Parliament Attack: ಲೋಕಸಭಾ ಕಲಾಪ ಸ್ಥಳಕ್ಕೆ ನುಗ್ಗಿದ ಆಗಂತುಕರು ಯಾರು, ಭದ್ರತಾ ಲೋಪದ ಕುರಿತು ಸಂಸದರು ಯಾರ‍್ಯಾರು ಏನೇನು ಹೇಳಿದರು
Dec 13, 2023 03:16 PM IST
ಲೋಕಸಭೆ ಕಲಾಪದ ವೇಳೆ ಒಳನುಗ್ಗಿ ದಾಂಧಲೆ ನಡೆಸಿದ ಯುವಕ
ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಒಬ್ಬ ಯುವಕ ಕಲಾಪ ಸ್ಥಳಕ್ಕೆ ನುಗ್ಗಿ ದಾಂದಲೆ ಉಂಟುಮಾಡಿದ ಪ್ರಸಂಗ ಕಳವಳ ಸೃಷ್ಟಿಸಿದೆ. ಸಂಸದ ಪ್ರತಾಪ ಸಿಂಹ ಅವರಿಂದ ಪಾಸ್ ಪಡೆದು ಈ ಕೃತ್ಯ ಎಸಗಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ನವದೆಹಲಿ: ಲೋಕಸಭೆ ಕಲಾಪ ನಡೆಯತ್ತಿದ್ದಾಗಲೇ ಭದ್ರತಾ ಲೋಪ ಉಂಟಾಗಿದ್ದು, ವೀಕ್ಷಕರ ಗ್ಯಾಲರಿಯಿಂದ ಇಬ್ಬರು ಸದನದ ಕಲಾಪ ಸ್ಥಳಕ್ಕೆ ನುಗ್ಗಿ ಗೊಂದಲ ಉಂಟು ಮಾಡಿದ ಕಳವಳಕಾರಿ ಘಟನೆ ನಡೆದಿದೆ. ಒಬ್ಬ ಯುವಕ ಮತ್ತು ಯುವತಿ ಈ ಕೃತ್ಯವೆಸಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ವೈರಲ್ ಆಗಿರುವ ವಿಡಿಯೋದ ದೃಶ್ಯದಲ್ಲಿ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಅಪರಿಚಿತ ವ್ಯಕ್ತಿ ಜಿಗಿದ ದೃಶ್ಯಗಳು ಕಂಡುಬಂದವು. ನಂತರ ಸ್ವಲ್ಪ ಗದ್ದಲ ಉಂಟಾಯಿತು. ಅಲ್ಲೆಲ್ಲ ಹಳದಿ ಬಣ್ಣದ ಹೊಗೆ ಕಂಡುಬಂತು. ಈ ಗದ್ದಲದ ಕಾರಣ ಸದನದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಒಬ್ಬ ಯುವಕ ಮತ್ತು ಯುವತಿ ಈ ರೀತಿ ವರ್ತನೆ ತೋರಿದವರು. ಬಂಧಿತ ಯುವಕನ ಹೆಸರು ಸಾಗರ್ ಶರ್ಮಾ. ಈತ ಮೈಸೂರಿನವನು ಎಂದು ಹೇಳಲಾಗುತ್ತಿದೆ. ಮಹಿಳೆ ಹೆಸರು ನೀಲಂ ಕೌರ್ ಎಂದು ಗೊತ್ತಾಗಿದೆ. ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದುಕೊಂಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನೀಲಂ ಕೌರ್ (42) ಮತ್ತು ಅನಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ. ವಿಚಾರಣೆ ಪ್ರಗತಿಯಲ್ಲಿದೆ.
ಲೋಕಸಭೆಯ ಕಲಾಪದ ವೇಳೆ ಭದ್ರತಾ ಲೋಪ ಯಾವಾಗ ನಡೆಯಿತು
ತುರ್ತು ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸುವ ಅವಧಿ ನಡೆಯುತ್ತಿತ್ತು. ಆಗ ಬಿಜೆಪಿ ಸಂಸದ ಖಗೇನ್ ಮುರ್ಮು ತಮ್ಮ ವಿಷಯವನ್ನು ಮಂಡಿಸುತ್ತಿದ್ದ ಸಂದರ್ಭದಲ್ಲಿ ಈ ಭದ್ರತಾ ಲೋಪ ನಡೆದಿದೆ. ಬಿಜೆಪಿಯ ರಾಜೇಂದ್ರ ಅಗರವಾಲ್ ಸಭಾಧ್ಯಕ್ಷ ಪೀಠದಲ್ಲಿದ್ದರು.
ಭದ್ರತಾ ಲೋಪದ ಕುರಿತು ಯಾರು ಏನು ಹೇಳಿದರು?
ಲೋಕಸಭೆಯಲ್ಲಿ ಭದ್ರತಾ ಉಲ್ಲಂಘನೆಯಲ್ಲಿ ಇಬ್ಬರು ಸಂದರ್ಶಕರ ಗ್ಯಾಲರಿಯಿಂದ ಸದನದ ಕಲಾಪ ಸ್ಥಳಕ್ಕೆ ಜಿಗಿದರು. ಅವರ ಕೈಯಲ್ಲಿ ಡಬ್ಬಿಗಳಿದ್ದವು. ಆ ಡಬ್ಬಿಗಳಿಂದ ಹಳದಿ ಹೊಗೆಯನ್ನು ಹೊರಸೂಸುತ್ತಿದ್ದವು ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದರು.
"ಇಬ್ಬರು 20 ವರ್ಷ ಆಸುಪಾಸಿನ ವಯಸ್ಸಿನ ಯುವಕರು ಇದ್ದಕ್ಕಿದ್ದಂತೆ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದರು. ಅವರ ಕೈಯಲ್ಲಿ ಡಬ್ಬಿಗಳಿದ್ದವು. ಈ ಡಬ್ಬಿಗಳಿಂದ ಹಳದಿ ಹೊಗೆಯನ್ನು ಹೊರಸೂಸುತ್ತಿದ್ದವು. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಿದ್ದರು. ಅವರು ಕೆಲವು ಘೋಷಣೆಗಳನ್ನು ಕೂಗುತ್ತಿದ್ದರು. ಹೊಗೆ ವಿಷಕಾರಿಯಾಗಿರಬಹುದು. ಇದು ವಿಶೇಷವಾಗಿ 2001 ರಲ್ಲಿ ಸಂಸತ್ತಿನ ಮೇಲೆ ದಾಳಿಯಾದ ಡಿಸೆಂಬರ್ 13 ರ ಅದೇ ದಿನ ಭದ್ರತೆಯ ಗಂಭೀರ ಉಲ್ಲಂಘನೆಯಾಗಿದೆ" ಎಂದು ಕಾರ್ತಿ ಚಿದಂಬರಂ ಎಎನ್‌ಐಗೆ ತಿಳಿಸಿದರು.
ಇಲ್ಲಿಗೆ ಬರುವವರೆಲ್ಲರೂ - ಸಂದರ್ಶಕರು ಅಥವಾ ವರದಿಗಾರರು - ಅವರು ಟ್ಯಾಗ್‌ಗಳನ್ನು ಹೊಂದಿರುವುದಿಲ್ಲ. ಹಾಗಾಗಿ, ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು. ಇದು ಭದ್ರತಾ ಲೋಪ, ಲೋಕಸಭೆಯ ಒಳಗೆ ಏನು ಬೇಕಾದರೂ ಆಗಬಹುದಿತ್ತು ಎಂದು ಸಮಾಜವಾದಿ ಪಕ್ಷದ ಸಂಸದ ಡಿಂಪಲ್ ಯಾದವ್ ಆರೋಪಿಸಿದ್ದಾರೆ.
"ಇದೇ ದಿನ ನಾವು 2001 ರಲ್ಲಿ (ಸಂಸತ್ತಿನ ದಾಳಿ) ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಜನರ ಪುಣ್ಯತಿಥಿಯನ್ನು ಆಚರಿಸಿದ್ದೇವೆ. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು. ಅನಿಲ ಹೊರಸೂಸುವ ಡಬ್ಬಿ ಎಸೆದರು. ಸಂಸದರು ಅವರನ್ನು ಹಿಡಿದರು. ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು. ಸದನ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ. ಇದರಿಂದ ಖಂಡಿತವಾಗಿಯೂ ಭದ್ರತಾ ಲೋಪವಾಗಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಎಎನ್‌ಐಗೆ ತಿಳಿಸಿದ್ದಾರೆ.