Porn on TV screens at Patna station: ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಟಿವಿ ಸ್ಕ್ರೀನಲ್ಲಿ ಪೋರ್ನ್ ಕ್ಲಿಪ್ ಪ್ರಸಾರ!
Mar 20, 2023 07:06 PM IST
ಸಾಂಕೇತಿಕ ಚಿತ್ರ
Porn on TV screens at Patna station: ಬಿಹಾರದ ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ 10ರಲ್ಲಿ ರೈಲಿಗಾಗಿ ಕಾಯುತ್ತಿದ್ದ ಜನರಿಗೆ ಭಾನುವಾರ ಬೆಳಗ್ಗೆ 9.30ಕ್ಕೆ ಶಾಕ್. ಹೊಸದಾಗಿ ಅಳವಡಿಸಿದ್ದ ಟಿವಿ ಪರದೆಯಲ್ಲಿ ಜಾಹೀರಾತಿನ ಬದಲು ಪೋರ್ನ್ ಕ್ಲಿಪ್ ಪ್ರಸಾರವಾಗಿದ್ದು ಇದಕ್ಕೆ ಕಾರಣ.
ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ 10ನೇ ನಂಬರ್ ಪ್ಲಾಟ್‌ಫಾರಂನಲ್ಲಿ ಟಿವಿ ಸ್ಕ್ರೀನ್ ಸ್ಥಾಪಿಸಿದ ಮಾರನೇ ದಿನವೇ ಪೋರ್ನ್ ಕ್ಲಿಪ್ ಪ್ರಸಾರವಾಗಿದೆ. ಮೂರು ನಿಮಿಷ ಇದು ಪ್ರಸಾರವಾಗಿದ್ದು, ಭಾರತೀಯ ರೈಲ್ವೆಯು ಈ ಟಿವಿ ಸ್ಕ್ರೀನ್ ಸ್ಥಾಪಿಸಿದ ಜಾಹೀರಾತು ಏಜೆನ್ಸಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿದೆ.
ಏಜೆನ್ಸಿ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ತಲಾ ಒಂದನ್ನು ದಾಖಲಿಸಿದ್ದಾರೆ ಎಂದು ಈಸ್ಟ್ ಸೆಂಟ್ರಲ್ ರೈಲ್ವೆಯ (ಇಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರೇಂದ್ರ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 10 ರಲ್ಲಿ ಮಾರ್ಚ್ 19 ರಂದು ನಡೆದ ಅಸಹ್ಯಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ... ದತ್ತಾ ಸ್ಟುಡಿಯೋ ಕಂಪನಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಒಂದು ಎಫ್‌ಐಆರ್ ಅನ್ನು ಆರ್‌ಪಿಎಫ್ ಮತ್ತು ಇನ್ನೊಂದನ್ನು ಜಿಆರ್‌ಪಿ ಐಟಿ ಕಾಯ್ದೆಯಡಿ ದಾಖಲಿಸಲಾಗಿದೆ.
"ಹಾಗೆಯೇ, ಅದರ ಒಪ್ಪಂದವನ್ನು ಮುಕ್ತಾಯಗೊಳಿಸುವ ಮೂಲಕ ಈ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಏಜೆನ್ಸಿಯು ನಿರ್ವಹಿಸುವ ಎಲ್ಲ ಟಿವಿ ಸ್ಕ್ರೀನ್‌ಗಳ ಸಂಪರ್ಕ ಕಡಿತಗೊಳಿಸಲಾಗಿದೆ/ಲಾಗ್ ಔಟ್ ಮಾಡಲಾಗಿದೆ. ಘಟನೆಯನ್ನು ಆರ್‌ಪಿಎಫ್ ಮತ್ತು ಜಿಆರ್‌ಪಿ ತನಿಖೆ ನಡೆಸುತ್ತಿದೆ ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಬಹುದು" ಎಂದು ವೀರೇಂದ್ರ ಕುಮಾರ್ ಹೇಳಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.
ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಆಗಿದ್ದೇನು?
ಬಿಹಾರದ ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ 10ರಲ್ಲಿ ರೈಲಿಗಾಗಿ ಕಾಯುತ್ತಿದ್ದ ಜನರಿಗೆ ಭಾನುವಾರ ಬೆಳಗ್ಗೆ 9.30ಕ್ಕೆ ಶಾಕ್. ಹೊಸದಾಗಿ ಅಳವಡಿಸಿದ್ದ ಟಿವಿ ಪರದೆಯಲ್ಲಿ ಜಾಹೀರಾತಿನ ಬದಲು ಪೋರ್ನ್ ಕ್ಲಿಪ್ ಪ್ರಸಾರವಾಗಿದ್ದು ಇದಕ್ಕೆ ಕಾರಣ. ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನೂ, ರೈಲ್ವೆ ಸಚಿವಾಲಯದ ಖಾತೆಯನ್ನೂ ಟ್ಯಾಗ್ ಮಾಡಿ ಗಮನಸೆಳೆದಿದ್ದರು.
ಈ ವಿದ್ಯಮಾನದಿಂದ ವಿಚಲಿತರಾದ ಪ್ರಯಾಣಿಕರು ದೂರು ದಾಖಲಿಸುವ ಸಲುವಾಗಿ ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ರೈಲ್ವೇ ರಕ್ಷಣಾ ಪಡೆ (RPF) ಗೆ ವಿಷಯ ತಿಳಿಸಿದ್ದಾರೆ. ಆಕಸ್ಮಿಕವಾಗಿ ಸಂಭವಿಸಿದ ಸ್ಕ್ರೀನಿಂಗ್ ಅನ್ನು ಕೊನೆಗೊಳಿಸಲು ರೈಲ್ವೇ ನಿಲ್ದಾಣದ ಪರದೆಗಳಲ್ಲಿ ಮಾಹಿತಿ ಮತ್ತು ಜಾಹೀರಾತುಗಳನ್ನು ಪ್ರಸಾರ ಮಾಡಲು ನಿಯೋಜಿಸಲಾದ ಏಜೆನ್ಸಿ ದತ್ತಾ ಕಮ್ಯುನಿಕೇಶನ್ ಅನ್ನು ಆರ್‌ಪಿಎಫ್ ಸಂಪರ್ಕಿಸಿತ್ತು.
"ನಾವು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಒಪ್ಪಂದವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ನಾವು ಕಂಪನಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಇದು ಅಸಹನೀಯ ಘಟನೆಯಾಗಿದೆ. ನಾವು ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ" ಎಂದು ಅಧಿಕಾರಿ ಪ್ರಭಾತ್ ಕುಮಾರ್ ಅವರನ್ನು ಉಲ್ಲೇಖಿಸಿ ಮನಿಕಂಟ್ರೋಲ್ ವರದಿ ಮಾಡಿದೆ.
ಈ ಬಗ್ಗೆ ರೈಲ್ವೆ ಅಧಿಕಾರಿಗಳು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ಅಧಿಕಾರಿಗಳು ನಿಲ್ದಾಣದ ಆಪರೇಟರ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ, ಅವರು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ.