PM Narendra Modi: ಇಂದು ‘ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಬೊಮ್ಮನ್, ಬೆಳ್ಳಿ ಭೇಟಿ ಮಾಡಲಿರುವ ಪ್ರಧಾನಿ ಮೋದಿ
Apr 09, 2023 05:00 AM IST
‘ದಿ ಎಲೆಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಯಲ್ಲಿ ನಟಿಸಿದ್ದ ಬೊಮ್ಮಾ ಮತ್ತು ಬೆಳ್ಳಿ ದಂಪತಿಯನ್ನು ಇವತ್ತು ಭೇಟಿ ಮಾಡಲಿರುವ ಪ್ರಧಾನಿ ಮೋದಿ.
ಪ್ರಧಾನಿ ನರೇಂದ್ರ ಮೋದಿ ಇವತ್ತು ಆಸ್ಕರ್ ಪ್ರಶಸ್ತಿ ಪಡೆದ ‘ದಿ ಎಲೆಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಯಲ್ಲಿ ನಟಿಸಿದ್ದ ಬೊಮ್ಮಾ ಮತ್ತು ಬೆಳ್ಳಿ ದಂಪತಿಯನ್ನು ಭೇಟಿ ಮಾಡಿ ಸನ್ಮಾನಿಸಲಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಕಾರ್ಯಕ್ರಮಗಳ ಬಳಿಕ ತಮಿಳುನಾಡಿನ(TamilNadu) ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ (Madumalai Tiger Reserve) ತೆಪ್ಪಕಾಡು ಆನೆ ಕ್ಯಾಂಪ್ ಗೆ (Teppakadu Elephant Camp) ಆಗಮಿಸಲಿದ್ದಾರೆ.
ಇತ್ತೀಚೆಗಷ್ಟೇ ಆಸ್ಕರ್ ಪ್ರಶಸ್ತಿ ಪಡೆದಿದ್ದ ‘ದಿ ಎಲೆಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿ (The Elephant Whisperers Documentary) ಯಲ್ಲಿ ನಟಿಸಿದ್ದ ಬೊಮ್ಮಾ ಮತ್ತು ಬೆಳ್ಳಿ ದಂಪತಿಯನ್ನ ಪ್ರಧಾನಿ ಮೋದಿ ಅವರು ಭೇಟಿಯಾಗಲಿದ್ದಾರೆ.
‘ದಿ ಎಲೆಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಯ ಪಾತ್ರಧಾರಿಗಳಾದ ಬೊಮ್ಮಾ ಮತ್ತು ಬೆಳ್ಳಿ ಅವರು ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್ ನಲ್ಲಿ ಇದ್ದಾರೆ. ಬೊಮ್ಮಾ ಮತ್ತು ಬೆಳ್ಳಿ ಅವರನ್ನು ಪ್ರಧಾನಿ ಮೋದಿ ಅವರು ಇವತ್ತು ಸನ್ಮಾನಿಸಲಿದ್ದಾರೆ. ಇವರೊಂದಿಗೆ ಕೆಲ ನಿಮಿಷಗಳ ಕಾಲ ಕಳೆಯಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಸಚಿವರುಗಳು ಇರಲಿದ್ದಾರೆ. ತಮಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪ್ರಧಾನಿ ಅವರ ಬಳಿ ಮನವಿ ಮಾಡುತ್ತೇವೆ ಎಂದು ಬೊಮ್ಮಾ, ಬೆಳ್ಳಿ ಅವರು ಹೇಳಿಕೊಂಡಿದ್ದಾರೆ.
95ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಮುಡಿಗೇರಿತ್ತು. ಆ ಸಾಕ್ಷ್ಯಚಿತ್ರದಲ್ಲಿ ಅನಾಥ ಆನೆಗಳ ಆರೈಕೆ ಮಾಡುತ್ತಿದ್ದ ಬೆಳ್ಳಿ ಮತ್ತು ಬೊಮ್ಮನ್ ಜೀವನ ಇಡೀ ವಿಶ್ವಕ್ಕೆ ಪರಿಚಯವಾಗಿತ್ತು. ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಈ ವಿಚಾರವನ್ನು ಶೇರ್ ಮಾಡಿದ್ದರು. ಇದೀಗ ಖುದ್ದು ಅವರನ್ನೇ ಭೇಟಿಯಾಗುತ್ತಿದ್ದಾರೆ.
ಮೋದಿ ಆಗಮನ ಹಿನ್ನೆಲೆ ಈ ಭಾಗದ ಚಿತ್ರಣ ಸಂಪೂರ್ಣ ಬದಲಾವಣೆ
ಮುದುಮಲೈನಲ್ಲಿರುವ ಹುಲಿ ರಕ್ಷಿತಾರಣ್ಯದ ತೆಪ್ಪಕಾಡು ಆನೆಗಳ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ ಅಧಿಕೃತವಾದ ಹಿನ್ನೆಲೆಯಲ್ಲಿ, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅದೇ ರೀತಿ ಮೋದಿ ಬರುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಈ ಭಾಗದ ಹಳ್ಳಿಗಳ ಸ್ಥಿತಿಯೂ ಬದಲಾಗಿದೆ. ಕಲ್ಲು ಮಣ್ಣಿನ ದಾರಿಗೆ ಡಾಂಬರು ಹಾಕಲಾಗಿದೆ. ರಸ್ತೆ ಬದಿಗೆ ವಿದ್ಯುದ್ದೀಪಗಳು ನಿರ್ಮಾಣಗೊಂಡಿವೆ.
ಮೋದಿ ಇವತ್ತು ಆಗಮನದ ಹಿನ್ನೆಲೆಯಲ್ಲಿ ಈ ಭಾಗದ ಕೆಲ ಪ್ರದೇಶಗಳಿಗೆ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಅರಣ್ಯ ಪ್ರದೇಶವಾದ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದಲೂ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ. ಅರಣ್ಯ ಸಿಬ್ಬಂದಿಯೂ ಈ ಕೆಲಸದಲ್ಲಿ ನಿರತವಾಗಿದೆ.
ಅಂದಹಾಗೆ, ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರವನ್ನು ಕಾರ್ತಿಕಿ ಗೋನ್ಸಾಲ್ವಿಸ್ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಾಕ್ಷ್ಯಚಿತ್ರವೂ ಆಗಿದೆ. ಮೊದಲ ಪ್ರಯತ್ನದಲ್ಲೇ ಇವರಿಗೆ ಆಸ್ಕರ್ ಪ್ರಶಸ್ತಿ ಸಹ ದೊರಕಿದೆ. ಇನ್ನು ಈ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಸಿಕ್ಕ ಬಳಿಕ ತಮಿಳುನಾಡಿನ ಸಿಎಂ ಎಂ.ಕೆ ಸ್ಟಾಲಿನ್ ಸಹ ಈ ಬೆಳ್ಳಿ ಮತ್ತು ಬೊಮ್ಮನ್‌ಗೆ ಅಭಿನಂದಿಸಿದ್ದರು.
ನಿರ್ದೇಶಕಿ ಕಾರ್ತಿಕಿ ಗೊನ್ಸಾವೆಲ್ಸ್ ಆಸಕ್ತಿ ವಹಿಸಿ ಚಿತ್ರೀಕರಣ ಮಾಡಿದ್ದರು. ಡಾಕ್ಯುಮೆಂಟರಿ ಮಾಡ್ಬೇಕು ಅಂತ ಮನೆಗೆ ಬಂದಿದ್ದರು ಎಂದು ಎಲಿಫೆಂಟ್ ವಿಸ್ಪರ್ಸ್ ಡಾಕ್ಯುಮೆಂಟರಿಯ ಬೊಮ್ಮಾ ಹೇಳಿದ್ದಾರೆ.
ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್ ನಲ್ಲಿ ‘ದಿ ಎಲೆಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಯ ಪಾತ್ರಧಾರಿಗಳಾದ ಬೊಮ್ಮಾ ಮತ್ತು ಬೆಳ್ಳಿ ಅವರ ಭೇಟಿ ಬಳಿಕ ಪ್ರಧಾನಿ ಮೋದಿ ಅವರು ಇಂದು ಮಧ್ಯಾಹ್ನ ದೆಹಲಿಗೆ ವಾಪಸ್ ಆಗಲಿದ್ದಾರೆ.