Fact Check: ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಧನದ ಸುದ್ದಿ ಹರಡಲು ಪಾಕ್ ಹಂಗಾಮಿ ಪ್ರಧಾನಿ ಹೆಸರಿನ ಬಳಕೆ
Dec 18, 2023 09:32 PM IST
ಭೂಗತ ಪಾತಕಿ ದಾವೂದ್ ಇಬ್ರಾಹಿಂ
- Dawood Ibrahim: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಷನ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೆಲವೆಡೆ ವರದಿಯಾದರೆ, ದಾವೂದ್ ಇಬ್ರಾಹಿಂ ಮೃತಪಟ್ಟಿದ್ದಾನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವದಂತಿ ಹರಡಿದೆ. ಇದೀಗ ಅಸಲಿಯತ್ತು ಏನೆಂದು ನೋಡೋಣ..
ನಿನ್ನೆಯಿಂದ (ಡಿ.17 ಸೋಮವಾರ) ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಚಾರವೇ ಸದ್ದು ಮಾಡುತ್ತಿದೆ. ದಾವೂದ್ ಇಬ್ರಾಹಿಂಗೆ ವಿಷಪ್ರಾಷನ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೆಲವೆಡೆ ವರದಿಯಾದರೆ, ದಾವೂದ್ ಇಬ್ರಾಹಿಂ ಮೃತಪಟ್ಟಿದ್ದಾನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವದಂತಿ ಹರಡಿತ್ತು.
ದಾವೂದ್ ಇಬ್ರಾಹಿಂ ಸಾವನ್ನಪ್ಪಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರ ಎಕ್ಸ್ (ಟ್ವಿಟರ್) ಖಾತೆಯಿಂದ ಟ್ವೀಟ್ ಮಾಡಿದಂತಿರುವ ಸ್ರೀನ್ಶಾಟ್ ಎಲ್ಲೆಡೆ ವೈರಲ್ ಆಗಿತ್ತು. ಆದರೆ ಇದು ನಕಲಿ ಸಂದೇಶ ಎಂಬುದು ತಿಳಿದುಬಂದಿದೆ. ಕೆಲವರು ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ ಇದು ಪಾಕಿಸ್ತಾನದ ಹಂಗಾಮಿ ಪಿಎಂ ಕಾಕರ್ ಅವರ ಖಾತೆಯಲ್ಲ ಹಾಗೂ ದಾವೂದ್ ಇಬ್ರಾಹಿಂ ಮೃತಪಟ್ಟಿದ್ದಾನೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ ಎಂಬುದು ಸ್ಪಷ್ಟವಾಗಿದೆ.
ಕಾಕರ್ ಅವರ ಟ್ವಿಟರ್ ಖಾತೆಯಿಂದ ಅವರೇ ಮೆಸೆಜ್ ಮಾಡಿದ್ದಾಗಿ ಬಿಂಬಿಸಲಾಗಿದ್ದ ಪೋಸ್ಟ್ನಲ್ಲಿ “ದಾವೂದ್ ಇಬ್ರಾಹಿಂ ಅಪರಿಚಿತರಿಂದ ವಿಷ ಪ್ರಾಷನಕ್ಕೊಳಗಾಗಿ ನಿಧನರಾದರು. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾ ಅವರಿಗೆ ಸ್ವರ್ಗದಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ” ಎಂದು ಅಲ್ಲಾನೊಂದಿಗೆ ಪ್ರಾರ್ಥನೆ ಮಾಡಿಕೊಂಡಂತೆ ಬರೆಯಲಾಗಿತ್ತು.
ಆದರೆ DFRAC ಎಂಬ ಸ್ವತಂತ್ರ ಸತ್ಯ-ಪರಿಶೀಲನಾ ವೆಬ್‌ಸೈಟ್ ಇದು ಸುಳ್ಳು ಎಂದು ತಿಳಿಸಿದೆ. ಸ್ಕ್ರೀನ್‌ಶಾಟ್‌ನಲ್ಲಿರುವ ಯೂಸರ್ ನೇಮ್ ಕಾಕರ್ ಅವರ ಅಧಿಕೃತ ಖಾತೆಗೆ ಹೊಂದಿಕೆಯಾಗುವುದಿಲ್ಲ. ಇದರಲ್ಲಿ Kakar ಬದಲು Kakkar ಎಂದಿದೆ. ಒಂದು K ಅಕ್ಷರ ಹೆಚ್ಚುವರಿಯಾಗಿದೆ. ದಾವೂದ್ ಇಬ್ರಾಹಿಂ ನಿಧನದ ಸುದ್ದಿ ಹರಡಲು ಪಾಕ್ ಹಂಗಾಮಿ ಪ್ರಧಾನಿ ಹೆಸರನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.
1955 ರಲ್ಲಿ ಜನಿಸಿದ ದಾವೂದ್ ಮುಂಬೈನ ಡೋಂಗ್ರಿ ಎಂಬ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದನು. 1993 ರ ಮುಂಬೈ ಸ್ಫೋಟದ ನಂತರ ಆತ ಭಾರತವನ್ನು ತೊರೆದಿದ್ದನು. 257 ಜನರನ್ನು ಬಲಿ ಪಡೆದ, 700ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಮುಂಬೈ ಸ್ಫೋಟದ ಮಾಸ್ಟರ್ಮೈಂಡ್ ಈತನೇ ಆಗಿದ್ದಾನೆ. ಈತ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭೂಗತ ಪಾತಕಿ. ಮೂರು ದಶಕದ ಹಿಂದೆ ಭಾರತದಿಂದ ಪರಾರಿಯಾದ ಇಬ್ರಾಹಿಂ ವಿವಿಧ ದೇಶಗಳಲ್ಲಿ ನೆಲೆಸಿ ಈಗ ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದಾನೆ ಎನ್ನುವ ಮಾಹಿತಿಯಿದೆ.