logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi: ತಮ್ಮನ್ನು ಬೆಂಬಲಿಸಿದ ವಿಪಕ್ಷಗಳಿಗೆ 'ವಿಶೇಷ ಸಂದೇಶ'ದ ಮೂಲಕ ಧನ್ಯವಾದ ಅರ್ಪಿಸಿದ ರಾಹುಲ್:‌ ಏನದು?

Rahul Gandhi: ತಮ್ಮನ್ನು ಬೆಂಬಲಿಸಿದ ವಿಪಕ್ಷಗಳಿಗೆ 'ವಿಶೇಷ ಸಂದೇಶ'ದ ಮೂಲಕ ಧನ್ಯವಾದ ಅರ್ಪಿಸಿದ ರಾಹುಲ್:‌ ಏನದು?

HT Kannada Desk HT Kannada

Mar 25, 2023 08:30 PM IST

google News

ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ)

  • ತಮ್ಮ ಲೋಕಸಭೆ ಸದಸ್ಯತ್ವ ರದ್ದುಗೊಳಿಸಿರುವುದನ್ನು ವಿರೋಧಿಸಿ, ತಮಗೆ ಬೆಂಬಲ ಸೂಚಿಸಿರುವ ಪ್ರತಿಪಕ್ಷ ನಾಯಕರಿಗೆ ರಾಹುಲ್‌ ಗಾಂಧಿ ಧನ್ಯವಾದ ಅರ್ಪಿಸಿದ್ದಾರೆ. ಇದೇ ವೇಳೆ ಒಗ್ಗಟ್ಟಿನ ಮೂಲಕ ನಾವು ಕೆಲಸ ಮಾಡೋಣ ಎಂಬ ಸಂದೇಶವನ್ನು ರಾಹುಲ್‌ ಗಾಂಧಿ ಪ್ರತಿಪಕ್ಷ ನಾಯಕರಿಗೆ ರವಾನಿಸಿದ್ದಾರೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ..

ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ) (AP)

ನವದೆಹಲಿ: ಪ್ರತಿಪಕ್ಷಗಳ ಒಗ್ಗಟ್ಟಿಗೆ ಒತ್ತು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ವಿರೋಧಿ ಪಕ್ಷಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಲೋಕಸಭೆ ಸದಸ್ಯತ್ವವನ್ನು ಅನರ್ಹಗೊಳಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ, ತಮಗೆ ಬೆಂಬಲ ಸೂಚಿಸಿರುವ ಪ್ರತಿಪಕ್ಷ ನಾಯಕರಿಗೆ ರಾಹುಲ್‌ ಗಾಂಧಿ ಇದೇ ವೇಳೆ ಧನ್ಯವಾದ ಅರ್ಪಿಸಿದ್ದಾರೆ.

ಆಡಳಿತ ಪಕ್ಷವು ತಮ್ಮನ್ನು ಅನರ್ಹಗೊಳಿಸುವ ಮೂಲಕ, ನಮಗೆ "ದೊಡ್ಡ ಅಸ್ತ್ರ"ವೊಂದನ್ನು ನೀಡಿದೆ. ಇದನ್ನು ಬಳಸಿಕೊಂಡು ನಾವು ಒಟ್ಟಾಗಿ ಬಿಜೆಪಿ ಮೇಲೆ ಮುಗಿ ಬೀಳಬಹುದು ಎಂದು ರಾಹುಲ್‌ ಗಾಂಧಿ ಪ್ರತಿಪಕ್ಷ ನಾಯಕರಿಗೆ ಸಲಹೆ ನೀಡಿದ್ದಾರೆ.

"ನನ್ನ ವಿರುದ್ಧದ ಈ ಕ್ರಮ ಎಲ್ಲಾ ಪ್ರತಿಪಕ್ಷಗಳಿಗೆ ಸಹಾಯ ಮಾಡಲಿದೆ. ನನ್ನನ್ನು ಬೆಂಬಲಿಸಿದ ಎಲ್ಲಾ ವಿರೋಧ ಪಕ್ಷಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.." ಎಂದು ಅನರ್ಹತೆಯ ನಂತರ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಕರೆ ನೀಡಿದರು.

“ಪ್ರಧಾನಿ ಮೋದಿಯವರ ಈ ಪ್ಯಾನಿಕ್ ರಿಯಾಕ್ಷನ್”ನಿಂದ ಪ್ರತಿಪಕ್ಷಗಳು ಹೆಚ್ಚು ಪ್ರಯೋಜನ ಪಡೆಯುತ್ತವೆ. ನಮ್ಮ ಒಗ್ಗಟ್ಟು ಪ್ರಧಾನಿ ಮೋದಿ ಅವರನ್ನು ಮತ್ತಷ್ಟು ಚಿಂತೆಗೀಡು ಮಾಡಲಿದೆ. ಸತ್ಯ ಇಂದಲ್ಲ ನಾಳೆ ಹೊರಗೆ ಬರಲಿದೆ ಎಂಬುದನ್ನು ಮೋದಿ ಮನಗಂಡಿದ್ದಾರೆ ಎಂದು ರಾಹುಲ್‌ ಗಾಂಧಿ ನುಡಿದರು,

ನನ್ನ ಲೋಕಸಭೆ ಸದಸ್ಯತ್ವ ರದ್ದುಗೊಳಿಸಿರುವುದು, ಜನರ ಮನಸ್ಸಿನಲ್ಲಿ ಪ್ರಶ್ನೆ ಮೂಡುವಂತೆ ಮಾಡಿದೆ. ಗೌತಮ್‌ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸ್ನೇಹ ಸಂಬಂಧದ ಬಗ್ಗೆ ನಾನು ಹೇಳುತ್ತಿರುವುದು ಸತ್ಯ ಎಂಬುದು ಜನರಿಗೆ ಅರಿವಾಗಿದೆ. ಈ ಭ್ರಷ್ಟನನ್ನು ಪ್ರಧಾನಿ ಏಕೆ ಉಳಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಸ್ವತಃ ಜನ ಕೇಳಿತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಆಪ್, ಬಿಆರ್‌ಎಸ್‌, ಟಿಎಂಸಿ, ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು, ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದುಗೊಳಿಸಿರುವ ನಿರ್ಣಯವನ್ನು ಖಂಡಿಸಿದ್ದಾರೆ. ಬಿಜೆಪಿ "ಸೇಡಿನ ರಾಜಕೀಯ" ಮಾಡುತ್ತಿದೆ ಎಂದು ಈ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ರಾಹುಲ್ ಗಾಂಧಿ ಅವರ ಅನರ್ಹತೆಯನ್ನು ಖಂಡಿಸಿದ ಪ್ರತಿಪಕ್ಷ ನಾಯಕರ ಹೇಳಿಕೆಗಳನ್ನು ಕಾಂಗ್ರೆಸ್ ಸ್ವಾಗತಿಸಿತ್ತು ಮತ್ತು "ವ್ಯವಸ್ಥಿತ ರೀತಿಯಲ್ಲಿ" ಪ್ರತಿಪಕ್ಷಗಳ ಒಗ್ಗಟ್ಟಿನ ನಿರ್ಮಾಣದ ಕೆಲಸವನ್ನು ಮಾಡಬೇಕಾದ ಸಮಯ ಇದು ಎಂದು ಹೇಳಿತ್ತು.

ಸಂಸತ್ತಿನಲ್ಲಿ ವಿವಿಧ ವಿರೋಧ ಪಕ್ಷಗಳೊಂದಿಗೆ ನಾವು ಸಮನ್ವಯ ಸಾಧಿಸುತ್ತಿದ್ದೇವೆ. ಈ ಸಮನ್ವಯತೆ ಚುನಾವಣೆ ಮೈತ್ರಿಗೂ ನೆರವಾಗಬೇಕು ಎಂಬುದು ನಮ್ಮ ಅಭಿಲಾಷೆ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹೇಳಿರುವುದು ಗಮನ ಸೆಳೆದಿದೆ.

"ನಾವು ಈಗ ವ್ಯವಸ್ಥಿತ ರೀತಿಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ನಿರ್ಮಾಣದ ಕೆಲಸವನ್ನು ಆರಂಭಿಸಬೇಕು. ಪ್ರತಿ ದಿನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿಪಕ್ಷ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಹಾಗಾಗಿ ನಾವು ಸಂಸತ್ತಿನಲ್ಲಿ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಜೈರಾಮ್‌ ರಮೇಶ್‌ ಸ್ಪಷ್ಟಪಡಿಸಿದ್ದಾರೆ.

"ಸಂಸತ್‌ನಲ್ಲಿ ಈಸಮನ್ವಯದ ಭಾಗವಾಗದ ಪಕ್ಷಗಳು, ಈಗ ರಾಹುಲ್ ಗಾಂಧಿಯ ಅನರ್ಹತೆಯ ಕ್ರಮವನ್ನು ಖಂಡಿಸಿ ಸಾರ್ವಜನಿಕ ಹೇಳಿಕೆಗಳನ್ನು ನೀಡಿರುವುದು ಸಹ ಹರ್ಷದಾಯಕವಾಗಿದೆ" ಎಂದು ಜೈರಾಮ್‌ ರಮೇಶ್ ಹೇಳಿದ್ದಾರೆ. ಅಲ್ಲದೇ ಎಲ್ಲರ ಬೆಂಬಲದ ಹೇಳಿಕೆಯನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಪಕ್ಷದ ಹಲವು ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ