Odisha Train Accident: ಒಡಿಶಾ ರೈಲು ಅಪಘಾತ; ಇಂದಿನಿಂದ ಬಹುತೇಕ ರೈಲು ಸಂಚಾರ ಪುನಾರಂಭ
Jun 05, 2023 09:26 AM IST
ಒಡಿಶಾದ ಬಾಲಸೋರ್‌ನಲ್ಲಿರು ರೈಲು ಮಾರ್ಗದಲ್ಲಿ ಇಂದಿನಿಂದ ರೈಲು ಸಂಚಾರ ಪುನಾರಂಭವಾಗಲಿದೆ
ಒಡಿಶಾದ ಬಾಲಸೋರ್ ಮಾರ್ಗದಲ್ಲಿ ಭೀಕರ ಅಪಘಾತದ ಪರಿಣಾಮ ಎರಡು ದಿನಗಳಿಂದ ಸ್ಥಗಿತವಾಗಿದ್ದ ರೈಲು ಸಂಚಾರ ಇಂದಿನಿಂದ ಪುನಾರಂಭವಾಗಲಿದೆ.
ಬಾಲಸೋರ್ (ಒಡಿಶಾ): ಹಿಂದೆಂದು ಕಂಡು ಕೇಳರಿಯದ ಭೀಕರ ರೈಲು ದುರಂತಕ್ಕೆ (Odisha Train Accident) ಸಾಕ್ಷಿಯಾಗಿದ್ದ ಒಡಿಶಾದ ಬಾಲಸೋರ್‌ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ರೈಲು ಅಪಘಾತವಾದ 50 ಗಂಟೆಗಳ ಬಳಿಕ ರೈಲು ಹಳಿಗಳ ಮೇಲಿನ ಅವಶೇಷಗಳ ತೆರವು ಕಾರ್ಯಾಚರಣೆ ಮುಕ್ತಾಯವಾಗಿದ್ದು, ಹಳಿಗಳ ಪರಿಶೀಲನೆ ಕೂಡ ನಡೆದಿದೆ.
ಹೀಗಾಗಿ ಇಂದಿನಿಂದ (ಜೂನ್ 5, ಸೋಮವಾರ) ಈ ಮಾರ್ಗದಲ್ಲಿ ರೈಲು ಸಂಚಾರ ಪುನಾರಂಭ ಆಗುತ್ತಿದೆ. ಬಾಲಸೋರ್ ರೈಲು ದುರಂತದಿಂದಾಗಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಹೊರಡಬೇಕಿದ್ದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಒಡಿಶಾದ ಬಾಲಸೋರ್‌ನ ಬಹನಾಗಾ ಬಜಾರ್ ನಿಲ್ದಾಣದ ಸಮೀಪ ಕಳೆದ ಶುಕ್ರವಾರ ರಾತ್ರಿ 7.15ರ ಸುಮಾರಿಗೆ ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 280ಕ್ಕೆ ಏರಿಕೆಯಾಗಿದೆ. 1000ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಪ್ರಾಥಮಿಕ ತನಿಖೆಯಲ್ಲಿ ರೈಲು ಅಪಘಾತಕ್ಕೆ ಮಾನವ ದೋಷ ಕಂಡುಬಂದಿದೆ. ಭಾನುವಾರ (ಜೂನ್ 4) ಬಾಲಸೋರ್ ರೈಲು ದುರಂತದ ಸ್ಥಳಕ್ಕೆ ಭೇಟಿ ನೀಡಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲನೆ ನಡೆಸಿದ್ದು, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿ ಬದಲಾವಣೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಒಡಿಶಾದ ಬಾಲಸೋರ್ ಬಳಿ ಶುಕ್ರವಾರ (ಜೂನ್ 2) ಸಂಜೆ ಬಹನಾಗಾ ರೈಲು ನಿಲ್ದಾಣದ ಬಳಿ ನಡೆದ ಭೀಕರ ರೈಲು ಅಪಘಾತ ಸಂಭವಿಸಿತ್ತು. ಗೂಡ್ಸ್ ರೈಲು ಮತ್ತು ಎರಡು ಎಕ್ಸ್‌ಪ್ರೆಸ್ ರೈಲುಗಳ ಬೋಗಿಗಳು ಹಳಿ ತಪ್ಪಿದ್ದು, ಭಾರಿ ಅನಾಹುತಕ್ಕೆ ಕಾರಣವಾಗಿದೆ. ಈ ಅಪಘಾತದಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ (12841)ನ 10-12 ಬೋಗಿಗಳು ಬಾಲೇಶ್ವರ ಬಳಿ ಹಳಿತಪ್ಪಿ ಎದುರಿನ ಹಳಿಯಲ್ಲಿ ಬಿದ್ದಿದ್ದವು.
ಸ್ವಲ್ಪ ಸಮಯದ ನಂತರ, ಯಶವಂತಪುರದಿಂದ ಹೌರಾಗೆ ಹೋಗುತ್ತಿದ್ದ ಯಶವಂತಪುರ ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12864) ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅದರ 3-4 ಬೋಗಿಗಳು ಹಳಿತಪ್ಪಿದ್ದವು. ಸದ್ಯ ಪರಿಸ್ಥಿತಿ ಸುಧಾರಿಸಿದ್ದು, ದುರಂತದಲ್ಲಿ ಗಾಯಗೊಂಡಿರುವ ನೂರಾರು ಗಾಯಾಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಡಿಶಾದ ಭೀಕರ ರೈಲು ಅಪಘಾತದ ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದ್ದ ಪರಿಣಾಮ ಬೆಂಗಳೂರಿನಿಂದ ಹೊರಡಬೇಕಿದ್ದ ಕೆಲವು ರೈಲುಗಳನ್ನು ನೈಋತ್ಯ ರೈಲ್ವೆ ರದ್ದುಗೊಳಿಸಿತ್ತು.
12551 - SMVT ಬೆಂಗಳೂರು To ಕಾಮಾಖ್ಯ, 12864 - SMVT ಬೆಂಗಳೂರು To ಹೌರಾ, 12551 - SMVT ಬೆಂಗಳೂರು To ಭಾಗಲ್ಪುರ, 12245 - ಹೌರಾ To SMVT ಬೆಂಗಳೂರು ರೈಲು ಸಂಚಾರ ರದ್ದಾಗಿತ್ತು. ಇಂದಿನಿಂದ ಬಹುತೇಕ ಎಲ್ಲಾ ರೈಲುಗಳ ಸಂಚಾರ ಪುನಾರಂಭ ಆಗಲಿವೆ ಎಂದು ಮೂಲಗಳು ತಿಳಿಸಿವೆ.
ವಿಭಾಗ