Melodi: ಎಂಥಾ ಸ್ನೇಹ.. ಇಟಲಿ ಪ್ರಧಾನಿ ಜೊತೆಗಿನ 'ಮೆಲೋಡಿ' ಸೆಲ್ಫಿಗೆ ಮೋದಿನೂ ಕೊಟ್ರು ಪ್ರತಿಕ್ರಿಯೆ: ಇಲ್ಲಿವೆ ವೈರಲ್ ವಿಡಿಯೋಗಳು
Dec 02, 2023 05:07 PM IST
ಪ್ರಧಾನಿ ನರೇಂದ್ರ ಮೋದಿ ಜೊತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೆಲ್ಫಿ
- ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೆಲೋಡಿ (Melodi) ಪದ ಮೋಡಿ ಮಾಡುತ್ತಿದೆ. ಏನಪ್ಪ ವಿಚಾರ ಅಂತೀರಾ? ಈ ಸುದ್ದಿ ಓದಿ..ಜೊತೆಗೆ ಮೆಲೋನಿ-ಮೋದಿಯ ವೈರಲ್ ವಿಡಿಯೋಗಳನ್ನು ನೋಡಿ.
ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ 'ಮೆಲೋಡಿ' ಹವಾ. ಮೆಲೋಡಿ ಹ್ಯಾಶ್ಟ್ಯಾಗ್ (#Melodi) ಟ್ರೆಂಡಿಂಗ್ನಲ್ಲಿದೆ. ಇದಕ್ಕೆ ಕಾರಣವಾಗಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಸೆಲ್ಫಿ.
ದುಬೈನಲ್ಲಿ ನಡೆದ COP28 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಗುನಗುತ್ತಾ ಮಾತನಾಡುವ, ಸೆಲ್ಫಿ ತೆಗೆದುಕೊಳ್ಳುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಹಿಂದೆ ಕೂಡ ಒಂದೆರಡು ಬಾರಿ ಮೋದಿ ಹಾಗೂ ಮೆಲೋನಿ ಜಾಗತಿಕ ಸಮಾರಂಭಗಳಲ್ಲಿ ಭೇಟಿಯಾಗಿದ್ದರು. ಆ ಭೇಟಿಗಳ ವಿಡಿಯೋಗೆ ದಿಟ್ಟೋ ಮೋದಿ ಧ್ವನಿಯಂತೆ ಬಿಂಬಿಸುವ ಲವ್ ಸಾಂಗ್ ಸೇರಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ಇದೀಗ ನಿನ್ನೆಯಿಂದ COP28 ಶೃಂಗಸಭೆಯ ಮೋದಿ ಹಾಗೂ ಮೆಲೋನಿ ಫೋಟೋ-ವಿಡಿಯೋಗಳನ್ನು ಜೊತೆ ನೆಟ್ಟಿಗರು Melodi ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಪೋಸ್ಟ್ ಮಾಡುತ್ತಿದ್ದಾರೆ. ನೆಟ್ಟಿಗರು-ಟ್ರೋಲರ್ಸ್ ಪ್ರಕಾರ Giorgia Meloni + Modi = Melodi. ಮೆಲೋನಿ ಅವರ ಹೆಸರಿನ ಮೊದಲ ಎರಡು ಅಕ್ಷರ (Melo) ಹಾಗೂ ಮೋದಿ ಹೆಸರಲ್ಲಿ ಕೊನೆಯ ಅಕ್ಷರ (di) ಸೇರಿಸಿ ನೆಟ್ಟಿಗರು ಮೆಲೋಡಿ (Melodi) ಎಂದು ಮಾಡಿದ್ದಾರೆ.
ಕೇವಲ ನೆಟ್ಟಿಗರು ಮಾತ್ರ Melodi ಹ್ಯಾಶ್ಟ್ಯಾಗ್ ಬಳಸಿದ್ದರೆ ಇಷ್ಟೆಲ್ಲಾ ಸುದ್ದಿಯಾಗುತ್ತಿರಲಿಲ್ಲವೇನೊ. ಆದರೆ ಮೆಲೋಡಿ ಪದ ವೈರಲ್ ಆಗುತ್ತಿದ್ದಂತೆಯೇ ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಮೋದಿ ಜೊತೆ ತೆಗೆಸಿಕೊಂಡ ಸೆಲ್ಫಿಯನ್ನು ಶೇರ್ ಮಾಡಿದ್ದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ "COP28ಅಲ್ಲಿ ಉತ್ತಮ ಸ್ನೇಹಿತ" ಎಂದು ಕ್ಯಾಪ್ಶನ್ ನೀಡಿದ್ದರು. ಅಷ್ಟೇ ಅಲ್ಲದೇ ಈ ಪೋಸ್ಟ್ಗೆ #Melodi ಎಂದು ಹ್ಯಾಶ್ಟ್ಯಾಗ್ ನೀಡಿದ್ದರು.
ಜಾರ್ಜಿಯಾ ಮೆಲೋನಿ ಅವರೇ ಲೋಡಿ ಪದ ಬಳಸಿದ ಮೇಲೆ ನೆಟ್ಟಿಗರು ಸುಮ್ಮೇ ಇರ್ತಾರಾ? ಈ ಹ್ಯಾಶ್ಟ್ಯಾಗ್ ಅನ್ನು ಈಗ ಟ್ವಿಟರ್ ಟ್ರೆಂಡಿಂಗ್ನಲ್ಲಿ ನಂಬರ್ ಒನ್ ಮಾಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ನಡೆದ ಜಿ20 ಶೃಂಗಸಭೆ ವೇಳೆ ಮೋದಿ-ಮೆಲೋನಿ ಜೊತೆ ಇರುವ ವಿಡಿಯೋಗಳನ್ನು ಮತ್ತಷ್ಟು ವೈರಲ್ ಮಾಡಿದ್ದಾರೆ.
ಇದೀಗ ಜಾರ್ಜಿಯಾ ಮೆಲೋನಿ ಅವರ ಟ್ವಿಟರ್ಗೆ ಪ್ರಧಾನಿ ಮೋದಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸ್ನೇಹಿತರನ್ನು ಭೇಟಿಯಾಗುವುದು ಯಾವಾಗಲೂ ಸಂತೋಷವನ್ನು ನೀಡುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.