logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Paytm Down: ಇನ್ನೂ ಸರಿಯಾಗಿಲ್ಲ ಪೇಟಿಎಂ, ಕ್ಯಾಷ್‌ ಇಲ್ಲದೆ ಪೇಟಿಎಂ ನಂಬಿ ಬಂದವರಿಗೆ ಪರದಾಟ

Paytm Down: ಇನ್ನೂ ಸರಿಯಾಗಿಲ್ಲ ಪೇಟಿಎಂ, ಕ್ಯಾಷ್‌ ಇಲ್ಲದೆ ಪೇಟಿಎಂ ನಂಬಿ ಬಂದವರಿಗೆ ಪರದಾಟ

Praveen Chandra B HT Kannada

Aug 05, 2022 03:47 PM IST

google News

ಇನ್ನೂ ಸರಿಯಾಗಿಲ್ಲ ಪೇಟಿಎಂ, ಕ್ಯಾಷ್‌ ಇಲ್ಲದೆ ಪೇಟಿಎಂ ನಂಬಿ ಬಂದವರಿಗೆ ಪರದಾಟ Pic by Hemant Mishra/mint

    • ಇಂದು ದೇಶಾದ್ಯಂತ ಹಲವು ಬಳಕೆದಾರರಿಗೆ ಪೇಟಿಎಂ ಬಳಸಲು ಕಷ್ಟವಾಗಿದೆ. ವಿಶೇಷವಾಗಿ, ಹಣ ಕಳುಹಿಸಲು, ಪಡೆಯಲು ತೊಂದರೆಯಾಗಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಹಲವು ಗ್ರಾಹಕರು Paytm Down ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನೂ ಸರಿಯಾಗಿಲ್ಲ ಪೇಟಿಎಂ, ಕ್ಯಾಷ್‌ ಇಲ್ಲದೆ ಪೇಟಿಎಂ ನಂಬಿ ಬಂದವರಿಗೆ ಪರದಾಟ Pic by Hemant Mishra/mint
ಇನ್ನೂ ಸರಿಯಾಗಿಲ್ಲ ಪೇಟಿಎಂ, ಕ್ಯಾಷ್‌ ಇಲ್ಲದೆ ಪೇಟಿಎಂ ನಂಬಿ ಬಂದವರಿಗೆ ಪರದಾಟ Pic by Hemant Mishra/mint (HT_PRINT)

ನವದೆಹಲಿ: ಇಂದು ದೇಶಾದ್ಯಂತ ಹಲವು ಬಳಕೆದಾರರಿಗೆ ಪೇಟಿಎಂ ಬಳಸಲು ಕಷ್ಟವಾಗಿದೆ. ವಿಶೇಷವಾಗಿ, ಹಣ ಕಳುಹಿಸಲು, ಪಡೆಯಲು ತೊಂದರೆಯಾಗಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಹಲವು ಗ್ರಾಹಕರು Paytm Down ತೊಂದರೆ ಅನುಭವಿಸುತ್ತಿದ್ದಾರೆ. ಬಹುತೇಕರು ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ ಇತ್ಯಾದಿಗಳನ್ನು ಬಳಸಲು ಆರಂಭಿಸಿದ ಬಳಿಕ ಕಿಸೆಯಲ್ಲಿ ಹಣವಿಟ್ಟುಕೊಳ್ಳುವುದನ್ನೇ ಮರೆತಿದ್ದಾರೆ. ಹೆಚ್ಚಿನ ಜನರು ಯಾವುದಾದರೂ ಒಂದು ಪೇಮೆಂಟ್‌ ಆಪ್‌ ಬಳಸಿದರೆ, ಇನ್ನು ಕೆಲವರು ಹಲವು ಆಪ್‌ಗಳನ್ನು ಬಳಸುತ್ತಾರೆ. ಈ ರೀತಿ ಒಂದು ಆಪ್‌ ಡೌನ್‌ಲೋಡ್‌ ಆದ ಸಮಯದಲ್ಲಿ ಮತ್ತೊಂದನ್ನು ಬಳಸಲು ಅನುಕೂಲವಾಗುತ್ತದೆ. ಆದರೆ, ಕೆಲವರು ಪೇಟಿಎಂ ಆಪ್‌ ಮಾತ್ರ ಬಳಸುತ್ತಿದ್ದು, ಅವರು ಇಂದು ತೊಂದರೆ ಅನುಭವಿಸುತ್ತಿದ್ದಾರೆ.

"ಪೇಟಿಎಂನಲ್ಲಿ ನೆಟ್ವರ್ಕ್‌ ದೋಷದಿಂದಾಗಿ ಇಂದು ಕೆಲವರಿಗೆ ಪೇಟಿಎಂ ಬಳಕೆಯಲ್ಲಿ ತಾಂತ್ರಿಕ ತೊಂದರೆಯಾಗಿದೆ. ಪೇಟಿಎಂ ಆಪ್‌ ಮತ್ತು ವೆಬ್‌ಸೈಟ್‌ನಲ್ಲಿ ಈ ತೊಂದರೆ ಕಾಣಿಸಿಕೊಂಡಿದೆ. ಈ ದೋಷವನ್ನು ಸರಿಪಡಿಸಲು ಈಗಾಗಲೇ ಕಾರ್ಯನಿರತವಾಗಿದ್ದೇವೆ. ತೊಂದರೆ ಸರಿಯಾದ ತಕ್ಷಣ ಅಪ್‌ಡೇಟ್‌ ನೀಡುತ್ತೇವೆʼʼ ಎಂದು ಪೇಟಿಎಂ ಮನಿಯು ಟ್ವೀಟ್‌ ಮಾಡಿದೆ.

ಸಾಕಷ್ಟು ವ್ಯಾಪಾರಿಗಳಿಗೆ ನಷ್ಟ

ಪೇಟಿಎಂ ಡೌನ್‌ ಆಗಿರುವುದರಿಂದ ಸಾಕಷ್ಟು ವ್ಯಾಪಾರಿಗಳು ಇಂದು ಆದಾಯ ಕಳೆದುಕೊಂಡಿದ್ದಾರೆ. ಪೇಟಿಎಂ ಮನಿಯನ್ನೇ ಬಳಸುವವರ ಸಂಖ್ಯೆ ಅತ್ಯಧಿಕವಾಗಿದ್ದು, ಪೇಮೆಂಟ್‌ ಆಗದೆ ವ್ಯಾಪಾರಿಗಳಿಗೆ ನಷ್ಟವಾಗಿದೆ.

"ನಮ್ಮ ಕೆಲವು ಟ್ರೇಡಿಂಗ್‌ ಮತ್ತು ಎಫ್‌ಆಂಡ್‌ಒ ಬಳಕೆದಾರರಿಗೆ ಸಾಕಷ್ಟು ತೊಂದರೆಯಾಗಿರುವುದು ನಮ್ಮ ಗನಮಕ್ಕೆ ಬಂದಿದೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಲಾಗುವುದು. ನಿಮ್ಮ ತೊಂದರೆಗಳನ್ನು exg.support@paytmmoney.comಗೆ ಕಳುಹಿಸಿ.‌ ಟ್ರೇಡಿಂಗ್‌ನಲ್ಲಾದ ತೊಂದರೆಗಳನ್ನು ನಮ್ಮ ಗಮನಕ್ಕೆ ತನ್ನಿ ಎಂದು ಪೇಟಿಎಂ ತಿಳಿಸಿದೆ.

ಪೇಟಿಎಂ ಲಾಗಿನ್‌ ತೊಂದರೆ

ಇಂದು ಬಹುತೇಕ ಬಳಕೆದಾರರಿಗೆ ಪೇಟಿಎಂ ಆಪ್‌ ಮತ್ತು ವೆಬ್‌ಸೈಟ್‌ಗೆ ಲಾಗಿನ್‌ ಆಗಲು ಸಾಧ್ಯವಾಗಿಲ್ಲ. ಈ ಕುರಿತು ಸಾಕಷ್ಟು ಜನರು ಟ್ವೀಟ್‌ ಮಾಡಿದ್ದಾರೆ. ನಮ್ಮ ಖಾತೆಯಿಂದ ೫ ಸಾವಿರ ರೂ. ಕಟ್‌ ಆಗಿದೆ. ಬಳಿಕ ಎರರ್‌ ತೋರಿಸುತ್ತದೆ ಎಂದು ಕೆಲವರು ದೂರಿದ್ದಾರೆ.

"ಆರ್‌ಬಿಐ ದಯವಿಟ್ಟು ಪೇಟಿಎಂ ವಿರುದ್ಧ ಕಠಿಣ ನಿಲುವ ತೆಗೆದುಕೊಳ್ಳಿ. ಪೇಟಿಎಂ ಸೇವೆ ಅತ್ಯಂತ ಕೆಟ್ಟದ್ದಾಗಿದೆ. ಪೇಟಿಎಂ ಸೇವೆಯನ್ನು ತೆಗೆದುಹಾಕಿ, ಅತ್ಯಂತ ಕೆಟ್ಟ ಸೇವೆ ನೀಡುವ ಈ ಕಂಪನಿಯಲ್ಲಿ ಕಸ್ಟಮರ್‌ ಕೇರ್‌ ಸರ್ವೀಸ್‌ ಕೂಡ ಇಲ್ಲʼʼ ಎಂದು ಇನ್ನೊಬ್ಬರು ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

"ಪೇಟಿಎಂ ಭಾರತದ ನಗರಗಳಲ್ಲಿ ತನ್ನ ಕಚೇರಿಗಳನ್ನು ತೆರೆಯಬೇಕು. ಇಂತಹ ಸಮಸ್ಯೆಯಾದಗ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಯದೆ ಕಷ್ಟ ಅನುಭವಿಸುತ್ತಿದ್ದೇವೆʼʼ ಎಂದು ಇನ್ನೊಬ್ಬರು ಗ್ರಾಹಕರು ಟ್ವೀಟ್‌ ಮಾಡಿದ್ದಾರೆ.

ಪೇಟಿಎಂ ಡೌನ್‌ನಿಂದ ನಮಗೆ ಅಂತಹ ತೊಂದರೆಯಾಗಿಲ್ಲ ಎಂದು ಬೆಂಗಳೂರಿನ ಕೆಲವು ವರ್ತಕರು ಎಚ್‌ಟಿ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. "ಈಗ ಬಹುತೇಕರಲ್ಲಿ ಪೇಟಿಎಂ ಮಾತ್ರವಲ್ಲದೆ ಫೋನ್‌ಪೇ, ಗೂಗಲ್‌ ಪೇ ಇದೆ. ಯುಪಿಐ ಪೇಮೆಂಟ್‌ಗೆ ಎಲ್ಲಾ ಯುಪಿಐ ಐಡಿಗಳನ್ನು ನಮ್ಮ ಅಂಗಡಿ ಬಳಸುತ್ತದೆ. ಹೀಗಾಗಿ, ತೊಂದರೆಯಾಗಿಲ್ಲʼʼ ಎಂದು ಕತ್ರಿಗುಪ್ಪೆಯ ಫ್ಯಾನ್ಸಿ ಸ್ಟೋರ್‌ವೊಂದರ ಮಾಲೀಕ ರಾಘವೇಂದ್ರ ಹೇಳಿದ್ದಾರೆ. "ಒಂದಿಬ್ಬರು ನಮ್ಮ ಶಾಪ್‌ಗೆ ಪೇಟಿಎಂ ಇರುವವರು ಬಂದಿದ್ದರು. ಅವರಿಗೆ ಪಕ್ಕದ ಎಟಿಎಂ ತೋರಿಸಿ ಹಣ ತರಿಸಿಕೊಂಡೆವುʼʼ ಎಂದು ಕೆಆರ್‌ ಮಾರುಕಟ್ಟೆಯ ಬ್ಯಾಗ್‌ ಶಾಪ್‌ನ ಇಸ್ಮಾಯಿಲ್‌ ಹೇಳಿದ್ದಾರೆ.

ಎರಡು ವರ್ಷದ ಹಿಂದೆ ಪೇಟಿಎಂನ ಡೇಟಾಕ್ಕೆ ಕನ್ನ ಹಾಕಲಾಗಿತ್ತು. ಇದರಿಂದ ಹಲವು ಲಕ್ಷ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವ ಆತಂಕವಿತ್ತು. ಬಳಿಕ ಪೇಟಿಎಂ ಸ್ಪಷ್ಟನೆ ನೀಡಿದ್ದು, ಬಳಕೆದಾರರ ದತ್ತಾಂಶ ಸುರಕ್ಷಿತವಾಗಿದೆ ಎಂದು ತಿಳಿಸಿತ್ತು.

ಪೇಟಿಎಂ ಬಳಸುವವರಿಗೆ ಟಿಪ್ಸ್‌

- ಗೂಗಲ್‌ ಪೇ ಇತ್ಯಾದಿಗಳಿಗೆ ಹೋಲಿಸಿದರೆ ಪೇಟಿಎಂ ವ್ಯಾಲೆಟ್‌ನಲ್ಲಿ ಹಣ ಇಟ್ಟುಕೊಳ್ಳಬಹುದು. ಆದರೆ, ಕೆಲವೊಮ್ಮೆ ಇಂತಹ ಡೌನ್‌ಟೈಮ್‌ ತೊಂದರೆಯಾದಗ ವ್ಯಾಲೆಟ್‌ನಲ್ಲಿರುವ ಹಣ ಬಳಸಲಾಗದು. ಹೀಗಾಗಿ, ವ್ಯಾಲೆಟ್‌ನಲ್ಲಿ ಹೆಚ್ಚು ಹಣವಿಟ್ಟುಕೊಳ್ಳುವುದು ಉತ್ತಮವಲ್ಲ.

- ಪೇಟಿಎಂ ಇತ್ಯಾದಿ ಆಪ್‌ಗಳನ್ನು ತಪ್ಪದೇ ಆಗಾಗ ಅಪ್‌ಡೇಟ್‌ ಮಾಡಿ. ಇಲ್ಲವಾದರೆ ಇಂತಹ ಆಪ್‌ಗಳ ಬಗ್ಸ್‌ ನಿಮ್ಮ ಮೊಬೈಲ್‌ಗೆ ಮತ್ತು ಬ್ಯಾಂಕ್‌ ಖಾತೆಗೆ ತೊಂದರೆ ನೀಡಬಹುದು.

- ಒಂದರ ಬದಲು ಎರಡು ಪೇಮೆಂಟ್‌ ಆಪ್‌ಗಳನ್ನು ಬಳಸುವುದು ಸೂಕ್ತ. ಒಂದರಲ್ಲಿ ನೆಟ್ವರ್ಕ್‌ ಡೌನ್‌ ಎಂದು ತೋರಿಸಿದಾಗ, ಮತ್ತೊಂದು ಕೆಲವೊಮ್ಮೆ ವರ್ಕ್‌ ಆಗುತ್ತದೆ.

- ನಿಮ್ಮಲ್ಲಿ ಹಲವು ಬ್ಯಾಂಕ್‌ ಖಾತೆಗಳಿರಲಿ. ಕಡಿಮೆ ಹಣವಿರುವ ಬ್ಯಾಂಕ್‌ ಖಾತೆಗೆ ಮಾತ್ರ ಇಂತಹ ಪೇಮೆಂಟ್‌ ಆಪ್‌ಗಳನ್ನು ಕನೆಕ್ಟ್‌ ಮಾಡಿ. ಅವಕಾಶವಿದೆಯೆಂದು ಒಂದೇ ಆಪ್‌ಗೆ ಹಲವು ಬ್ಯಾಂಕ್‌ಗಳನ್ನು ಕನೆಕ್ಟ್‌ ಮಾಡಬೇಡಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ