PAN - Aadhaar Link: ಪ್ಯಾನ್ -ಆಧಾರ್ ಲಿಂಕ್ ಆಗಿಲ್ವ? ತಡ ಬೇಡ ಇಂದೇ ಲಿಂಕ್ ಮಾಡಿ- ಸಿಬಿಡಿಟಿ ಎಚ್ಚರಿಕೆ ಸಂದೇಶ; ಲಾಸ್ಟ್ ಡೇಟ್ ಯಾವಾಗ
Feb 14, 2023 04:01 PM IST
ಪ್ಯಾನ್ - ಆಧಾರ್ ಜೋಡಣೆ (ಸಾಂಕೇತಿಕ ಚಿತ್ರ)
PAN - Aadhaar Link: ಪ್ಯಾನ್ ಮತ್ತು ಆಧಾರ್ ಜೋಡಣೆಗೆ ಇನ್ನು ಹೆಚ್ಚು ಕಾಲಾವಕಾಶ ಸಿಗಲ್ಲ. ಆದಷ್ಟು ಬೇಗ ಲಿಂಕ್ ಮಾಡಿ. ಆಧಾರ್ ಜತೆಗೆ ಜೋಡಿಸದ ಪ್ಯಾನ್ ಏಪ್ರಿಲ್ 1ರ ನಂತರ ನಿಷ್ಕ್ರಿಯವಾಗಲಿದೆ ಎಂದು ಸಿಬಿಡಿಟಿ ಎಚ್ಚರಿಸಿದೆ.
ಎಕ್ಸೆಮ್ಟ್ ಕೆಟಗರಿಗೆ ಬಾರದವರನ್ನು ಹೊರತುಪಡಿಸಿ ಉಳಿದ ಎಲ್ಲರ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್ - PAN) ಅನ್ನು ಆಧಾರ್ ಜತೆಗೆ ಜೋಡಿಸಲು ಅವಧಿ ಅನೇಕ ಸಲ ವಿಸ್ತರಣೆ ಆಗಿ, ಈಗ ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ), ಮಾರ್ಚ್ 31ರ ಒಳಗೆ ಪ್ಯಾನ್ -ಆಧಾರ್ ಜೋಡಣೆ ಮಾಡಿಸಬೇಕು. ತಪ್ಪಿದರೆ ಏಪ್ರಿಲ್ 1ರಿಂದ ಪ್ಯಾನ್ ಕೆಲಸ ಮಾಡಲ್ಲ. ತಡ ಮಾಡಬೇಡಿ, ಇಂದೇ ಪ್ಯಾನ್- ಆಧಾರ್ ಜೋಡಿಸಿ ಎಂದು ಹೇಳಿದೆ.
ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ, ಎಲ್ಲ ಪ್ಯಾನ್‌ದಾರರು ಅಂದರೆ ಎಕ್ಸೆಮ್ಟ್ ಕೆಟಗರಿಗೆ ಒಳಪಡದವರು ಅವರ ಪ್ಯಾನ್ ಅನ್ನು ಆಧಾರ್ ಜತೆಗೆ 2023ರ ಮಾರ್ಚ್ 31ರ ಒಳಗೆ ಜೋಡಿಸುವುದು ಕಡ್ಡಾಯ. ಆಧಾರ್‌ಗೆ ಜೋಡಿಸದ ಪ್ಯಾನ್ ಏಪ್ರಿಲ್ 1ರಿಂದ ಕೆಲಸ ಮಾಡುವುದಿಲ್ಲ ಎಂದು ಪ್ರಕಟಣೆ ಹೇಳಿದೆ.
ಕೇಂದ್ರ ಹಣಕಾಸು ಸಚಿವಾಲಯ 2017ರ ಮೇ ತಿಂಗಳಲ್ಲಿ ಪ್ರಕಟಿಸಿದ ಅಧಿಸೂಚನೆ ಪ್ರಕಾರ, ಎಕ್ಸೆಮ್ಟ್ ಕೆಟಗರಿಯಲ್ಲಿ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯಗಳ ವ್ಯಕ್ತಿಗಳು, ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ, ಅನಿವಾಸಿಗಳು, 80 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರು, ಅದೇ ರೀತಿ ಭಾರತದ ಪೌರರಲ್ಲದೇ ಇರುವಂಥವರು ಬರುತ್ತಾರೆ.
ಪ್ಯಾನ್ ಕೆಲಸ ಮಾಡದೇ ಇದ್ದರೆ ಏನಾಗುವುದು?
ಪ್ಯಾನ್ ನಿಷ್ಕ್ರಿಯವಾದರೆ, ಅಂತಹ ಪ್ಯಾನ್ ಬಳಸಿಕೊಂಡು ವ್ಯಕ್ತಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಸಾಧ್ಯವಾಗದು. ಬಾಕಿ ಇರುವಂತಹ ರಿಟರ್ನ್ಸ್ ಅನ್ನು ಮುಂದುವರಿಸಲಾಗದು. ಬಾಕಿ ಇರುವಂತಹ ರೀಫಂಡ್ ಕೂಡ ಸಿಗಲ್ಲ. ದೋಷಪೂರಿತ ರಿಟರ್ನ್ಸ್ ಅನ್ನು ಪೂರ್ಣಗೊಳಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಪೋರ್ಟಲ್ ಮೂಲಕ ಪ್ಯಾನ್-ಆಧಾರ್ ಜೋಡಣೆ ಹೇಗೆ
- ಆದಾಯ ತೆರಿಗೆಯ ಇ-ಫೈಲಿಂಗ್ ಅಧಿಕೃತ ವೆಬ್‌ಸೈಟ್ಸ್‌ಗಳಿಗೆ ಅಂದರೆ eportal.incometax.gov.in ಅಥವಾ incometaxindiaefiling.gov.in ಭೇಟಿ ನೀಡಿ.
- ನೀವು ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿರದಿದ್ದರೆ ರಿಜಿಸ್ಟರ್ ಆಗಿ. ಯೂಸರ್ ಐಡಿ ಆಗಿ ನಿಮ್ಮ ಪ್ಯಾನ್ ಸಂಖ್ಯೆ ಬಳಸಿ
- ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿಕೊಂಡು ಪೋರ್ಟಲ್‌ಗೆ ಲಾಗಿನ್ ಆಗಿ.
- ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್ ಜೋಡಿಸುವ ವಿಚಾರ ಕೇಳಲಾಗುತ್ತದೆ.
- ಒಂದೊಮ್ಮೆ ಈ ವಿಂಡೋ ಕಾಣಿಸಿಕೊಂಡಿಲ್ಲ ಎಂದಾದರೆ, ಮೆನು ಬಾರ್‌ನಲ್ಲಿರುವ ಪ್ರೊಫೈಲ್ ಸೆಟ್ಟಿಂಗ್‌ಗೆ ಹೋಗಿ ಮತ್ತು ಅಲ್ಲಿ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ
- ಹೆಸರು, ಜನ್ಮದಿನಾಂಕ ಮತ್ತು ಲಿಂಗ ಮುಂತಾದ ವಿವರ ಅಲ್ಲಿ ಮೊದಲೇ ಪ್ಯಾನ್ ಕಾರ್ಡ್‌ಗೆ ನೀವು ಕೊಟ್ಟಿರುವಂತೆ ಅಲ್ಲಿ ಕಾಣಸಿಗುತ್ತದೆ.
- ಸ್ಕ್ರೀನ್ ಮೇಲೆ ಮೂಡಿದ ಪ್ಯಾನ್ ವಿವರವನ್ನು ಆಧಾರ್‌ನಲ್ಲಿ ನಮೂದಾಗಿರುವ ವಿವರದ ಜತೆಗೆ ಪರಿಶೀಲಿಸಿ
- ಒಂದೊಮ್ಮೆ ಅಲ್ಲಿ ಹೊಂದಾಣಿಕೆ ಆಗದೇ ಇದ್ದರೆ, ಅದನ್ನು ಒಂದು ಕಡೆ ಸರಿಪಡಿಸಿ ಹೊಂದಾಣಿಕೆ ಮಾಡಿ.
- ಒಂದೊಮ್ಮೆ ವಿವರಗಳು ಹೊಂದಾಣಿಕೆ ಆದರೆ, ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಮತ್ತು ಲಿಂಕ್ ನೌ ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
- ಪಾಪ್ - ಅಪ್ ಮೆಸೇಜ್ ಕಾಣಿಸಲಿದ್ದು, ಅದರಲ್ಲಿ ಯುವರ್ ಆಧಾರ್ ಹ್ಯಾಸ್ ಬೀನ್ ಸಕ್ಸಸ್‌ಫುಲಿ ಲಿಂಕ್ಡ್ ಟು ಯುವರ್ ಪ್ಯಾನ್ ಎಂಬ ಸಂದೇಶ ಕಾಣುತ್ತದೆ.
ಪ್ಯಾನ್- ಆಧಾರ್ ಜೋಡಣೆಗೆ ಇತರೆ ವಿಧಾನಗಳು
- ಪ್ಯಾನ್- ಆಧಾರ್ ಜೋಡಣೆಗೆ ಜನರು https://www.utiitsl.com/ ಮತ್ತು https://www.egov-nsdl.co.in/ ವೆಬ್‌ಸೈಟ್‌ಗಳಿಗೂ ಹೋಗಬಹುದು.
- ಎಸ್‌ಎಂಎಸ್ ಮೂಲಕ ಮಾಡುವುದಾದರೆ- UIDPAN<12 ಅಂಕಿಯ ಆಧಾರ್><10 ಅಂಕಿಯ ಪ್ಯಾನ್> ಟೈಪ್ ಮಾಡಿ ಆ ಸಂದೇಶವನ್ನು 567678 ಅಥವಾ 56161ಕ್ಕೆ ಕಳುಹಿಸಬೇಕು.
- ಪ್ಯಾನ್ ಸರ್ವೀಸ್ ಸೆಂಟರ್‌ಗಳಿಗೆ ಭೇಟಿ ಕೊಡಿ: ಪ್ಯಾನ್ ಮತ್ತು ಆಧಾರ್ ಜೋಡಿಸುವ ಕೆಲಸವನ್ನು ಸಮೀಪದ ಪ್ಯಾನ್ ಸರ್ವೀಸ್ ಸೆಂಟರ್‌ಗೆ ತೆರಳಿ ಅಲ್ಲಿ ಕೂಡ ಮಾಡಿಸಬಹುದು. ʻAnnexure-I’ ಎಂಬ ಫಾರ್ಮ್ ಪಡೆದುಕೊಂಡು ಅದನ್ನು ಭರ್ತಿ ಮಾಡಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗಳ ಪ್ರತಿಯನ್ನು ಅದಕ್ಕೆ ಜೋಡಿಸಿ ಕೊಡಬೇಕು. ಈ ರೀತಿ ಮಾಡುವುದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.