Pegasus Snoop: ಫೋನ್ ಬಳಸುವಾಗ ಹುಷಾರು ಎಂದು ಗುಪ್ತಚರ ಅಧಿಕಾರಿಗಳು ಎಚ್ಚರಿಸಿದ್ದರು: ಪೆಗಾಸಸ್ ವಿವಾದ ಕೆದಕಿದ ರಾಹುಲ್!
Mar 03, 2023 11:11 AM IST
ರಾಹುಲ್ ಗಾಂಧಿ
- ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಉಪನ್ಯಾಸದ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೆಗಾಸಸ್ ವಿವಾದವನ್ನು ಕೆದಕ್ಕಿದ್ದಾರೆ. ವಿಪಕ್ಷ ರಾಜಕಾರಣಿಗಳ ಫೋನ್‌ಗಳನ್ನು ಕದ್ದಾಲಿಸಲು ಭಾರತ ಸರ್ಕಾರ ಪೆಗಾಸಸ್ ಸ್ಪೈವೇರ್‌ನ್ನು ಬಳಸಿಕೊಂಡಿತ್ತು. ನಾನೂ ಕೂಡ ಈ ಬೇಹುಗಾರಿಕೆಯ ಬಲಿಪಶು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂಬ್ರಿಡ್ಜ್: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಉಪನ್ಯಾಸದ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೆಗಾಸಸ್ ವಿವಾದವನ್ನು ಕೆದಕ್ಕಿದ್ದಾರೆ. ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ರಾಜಕಾರಣಿಗಳ ಫೋನ್ ಕದ್ದಾಲಿಸಿದ ಕೇಂದ್ರ ಸರ್ಕಾರ, ಈ ಮೂಲಕ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿ ನಡೆಸಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ವಿಪಕ್ಷ ರಾಜಕಾರಣಿಗಳ ಫೋನ್‌ಗಳನ್ನು ಕದ್ದಾಲಿಸಲು ಭಾರತ ಸರ್ಕಾರ ಪೆಗಾಸಸ್ ಸ್ಪೈವೇರ್‌ನ್ನು ಬಳಸಿಕೊಂಡಿತ್ತು. ನಾನೂ ಕೂಡ ಈ ಬೇಹುಗಾರಿಕೆಯ ಬಲಿಪಶು ಎಂದು ರಾಹುಲ್ ಗಾಂಧಿ ಹೇಳಿರುವುದು ಗಮನ ಸೆಳೆದಿದೆ.
"ನಾನೂ ಕೂಡ ನನ್ನ ಮೊಬೈಲ್ ಫೋನ್‌ನಲ್ಲಿ ಪೆಗಾಸಸ್ ಹೊಂದಿದ್ದೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳು ಈ ಸ್ಪೈವೇರ್ ಬಳಸುತ್ತುದ್ದರು ಈ ಕುರಿತು ನನಗೆ ಕರೆ ಮಾಡಿದ್ದ ಕೆಲವು ಗುಪ್ತಚರ ಇಲಾಖೆ ಅಧಿಕಾರಿಗಳು, ಮೊಬೈಲ್‌ನಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಇರುವಂತೆ ನನ್ನನ್ನು ಕೇಳಿಕೊಂಡಿದ್ದರು. ಅಲ್ಲದೇ ನಿಮ್ಮ ಫೋನ್‌ನ್ನು ನಾವು ಟ್ಯಾಪ್ ಮಾಡುತ್ತಿದ್ದೇವೆ ಎಂದೂ ಎಚ್ಚರಿಸಿದ್ದರು.." ಎಂದು ರಾಹುಲ್ ತಮ್ಮ ಕೇಂಬ್ರಿಡ್ಜ್ ವಿವಿ ಉಪನ್ಯಾಸದಲ್ಲಿ ಹೇಳಿದ್ದಾರೆ.
ಪೆಗಾಸಸ್ ಮೂಲಕ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಒತ್ತಡ ಹೇರಿ, ಕೇಂದ್ರ ಸರ್ಕಾರ ಪ್ರತಿಪಕ್ಷ ನಾಯಕ ಫೋನ್ ಕದ್ದಾಲಿಸಿದೆ. ಅಲ್ಲದೇ ವಿಪಕ್ಷಗಳ ಧ್ವನಿಯನ್ನು ಅಡಗಿಸಲು ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಲಾಗಿದೆ. ನನ್ನ ಮೇಲೂ ಹಲವು ಸುಳ್ಳು ಮೊಕದ್ದಮೆಗಳು ದಾಖಲಾಗಿವೆ ಎಂದು ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ, ವಿಪಕ್ಷ ನಾಯಕ ವಿರುದ್ಧ ಬೇಹುಗಾರಿಕೆ ನಡೆಸಲು ಪೆಗಾಸಸ್ ಸ್ಪೈವೇರ್ ಬಳಸಿದ ಆರೋಪ ಕೇಳಿಬಂದಿತ್ತು. ಈ ಕುರಿತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು, ತಾನು ಪರೀಕ್ಷಿಸಿದ 29 ಮೊಬೈಲ್ ಫೋನ್‌ಗಳಲ್ಲಿ ಸ್ಪೈವೇರ್ ಕಂಡುಬಂದಿಲ್ಲ, ಆದರೆ ಐದು ಫೋನ್‌ಗಳಲ್ಲಿ ಮಾತ್ರ ಮಾಲ್ವೇರ್ ಕಂಡುಬಂದಿತ್ತು ಎಂದು ತೀರ್ಪು ನೀಡಿತ್ತು.
ಈ ಸಮಿತಿಯ ವರದಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್, ‘‘ತಾಂತ್ರಿಕ ಸಮಿತಿ ವರದಿ ಬಗ್ಗೆ ನಮಗೆ ಕಾಳಜಿ ಇದೆ. ಆದರೆ ಮಾಲ್ವೇರ್ ಕಂಡುಬಂದ ಫೋನ್‌ಗಳಲ್ಲಿ ಪೆಗಾಸಸ್ ಇತ್ತು ಎಂಬುದನ್ನು ಈ ಸಮಿತಿ ಸಾಬೀತುಪಡಿಸಿಲ್ಲ ಎಂದು ಹೇಳಿತ್ತು.
ಇನ್ನು ತಮ್ಮ ಕೇಂಬ್ರಿಡ್ಜ್ ವಿವಿ ಉಪನ್ಯಾಸ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ರಾಹಹುಲ್ ಗಾಂಧಿ, ದೇಶದಲ್ಲಿ ಸಂಸತ್ತು, ಪತ್ರಿಕಾ ಮತ್ತು ನ್ಯಾಯಾಂಗದ ಮೇಲೆ ನಿರ್ಬಂಧಗಳನ್ನು ಹಾಕಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
"ಭಾರತೀಯ ಪ್ರಜಾಪ್ರಭುತ್ವವು ಒತ್ತಡದಲ್ಲಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಸಾಂಸ್ಥಿಕ ಚೌಕಟ್ಟನ್ನೇ ಅಲುಗಾಡಿಲಾಗುತ್ತಿದೆ. ಸದ್ಯ ಭಾರತೀಯರು ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿಯನ್ನು ನೋಡುತ್ತಿದ್ದಾರೆ.." ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರೆಸೆಂಟೇಶನ್ ಸ್ಲೈಡ್‌ನಲ್ಲಿ ತಮ್ಮನ್ನು ಪೊಲೀಸ್ ಸಿಬ್ಬಂದಿ ಹಿಡಿದೆಳೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ, ಸಂಸತ್ ಭವನದ ಮುಂದೆ ಮಾತನಾಡಲು ಮುಂದಾದ ಹಲವು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಲಾಗಿದೆ ಎಂದು ಕಿಡಿಕಾರಿದರು.
"ಸಂವಿಧಾನದಲ್ಲಿ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ. ಈ ಒಕ್ಕೂಟಕ್ಕೆ ಮಾತುಕತೆ ಮತ್ತು ಸಂಭಾಷಣೆಯ ಅಗತ್ಯವಿದೆ. ಆದರೆ ಭಾರತ ಸರ್ಕಾರ ಈ ಸಿದ್ಧಾಂತದ ಮೇಲೆ ದಾಳಿ ನಡೆಸುತ್ತಿದೆ. ವಿಪಕ್ಷಗಳ ಮೇಲೆ ಹಿಂಸಾತ್ಮಕ ದಾಳಿಗಳು ನಡೆಯುತ್ತಿದ್ದು, ದೇಶದ ಅಲ್ಪಸಂಖ್ಯಾತರು ಕೂಡ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ವಿಭಾಗ