logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  12-14 ವರ್ಷದ 3 ಕೋಟಿ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್..

12-14 ವರ್ಷದ 3 ಕೋಟಿ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್..

Meghana B HT Kannada

May 10, 2022 11:08 AM IST

google News

ಮಕ್ಕಳಿಗೆ ಕೋವಿಡ್-19 ಲಸಿಕೆ

    • ಮಾರ್ಚ್​ 16 ರಿಂದ ಇಲ್ಲಿಯವರೆಗೆ 12-14 ವರ್ಷ ವಯಸ್ಸಿನ ಮೂರು ಕೋಟಿಗೂ ಹೆಚ್ಚು ಮಕ್ಕಳಿಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. 
ಮಕ್ಕಳಿಗೆ ಕೋವಿಡ್-19 ಲಸಿಕೆ
ಮಕ್ಕಳಿಗೆ ಕೋವಿಡ್-19 ಲಸಿಕೆ

ನವದೆಹಲಿ: 12-14 ವರ್ಷ ವಯಸ್ಸಿನ ಮೂರು ಕೋಟಿಗೂ ಹೆಚ್ಚು ಮಕ್ಕಳಿಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಹೇಳಿದ್ದಾರೆ.

ಹೈದರಾಬಾದ್ ಮೂಲದ ಬಯೋಲಾಜಿಕಲ್​ -ಇ ಲಿಮಿಟೆಡ್​ ಕಂಪನಿ ತಯಾರಿಸಿರುವ ಸ್ವದೇಶಿ ಕೋವಿಡ್​ ಲಸಿಕೆಯಾದ ‘ಕಾರ್ಬೆವಾಕ್ಸ್‌’ ಅನ್ನು ಮಾರ್ಚ್ 16 ರಂದು 12-14 ವಯಸ್ಸಿನ ಮಕ್ಕಳಿಗೆ ನೀಡಲು ಆರಂಭಿಸಲಾಯಿತು. ಈ ಲಸಿಕೆಯ ಎರಡನೇ ಡೋಸ್​ ಅನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ.

"ಲಸಿಕಾ ಅಭಿಯಾನಕ್ಕೆ ಮಕ್ಕಳು ಮಹತ್ವದ ಕೊಡುಗೆ ನೀಡುತ್ತಿದ್ದಾರೆ. 12-14 ವಯೋಮಾನದ 3 ಕೋಟಿ ಮಕ್ಕಳು 1 ನೇ ಡೋಸ್ ಕೋವಿಡ್​ ಲಸಿಕೆಯನ್ನು ಪಡೆದಿದ್ದಾರೆ. ಲಸಿಕೆ ಹಾಕಿಸಿಕೊಂಡ ನನ್ನ ಎಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು" ಎಂದು ಮಾಂಡವಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಸೋಮವಾರದ ವರೆಗೆ 3,06,69,820 ಮಕ್ಕಳಿಗೆ ಕಾರ್ಬೆವಾಕ್ಸ್‌ ಲಸಿಕೆಯ ಮೊದಲ ಡೋಸ್​ ಹಾಗೂ 1,02,00,272 ಮಕ್ಕಳಿಗೂ ಎರಡೂ ಡೋಸ್​ ನೀಡಲಾಗಿದೆ.

2021ರ ಜನವರಿಯಲ್ಲಿ ಭಾರತದಲ್ಲಿ ಕೊರೊನಾ ಲಸಿಕಾಭಿಯಾನ ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 190.48 ಕೋಟಿ (1,90,48,54,263) ಡೋಸ್​ ವ್ಯಾಕ್ಸಿನ್​ ಹಾಕಲಾಗಿದೆ. ಮೊದಲು ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ಹೋರಾಟದಲ್ಲಿದ್ದ ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನ್​ ಹಾಕಲಾಯಿತು. ನಂತರ 2021ರ ಮಾರ್ಚ್​​​ನಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು.

2021ರ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ಅವಕಾಶ ನೀಡುವ ಮೂಲಕ ಸರ್ಕಾರವು ತನ್ನ ವ್ಯಾಕ್ಸಿನೇಷನ್ ಡ್ರೈವ್ ಅನ್ನು ವಿಸ್ತರಿಸಿತು. 2022ರ ಜನವರಿ 3 ರಿಂದ ಭಾರತದಲ್ಲಿ ಅಪ್ರಾಪ್ತ ವಯಸ್ಕರಿಗೆ (15-18 ವಯಸ್ಸಿನವರಿಗೆ) ವ್ಯಾಕ್ಸಿನೇಷನ್ ಅನ್ನು ಆರಂಭ ಮಾಡಲಾಯಿತು. ಈ ವರ್ಷ ಮಾರ್ಚ್​ 16 ರಿಂದ 12-14 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.

ಇದಲ್ಲದೇ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಈ ವರ್ಷ ಮಾರ್ಚ್ 1 ರಿಂದ ಹಾಗೂ 18-59 ವರ್ಷ ವಯಸ್ಸಿನವರಿಗೆ ಏಪ್ರಿಲ್ 10 ರಿಂದ ಮುನ್ನೆಚ್ಚರಿಕೆ ಡೋಸ್​ (ಬೂಸ್ಟರ್​) ಹಾಕಲಾಗುತ್ತಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ