India-China Border Clash: ರಾಜಕೀಯ ನಾಯಕತ್ವ ಪ್ರದರ್ಶಿಸುವಲ್ಲಿ ಪ್ರಧಾನಿ ಮೋದಿ ವಿಫಲ: ಓವೈಸಿ ಕಿಡಿ!
Dec 13, 2022 03:34 PM IST
ಅಸಾದುದ್ದೀನ್ ಓವೈಸಿ
- ಅರುಣಾಚಲ ಪ್ರದೇಶದ ತವಾಂಗ್ ಬಳಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆದ, ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಘಟನೆಯ ಕುರಿತು ಮಾತನಾಡಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಪ್ರಧಾನಿ ಮೋದಿ ರಾಜಕೀಯ ನಾಯಕತ್ವವನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಬಳಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆದ, ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಘಟನೆಯ ಕುರಿತು ಮಾತನಾಡಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಪ್ರಧಾನಿ ಮೋದಿ ರಾಜಕೀಯ ನಾಯಕತ್ವವನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್ ಎಲ್‌ಎಸಿ ಬಳಿ ಡಿಸೆಂಬರ್ 9ರಂದು ಘರ್ಷಣೆ ಸಂಭವಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಸದನಕ್ಕೆ ಹೇಳಿಕೆ ನೀಡಿದ್ದಾರೆ. ಇದು ಗಡಿ ಸಂರಕ್ಷಣೆ ಬಗ್ಗೆ ನಿತ್ಯವೂ ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರದ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿದೆ ಎಂದು ಅಸಾದುದ್ದೀನ್ ಓವೈಸಿ ಹರಿಹಾಯ್ದಿದ್ದಾರೆ.
ಒಂದು ವೇಳೆ ತವಾಂಗ್ ಗಡಿ ಘರ್ಷಣೆ ಬಗ್ಗೆ ಮಾಧ್ಯಮಗಳು ವರದಿ ಮಾಡದಿದ್ದರೆ, ಕೇಂದ್ರ ಸರ್ಕಾರ ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಿರಲಿಲ್ಲ. ಚೀನಾದ ಹೆಸರು ಹೇಳಲು ಪ್ರಧಾನಿ ಮೋದಿ ಹೆದರುತ್ತಾರೆ. ಚೀನಾದ ಬಗ್ಗೆ ಮಾತನಾಡಲು ಮೋದಿ ಸರ್ಕಾರ ಹೆದರುತ್ತದೆ ಎಂದು ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತವಾಂಗ್ ಘರ್ಷಣೆ ಬಗ್ಗೆ ದೇಶಕ್ಕೆ ಸತ್ಯ ಗೊತ್ತಾಗಬೇಕಾದರೆ, ಎಲ್ಲಾ ಪಕ್ಷಗಳನ್ನು ಘರ್ಷಣೆಯ ಸ್ಥಳಕ್ಕೆ ಕರೆದೊಯ್ಯಬೇಕು. ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಅಸಲಿಗೆ ಏನಾಗುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರ ಈಗಲಾದರೂ ದೇಶಕ್ಕೆ ತಿಳಿಸಬೇಕು ಎಂದು ಅಸಾದುದ್ದೀನ್ ಓವೈಸಿ ಆಗ್ರಹಿಸಿದ್ದಾರೆ.
ಮೋದಿ ಸರ್ಕಾರ ಮಾತೆತ್ತಿದರೆ ಗಡಿ ಸುರಕ್ಷತೆ ಬಗ್ಗೆ ಮಾತನಾಡುತ್ತದೆ. ಆದರೆ ಚೀನಾ ಎರಡು ವರ್ಷಗಳ ಹಿಂದೆ ಲಡಾಖ್‌ನಲ್ಲಿ ಮತ್ತು ಈಗ ಅರುಣಾಚಲ ಪ್ರದೇಶದಲ್ಲಿ ಗಡಿ ನುಸುಳಲು ಯತ್ನಿಸಿದೆ. ಪಾಕ್ ಭಯೋತ್ಪಾದಕರು ದಿನ ನಿತ್ಯವೂ ಗಡಿ ನುಸುಳುತ್ತಿದ್ದಾರೆ. ಇದೆಂತಾ ಗಡಿ ಸುರಕ್ಷತೆ ಎಂದು ಅಸಾದುದ್ದೀನ್ ಒವೈಸಿ ಅವರು ಮೋದಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತವಾಂಗ್ ಘರ್ಷಣೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಟಾಚಾರಕ್ಕೆ ಸದನಕ್ಕೆ ಲಿಖಿತ ಹೇಳಿಕೆ ನೀಡಿದ್ದಾರೆ. ಅವರು ಪ್ರತಿಪಕ್ಷಗಳ ಯಾವುದೇ ಪ್ರಶ್ನೆಗೆ ಉತ್ತರಿಸುವ ಧೈರ್ಯ ತೋರಲಿಲ್ಲ. ಮೋದಿ ಸರ್ಕಾರ ಗಡಿ ಸುರಕ್ಷತೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಅಸಾದುದ್ದೀನ್ ಓವೈಸಿ ಒತ್ತಾಯಿಸಿದರು.
ಚೀನಾ ಪದೇ ಪದೇ ಎಲ್‌ಎಸಿ ಬಳಿ ಕ್ಯಾತೆ ತೆಗೆಯುತ್ತಿದೆ. ನಮ್ಮ ಧೀರ ಸೈನಿಕರು ಚೀನಿ ಸೈನಿಕರನ್ನು ಅತ್ಯಂತ ದಿಟ್ಟವಾಗಿ ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಧೈರ್ಯತನ ಪ್ರದರ್ಶಿಸುತ್ತಿಲ್ಲ ಎಂದು ಅಸಾದುದ್ದೀನ್ ಓವೈಸಿ ಗಂಭೀರ ಆರೋಪ ಮಾಡಿದರು.
ರಾಜನಾಥ್ ಸಿಂಗ್ ಹೇಳಿದ್ದೇನು?
ಕಳೆದ ವಾರ ಅರುಣಾಚಲಯದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಯಾವುದೇ ಯೋಧರು ಮೃತಪಟ್ಟಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. ಗಡಿ ವಿವಾದದ ಕುರಿತು ಚರ್ಚೆ ನಡೆಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದ ಬಳಿಕ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಸಂಬಂಧಿತ ಸುದ್ದಿ
India-China Border Clash: ಏನ್ಮಾಡೋದು ಮೋದಿ ಸರ್ಕಾರಕ್ಕೆ ಕಿವಿಯೇ ಇಲ್ಲ: ತವಾಂಗ್ ಗಡಿ ಘರ್ಷಣೆ ಬಗ್ಗೆ ಖರ್ಗೆ ಹೇಳಿದ್ದೇನು?
ಅರುಣಾಚಲ ಪ್ರದೇಶದ ತವಾಂಗ್ ಬಳಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆದ, ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಘಟನೆಯ ಕುರಿತು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ವಿಪಕ್ಷಗಳ ಮಾತು ಕೇಳಲು ಸಿದ್ಧವಿಲ್ಲ ಎಂದು ಕಿಡಿಕಾರಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ