ವಿದೇಶಕ್ಕೆ ಹೋಗ್ತೀರಾ, ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ, ಯಾವಾಗದಿಂದ ಜಾರಿ ಮತ್ತು ಇತರೆ ವಿವರ ಇಲ್ಲಿದೆ
Jul 26, 2024 05:26 PM IST
ವಿದೇಶಕ್ಕೆ ಹೋಗ್ತೀರಾ, ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ, ಯಾವಾಗದಿಂದ ಜಾರಿ ಮತ್ತು ಇತರೆ ವಿವರ. (ಸಾಂಕೇತಿಕ ಚಿತ್ರ)
ಭಾರತ ಬಿಟ್ಟು ವಿದೇಶಕ್ಕೆ ಹೋಗುವವರ ಗಮನಕ್ಕೆ. ಇನ್ನು ಮುಂದೆ ವಿದೇಶಕ್ಕೆ ಹೋಗ್ತೀರಾ, ಹಾಗಾದರೆ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ. ಇದು ಯಾವಾಗದಿಂದ ಜಾರಿ ಮತ್ತು ಇತರೆ ವಿವರ ಇಲ್ಲಿದೆ.
ನವದೆಹಲಿ: ಭಾರತ ಬಿಟ್ಟು ವಿದೇಶಕ್ಕೆ ಹೋಗುವವರು ಪಡೆಯಬೇಕಾದ ಕ್ಲಿಯರೆನ್ಸ್ ಪ್ರಮಾಣಪತ್ರಗಳ ನಿಯಮ ಬಿಗಿಯಾಗಿದೆ. ಈ ಸಲದ ಕೇಂದ್ರ ಬಜೆಟ್ (Union Budget 2024) ನಲ್ಲಿ, ಕಾಳಧನ ಕಾಯ್ದೆ ಪ್ರಕಾರ ಈ ನಿಯಮ ಬಿಗಿಗೊಳಿಸುವ ಪ್ರಸ್ತಾವನೆಯನ್ನು ಮಂಡಿಸಲಾಗಿದ್ದು, ಈ ವರ್ಷ ಅಕ್ಟೋಬರ್ 1 ರಿಂದ ಇದು ಜಾರಿಗೆ ಬರಲಿದೆ. ಇದರಂತೆ, ವಿದೇಶಕ್ಕೆ ಹೋಗುವವರು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯವಾಗಲಿದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 230 ರ ಪ್ರಕಾರ, ಭಾರತದಲ್ಲಿ ವಾಸಿಸುವ ಯಾರಾದರೂ ದೇಶವನ್ನು ತೊರೆಯುವ ಮೊದಲು ತೆರಿಗೆ ಅಧಿಕಾರಿಗಳಿಂದ ಪ್ರಮಾಣಪತ್ರವನ್ನು ಪಡೆಯಬೇಕು. ಈ ಪ್ರಮಾಣಪತ್ರವು ವ್ಯಕ್ತಿಯು ತೆರಿಗೆ ಬಾಕಿ ಹೊಂದಿಲ್ಲ ಅಥವಾ ಯಾವುದೇ ಬಾಕಿ ಮೊತ್ತವನ್ನು ಪಾವತಿಸುವ ಬಾಧ್ಯತೆ ಹೊಂದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
ತೆರಿಗೆ ಪಾವತಿಸಿದ ಪ್ರಮಾಣ ಪತ್ರ ಅಥವಾ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್; ಏನಿರುತ್ತದೆ ಇದರಲ್ಲಿ
ವಿದೇಶಕ್ಕೆ ಹೋಗುವ ಭಾರತೀಯರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 230 ರ ಪ್ರಕಾರ ತೆರಿಗೆ ಪಾವತಿಸಿದ ಪ್ರಮಾಣ ಪತ್ರ ಅಥವಾ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು. ಇದರಲ್ಲಿ, ಆದಾಯ ತೆರಿಗೆಯ ಕಾಯ್ದೆಯ ಅಂಶಗಳು ಒಳಗೊಂಡಿರುತ್ತದೆ. ಅದೇ ರೀತಿ, ಹಿಂದಿನ ಸಂಪತ್ತು ತೆರಿಗೆ, ಉಡುಗೊರೆ ತೆರಿಗೆ ಮತ್ತು ವೆಚ್ಚ ತೆರಿಗೆ ಕಾಯಿದೆಗಳ ಅಂಶಗಳೂ ಅನ್ವಯವಾಗುತ್ತದೆ.
ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಅಥವಾ ಮುಂಬರುವ ನಿಯಮಗಳು ಈ ತೆರಿಗೆ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ವಿವರಗಳನ್ನು, ಅವಶ್ಯಕತೆಗಳನ್ನು ಮತ್ತಷ್ಟು ಸ್ಪಷ್ಟಪಡಿಸಬಹುದು ಎಂದು ತೆರಿಗೆ ತಜ್ಞರು ನಂಬಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಾಳಧನ ಘೋಷಣೆ; ದಂಡ ಮೊತ್ತದಲ್ಲಿ ಪರಿಷ್ಕರಣೆ
ಕೇಂದ್ರ ಸರ್ಕಾರ ಜುಲೈ 23 ರಂದು ಸಂಸತ್ತಿನಲ್ಲಿ ಮಂಡಿಸಿದ 2024ರ ಬಜೆಟ್‌ನಲ್ಲಿ ಕಪ್ಪುಹಣ ಕಾಯ್ದೆಯ ಸೆಕ್ಷನ್ 42 ಮತ್ತು 43ರ ಪ್ರಕಾರ, ವಿದೇಶಿ ಆಸ್ತಿಗಳ (ರಿಯಲ್ ಎಸ್ಟೇಟ್ ಹೊರತುಪಡಿಸಿ) ಒಟ್ಟು ಮೌಲ್ಯ 20 ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೆ ವರದಿ ಮಾಡದಿದ್ದಕ್ಕಾಗಿ 10 ಲಕ್ಷ ರೂಪಾಯಿ ದಂಡವನ್ನು ತೆಗೆದುಹಾಕುವುದನ್ನು ಪ್ರಸ್ತಾಪಿಸಲಾಗಿದೆ. ಇದು 2024ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ದಂಡದ ನಿಬಂಧನೆಗಳ ಈ ವಿನಾಯಿತಿಯು ಈ ವಿದೇಶಿ ಆಸ್ತಿಗಳ ತಪ್ಪಾದ ಅಥವಾ ವರದಿ ಮಾಡದಿರುವಿಕೆಗೆ ಅನ್ವಯಿಸುತ್ತದೆ ಎಂದು ವರದಿ ಹೇಳಿದೆ.
ಸದ್ಯ ಈ ನಿಬಂಧನೆಯು ಸಾಮಾನ್ಯವಾಗಿ ಭಾರತದ ನಿವಾಸಿಯಾಗಿರುವ ಪ್ರತಿಯೊಬ್ಬನೂ ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವಾಗ ಎಲ್ಲಾ ವಿದೇಶಿ ಆಸ್ತಿಗಳನ್ನು (ಷೇರುಗಳು ಮತ್ತು ಭದ್ರತೆಗಳಂತಹ ಹೂಡಿಕೆಗಳನ್ನು ಒಳಗೊಂಡಂತೆ) ಮತ್ತು ಈ ಆಸ್ತಿಗಳಿಂದ ಯಾವುದೇ ಆದಾಯವನ್ನು ಬಹಿರಂಗಪಡಿಸಬೇಕು. ಅವರು ವಿದೇಶಿ ಆದಾಯ ಮತ್ತು ಆಸ್ತಿಯನ್ನು ವರದಿ ಮಾಡದಿದ್ದರೆ ಅಥವಾ ಅವರಿಗೆ ಸಂಬಂಧಿಸಿದ ಐಟಿಆರ್ ಅನ್ನು ಸಲ್ಲಿಸಲು ವಿಫಲವಾದರೆ, ಅವರು ಆಸ್ತಿಯ ಮೌಲ್ಯವನ್ನು ಲೆಕ್ಕಿಸದೆ ಕಪ್ಪುಹಣ ಕಾಯ್ದೆಯ ಸೆಕ್ಷನ್ 42 ಅಥವಾ 43 ರ ಅಡಿಯಲ್ಲಿ 10 ಲಕ್ಷ ರೂಪಾಯಿ ದಂಡವನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಈ ವಿಭಾಗಗಳು ಹಿಂದಿನ ವರ್ಷದಲ್ಲಿ ಯಾವುದೇ ಸಮಯದಲ್ಲಿ ರೂ 5 ಲಕ್ಷವನ್ನು ಮೀರದ ಒಟ್ಟು ಬ್ಯಾಲೆನ್ಸ್ ಹೊಂದಿರುವ ಒಂದು ಅಥವಾ ಹೆಚ್ಚಿನ ಬ್ಯಾಂಕ್ ಖಾತೆಗಳಿಗೆ ಅನ್ವಯಿಸುವುದಿಲ್ಲ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)