logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uddhav Thackeray: ತಿರಂಗಾ ಹಾರಿಸಿದ ಮಾತ್ರಕ್ಕೆ ದೇಶಭಕ್ತರಾಗಲು ಸಾಧ್ಯವಿಲ್ಲ: ಉದ್ಧವ್‌!

Uddhav Thackeray: ತಿರಂಗಾ ಹಾರಿಸಿದ ಮಾತ್ರಕ್ಕೆ ದೇಶಭಕ್ತರಾಗಲು ಸಾಧ್ಯವಿಲ್ಲ: ಉದ್ಧವ್‌!

Nikhil Kulkarni HT Kannada

Aug 14, 2022 01:00 PM IST

google News

ಉದ್ಧವ್‌ ಠಾಕ್ರೆ (ಸಂಗ್ರಹ ಚಿತ್ರ)

    • ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ʼಹರ್‌ ಘರ್‌ ತಿರಂಗಾʼ ಅಭಿಯಾನಕ್ಕೆ, ಮಹಾರಾಷ್ಟ್ರದ ಮಾಹಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಂದ ಭಿನ್ನ ಸ್ವರ ಕೇಳಿಬಂದಿದೆ. ಕೇವಲ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವುದರಿಂದ ಎಲ್ಲರೂ ದೇಶಭಕ್ತರಾಗುತ್ತಾರೆ ಎನ್ನಲು ಸಾಧ್ಯವಿಲ್ಲ ಎಂದು ಉದ್ಧವ್‌ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ಉದ್ಧವ್‌ ಠಾಕ್ರೆ (ಸಂಗ್ರಹ ಚಿತ್ರ)
ಉದ್ಧವ್‌ ಠಾಕ್ರೆ (ಸಂಗ್ರಹ ಚಿತ್ರ) (HT_PRINT)

ಮುಂಬಯಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ʼಹರ್‌ ಘರ್‌ ತಿರಂಗಾʼ ಅಭಿಯಾನಕ್ಕೆ, ಮಹಾರಾಷ್ಟ್ರದ ಮಾಹಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಂದ ಭಿನ್ನ ಸ್ವರ ಕೇಳಿಬಂದಿದೆ. ಕೇವಲ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವುದರಿಂದ ಎಲ್ಲರೂ ದೇಶಭಕ್ತರಾಗುತ್ತಾರೆ ಎನ್ನಲು ಸಾಧ್ಯವಿಲ್ಲ ಎಂದು ಉದ್ಧವ್‌ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

1960ರಲ್ಲಿ ತಮ್ಮ ತಂದೆ ಹಾಗೂ ಶಿವಸೇನೆ ಸಂಸ್ಥಾಪಕ ಮುಖ್ಯಸ್ಥ ಬಾಳ್ ಠಾಕ್ರೆ ಆರಂಭಿಸಿದ್ದ ವ್ಯಂಗ್ಯಚಿತ್ರ ನಿಯತಕಾಲಿಕೆ 'ಮಾರ್ಮಿಕ್'ನ 62ನೇ ಸಂಸ್ಥಾಪನ ದಿನದ ವಿಡಿಯೋ ಕಾನ್ಫರೆನ್ಸ್‌ ಕಾರ್ಯಕ್ರಮ ಉದ್ದೇಶಿಸಿ, ನಿನ್ನೆ(ಆ.13-ಶನಿವಾರ) ಉದ್ದವ್‌ ಠಾಕ್ರೆ ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಭಾರತವು ಗುಲಾಮಗಿರಿಯತ್ತ ಸಾಗುತ್ತಿರುವುದರ ಬಗ್ಗೆ, ವ್ಯಂಗ್ಯ ಚಿತ್ರಕಾರರು ಜನರಿಗೆ ಮಾರ್ಗದರ್ಶನ ಮಾಡಬೇಕು ಎಂದು ಈ ವೇಳೆ ಉದ್ಧವ್‌ ಠಾಕ್ರೆ ಮನವಿ ಮಾಡಿದರು.

ತ್ರಿವರ್ಣ ಧ್ವಜ ಹಾರಿಸಿದ ಮಾತ್ರಕ್ಕೆ ಅದು ನಮ್ಮನ್ನು ದೇಶಭಕ್ತರನ್ನಾಗಿ ಮಾಡುವುದಿಲ್ಲ. ದೇಶ ಮತ್ತು ಪ್ರಜಾಪ್ರಭುತ್ವದ ಮೇಲಿನ ಅಚಲ ನಂಬಿಕೆ ನಮ್ಮನ್ನು ದೇಶಭಕ್ತರನ್ನಾಗಿ ಮಾಡುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷದ ಬಳಿಕ ಪ್ರಜಾಪ್ರಭುತ್ವ ಎಷ್ಟರಮಟ್ಟಿಗೆ ಉಳಿದಿದೆ ಎಂಬುದರ ಬಗ್ಗೆ ಪ್ರತಿಯೊಬ್ಬ ದೇಶಭಕ್ತ ಚಿಂತಿಸುವ ಅಗತ್ಯವಿದೆ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ʼಹರ್‌ ಘರ್‌ ತಿರಂಗಾʼ ಅಭಿಯಾನ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗ ಎಂಬುದು ನನಗೆ ಗೊತ್ತಿದೆ. ನಾನು ಅಭಿಯಾನವನ್ನು ಟೀಕಿಸುತ್ತಿಲ್ಲ. ಆದರೆ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುವುದರಿಂದ ಒಬ್ಬ ವ್ಯಕ್ತಿಯನ್ನು ದೇಶಭಕ್ತ ಎಂದು ಕರೆಯಲು ಸಾಧ್ಯವಿಲ್ಲ ಎಂಬುದಷ್ಟೇ ನನ್ನ ವಾದ ಎಂದು ಉದ್ಧವ್‌ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವದ ಸೋಗಿನಲ್ಲಿ ಅಧಿಕಾರದಲ್ಲಿರುವ ರಾಜಪ್ರಭುತ್ವ ಮಾದರಿಯ ಸರ್ಕಾರವೊಂದು, ಪ್ರತಿ ಮನೆ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಜನರಿಗೆ ಕರೆ ನೀಡಿದೆ. ಆದರೆ ಈ ಸರ್ಕಾರದಿಂದ ನಮ್ಮ ಪ್ರಜಾಪ್ರಭುತ್ವ, ಸಂವಿಧಾನ ಅಪಾಯದಲ್ಲಿದೆ ಎಂಬುದನ್ನು ನಾವು ಮನಗಾಣಬೇಕಿದೆ ಎಂದು ಉದ್ಧವ್‌ ಠಾಕ್ರೆ ಪರೋಕ್ಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಅರುಣಾಚಲ ಗಡಿ ಪ್ರದೇಶದಲ್ಲಿ ಚೀನಿ ಸೈನಿಕರು ಅಕ್ರಮವಾಗಿ ಒಳನುಸುಳಿದ್ದಾರೆ. ನಾವು ನಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವುದರಿಂದ ಅವರು ವಾಪಸ್‌ ಹೋಗುವುದಿಲ್ಲ. ಪೊಳ್ಳು ದೇಶಭಕ್ತಿಯನ್ನು ಪ್ರದರ್ಶಿಸುವ ಬದಲು, ರಾಷ್ಟ್ರದ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಡಬೇಕಿದೆ ಎಂದು ಉದ್ಧವ್‌ ಠಾಕ್ರೆ ಅಭಿಪ್ರಾಯಪಟ್ಟರು.

ಸಶಸ್ತ್ರ ಪಡೆಗಳ ಬಜೆಟ್‌ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ʼಅಗ್ನಿಪಥ್‌ʼ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಡಿಪಿಗಳಲ್ಲಿ ತ್ರಿವರ್ಣ ಧ್ವಜ ಹಾಕುವಂತೆ ಹೇಳುವ ಕೇಂದ್ರ ಸರ್ಕಾರ, ದೇಶ ರಕ್ಷಣೆಗಾಗಿ ಗಡಿಯಲ್ಲಿ ಕರ್ತವ್ಯ ನಿರತರಾಗಿರುವ ಯೋಧರ ಬಜೆಟ್‌ಗೆ ಕತ್ತರಿ ಹಾಕುತ್ತಿರುವುದು ದುರದೃಷ್ಟವೇ ಸರಿ ಎಂದು ಉದ್ಧವ್‌ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಬಳಿ ಸೇನಾ ನೇಮಕಾತಿಗೆ ಹಣ ಇರಲ್ಲ. ಆದರೆ ರಾಜ್ಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳನ್ನು ಉರುಳಿಸಲು ಅದರ ಬಳಿ ಹಣ ಇರುತ್ತದೆ. ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಬಿಜೆಪಿಯ ಹುನ್ನಾರ ಪ್ರಜಾಪ್ರಭುತ್ವಕ್ಕೆ ಅದೆಷ್ಟು ಅಪಾಯಕಾರಿ ಎಂಬುದನ್ನು ನಾವು ಅರಿಯಬೇಕಿದೆ ಎಂದು ಉದ್ಧವ್‌ ಠಾಕ್ರೆ ಕಿಡಿಕಾರಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಆಂತರಿಕ ಬಂಡಾಯದ ಪರಿಣಾಮವಾಗಿ, ಉದ್ಧವ್‌ ಠಾಕ್ರೆ ನೇತೃತ್ವದ ವಿಕಾಸ್‌ ಅಘಾಢಿ ಮೈತ್ರಿಕೂಟ ಸರ್ಕಾರ ಪತನವಾಗಿ, ಬಂಡಾಯಗಾರ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ