PM Modi Calls Rishi Sunak: ಪ್ರಧಾನಿ ಮೋದಿ-ರಿಷಿ ಸುನಕ್ ಮಾತುಕತೆ: ಯುಕೆ-ಭಾರತ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚೆ
Oct 27, 2022 09:44 PM IST
ಸಂಗ್ರಹ ಚಿತ್ರ
- ಬ್ರಿಟನ್ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಅವರಿಗೆ ದೂರವಾಣಿ ಕರೆ ಮಾಡಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಬ್ರಿಟನ್ ಮುನ್ನಡೆಸುವ ಅವಕಾಶ ಪಡೆದಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯಾಗಿ ಪ್ರಧಾನಿ ಮೋದಿ ಅವರಿಗೆ ರಿಷಿ ಸುನಕ್ ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಉಭಯ ನಾಯಕರು ಯುಕೆ-ಭಾರತ ಮುಕ್ತ ವ್ಯಾಪಾರ ಒಪ್ಪಂದದ ಜಾರಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ನವದೆಹಲಿ: ಬ್ರಿಟನ್ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಅವರಿಗೆ ದೂರವಾಣಿ ಕರೆ ಮಾಡಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಬ್ರಿಟನ್ ಮುನ್ನಡೆಸುವ ಅವಕಾಶ ಪಡೆದಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿರುವ ರಿಷಿ ಸುನಕ್, ಭಾರತ-ಯುಕೆ ನಡುವಿನ ರಾಜತಾಂತ್ರಿಕ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಇಂದು ರಿಷಿ ಸುನಕ್ ಅವರೊಂದಿಗೆ ಮಾತನಾಡಿ ಸಂತೋಷವಾಗಿದೆ. ಯುಕೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಗ್ರ ಮತ್ತು ಸಮತೋಲಿತ ಎಫ್‌ಟಿಎಯ ಆರಂಭಿಕ ತೀರ್ಮಾನದ ಪ್ರಾಮುಖ್ಯತೆಯನ್ನು ನಾವು ಒಪ್ಪಿಕೊಂಡಿದ್ದೇವೆ" ಎಂದು ತಿಳಿಸಿದ್ಧಾರೆ.
ಭಾರತ ಮತ್ತು ಯುಕೆ ನಡುವಿನ ಸಮತೋಲಿತ ಮುಕ್ತ-ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಜಾರಿಗೊಳಿಸುವ ಅಗತ್ಯತೆಯ ಕುರಿತು, ಪ್ರಧಾನಿ ಮೋದಿ ಮತ್ತು ರಿಷಿ ಸುನಕ್ ನಡುವೆ ಮಾತುಕತೆ ನಡೆದಿದೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ. ದೀರ್ಘ ಸಮಯದಿಂದ ಎಫ್‌ಟಿಎ ಒಪ್ಪಂದ ಜಾರಿಯ ಹಂತದಲ್ಲೇ ಉಳಿದುಕೊಂಡಿದ್ದು, ಇದೀಗ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿರುವುದರಿಂದ, ಈ ಒಪ್ಪಂದ ಅಧಿಖೃತವಾಗಿ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ.
ಈ ಕುರಿತು ರಿಷಿ ಸುನಕ್ ಕೂಡ ಟ್ವೀಟ್ ಮಾಡಿದ್ದು, "ನಾನು ನನ್ನ ಹೊಸ ಪಾತ್ರವನ್ನು ಆರಂಭಿಸಿರುವ ಈ ಹಂತದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿರುವುದು ಸಂತಸ ತಂದಿದೆ. ಯುಕೆ ಮತ್ತು ಭಾರತದ ಸಂಬಂಧ ಹಲವು ಆಯಾಮಗಳನ್ನು ಹೊಂದಿದೆ. ಉಭಯ ರಾಷ್ಟ್ರಗಳ ನಡುವಿನ ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸುವತ್ತ ನಾವು ದುಡಿಯುತ್ತೇವೆ ಎರಡು ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಏನನ್ನು ಸಾಧಿಸಬಹುದು ಎಂಬುದನ್ನು ತಿಳಿಯಲು ನಾನು ಉತ್ಸುಕನಾಗಿದ್ದೇನೆ.." ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲು, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಕೂಡ ನಾಳೆ(ಅ.೨೮-ಶುಕ್ರವಾರ) ಭಾರತಕ್ಕೆ ಬರುತ್ತಿದ್ದಾರೆ. ಇಬ್ಬರೂ ನಾಯಕರು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ ಎಂದು ಬ್ರಿಟನ್‌ನ ವಿದೇಶಾಂಗ ಕಚೇರಿ ಸ್ಪಷ್ಟಪಡಿಸಿದೆ.
ಬ್ರಿಟನ್ ಭಾರತದೊಂದಿಗಿನ ಮುಕ್ತ-ವ್ಯಾಪಾರ ಒಪ್ಪಂದದ ಹೆಚ್ಚಿನ ವಿಭಾಗಗಳನ್ನು ಪೂರ್ಣಗೊಳಿಸಿದೆ. ಆದರೆ ಅದು ನ್ಯಾಯಯುತ ಮತ್ತು ಪರಸ್ಪರ ಸಹಕಾರದ ಖಾತರಿ ದೊರೆತ ಬಳಿಕವಷ್ಟೇ ಒಪ್ಪಂದಕ್ಕೆ ಸಹಿ ಹಾಕುತ್ತದೆ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಮಾತನಾಡಿರುವ ಬ್ರಿಟನ್ ವಾಣಿಜ್ಯ ಸಚಿವ ಗ್ರೆಗ್ ಹ್ಯಾಂಡ್ಸ್, ಮುಕ್ತ-ವ್ಯಾಪಾರ ಒಪ್ಪಂದದ ಕುರಿತು ಶೀಘ್ರದಲ್ಲೇ ಭಾರತದೊಂದಿಗೆ ಮುಂದಿನ ಸುತ್ತಿನ ಮಾತುಕತೆಗಳಿಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ವಲಸಿಗರಿಗೆ ಹೆಚ್ಚು ಉದಾರವಾದ ವೀಸಾ ನೀತಿಯನ್ನು ವಿರೋಧಿಸಿರುವ ಭಾರತೀಯ ಮೂಲದ ಬ್ರಿಟನ್ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್, ಭಾರತ-ಬ್ರಿಟನ್ ಎಫ್‌ಟಿಎ ಒಪ್ಪಂದವನ್ನು ದೃಢವಾಗಿ ಬೆಂಬಲಿಸಿದ್ದಾರೆ. ಲಂಡನ್‌ನಲ್ಲಿ ಇಂಡಿಯಾ ಗ್ಲೋಬಲ್ ಫೋರಮ್ ಆಯೋಜಿಸಿದ್ದ ದೀಪಾವಳಿ ಸಮಾರಂಭದಲ್ಲಿ ಮಾತನಾಡಿದ ಬ್ರೆವರ್‌ಮನ್, ಬ್ರಿಟನ್ ಅಭಿವೃದ್ಧಿಯಲ್ಲಿ ವಲಸಿಗ ಭಾರತೀಯ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದ್ದರು.
ಒಟ್ಟಿನಲ್ಲಿ ಭಾರಾತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಸುನಕ್ ಆಡಳಿತಾವಧಿಯಲ್ಲಿ ಭಾರತ ಮತ್ತು ಯುಕೆ ನಡುವಿನ ರಾಜತಾಂತ್ರಿಕ ಸಂಬಂಧ ಐತಿಹಾಸಿಕ ಘಟ್ಟವನ್ನು ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.
ವಿಭಾಗ