logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Polls: ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ; ಇಂದು ದೆಹಲಿಯಲ್ಲಿ ಮಹತ್ವದ ಸಭೆ

Lok Sabha Polls: ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ; ಇಂದು ದೆಹಲಿಯಲ್ಲಿ ಮಹತ್ವದ ಸಭೆ

HT Kannada Desk HT Kannada

Jan 06, 2024 08:18 AM IST

google News

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ನಡೆಸಿದ್ದು, ವಿವಿಧ ಮೋರ್ಚಾಗಳಿಗೆ ನಿರ್ದಿಷ್ಟ ಹೊಣೆಗಾರಿಕೆಗಳನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. (ಸಾಂಕೇತಿಕ ಚಿತ್ರ)

  • ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿರುವ ಬಿಜೆಪಿ, ವಿವಿಧ ಮೋರ್ಚಾಗಳಿಗೆ ನಿರ್ದಿಷ್ಟ ಹೊಣೆಗಾರಿಕೆಗಳನ್ನು ನೀಡಿ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅ‍ಧ್ಯಕ್ಷತೆಯನ್ನು ಇಂದು (ಜ.6) ಮಹತ್ವದ ಸಭೆ ದೆಹಲಿಯಲ್ಲಿ ನಡೆಯುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ನಡೆಸಿದ್ದು, ವಿವಿಧ ಮೋರ್ಚಾಗಳಿಗೆ ನಿರ್ದಿಷ್ಟ ಹೊಣೆಗಾರಿಕೆಗಳನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. (ಸಾಂಕೇತಿಕ ಚಿತ್ರ)
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ನಡೆಸಿದ್ದು, ವಿವಿಧ ಮೋರ್ಚಾಗಳಿಗೆ ನಿರ್ದಿಷ್ಟ ಹೊಣೆಗಾರಿಕೆಗಳನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. (ಸಾಂಕೇತಿಕ ಚಿತ್ರ) (ANI)

ಲೋಕಸಭಾ ಚುನಾವಣೆಗೆ (Lok Sabha Election) ಭರದಿಂದ ಸಿದ್ಧತೆಯನ್ನು ನಡೆಸಿರುವ ಬಿಜೆಪಿ, ಹೊಸ ಸದಸ್ಯರನ್ನು ನೋಂದಾಯಿಸುವುದು, ಮಹಿಳೆಯರು ಮತ್ತು ಮಕ್ಕಳಿಗಾಗಿ ಕೆಲಸ ಮಾಡುವ ಸ್ವಸಹಾಯ ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಬೆಂಬಲವನ್ನು ಪಡೆಯುವುದರ ಕಡೆಗೆ ಗಮನಹರಿಸಿದೆ.

ಈ ನಡುವೆ, ವೃತ್ತಿಪರರು ಮತ್ತು ಜಾತಿ ಗುಂಪುಗಳಿಗಾಗಿ ಸಮ್ಮೇಳನಗಳು ಅಥವಾ "ಜನ ಸಭೆಗಳನ್ನು" ಆಯೋಜಿಸುವುದರ ಕಡೆಗೂ ಗಮನ ಕೇಂದ್ರೀಕರಿಸಿರುವ ಬಿಜೆಪಿ ನಾಯಕರು, ಪಕ್ಷದ ಕಾರ್ಯಕರ್ತರಿಗೆ ಕೆಲವು ನಿರ್ದಿಷ್ಟ ಹೊಣೆಗಾರಿಕೆ ಮತ್ತು ಗುರಿಗಳನ್ನು ನೀಡಲಾರಂಭಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು (ಜನವರಿ 6) ವಿವಿಧ ಮೋರ್ಚಾಗಳ ಮುಖ್ಯಸ್ಥರ ಸಭೆಯನ್ನು ದೆಹಲಿಯಲ್ಲಿ ಆಯೋಜಿಸಿದ್ದು, ಅಲ್ಲಿ ಅವರಿಗೆ ಒಟ್ಟಾರೆ ಲೋಕಸಭಾ ಚುನಾವಣಾ ತಯಾರಿಗೆ ಅಗತ್ಯ ಬೇಕಾದ ಕಾರ್ಯಕ್ರಮಗಳ ರೂಪುರೇಷೆಗಳನ್ನು ಅಂತಿಮಗೊಳಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕಳೆದ ಎರಡು ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳು ಮತ್ತು ನಾಯಕತ್ವ ಈ ಎರಡು ವಿಷಯಗಳು ಈ ಸಲದ ಚುನಾವಣಾ ಪ್ರಚಾರಕ್ಕೆ ಎರಡು ಪ್ರಮುಖ ಆಧಾರ ಸ್ತಂಭಗಳು. ಭಾರತದ ಅಭಿವೃದ್ಧಿಗೆ ಇದುವರೆಗೆ ಹಾಕಿಕೊಟ್ಟಿರುವ ಮೂಲಸೌಕರ್ಯದ ನೆಲಗಟ್ಟು ಮತ್ತು ಭರವಸೆಗಳ ಈಡೇರಿಸುವಿಕೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತದೆ.ಈ ಹೊಣೆಗಾರಿಕೆಯನ್ನು ಪಕ್ಷದ ವಿವಿಧ ಮೋರ್ಚಾಗಳಿಗೆ ನೀಡಲಾಗುತ್ತಿದೆ ಎಂದು ಈ ವಿದ್ಯಮಾನದ ವಿವರ ಅರಿತಿರುವ ಹಿರಿಯ ನಾಯಕರೊಬ್ಬರು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

ವಿಕಸಿತ ಭಾರತ ಯಾತ್ರೆಯ ರೂಪದಲ್ಲಿ ಎಲ್ಲ ಸರ್ಕಾರಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿದೆ ಎಂಬುದನ್ನು ಖಾತರಿಪಡಿಸುವ ಕೆಲಸ ಶುರುವಾಗಿದೆ. ಈ ಯಾತ್ರೆಯ ಮೂಲಕ ಮೋರ್ಚಾ ಪ್ರತಿನಿಧಿಗಳು ಈ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸಿ ಅವರಿಂದ ಹಿಮ್ಮಾಹಿತಿಯನ್ನು ಪಡೆಯುವ ಕೆಲಸ ಮಾಡುತ್ತಾರೆ. ಕಳೆದ 5 ವರ್ಷಗಳ ಅವಧಿಯಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಬಿಜೆಪಿಯ ಬಹುದೊಡ್ಡ ಮತ ಬ್ಯಾಂಕ್ ಆಗಿ ಪರಿವರ್ತನೆಯಾಗಿದ್ದಾರೆ ಎಂದು ಹಿರಿಯ ನಾಯಕರು ವಿವರಿಸಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಗಮನಿಸಿದಾಗ, 2014ರಲ್ಲಿ ಬಿಜೆಪಿ ಶೇ.31ರಷ್ಟು ಮತಗಳೊಂದಿಗೆ 272 ಸ್ಥಾನಗಳನ್ನು ಗೆದ್ದಿತ್ತು. 2019ರಲ್ಲಿ ಶೇ.37.36ರಷ್ಟು ಮತಗಳೊಂದಿಗೆ 303 ಸ್ಥಾನಗಳನ್ನು ಗೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆ ಮತ್ತು ಸ್ಥಾನ ಹೆಚ್ಚಿಸುವ ಕೆಲಸಕ್ಕೆ ಸಂಘಟಿತ ಕೆಲಸ ಅಗತ್ಯ ಮಾತ್ರವಲ್ಲ ನಿರ್ಣಾಯಕ ಕೂಡ. ಈ ಸಲದ ಲೋಕಸಭಾ ಚುನಾವಣೆಗೆ ಇಂತಿಷ್ಟೇ ಸ್ಥಾನ ಗೆಲ್ಲಬೇಕು ಎಂಬ ಗುರಿಯನ್ನು ಪಕ್ಷ ನಿಗದಿ ಮಾಡಿಲ್ಲ. ಆದಾಗ್ಯೂ, ಹೆಚ್ಚಿನ ಸ್ಥಾನ ಗೆಲ್ಲಬೇಕೆಂಬ ಅಪೇಕ್ಷೆ ಪಕ್ಷದ ವರಿಷ್ಠರದ್ದು.

ಮತಗಳಿಕೆ ಮತ್ತು ಸ್ಥಾನ ಗೆಲ್ಲುವ ಪ್ರಮಾಣ ಕಳೆದ ಎರಡೂ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಳವಾಗಿದೆ. ಇದೇ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಪಕ್ಷ ಸಂಘಟನಾತ್ಮಕವಾಗಿ ಕಾರ್ಯತಂತ್ರವನ್ನು ರೂಪಿಸುತ್ತಿದೆ. ವಿವಿಧ ಮೋರ್ಚಾಗಳಿಗೆ ನೀಡುವ ಹೊಣೆಗಾರಿಕೆಗಳ ಕುರಿತು ಆಯಾ ಮೋರ್ಚಾಗಳ ಉನ್ನತ ಪದಾಧಿಕಾರಿಗಳಿಗೆ ಸ್ಪಷ್ಟ ಚಿತ್ರಣ ನೀಡುವ ಸಲುವಾಗಿ ಇಂದು (ಜ.6) ಸಭೆ ನಡೆಯುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ