Plane Emergency Door Rules: ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದರೆ ಏನಾಗುತ್ತದೆ? ಲಿಖಿತ ಮತ್ತು ಅಲಿಖಿತ ನಿಯಮಗಳೇನು?
Jan 18, 2023 03:15 PM IST
Plane emergency exit Rules: ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದರೆ ಏನಾಗುತ್ತದೆ? ಲಿಖಿತ ಮತ್ತು ಅಲಿಖಿತ ನಿಯಮಗಳೇನು?
- Plane emergency exit Rules: ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಜೇಮ್ಸ್ ಬಾಂಡ್ ವಿಮಾನದ ಬಾಗಿಲು ತೆರೆದು ಆಕಾಶದಿಂದಲೇ ಜಂಪ್ ಮಾಡುವುದನ್ನು ನೋಡಿರಬಹುದು. ಆದರೆ, ನಿಜಜೀವನದಲ್ಲಿ ಆ ರೀತಿ ಮಾಡಿದರೆ ಜಂಪ್ ಮಾಡಿದವರಿಗೂ ಆ ವಿಮಾನದಲ್ಲಿರುವವರಿಗೂ ಘೋರ ಅಪಾಯವಾಗಬಹುದು.
ಇಂಡಿಗೊ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಸಂಸದ ತೇಜಸ್ವಿ ಸೂರ್ಯ ಪ್ರಯತ್ನಿಸಿದ್ದಾರೆ ಎನ್ನುವುದು ಈಗಿನ ಬಿಸಿಬಿಸಿ ಸುದ್ದಿ.
ವಿಮಾನ ಹೊರಡುವ ಮುನ್ನ ಆ ಬಾಗಿಲನ್ನು ತೆರೆಯಲು ಪ್ರಯತ್ನಿಸುವುದು ಅಷ್ಟು ಗಂಭೀರ ತಪ್ಪೇ ಎಂಬ ಪ್ರಶ್ನೆ ಕೆಲವರಲ್ಲಿ ಇರಬಹುದು. ವಿಮಾನಯಾನ ನಿಯಮಗಳ ಪ್ರಕಾರ, ವಿಮಾನದ ತುರ್ತು ನಿರ್ಗಮನವನ್ನು ಉದ್ದೇಶಪೂರ್ವಕವಲ್ಲದೆ ಇದ್ದರೂ ತೆರೆಯುವುದು ತಪ್ಪು ಅಥವಾ "ಅಶಿಸ್ತಿನ" ನಡವಳಿಕೆ ಎಂದು ಪರಿಗಣಿಸಲಾಗುತ್ತದೆಯಂತೆ. ಈ ರೀತಿ ಮಾಡಿರುವ ಪ್ರಯಾಣಿಕರನ್ನು ನಿರ್ದಿಷ್ಟ ಅವಧಿಗೆ ವಿಮಾನ ಪ್ರಯಾಣಕ್ಕೆ ಬ್ಯಾನ್ ಮಾಡಬಹುದು ಎಂದು ವರದಿಗಳು ತಿಳಿಸಿವೆ.
ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಜೇಮ್ಸ್ ಬಾಂಡ್ ವಿಮಾನದ ಬಾಗಿಲು ತೆರೆದು ಆಕಾಶದಿಂದಲೇ ಜಂಪ್ ಮಾಡುವುದನ್ನು ನೋಡಿರಬಹುದು. ಆದರೆ, ನಿಜಜೀವನದಲ್ಲಿ ಆ ರೀತಿ ಮಾಡಿದರೆ ಜಂಪ್ ಮಾಡಿದವರಿಗೂ ಆ ವಿಮಾನದಲ್ಲಿರುವವರಿಗೂ ಘೋರ ಅಪಾಯವಾಗಬಹುದು.
ಏನಿದು ವಿಮಾನದ ಎಕ್ಸಿಟ್ ಡೋರ್?
ಬಸ್ ಸೇರಿದಂತೆ ವಿವಿಧ ವಾಹನಗಳಲ್ಲಿ ಇರುವಂತೆ ಇದು ತುರ್ತು ನಿರ್ಗಮನ ಬಾಗಿಲು ಆಗಿದೆ. ಆದರೆ, ಇತರೆ ವಾಹನಗಳಂತೆ ಇದನ್ನು ಬಳಸಬಾರದು. ಸಂಬಂಧಪಟ್ಟವರಿಂದ ನಿರ್ದಿಷ್ಟ ಸೂಚನೆ ದೊರಕದೆ ಇದ್ದರೆ, ತುರ್ತು ಪರಿಸ್ಥಿತಿ ಎದುರಾಗದೆ ಇದ್ದರೆ ಇದನ್ನು ಎಳೆಯಲು ಪ್ರಯತ್ನಿಸುವಂತೆ ಇಲ್ಲ. ವಿಮಾನ ಹಾರಾಟದ ಸಂದರ್ಭದಲ್ಲಿ ಈ ಬಾಗಿಲು ತೆರೆದರೆ ವಿಮಾನದ ಮೇಲೆ ತುರ್ತು ಒತ್ತಡ ಉಂಟಾಗಬಹುದು. ವಿಮಾನಗಳಲ್ಲಿ ಸಾಮಾನ್ಯವಾಗಿ ಮುಂಭಾಗ, ಮಧ್ಯೆ ಮತ್ತು ಹಿಂಭಾಗದಲ್ಲಿ (ದೊಡ್ಡ ವಿಮಾನಗಳಲ್ಲಿ) ಮೂರು ಸಾಮಾನ್ಯ ಬಾಗಿಲು ಇರುತ್ತದೆ. ಆದರೆ, ತುರ್ತು ನಿರ್ಗಮನ ಬಾಗಿಲನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ತೆರೆಯಲಾಗುತ್ತದೆ. ಈ ಬಾಗಿಲಿನ ಹತ್ತಿರ ಎಲ್ಲರಿಗೂ ಕುಳಿತುಕೊಳ್ಳಲು ಸಾಧ್ಯವಿಲ್ಲ. ಈ ಡೋರ್ ಪಕ್ಕದ ಸೀಟು ಹೆಚ್ಚು ಲೆಗ್ ರೂಂ ಹೊಂದಿರುತ್ತದೆ. ಆದರೆ, ಈಗ ವಿಮಾನ ಸಂಸ್ಥೆಗಳು ಹಣ ಮಾಡುವ ಉದ್ದೇಶದಿಂದ ಹೆಚ್ಚು ಲೆಗ್ ರೂಂ ಇರುವ ಪ್ರೀಮಿಯಂ ಸೀಟುಗಳಾಗಿ ಈ ಸೀಟುಗಳನ್ನು ಮಾರಾಟ ಮಾಡುತ್ತಿವೆ.
ಈ ಬಾಗಿಲಿನ ಪಕ್ಕ ಕುಳಿತವರಿಗೆ ತುರ್ತು ಸಂದರ್ಭಗಳಲ್ಲಿ ಅದನ್ನು ಹೇಗೆ ತೆರೆಯಬೇಕೆಂದು ತರಬೇತಿ ನೀಡಲಾಗುತ್ತದೆ. ಈ ಬಾಗಿಲು ತೆರೆಯಲು ಶಕ್ತಿ ಇರುವವರನ್ನು ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗುತ್ತದೆ. ಕೆಲವೊಮ್ಮೆ ವಿಮಾನ ಸಿಬ್ಬಂದಿಗಳೇ ಈ ಸೀಟುಗಳನ್ನು ಬಳಸುತ್ತಾರೆ.
ಈ ತುರ್ತು ನಿರ್ಗಮನ ಬಾಗಿಲಿನ ಕುರಿತು ಲಿಖಿತ ಮಾತ್ರವಲ್ಲದೆ ಅಲಿಖಿತ ನಿಯಮಗಳೂ ಇರುತ್ತವೆ. ಇದು ಜಾಗತಿಕವಾಗಿ ದೊರಕಿದ ಮಾಹಿತಿ. ನಿರ್ದಿಷ್ಟವಾಗಭಾರತದ ವಿಮಾನಯಾನ ನಿರ್ದೇಶನಾಲಯದ ಮಾಹಿತಿಯಲ್ಲ. ಸಾಮಾನ್ಯವಾಗಿ ಇಂತಹ ನಿಯಮಗಳೇ ಎಲ್ಲೆಡೆ ಇರುತ್ತದೆ.
- ತುರ್ತು ನಿರ್ಗಮನ ಬಾಗಿಲಿನ ಪಕ್ಕ ಕುಳಿತುಕೊಳ್ಳುವವರಿಗೆ ಕನಿಷ್ಠ 15 ವರ್ಷ ವಯಸ್ಸಾಗಿರಬೇಕು.
- ಆರೋಗ್ಯ ಉತ್ತಮವಾಗಿರಬೇಕು, ಸದೃಢತೆ ಇರಬೇಕು. ಎರಡು ಕೈಗಳು, ಎರಡು ಕಾಲುಗಳು ಸದೃಢವಾಗಿರಬೇಕು. ಎಮರ್ಜೆನ್ಸಿ ಬಾಗಿಲನ್ನು ತೆರೆಯಲು ಎಳೆಯುವುದು, ಜರುಗಿಸುವುದು ಇತ್ಯಾದಿ ಕ್ರಿಯೆಗಳು ಇರುತ್ತವೆ.
- ಕಿವಿ ಮತ್ತು ಕಣ್ಣು ಆರೋಗ್ಯವಾಗಿರಬೇಕು. ವಿಮಾನ ಕ್ರ್ಯೂ ಸಿಬ್ಬಂದಿಗಳ ಸೂಚನೆ ಪಾಲನೆ ಮಾಡಲು ತಿಳಿದಿರಬೇಕು.
- ಎಮರ್ಜೆನ್ಸಿ ಡೋರ್ ಪಕ್ಕ ಹೆಚ್ಚು ಸ್ಥಳಾವಕಾಶವಿದೆ ಎಂದು ಲಗೇಜ್ ಇಡಬಾರದು. ಜಾಗಖಾಲಿ ಇದೆ ಸೀಟಿನ ಕೆಳಗೆ ಒಂದು ಬ್ಯಾಗ್ ಇಡೋಣ ಎಂದುಕೊಳ್ಳಬೇಡಿ.
- ಅಲಿಖಿತ ನಿಯಮವೇನೆಂದರೆ ಎಕ್ಸಿಟ್ ಡೋರ್ ಪಕ್ಕ ಕುಳಿತವರು ಮಧ್ಯಪಾನ ಮಾಡಬಾರದು. ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಆಲ್ಕೋಹಾಲ್ ಸೇವನೆಗೆ ಅವಕಾಶ ಇರುತ್ತದೆ. ಆದರೆ, ಈ ಡೋರ್ ಪಕ್ಕ ಕುಳಿತವರು ಡ್ರಿಂಕ್ಸ್ ಮಾಡಬಾರದು. ಡ್ರಿಂಕ್ಸ್ ಮಾಡಿದವರಿಗೆ ಸೂಚನೆ ಪಾಲಿಸುವ, ಬಾಗಿಲು ತೆರೆಯುವ ಸಾಮರ್ಥ್ಯ ಇರದು. ಡ್ರಿಂಕ್ಸ್ ಮಾಡಿ ಮಹಿಳೆಯ ಮೇಲೆ ಮೂತ್ರ ಮಾಡಿದ ಪ್ರಸಂಗಗಳೇ ನಡೆದಿರುವಾಗ, ಕುಡಿದ ವ್ಯಕ್ತಿ ಆಕಾಶದಲ್ಲಿ ಪ್ರಯಾಣಿಸುತ್ತಿರುವಾಗಲೇ ತುರ್ತು ನಿರ್ಗಮನ ಬಾಗಿಲು ತೆರೆದುಬಿಟ್ಟರೆ ಹೇಗಿರಬಹುದು? ಈ ರೀತಿ ಆಕಾಶದಲ್ಲಿ ಪ್ರಯಾಣಿಸುತ್ತಿರುವಾಗಲೇ ಎಕ್ಸಿಟ್ ಡೋರ್ ತೆಗೆಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬರ ಸುದ್ದಿ ಇಲ್ಲಿದೆ.
- ಇನ್ನೊಂದು ಅಲಿಖಿತ ನಿಯಮವೇನೆಂದರೆ ತುರ್ತು ಬಾಗಿಲಿನ ಪಕ್ಕ ಕುಳಿತವರು ನಿದ್ದೆ ಮಾಡದೆ ಇರುವುದು ಒಳ್ಳೆಯದು.