Atiq Ahmed Death: ಅತಿರೇಕದ ಅತೀಕ್ ಗುಂಡಿನ ದಾಳಿಗೆ ಬಲಿ: ಒಬ್ಬೊಬ್ಬ ರಾಜಕಾರಣಿಯದ್ದು ಒಂದೊಂದು ಹೇಳಿಕೆ..!
Apr 16, 2023 11:47 AM IST
ಅಹ್ಮದ್ ಸಹೋದರರು (ಸಂಗ್ರಹ ಚಿತ್ರ)
- ಅತೀಕ್ ಅಹ್ಮದ್‌ನ ಹತ್ಯೆ ಉತ್ತರ ಪ್ರದೇಶದ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಈ ಘಟನೆ ನಾಂದಿ ಹಾಡಿದೆ. ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಹಾಗೆಯೇ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಚಕಾರ ಎತ್ತಿದ್ದಾರೆ.
ಪ್ರಯಾಗ್‌ರಾಜ್: ನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಉತ್ತರ ಪ್ರದೇಶದ ದರೋಡೆಕೋರ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು, ಇಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯುತ್ತಿದ್ದಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ಅತೀಕ್ ಅಹ್ಮದ್‌ನ ಹತ್ಯೆ ಉತ್ತರ ಪ್ರದೇಶದ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಈ ಘಟನೆ ನಾಂದಿ ಹಾಡಿದೆ. ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಸಮಾಜವಾದಿ ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಹಾಗೆಯೇ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಚಕಾರ ಎತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶ ಬಿಜೆಪಿ ಸಂಸದ ಸೂಬ್ರತ್ ಪಾಠಕ್, "ಅತೀಕ್ ಅಹ್ಮದ್ ಮತ್ತು ಅಶ್ರಫ್ ಹತ್ಯೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಹಂತಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.." ಎಂದು ಭರವಸೆ ನೀಡಿದ್ದಾರೆ. "ಅತೀಕ್ ಅಹ್ಮದ್ ಹತ್ಯೆಯ ತನಿಖೆ ನಡೆಸಲಾಗುವುದು. ಆದರೆ ಅಪರಾಧಿಗಳ ಬಗ್ಗೆ ಸರ್ಕಾರ ಸಹಾನುಭೂತಿ ತೋರಲು ಸಾಧ್ಯವಿಲ್ಲ.." ಎಂದು ಉತ್ತರ ಪ್ರದೇಶ ಸಚಿವ ಮತ್ತು ಬಿಜೆಪಿ ನಾಯಕ ಸುರೇಶ್ ಕುಮಾರ್ ಖನ್ನಾ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಅತೀಕ್ ಅಹ್ಮದ್ ಹತ್ಯೆಯನ್ನು ಖಂಡಿಸಿದ್ದಾರೆ. ಕಾನೂನಿನ ಅಸಮರ್ಪಕ ಅನುಷ್ಠಾನದ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ''ಯುಪಿಯಲ್ಲಿ ಅಪರಾಧಗಳು ಉತ್ತುಂಗಕ್ಕೇರಿದ್ದು, ಅಪರಾಧಿಗಳ ನೈತಿಕ ಸ್ಥೈರ್ಯ ಹೆಚ್ಚಿದೆ.ಪೊಲೀಸರ ಭದ್ರತೆಯ ನಡುವೆಯೇ ಯಾರನ್ನಾದರೂ ಬಹಿರಂಗವಾಗಿ ಗುಂಡು ಹಾರಿಸಿ ಕೊಲ್ಲಬಹುದಾದರೆ, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಏನು? ಇದರಿಂದ ಭಯದ ವಾತಾವರಣ ಸಾರ್ವಜನಿಕರ ನಡುವೆ ಸೃಷ್ಟಿಯಾಗುತ್ತಿದೆ; ಕೆಲವರು ಉದ್ದೇಶಪೂರ್ವಕವಾಗಿ ಇಂತಹ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ತೋರುತ್ತದೆ..'' ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
"ಇಂದಿನ ಘಟನೆ ಯುಪಿ ಸರ್ಕಾರಕ್ಕೆ ಮಸಿ ಬಳಿದಿದೆ. ರಾಜ್ಯದಲ್ಲೇನು ಗ್ಯಾಂಗ್ ವಾರ್ ನಡೆಯುತ್ತಿದೆಯೇ? ಕಾನೂನಿನ ನಿಯಮವಿಲ್ಲವಾಗಿದೆ.." ಎಂದು ಸಮಾಜವಾದಿ ಪಕ್ಷದ ವಕ್ತಾರ ಘನಶ್ಯಾಮ್ ತಿವಾರಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪ್ರತಿಕ್ರಿಯೆ ಹೊರಹಾಕಿರುವ ಕಪಿಲ್ ಸಿಬಲ್, ಉತ್ತರ ಪ್ರದೇಶದಲ್ಲಿ ಇಂದು ಎರಡು ಹತ್ಯೆಗಳು ನಡೆದಿವೆ. ಒಂದು, ಅತೀಕ್ ಮತ್ತು ಅಶ್ರಫ್ ಅಹ್ಮದ್ ಸಹೋದರರದ್ದು, ಮತ್ತೊಂದು ಕಾನೂನು ಮತ್ತು ಸುವ್ಯವಸ್ಥೆಯದ್ದು.." ಎಂದು ಆಕ್ರೋಶ ಹೊರಹಾಕಿದ್ದಾರೆ.
"ಅತೀಕ್ ಮತ್ತು ಆತನ ಸಹೋದರನನ್ನು ಪೋಲೀಸ್ ಕಸ್ಟಡಿಯಲ್ಲಿ ಕೊಲ್ಲಲಾಯಿತು. ಹಂತಕರು ಜೆಎಸ್‌ಆರ್(ಜೈ ಶ್ರೀರಾಮ) ಘೋಷಣೆಗಳನ್ನು ಕೂಗಿದ್ದಾರೆ. ಈ ಹತ್ಯೆಯು ಯೋಗಿ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯ ದೊಡ್ಡ ವೈಫಲ್ಯಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ. ಎನ್‌ಕೌಂಟರ್-ರಾಜ್ ಅನ್ನು ಆಚರಿಸುವವರೂ, ಈ ಹತ್ಯೆಗೆ ಸಮಾನವಾಗಿ ಕಾರಣರಾಗಿದ್ದಾರೆ.." ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಉನ್ನತ ಪೊಲೀಸ್ ಅಧಿಕಾರಿ ಶೇಶ್‌ಪಾಲ್ ವೈದ್ಯ ಅವರು, "ಯುಪಿ ಪೊಲೀಸರು ಹತ್ಯೆಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ.." ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
"ಮಾಫಿಯಾ ಡಾನ್ ಮತ್ತು ದರೋಡೆಕೋರ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ಪ್ರಯಾಗರಾಜ್‌ನಲ್ಲಿ ನಡೆದ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಮತ್ತು ಮಾಧ್ಯಮದ ಕ್ಯಾಮರಾಗಳ ಮುಂದೆ ಕ್ರೂರವಾಗಿ ಹೊಡೆದುರುಳಿಸಲಾಯಿತು. ಈ ದಾಳಿಕೋರರು ಯಾರ ಕ್ರಿಮಿನಲ್ ರಹಸ್ಯಗಳನ್ನು ರಕ್ಷಿಸುತ್ತಿದ್ದರು ಎಂಬುದನ್ನು ಯುಪಿ ಪೊಲೀಸರು ಗಂಭೀರವಾಗಿ ತನಿಖೆ ನಡೆಸಬೇಕು..” ಎಂದು ಶೇಶ್‌ಪಾಲ್ ವೈದ್ಯ ಟ್ವೀಟ್ ಮಾಡಿದ್ದಾರೆ.
ವಿಭಾಗ