PM Modi: ಕಮ್ಯೂನಿಸ್ಟ್ ಚೀನಾದಲ್ಲಿ ಹೆಚ್ಚಿದ ಭಾರತದ ಪ್ರಧಾನಿ ಜನಪ್ರಿಯತೆ: ಚೀನಿಯರು ಮೋದಿಗೆ ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತಾ?
Mar 20, 2023 05:15 PM IST
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಭಾರತ ಮತ್ತು ಚೀನಾ ನಡುವಿನ ಹಳಸಿದ ಸಂಬಂಧಗಳ ಹೊರತಾಗಿಯೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾದ ನಾಗರಿಕರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅಮೆರಿಕ ಮೂಲದ ನಿಯತಕಾಲಿಕೆ 'ದಿ ಡಿಪ್ಲೋಮ್ಯಾಟ್'ನಲ್ಲಿ ಲೇಖಕ ಮು ಚುನ್ಶನ್ ಅವರು, ತಮ್ಮ 'ಚೀನಾದಲ್ಲಿ ಭಾರತವನ್ನು ಹೇಗೆ ನೋಡಲಾಗುತ್ತದೆ?' ಎಂಬ ಲೇಖನದಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಬಗ್ಗೆ ಉಲ್ಲೇಖಿಸಿದ್ದಾರೆ.
ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಹಳಸಿದ ಸಂಬಂಧಗಳ ಹೊರತಾಗಿಯೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾದ ನಾಗರಿಕರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅಮೆರಿಕ ಮೂಲದ ನಿಯತಕಾಲಿಕೆ 'ದಿ ಡಿಪ್ಲೋಮ್ಯಾಟ್'ನಲ್ಲಿ ಲೇಖಕ ಮು ಚುನ್ಶನ್ ಅವರು, ತಮ್ಮ 'ಚೀನಾದಲ್ಲಿ ಭಾರತವನ್ನು ಹೇಗೆ ನೋಡಲಾಗುತ್ತದೆ?' ಎಂಬ ಲೇಖನದಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಬಗ್ಗೆ ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೋದಿ ಅವರು ಚೀನಾದ ನೆಟಿಜನ್‌ಗಳಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅವರಿಗೆ "ಮೋದಿ ಲಾಕ್ಸಿಯನ್" ಎಂಬ ನಿಕ್‌ನೇಮ್ ಕೂಡ ಕೊಟ್ಟಿದ್ದಾರೆ ಎಂದು ಮು ಚುನ್ಶನ್ ತಮ್ಮ ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಲಾಕ್ಸಿಯನ್ ಪದವು ಗಮನಾರ್ಹವಾಗಿ ಕೆಲವು ವಿಲಕ್ಷಣ ಸಾಮರ್ಥ್ಯಗಳನ್ನು ಹೊಂದಿರುವ ಹಿರಿಯ ಅಮರರನ್ನು ಸೂಚಿಸುತ್ತದೆ. ಚೀನಾದ ನೆಟಿಜನ್‌ಗಳು ಇತರ ನಾಯಕರಿಗಿಂತ ಮೋದಿ ವಿಭಿನ್ನ ಎಂದು ಭಾವಿಸುತ್ತಾರೆ. ಇದೇ ಕಾರಣಕ್ಕೆ ಅವರಿಗೆ "ಮೋದಿ ಲಾಕ್ಸಿಯನ್" ಎಂದು ಪ್ರೀತಿಯಿಂದ ಕರೆಯುತ್ತಾರೆ ಎಂದು ಮು ಚುನ್ಶನ್ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.
ಭಾರತದ ಬಗೆಗಗಿನ ಚೀನಿಯರ ಗ್ರಹಿಕೆಗಳು ಸಾಕಷ್ಟು ಸಂಕೀರ್ಣವಾಗಿವೆ. ವಿಶಿಷ್ಟವಾಗಿ ಶ್ರೇಷ್ಠತೆ ಮತ್ತು ಆತ್ಮವಿಶ್ವಾಸದ ಪ್ರಜ್ಞೆಯ ಮೇಲೆ ಅದು ನೆಲೆಗೊಂಡಿವೆ ಎಂದು ಮು ಚುನ್ಶನ್ ತಮ್ಮ ಲೇಖನದಲ್ಲಿ ಬರೆಯುತ್ತಾರೆ.
ದಕ್ಷಿಣ ಏಷ್ಯಾದ ಎರಡು ನೆರೆಹೊರೆ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಅಂತರವು ಅಗಾಧವಾಗಿ ಬೆಳೆಯುತ್ತಿದೆ. ಪಾಕಿಸ್ತಾನದ ಪ್ರಸ್ತುತ ರಾಜಕೀಯ ಮತ್ತು ಆರ್ಥಿಕ ಕುಸಿತ, ಅದನ್ನು ಚೀನಾದ ಅಡಿಯಾಳು ರಾಷ್ಟ್ರವನ್ನಾಗಿ ಪರಿವರ್ತಿಸಿದರೂ ಅಚ್ಚರಿಯಿಲ್ಲ ಎಂದು ಮು ಚುನ್ಶನ್ ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
“ಕಳೆದ ಒಂಬತ್ತು ವರ್ಷಗಳ ಸತ್ಯಗಳು ಚೀನಾ ಮತ್ತು ಭಾರತವು ಸಹಕಾರಕ್ಕೆ ಹೆಚ್ಚಿನ ಅವಕಾಶವನ್ನು ಹೊಂದಿದೆ ಎಂದು ಸಾಬೀತುಪಡಿಸಿದೆ. ಉದಾಹರಣೆಗೆ, ಭಾರತದೊಂದಿಗೆ ಚೀನಾದ ವ್ಯಾಪಾರವು ವರ್ಷಕ್ಕೆ 115 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ್ದಾಗಿದೆ. ಆದರೆ ಪಾಕಿಸ್ತಾನದಿಂದಿಗೆ ಚೀನಾ ಕೇವಲ 30 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ವ್ಯಾಪಾರವನ್ನು ಮಾತ್ರ ಮಾಡುತ್ತದೆ.." ಎಂದು ಮು ಚುನ್ಶನ್ ಸೂಚ್ಯವಾಗಿ ಹೇಳಿದ್ದಾರೆ.
“ಖಂಡಿತವಾಗಿಯೂ ಚೀನಾವು ಪಾಕಿಸ್ತಾನವನ್ನು ಮರೆತಿಲ್ಲ. ಆದರೆ ಅನೇಕ ಚೀನೀ ನೆಟಿಜನ್‌ಗಳು ಎರಡು ದಕ್ಷಿಣ ಏಷ್ಯಾದ ನೆರೆಹೊರೆಯವರ ಬಗ್ಗೆ ಜ ದೃಷ್ಟಿಕೋನವನ್ನು ಹೊಂದಿದ್ದಾರೆ. ಭಾರತವನ್ನು ನಿಗ್ರಹಿಸಲು ಪಾಕಿಸ್ತಾನವನ್ನು ಬಳಸಿಕೊಳ್ಳುವ ಚೀನಾದ ಕಲ್ಪನೆಯು ಹೆಚ್ಚು ಅವಾಸ್ತವಿಕವಾಗುತ್ತಿದೆ. ಏಕೆಂದರೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಅಂತರವು ವಿಸ್ತಾರವಾಗುತ್ತಿದೆ.." ಎಂದು ಮು ಚುನ್ಶನ್ ಹೇಳಿದ್ದಾರೆ.
ಭಾರತದ ಬಗ್ಗೆ ಚೀನಾದ ದೃಷ್ಟಿಕೋನಗಳು ತುಂಬಾ ಜಟಿಲವಾಗಿದ್ದರೂ, ಮೋದಿಯಂತಹ ವಿದೇಶಿ ನಾಯಕ ಚೀನಾದಲ್ಲಿ ಪ್ರಾಮುಖ್ಯತೆ ಮತ್ತು ಜನಪ್ರಿಯತೆಯನ್ನು ಗಳಿಸಲು ಸಾಧ್ಯವಾಗಿರುವುದು, ಎರಡು ದೇಶಗಳ ನಡುವಿನ ಸಂಬಂಧವನ್ನು ನೋಡಿದಾಗ ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.
ಜಗತ್ತಿನ ಇತರ ಪ್ರಮುಖ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧಗಳ ಕುರಿತು ಮಾತನಾಡಿರುವ ಮು ಚುನ್ಶನ್, ರಷ್ಯಾ, ಅಮೆರಿಕದಂತಹ ದೈತ್ಯ ರಾಷ್ಟ್ರಗಳೊಂದಿಗೆ ಭಾರತ ಸುಮಧುರ ಸಂಬಂಧ ಹೊಂದಿರುವುದು ಸುಲಭದ ಮಾತಲ್ಲ. ಇದು ಚೀನಿಯರನ್ನು ಬಹುವಾಗಿ ಆಕರ್ಷಿಸಿದ ಸಂಗತಿಯಾಗಿದೆ ಎಂದು ನುಡಿದಿದ್ದಾರೆ.
“ನಾನು ಸುಮಾರು 20 ವರ್ಷಗಳಿಂದ ಅಂತರರಾಷ್ಟ್ರೀಯ ಮಾಧ್ಯಮ ವರದಿಗಳನ್ನು ಮಾಡುತ್ತಿದ್ದೇನೆ ಮತ್ತು ಚೀನಾದ ನೆಟಿಜನ್‌ಗಳು ವಿದೇಶಿ ನಾಯಕನಿಗೆ ನಿಕ್‌ನೇಮ್ ನೀಡುವುದು ಅಪರೂಪ. ಮೋದಿಯವರಿಗೆ ಪ್ರೀತಿಯಿಂದ ನೀಡಿರುವ ಹೆಸರು ಅತ್ಯಂತ ಭಿನ್ನವಾಗಿದೆ ಮತ್ತು ಸ್ಪಷ್ಟವಾಗಿ ಅವರು ಚೀನಾದ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದನ್ನು ಸೂಚಿಸುತ್ತದೆ.." ಎಂದು ಮು ಚುನ್ಶನ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.
"ನನ್ನ ಒಂದು ತೀರ್ಮಾನವೆಂದರೆ, ಒಟ್ಟಾರೆಯಾಗಿ, ಚೀನಿಯರು ಭಾರತದ ಬಗ್ಗೆ ಯಾವುದೇ ದುರುದ್ದೇಶ ಹೊಂದಿಲ್ಲ. ಆದರೆ ಗಡಿ ವಿವಾದದ ವಿಷಯದಲ್ಲಿ ಅವರಿಗೆ ಭಾರತದ ಬಗ್ಗೆ ಕೊಂಚ ಕೋಪ ಇರುವುದು ಸತ್ಯ. ಭಾರತವು ಪಾಶ್ಚಿಮಾತ್ಯರ ಬೆಂಬಲದೊಂದಿಗೆ ಚೀನಾವನ್ನು ಮುತ್ತಿಗೆ ಹಾಕುವ ಉದ್ದೇಶದಿಂದಲೇ ಕ್ವಾಡ್ ಗುಂಪಿಗೆ ಸೇರಿದೆ ಎಂದು ಬಹುತೇಕ ಚೀನಿಯರು ಭಾವಿಸುತ್ತಾರೆ..”ಎಂದು ಮು ಚುನ್ಶನ್ ಅವರನ್ನು ಉಲ್ಲೇಖಿಸಿ 'ದಿ ಡಿಪ್ಲೋಮ್ಯಾಟ್' ವರದಿ ಮಾಡಿದೆ.
ವಿಭಾಗ