ಬಿಹಾರದ ಧ್ವನಿ ದೆಹಲಿ-ಬಂಗಾಳವನ್ನು ತಲುಪಬೇಕು; ಜನ ಸುರಾಜ್ ಪಕ್ಷ ಸ್ಥಾಪಿಸಿದ ಪ್ರಶಾಂತ್ ಕಿಶೋರ್
Oct 02, 2024 10:39 PM IST
ಬಿಹಾರದ ಧ್ವನಿ ದೆಹಲಿ-ಬಂಗಾಳವನ್ನು ತಲುಪಬೇಕು; ಜನ ಸುರಾಜ್ ಪಕ್ಷ ಸ್ಥಾಪಿಸಿದ ಪ್ರಶಾಂತ್ ಕಿಶೋರ್
- ಬಿಹಾರದಲ್ಲಿ ಜನ್ ಸುರಾಜ್ ಪಕ್ಷ ಸ್ಥಾಪಿಸಿರುವ ಪ್ರಶಾಂತ್ ಕಿಶೋರ್, ಜನ್ ಸುರಾಜ್ ಅಭಿಯಾನ ಆರಂಭಿಸಿದ್ದಾರೆ. ಇದರ ಅಡಿಯಲ್ಲಿ ಬಿಹಾರದ ಸಾವಿರಾರು ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ನವದೆಹಲಿ: ರಾಜಕೀಯ ತಂತ್ರಜ್ಞ ಹಾಗೂ ಕಾರ್ಯಕರ್ತ ಪ್ರಶಾಂತ್ ಕಿಶೋರ್ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಅಕ್ಟೋಬರ್ 2ರ ಬುಧವಾರ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ತಮ್ಮ ರಾಜಕೀಯ ಪಕ್ಷವಾದ ಜನ ಸುರಾಜ್ ಪಕ್ಷವನ್ನು (Jan Suraaj Party) ಆರಂಭಿಸಿದ್ದಾರೆ. ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನೂತನ ಪಕ್ಷದ ಮೂಲಕ ಅವರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪಕ್ಷದ ಉದ್ಘಾಟನೆಗೂ ಮುನ್ನ, ನೆರೆದಿದ್ದ ಜನರಲ್ಲಿ ಜೈ ಬಿಹಾರ್ ಘೋಷಣೆಯನ್ನು ಮಾಡುವಂತೆ ಕಾರ್ಯಕ್ರಮದಲ್ಲಿ ಕೇಳಿಕೊಂಡರು. ಬಿಹಾರದ ಜನರನ್ನು ಯಾವೆಲ್ಲಾ ರಾಜ್ಯಗಳು ನಿಂದಿಸುತ್ತಿವೆಯೋ ಮತ್ತು ಅಂತಹ ಎಲ್ಲಾ ರಾಜ್ಯಗಳಿಗೆ ಈ ಕೂಗು ತಲುಪಲಿ ಎಂದರು.
“ನೀವೆಲ್ಲರೂ 'ಜೈ ಬಿಹಾರ್' ಎಂದು ಜೋರಾಗಿ ಘೋಷಣೆ ಕೂಗಬೇಕು. ಆ ಕೂಗು ಎಷ್ಟು ಜೋರಾಗಿ ಇರಬೇಕು ಎಂದರೆ ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಯಾರೊಬ್ಬರೂ 'ಬಿಹಾರಿ' ಎಂದು ಕರೆಯಬಾರದು. ಕೇಳಲು ಅದು ನಿಂದನೆಯಂತೆ ಭಾಸವಾಗುತ್ತದೆ. ನಿಮ್ಮ ಘೋಷಣೆ ದೆಹಲಿಯನ್ನು ತಲುಪಬೇಕು. ಧ್ವನಿ ಬಂಗಾಳವನ್ನು ತಲುಪಬೇಕು. ಎಲ್ಲಿ ಬಿಹಾರದ ವಿದ್ಯಾರ್ಥಿಗಳನ್ನು ಥಳಿಸಿದರೋ ಅವರ ಕಿವಿಗೆ ಬೀಳಬೇಕು. ಬಿಹಾರದ ಮಕ್ಕಳ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆದ ತಮಿಳುನಾಡು, ದೆಹಲಿ ಮತ್ತು ಮುಂಬೈಗೆ ನಿಮ್ಮ ಘೋಷಣೆ ತಲುಪಬೇಕು” ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಪರೀಕ್ಷೆ ಬರೆಯಲು ಬಂಗಾಳದ ಸಿಲಿಗುರಿಗೆ ಬಂದ ಇಬ್ಬರು ಬಿಹಾರದ ಯುವಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಪ್ರಶಾಂತ್ ಈ ಹೇಳಿಕೆ ನೀಡಿದ್ದಾರೆ.
ಜನ್ ಸುರಾಜ್ ಅಭಿಯಾನ ಆರಂಭಿಸಲಾಗಿದೆ. ಇದರ ಅಡಿಯಲ್ಲಿ ಬಿಹಾರದ ಸಾವಿರಾರು ಜನರನ್ನು ಭೇಟಿಯಾದ ಪ್ರಶಾಂತ್ ಕಿಶೋರ್ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡರು.
ರಾಜಕೀಯ ಅಸಹಾಯಕತೆಯಿಂದ ಬಿಜೆಪಿಗೆ ಮತ
“ಕಳೆದ 25ರಿಂದ 30 ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಪರ್ಯಾಯ ಪಕ್ಷದ ಕೊರತೆಯಿಂದ ಲಾಲು ಪ್ರಸಾದ್ ಅವರ ಮೇಲಿನ ಭಯದಿಂದ ಜನರು ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ. ಈ ರಾಜಕೀಯ ಅಸಹಾಯಕತೆಯನ್ನು ಕೊನೆಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಜನ್ ಸುರಾಜ್ ಅಭಿಯಾನದ ಆರಂಭದಲ್ಲಿ ಹೇಳಲಾಗಿತ್ತು. ಈಗ ಬಿಹಾರದ ಜನರು ಉತ್ತಮ ಪರ್ಯಾಯವನ್ನು ರೂಪಿಸಬೇಕಾಗಿದೆ. ಆ ಪರ್ಯಾಯವು ಬಿಹಾರದ ಎಲ್ಲಾ ಜನರ ಪಕ್ಷವಾಗಿರಬೇಕು. ರಾಜ್ಯದ ಜನರು ಒಟ್ಟಾಗಿ ಅದನ್ನು ರಚಿಸಲು ಬಯಸುತ್ತಾರೆ” ಎಂದು ಅವರು ಸೆಪ್ಟೆಂಬರ್ 30 ರಂದು ಹೇಳಿದ್ದರು.
ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಬಿಜೆಪಿಯು ಕಾಂಗ್ರೆಸ್ ಲಾಲು ಪ್ರಸಾದ್ ಯಾದವ್ ಅವರನ್ನು ಬೆಂಬಲಿಸಿ ಎದುರಿಸಿದ ಗತಿಯನ್ನೇ ಅನುಭವಿಸಲಿದೆ ಎಂದು ಪ್ರಶಾಂತ್ ಕಿಶೋರ್ ಮಂಗಳವಾರ ಹೇಳಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯವನ್ನು ಮುನ್ನಡೆಸಲು ಮಾನಸಿಕವಾಗಿ ಅಥವಾ ದೈಹಿಕವಾಗಿ ಸದೃಢರಾಗಿಲ್ಲ ಎಂದು ಅವರು ಹೇಳಿದ್ದಾರೆ.
ನಿತೀಶ್ ಕುಮಾರ್ ಸೂಕ್ತ ವ್ಯಕ್ತಿ ಅಲ್ಲ
ಬಿಹಾರವನ್ನು ನಡೆಸಲು ನಿತೀಶ್ ಕುಮಾರ್ ಸರಿಯಾದ ದೈಹಿಕ, ಮಾನಸಿಕ ಮತ್ತು ರಾಜಕೀಯ ಸ್ಥಿತಿಯಲ್ಲಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದರು. “ಲಾಲು ಪ್ರಸಾದ್ ಯಾದವ್ ಅವರಿಗೆ 15 ವರ್ಷಗಳ ಕಾಲ 'ಜಂಗಲ್ ರಾಜ್' ನಡೆಸಲು ಕಾಂಗ್ರೆಸ್ ಸಹಾಯ ಮಾಡಿತು. ಬಿಹಾರದ ಜನರು ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆದಿದ್ದಾರೆ. ಮುಂದೆ ಬಿಜೆಪಿಗೂ ಅದೇ ಗತಿಯಾಗಲಿದೆ” ಎಂದು ಹೇಳಿದರು.
ನಿತೀಶ್ ಕುಮಾರ್ ಅವರನ್ನು ಬೆಂಬಲಿಸುವುದು ಬಿಜೆಪಿಯ ರಾಜಕೀಯ ಒತ್ತಾಯವಾಗಿದೆ ಎಂದು ಅವರು ಹೇಳಿದರು. “ಅಧಿಕಾರದಲ್ಲಿ ಮುಂದುವರಿದರೆ ತನ್ನ ಮೈತ್ರಿ ಸೋಲುತ್ತದೆ ಎಂದು ಬಿಜೆಪಿಗೆ ಗೊತ್ತು. ಆದರೆ ಅದು ಬಿಜೆಪಿಯ ರಾಜಕೀಯ ಒತ್ತಾಯವಾಗಿದೆ” ಎಂದು ಅವರು ಹೇಳಿದರು.