್ ಚಿಟ್ ನೀಡಿದೆ. ರೈಲು ತನ್ನ ವೇಗದ ಮಿತಿಯಲ್ಲೇ ಇತ್ತು. ಯಾವುದೇ ಸಿಗ್ನಲ್ ಜಂಪ್ ಮಾಡಲಿಲ್ಲ ಎಂದು ರೈಲ್ವೆ ಅಂಡಳಿ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.
ವಿಭಾಗ