Rahul Gandhi: ಹತ್ತು ವರ್ಷದಲ್ಲಿ ರಾಹುಲ್ ಗಾಂಧಿ ಜನಪ್ರಿಯತೆ ದುಪ್ಪಟ್ಟು; ಪ್ರಧಾನಿ ಮೋದಿ ಜನಪ್ರಿಯತೆ ಹೇಗಿದೆ ವಿವರ ಇಲ್ಲಿದೆ ಗಮನಿಸಿ
Jun 02, 2023 07:30 AM IST
ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ (ಕಡತ ಚಿತ್ರ)
Rahul Gandhi: ಇತ್ತೀಚೆಗಷ್ಟೇ ಮುಗಿದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕ ಭರ್ಜರಿ ಗೆಲುವು ಕಾಂಗ್ರಸ್ಸಿನ ಹುಮ್ಮಸ್ಸನ್ನು ಹೆಚ್ಚಿಸಿದೆ. ಈ ಸಲದ ಲೋಕಸಭಾ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ ಕಾಂಗ್ರೆಸ್ ನಾಯಕರು. 2014ಕ್ಕೆ ಹೋಲಿಸಿದರೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಸ್ವೀಕರಿಸಬಹುದೆಂಬ ಮನೋಭಾವ ದುಪ್ಪಟ್ಟಾಗಿದೆ ಎಂಬ ಅಂಶ ಗಮನಸೆಳೆದ
ಲೋಕಸಭೆ ಚುನಾವಣೆ 2024 ಬಹಳ ಸಮೀಪದಲ್ಲಿದೆ. ಮೋದಿ ಹವಾ ಹೇಗಿದೆ ಎಂಬುದಕ್ಕಿಂತ ಹೆಚ್ಚು ರಾಹುಲ್ ಗಾಂಧಿ ಹವಾ ಸೃಷ್ಟಿಯಾಗುತ್ತಿದೆಯೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕರಾಗಿ ರಾಹುಲ್ ಗಾಂಧಿ ಹೊರಹೊಮ್ಮುತ್ತಿದ್ಧಾರಾ ಹಾಗಾದರೆ? ಈ ಹೊತ್ತಿನಲ್ಲಿ ಈ ಪ್ರಶ್ನೆ ಬಹಳ ಬಾಲಿಶ ಎಂದೆನಿಸಬಹುದು.
ಆದಾಗ್ಯೂ, ಮಾನವ ಸಹಜ ಕುತೂಹಲ ತಣಿಸುವ ವರದಿಯೊಂದನ್ನು ದ ಪ್ರಿಂಟ್ ವೆಬ್‌ಸೈಟ್ ಪ್ರಕಟಿಸಿದೆ. ಸದ್ಯದ ರಾಜಕೀಯ ವಿದ್ಯಮಾನಗಳ ಪ್ರಕಾರ ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚಾಗುತ್ತಿರುವ ಟ್ರೆಂಡ್ ಅನ್ನು ಈ ವರದಿ ಗುರುತಿಸಿದೆ. 2014ಕ್ಕೆ ಹೋಲಿಸಿದರೆ 2023ರಲ್ಲಿ ರಾಹುಲ್ ಗಾಂಧಿ ಜನಪ್ರಿಯತೆ ಬಹುತೇಕ ದುಪ್ಪಟ್ಟಾಗಿದೆ. ಅಂದರೆ ಪ್ರಧಾನ ಮಂತ್ರಿಯಾಗಿ ರಾಹುಲ್ ಗಾಂಧಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯ ಜನರ ಸಂಖ್ಯೆ ದುಪ್ಪಟ್ಟಾಗಿದೆ.
ಪ್ರಧಾನಿ ಪಟ್ಟಕ್ಕೆ ಯಾರು ಹೆಚ್ಚು ಅರ್ಹರು?
ಇದನ್ನು ಅರಿತುಕೊಳ್ಳಲು ಲೋಕನೀತಿ ಸಿಎಸ್‌ಡಿಎಸ್ ನಡೆಸಿದ ಸಮೀಕ್ಷೆಯಲ್ಲಿ, ಒಂದೊಮ್ಮೆ ನಾಳೆಯೇ ಲೋಕಸಭೆ ಚುನಾವಣೆ ನಡೆದರೆ ಆಗ ದೇಶದ ಪ್ರಧಾನ ಮಂತ್ರಿ ಸ್ಥಾನದಲ್ಲಿ ಯಾರನ್ನು ನೋಡಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಯನ್ನು 2014, 2019ರಲ್ಲಿ ಕೇಳಲಾಗಿತ್ತು. ಅದಾದ ಬಳಿಕ ಈಗ 2023ರಲ್ಲಿ ಕೇಳಲಾಗಿದೆ.
ಈ ದತ್ತಾಂಶವನ್ನು ಪರಿಶೀಲಿಸಿದರೆ 2014ಕ್ಕೆ ಹೋಲಿಸಿದರೆ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ. 2014ರಲ್ಲಿ ರಾಹುಲ್ ಗಾಂಧಿ ಅವರ ಜನಪ್ರಿಯತೆ ಶೇಕಡ 14 ಇದ್ದದ್ದು, ಈಗ 2023ರಲ್ಲಿ ಶೇಕಡ 27ಕ್ಕೆ ಏರಿದೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಬಹುತೇಕ ಸ್ಥಿರವಾಗಿದೆ. 2014ರಲ್ಲಿ ಶೇಕಡ 35 ಇದ್ದದ್ದು 2019ಕ್ಕೆ ಶೇಕಡ 44 ಆಯಿತು. ಈಗ ಅದು ಕೊಂಚ ತಗ್ಗಿದ್ದು ಶೇಕಡ 43 ಇದೆ.
ದಶಕದ ಅವಧಿಯಲ್ಲಿ ದೇಶಾದ್ಯಂತ ಕಡಿಮೆಯಾಗಿಲ್ಲ ಮೋದಿ ಹವಾ
ಕಳೆದ ಹತ್ತು ವರ್ಷಗಳನ್ನು ಭಾರತದ ರಾಜಕೀಯದ ಮೋದಿ ಯುಗ ಎಂದು ಬಣ್ಣಿಸಿದರೆ ಅದು ಅತಿಶಯೋಕ್ತಿಯಾಗಲಾರದು. 2014 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಮೋದಿ ಅವರ ಜನಪ್ರಿಯತೆಯು ಪ್ರಮುಖ ಪಾತ್ರ ವಹಿಸಿತು. 2019 ರಲ್ಲಿ ಕೂಡ ಬಿಜೆಪಿ ಸರ್ಕಾರದ ಮರು- ಆಯ್ಕೆಗೂ ಮೋದಿ ಹವಾ ಕೆಲಸ ಮಾಡಿತು. ಆ 'ಮೋದಿ ಫ್ಯಾಕ್ಟರ್' ನಿರಂತರವಾಗಿದ್ದು, ಸ್ಥಿರವಾಗಿದೆ. ಪ್ರತಿ ಹತ್ತರಲ್ಲಿ ನಾಲ್ವರು ಮೋದಿಯನ್ನು 'ಇಷ್ಟಪಡುತ್ತಾರೆ' ಮತ್ತು ಸ್ವಲ್ಪ ಹೆಚ್ಚಿನ ಪ್ರಮಾಣವು ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಲು ಎದುರು ನೋಡುತ್ತಿದ್ದಾರೆ-ಆದರೂ, ಇದು 2019 ರಿಂದ ಹೆಚ್ಚು ಬದಲಾಗಿಲ್ಲ; ವಾಸ್ತವವಾಗಿ, ಸ್ವಲ್ಪ ಕುಸಿತ ಕಂಡುಬಂದಿದೆ.
ಜನ ಯಾಕೆ ನರೇಂದ್ರ ಮೋದಿಯವರನ್ನು ಇಷ್ಟ ಪಡುತ್ತಿದ್ದಾರೆ?
ಮೋದಿ ಹವಾ ಯಾಕೆ ಇನ್ನೂ ಉಳಿದಿದೆ ಎಂಬುದು ಸಹಜ ಕುತೂಹಲ. ಅಂತಹ ಮೋಡಿಯನ್ನು ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಈ ವರದಿ ಮಾಡಿದೆ.
ರಾಹುಲ್ ಗಾಂಧಿ ಜನಪ್ರಿಯತೆ ಗ್ರಾಫ್ ಏರಿದ್ದು ಹೇಗೆ?
ರಾಹುಲ್ ಗಾಂಧಿಯವರ ಜನಪ್ರಿಯತೆ ಏರಿಕೆ, ಪರ್ಯಾಯ ನಾಯಕತ್ವ ಮತ್ತು ರಾಜಕೀಯ ಆಯ್ಕೆಗಳ ಕ್ಷೇತ್ರದಲ್ಲಿ ಮತ್ತೊಂದು ಬದಲಾವಣೆಯಾಗಿದೆ. ಪ್ರಧಾನಿಯಾಗಿ ರಾಹುಲ್ ಗಾಂಧಿಯವರ ಸ್ವೀಕಾರಾರ್ಹತೆಯು 2014ಕ್ಕೆ ಹೋಲಿಸಿದರೆ ದ್ವಿಗುಣಗೊಂಡಿದೆ. 15 ಪ್ರತಿಶತದಷ್ಟು ಜನ ಇತ್ತೀಚೆಗಿನ ಭಾರತ್ ಜೋಡೋ ಯಾತ್ರೆ ಕಾರಣ ರಾಹುಲ್ ಜನಪ್ರಿಯತೆ ಹೆಚ್ಚಿದ್ದಾಗಿ ಹೇಳಿದ್ದಾರೆ.
ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ಇಷ್ಟ ಪಡದೇ ಇರುವ ಜನರ ವಿವರ ನೋಡಿದರೆ, ಮೋದಿ ಅವರನ್ನು ಶೇಕಡ 23 ಇಷ್ಟಪಡದಿದ್ದರೆ, ರಾಹುಲ್ ಅವರನ್ನು ಶೇಕಡ 16 ಜನ ಇಷ್ಟಪಡುತ್ತಿಲ್ಲ. ಇನ್ನುಳಿದಂತೆ, ಶೇಕಡ 25 ಜನ ಮೋದಿ ಅವರನ್ನು ಇಷ್ಟ ಪಡುವುದು ಅಥವಾ ಪಡದೇ ಇರುವುದು ಮಾಡುತ್ತಿಲ್ಲ. ರಾಹುಲ್ ಗಾಂಧಿ ವಿಚಾರದಲ್ಲಿ ಶೇಕಡ 27 ಜನ ಇದೇ ನಿರ್ಲಿಪ್ತ ಪ್ರತಿಕ್ರಿಯೆ ನೀಡಿದ್ದಾರೆ.