logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uttar Pradesh Fake Notes: ಯುಪಿಯ ಎಟಿಎಂನಿಂದ ಹೊರಬರುತ್ತಿವೆ 'ಫುಲ್‌ ಆಫ್‌ ಫನ್'‌ ನಕಲಿ ನೋಟು: ದಂಗಾದ ಜನ!

Uttar Pradesh Fake Notes: ಯುಪಿಯ ಎಟಿಎಂನಿಂದ ಹೊರಬರುತ್ತಿವೆ 'ಫುಲ್‌ ಆಫ್‌ ಫನ್'‌ ನಕಲಿ ನೋಟು: ದಂಗಾದ ಜನ!

HT Kannada Desk HT Kannada

Oct 26, 2022 05:31 PM IST

google News

ನಕಲಿ ನೋಟು

    • ಉತ್ತರ ಪ್ರದೇಶದ ಅಮೇಥಿಯ ಎಟಿಎಂ ಒಂದರಿಂದ ನಕಲಿ ನೋಟುಗಳು ಹೊರಬರುತ್ತಿದ್ದು, ನಕಲಿ ನೋಟುಗಳನ್ನು ಸ್ವೀಕರಿಸಿದ ಜನ ದಂಗಾಗಿ ಹೋಗಿದ್ದಾರೆ. ಎಟಿಎಂ ಮಷಿನ್‌ನಿಂದ 200 ರೂ. ಮುಖಬೆಲೆಯ ನಕಲಿ ನೋಟುಗಳು ಹೊರಬರುತ್ತಿದ್ದು, ಇವುಗಳ ಮೇಲೆ, Full of Fun ಮತ್ತು Children of India ಎಂದು ಬರೆಯಲಾಗಿದೆ.  ಈ ಕುರಿತು ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್‌ ಆಗಿದೆ.
ನಕಲಿ ನೋಟು
ನಕಲಿ ನೋಟು (Verified Twitter)

ಅಮೇಥಿ: ದೇಶದಲ್ಲಿ ನಕಲಿ ನೋಟುಗಳ ಹಾವಳಿ ಇಂದು ನಿನ್ನೆಯದಲ್ಲ. ನಕಲಿ ನೋಟುಗಳ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರಗಳು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಲೇ ಇರುತ್ತವೆ. 2016ರಲ್ಲಿ ಕೈಗೊಂಡ ನೋಟು ಅಮಾನ್ಯೀಕರಣದ ನಿರ್ಧಾರದಲ್ಲೂ, ನಕಲಿ ನೋಟುಗಳ ಹಾವಳಿ ತಡೆಗಟ್ಟುವ ಉದ್ದೇಶ ಪ್ರಮುಖ ಸ್ಥಾನವನ್ನು ಪಡೆದಿತ್ತು. ಆದಾಗ್ಯೂ ದೇಶದಲ್ಲಿ ನಕಲಿ ನೋಟುಗಳ ಹಾವಳಿ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ ಎಂಬುದು ಸತ್ಯ.

ಇದಕ್ಕೆ ಪುಷ್ಠಿ ಎಂಬಂತೆ ಉತ್ತರ ಪ್ರದೇಶದ ಅಮೇಥಿಯ ಎಟಿಎಂ ಒಂದರಿಂದ ನಕಲಿ ನೋಟುಗಳು ಹೊರಬರುತ್ತಿದ್ದು, ನಕಲಿ ನೋಟುಗಳನ್ನು ಸ್ವೀಕರಿಸಿದ ಜನ ದಂಗಾಗಿ ಹೋಗಿದ್ದಾರೆ. ಎಟಿಎಂ ಮಷಿನ್‌ನಿಂದ 200 ರೂ. ಮುಖಬೆಲೆಯ ನಕಲಿ ನೋಟುಗಳು ಹೊರಬರುತ್ತಿದ್ದು, ದೀಪಾವಳಿ ಸಂದರ್ಭದಲ್ಲಿ ಎದುರಾಗಿರುವ ನಕಲಿ ನೋಟುಗಳ ಹಾವಳಿಯಿಂದ, ಅಮೇಥಿ ಜನ ಆಘಾತಕ್ಕೊಳಗಾಗಿದ್ದಾರೆ.

ಎಟಿಎಂ ಮಷಿನ್‌ನಿಂದ ಹೊರಬಂದ 200 ರೂ. ಮುಖಬೆಲೆಯ ನಕಲಿ ನೋಟುಗಳ ಮೇಲೆ, Full of Fun ಮತ್ತು Children of India ಎಂದು ಬರೆಯಲಾಗಿದ್ದು, ಮೇಲ್ನೋಟಕ್ಕೆ ಇದು ಅಸಲಿ ನೋಟುಗಳ ರೀತಿಯೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ ಇದು ನಕಲಿ ನೋಟು ಎಂದು ಗೊತ್ತಾಗುತ್ತದೆ.

ಈ ಕುರಿತು ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, 200 ರೂ. ಮುಖಬೆಲೆಯ ನಕಲಿ ನೋಟುಗಳ ಮೇಲೆ Full of Fun ಮತ್ತು Children of India ಎಂದು ಇಂಗ್ಲಿಷ್‌ನಲ್ಲಿ ಮುದ್ರಿಸಿರುವುದು ಕಂಡುಬಂದಿದೆ. ಈ ವಿಡಿಯೋ ಇದೀಗ ಸಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಜನರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

ನಕಲಿ ನೋಟುಗಳನ್ನು ವಿತರಿಸುತ್ತಿರುವ ಎಟಿಎಂ ಬಗ್ಗೆ ಸುದ್ದಿಯಾಗುತ್ತಿದ್ದಂತೇ, ಅಮೇಥಿ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಷಯ ತಿಳಿದ ಪೊಲೀಸರು ತನಿಖೆ ಆರಂಭಿಸಿದ್ದು, ನಕಲಿ ನೋಟುಗಳನ್ನು ಹೊರಹಾಕುತ್ತಿದ್ದ ಎಟಿಂ ಮಷಿನ್‌ನನ್ನು ಸೀಜ್‌ ಮಾಡಿದ್ದಾರೆ.

ಇನ್ನು ಎಟಿಎಂ ಮಷಿನ್‌ನಿಂದ ನಕಲಿ ನೋಟುಗಳು ಬರುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದ್ದು,'ಯೋಗಿ ಆದಿತ್ಯನಾಥ ಅವರೇ, ನೀವಿದನ್ನು ಸಾಧಿಸಿದ್ದೀರಿ! ಕಾನೂನು ಮತ್ತು ಆದೇಶಗಳ ಪಾಲನೆ ವಿಷಯದಲ್ಲಿ ನಿಮಗೆ ಸರಿಸಾಟಿಯಾದವರು ಯಾರೂ ಇಲ್ಲ. ಇದೀಗ ಜನರು ಅಸಲಿ ನೋಟು ಯಾವುದು ನಕಲಿ ನೋಟು ಯಾವುದು ಎನ್ನುವುದನ್ನು ಕಂಡುಕೊಳ್ಳಲು ಶಕ್ತರಾಗಿದ್ದಾರೆ. ಜನರನ್ನು ಸುಶೀಕ್ಷಿತಗೊಳಿಸುವ ನಿಮ್ಮ ಈ ಪರಿ ಅನುಕರಣೀಯ!..'ಎಂದು ನೆಟ್ಟಿಗನೋರ್ವ ಕಾಲೆಳೆದಿದ್ದಾನೆ.

ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರ, 'ಇದು ಸ್ಮೃತಿ ಇರಾನಿ ಅವರ ವಿಕಾಸ '​ ಎಂದು ಕಾಲೆಳದಿದ್ದಾರೆ. ಅಮೇಥಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಲೋಕಸಭಾ ಕ್ಷೇತ್ರ ಎಂಬುದು ವಿಶೇಷ. 'ಉತ್ತರ ಪ್ರದೇಶದ ಸರ್ಕಾರದಲ್ಲಿ ಇನ್ನೂ ಏನೆಲ್ಲಾ ಆಗುತ್ತದೆಯೋ' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

'ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿರುವ ಈ ಸಂದರ್ಭದಲ್ಲಿ, ಈ ನಕಲಿ ನೋಟುಗಳು ಎಲ್ಲಿಂದ ಬಂದವು?' ಎಂದು ಮತ್ತೋರ್ವ ನೆಟ್ಟಿಗ ಅತ್ಯಂತ ಆಕ್ರೋಶಭರಿತನಾಗಿ ಪ್ರಶ್ನಿಸಿದ್ಧಾರೆ. ಬಹುಶ: ಇದು ಪ್ರಧಾನಿ ಮೋದಿ ಅವರು ಮತ್ತೊಂದು ಬಾರಿ ನೋಟು ರದ್ದತಿ ಘೋಷಣೆ ಮಾಡುವ ಮುನ್ಸೂಚನೆ ಇರಬಹುದು ಎಂದು ಕೆಲವರೂ ಕಿಚಾಯಿಸಿದ್ದಾರೆ.

ಒಟ್ಟಿನಲ್ಲಿ ಅಮೇಥಿಯ ಎಟಿಎಂ ಮಷಿನ್‌ನಿಂದ ಹೊರಬರುತ್ತಿರುವ 200 ರೂ. ಮುಖಬೆಲೆಯ ನಕಲಿ ನೋಟುಗಳು, ಅಮೇಥಿ ಜನರಲ್ಲಿ ಆತಂಕವನ್ನು ಮೂಡಿಸಿದೆ. ದೀಪಾವಳಿ ಸಂಭ್ರಮದಲ್ಲಿದ್ದ ಅಮೇಥಿ ಜನರು, ನಕಲಿ ನೋಟುಗಳ ಹಾವಳಿಯಿಂದ ಕಂಗಾಲಾಗಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ